ಮುಂಬಾಯಿ , ಸೆ.18: ವಲಸೆ ಬಂದ ಜನರಲ್ಲಿ ನಮ್ಮವರು ಅನ್ನುವ ಭಾವನೆ ಹೆಚ್ಚಾಗಿರುತ್ತದೆ. ಪರವೂರಲ್ಲಿ ಎಲ್ಲರನ್ನೂ ತಮ್ಮವರನ್ನಾಗಿಸಿ ಬಾಳುವ ಮೂಲಕ ಬಂಧುತ್ವದ ಕೊರತೆ ನೀಗಿಸುತ್ತಾ ಎಲ್ಲರೂ ಬಂಧುಗಳಾಗುತ್ತಾರೆ. ಕರ್ಮಭೂಮಿಯಲ್ಲಿ ಬದುಕು ಕಟ್ಟಿಕೊಳ್ಳುವ ಜೊತೆಗೆ ಮಂದಿರವನ್ನೂ ಕಟ್ಟಿಕೊಂಡಿರುವುದು ಪುಣ್ಯದ ಕೆಲಸವಾಗಿದೆ. ದೇವಸ್ಥಾನ ಕಟ್ಟುವ ಭಾಗ್ಯ ಎಲ್ಲರಿಗೂ ಸಿಗದು ಇಂತಹ ಯೋಗ ಬರೇ ಭಾಗ್ಯವಂತರಿಗೆ ಮಾತ್ರ ಪ್ರಾಪ್ತಿಸುವುದು. ಶ್ರೀಕೃಷ್ಣನು ಸತ್ಯ, ಧರ್ಮ, ನ್ಯಾಯ, ನೀತಿದಾಯಕನಾಗಿದ್ದು ಈ ಬದುಕೇ ಶ್ರೀಕೃಷ್ಣನಿಗೆ ಪ್ರೀತಿದಾಯಕ. ಕೃಷ್ಣನು ಸರ್ವವ್ಯಾಪಿ, ಸರ್ವಸ್ಪರ್ಶಿ ಆಗಿದ್ದು ಕೃಷ್ಣನ ಲೀಲೆಯಲ್ಲಿ ಎಂದೂ ದುಃಖವಿಲ್ಲ ಆದರೆ ಕಷ್ಟವಿದೆ. ದುಃಖ ಮತ್ತು ಕಷ್ಟಗಳಿಗೆ ವ್ಯತ್ಯಾಸವಿದ್ದು ಕಷ್ಟಗಳು ಜೀವನ ಪರೀಕ್ಷೆಗಾಗಿ ಬರುತ್ತಿದ್ದು ಇದು ಪವಿತ್ರಗ್ರಂಥ ಭಗವದ್ಗೀತೆ ಓದಿದಾಗ ನಿವಾರಣೆಯಾಗುವುದು. ಉಡುಪಿಯಲ್ಲಿದ್ದಂತಹ ಕೃಷ್ಣನನ್ನು ಮುಂಬಯಿಯಲ್ಲೂ ಕಾಣುವಂತೆ ಮಾಡಿದ ತಾವೆಲ್ಲರೂ ಧನ್ಯರು ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ತಿಳಿಸಿದರು.
ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್ಸ್ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಪುನರಾಭಿವೃದ್ಧಿಯೊಂದಿಗೆ ನವೀಕೃತ ಗೋಕುಲ ಮಂದಿರಕ್ಕೆ ಇಂದಿಲ್ಲಿ ಭಾನುವಾರ ರಾತ್ರಿ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ ನೀಡಿ ಶ್ರೀ ಗೋಪಾಲಕೃಷ್ಣ ದೇವರ ದರ್ಶನ ಪಡೆದು ನೆರೆದ ಶ್ರೀಕೃಷ್ಣನ ಭಕ್ತರನ್ನುದ್ದೇಶಿಸಿ ಮಾತನಾಡಿದರು.
