ನಮ್ಮ ಬಂಟ ಜನಾಂಗದ ವ್ಯಕ್ತಿಯೋರ್ವ ಉತ್ತಮ ಅವಕಾಶಗಳನ್ನು ಅರಸುತ್ತಾ ವಿಶ್ವದ ಯಾವ ಮೂಲೆಗೆ ಹೋಗಿ ಅಲ್ಲಿ ನೆಲೆ ನಿಂತು ತಮ್ಮ ಉದ್ಯೋಗವಿರಲಿ, ವ್ಯಾಪಾರ ವ್ಯವಹಾರಗಳಿರಲಿ ಅವರು ತಮ್ಮ ಜನ್ಮಭೂಮಿ ಹಾಗೂ ಜಾತಿ ವಿಶೇಷತೆಗಳ ಪ್ರತ್ಯೇಕತೆಯನ್ನು ಉಳಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಪ್ರತಿಭಾ ಸಾಮರ್ಥ್ಯ, ಕಾರ್ಯದಕ್ಷತೆ, ಕಠಿಣ ಪರಿಶ್ರಮಗಳಿಂದ ವಿಶ್ವದ ಉದ್ದಗಲ ತಮ್ಮ ಕೀರ್ತಿಯನ್ನು ಪಸರಿಸಿದ್ದಾರೆ. ಅಂಥಹ ವಿಶೇಷ ವ್ಯಕ್ತಿತ್ವಗಳ ಸಾಲಿಗೆ ಸೇರುವ ಸಾಧಕರು ಶ್ರೀ ದೀಪಕ್ ಶೆಟ್ಟಿ ಚುಚ್ಚಿ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅರೆಶಿರೂರು ಗ್ರಾಮದ ಚುಚ್ಚಿ ಎಂಬ ಹಳ್ಳಿಯಲ್