ಸಕಲ ಬ್ರಹ್ಮವಿದ್ಯೆಯನ್ನು ಪಡೆದ ಪ್ರಾಂಜಲ ಮನಸ್ಸುಳ್ಳವರೇ ಬ್ರಾಹ್ಮಣರು. ಕೆಟ್ಟದ್ದನ್ನು ಮಾಡದಿರುವವರೇ ಬ್ರಾಹ್ಮಣರು. ಆದ್ದರಿಂದ ಬ್ರಾಹ್ಮಣರ ವಿದ್ಯೆ ಅತ್ಯಂತ ಶ್ರೇಷ್ಠವಾದುದು. ವಿದ್ಯೆಯನ್ನು ವಂಶವಾಹಿನಲ್ಲೇ ಪಡಕೊಂಡು ಬಂದಿರುವ ಬ್ರಾಹ್ಮಣರು ತಮ್ಮ ವಿದ್ಯೆಯನ್ನು ವಂಶಪರಂಪರಿಕವಾಗಿ ಮುನ್ನಡೆಸಿ ಬಂದಿದ್ದು ಇವರು ಇನ್ನೊಬ್ಬರಿಂದ ಕಲಿಯುವ ಅಗತ್ಯವಿಲ್ಲ. ಇತರರು ಇವರಿಂದ ಕಲಿಯಬೇಕಾಗಿದೆ. ಪ್ರಸ್ತುತ ಮಾನವರು ಅಷ್ಟನ್ನೇ ಮಾಡಿದರೆ ಸಮಾಜ ಒಳ್ಳೆಯದಾಗಿರಲು ಸಾಕಾಗುತ್ತದೆ. ಭಾರತದ ಬ್ಯಾಂಕಿಂಗ್ ಕ್ಷೇತ್ರವೂ ಬ್ರಾಹ್ಮಣರಿಂದಲ್ಲೇ ಗಟ್ಟಿಯಾಗಿ ನೆಲೆ ನಿಂತಿದೆ ಎಂದೂ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಯಾವುದೇ ಯೋಜನೆಯನ್ನು ಹಲವಾರು ಬಾರಿ ಏಕಪುರುಷ ಪ್ರದರ್ಶನವೇ (ಒನ್ಮೆನ್ ಶೋ) ಯಶಸ್ವಿಯಾಗುವುದು. ಬಹಳಷ್ಟು ಜನ ಕೈಹಾಕಿ ಬಿಟ್ರೆ ಒಬ್ಬೊಬ್ಬರದ್ದು ಒಂದೊಂದು ವಿಚಾರವಿರುತ್ತದೆ. ಎಲ್ಲರ ವಿಚಾರಗಳನ್ನು ಏಕಪುರುಷ ನಿರ್ಣಾಯ ಮಾಡುವುದರಿಂದ ಸಾಧನೆ ಸುಲಭಗೊಳ್ಳುವುದು. ಇದೇ ತಂತ್ರಗಾರಿಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿದ್ದು ಇಲ್ಲಿ ಡಾ| ಸುರೇಶ್ ರಾವ್ ಕೂಡಾ ಅದನ್ನೇ ಮೈಗೂಡಿಸಿ ಯಶಸ್ವಿಯಾಗಿದ್ದಾರೆ. ಭಾಷೆ, ಊರು ಮುಖ್ಯವಲ್ಲ ಬದಲಾಗಿ ಗುಣಗಳು ಮುಖ್ಯ. ಅವುಗಳು ಅಳವಡಿಸಿಕೊಂಡು ಬಾಳಿದರೆ ಜನರು ನಮ್ಮನ್ನು ಎಲ್ಲಿದ್ದರೂ ಗುರುತಿಸುತ್ತಾರೆ. ಆದೇ ಪ್ರಜಾಪ್ರಭುತ್ವದ ಒಂದು ಒಳ್ಳೆಯ ಲಕ್ಷಣವಾಗಿದೆ. ಇಂತಹ ಸದ್ಗುಣವುಳ್ಳ ಮುಂಬಯಿವಾಸಿ ಕನ್ನಡಿಗರಿಗೆ ಶ್ರೀಕೃಷ್ಣ ಪರಮಾತ್ಮ ಸತ್ಫಲ, ಆಯುಷ್ಯ, ಆರೋಗ್ಯ ಕರುಣಿಸಲಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹಾರೈಸಿದರು.
ಚೆಂಡೆವಾದ್ಯದ ನೀನಾದದೊಂದಿಗೆ ಮಹಿಳೆಯರು ಸಂಪ್ರದಾಯಿಕ ಕುಂಭಸ್ವಾಗತದೊಂದಿಗೆ ಮುಖ್ಯಮಾಂತ್ರಿ ಮತ್ತು ಗಣ್ಯರನ್ನು ದೇವಸ್ಥಾನಕ್ಕೆ ಬರಮಾಡಿ ಕೊಂಡರು. ಬಿಎಸ್ಕೆಬಿ ಅಸೋಸಿಯೇಶನ್ ಮತ್ತು ಜಿಕೆಪಿ ಟ್ರಸ್ಟ್ ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮುಖ್ಯಮಂತ್ರಿ ಅವರನ್ನು ಪುಷ್ಫಗುಪ್ಚವನ್ನಿತ್ತು ಸುಖಾಗಮನ ಬಯಸಿದ್ದು, ಪುನರ್ ಪ್ರತಿಷ್ಠಾಪಿತ ಗೋಕುಲ ಮಂದಿರ ಮತ್ತು ಸಂಕೀರ್ಣದ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು. ಗೋಕುಲದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ ಭಟ್ ಧರೆಗುಡ್ಡೆ ಪೂಜೆ ನೆರವೇರಿಸಿದ್ದು ಆರ್ಚಕ ಗೋಪಾಲ ಭಟ್ ಕಿದಿಯೂರು ಶ್ರೀ ದೇವರಿಗೆ ಆರತಿ ಬೆಳಗಿಸಿ ತೀರ್ಥ ಪ್ರಸಾದ ನೀಡಿ ಅನುಗ್ರಹಿಸಿದರು. ದೇವಸ್ಥಾನಕ್ಕೆ ಪ್ರದಕ್ಷಿಣೆಗೈದು ದೇವಸ್ಥಾನದ ಶಿಲಾಕಾಷ್ಠದ ವೈಶಿಷ್ಟ್ಯತೆಯನ್ನು ವೀಕ್ಷಿಸಿ ಪ್ರಶಂಶಿಸಿದರು .
ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್, ಉತ್ತರ-ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಎಂಆರ್ಜಿ ಹಾಸ್ಪಿಟಾಲಿಟಿ ಎಂಡ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಸಾಯನ್ ಕೋಲಿವಾಡ ಕ್ಷೇತ್ರದ ಶಾಸಕ ಕ್ಯಾಪ್ಟನ್ ಟಿ.ತಮಿಲ್ ಸೆಲ್ವನ್, ಬಿಎಸ್ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳಾ, ಕಾರ್ಯದರ್ಶಿ ಎ.ಪಿ.ಕೆ ಪೋತಿ ವೇದಿಕೆಯಲ್ಲಿದ್ದು ಅಧ್ಯಕ್ಷ ಡಾ| ಸುರೇಶ್ ರಾವ್ ಅತಿಥಿಗಳಿಗೆ ಶಾಲು ಹೊದೆಸಿ, ಪುಷ್ಪಗುಪ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ವಿದ್ವಾನ್ ಕೃಷ್ಣರಾಜ ತಂತ್ರಿ ಮತ್ತು ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ವೇದಘೋಷ ಪಟಿಸಿದರು.
ಬಿಎಸ್ಕೆಬಿಎ ಜೊತೆ ಕಾರ್ಯದರ್ಶಿ ಪ್ರಶಾಂತ್ ಹೆರ್ಲೆ, ಜೊತೆ ಕೋಶಾಧಿಕಾರಿ ಗಣೇಶ್ ಭಟ್, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೋತಿ , ಗೋಕುಲ ಭಜನಾ ಮಂಡಳಿ ಸಮಿತಿ ಮತ್ತು ಮಾಧ್ಯಮ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್, ಬಿಎಸ್ಕೆಬಿಎ ಪ್ರಥಮ ಮಹಿಳೆ ವಿಜಯಲಕ್ಷ್ಮೀ ಸುರೇಶ್ ರಾವ್, ಜಿಕೆಪಿ ಟ್ರಸ್ಟಿಗಳಾದ ಎಸ್.ರಾಮವಿಟ್ಟಲ ಕಲ್ಲೂರಾಯ (ಕಾರ್ಯದರ್ಶಿ), ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ ಮತ್ತಿತರ ಪದಾಧಿಕಾರಿಗಳು, ವಿದ್ವಾನ್ ಎಸ್.ಎನ್ ಉಡುಪ, ಎಲ್ಲೂರು ಗುರುರಾಜ್ ಭಟ್, ಕೃಷ್ಣ ಭಟ್ ಮಂಜರಬೆಟ್ಟು, ಚಂದ್ರಶೇಖರ್ ಭಟ್, ಗಿರೀಶ್ ಆರ್.ರಾವ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಉಪಾಧ್ಯಕ್ಷ ವಾಮನ್ ಹೊಳ್ಳಾ ಸ್ವಾಗತಿಸಿ ಪ್ರಸ್ತಾವನೆಗೈದು ಬಿಎಸ್ಕೆಬಿಎ ಸೇವೆಯನ್ನು ತಿಳಿಸಿದರು. ಬಿ.ರಾಮಪ್ರಸಾದ್ ರಾವ್ ಮತ್ತು ಶೈಲಿನಿ ಎ.ರಾವ್ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ವಂದಿಸಿದರು.
ಈ ಸಂದರ್ಭದಲ್ಲಿ ಬಂಟ್ಸ್ ಸಂಘ ಮುಂಬಯಿ ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಬಿಜೆಪಿ-ಉತ್ತರ ಮುಂಬಯಿ ಕ್ಷೇತ್ರದ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ (ಪಣಕಜೆ ಬೆಳ್ತಂಗಡಿ), ಬಿಜೆಪಿ ದಕ್ಷಿಣ ಭಾರತೀಯ ಘಟಕ ವಿೂರಾ ಭಯಂದರ್ ಪ್ರದೇಶ ಉಪಾಧ್ಯಕ್ಷ ಮುನ್ನಾಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.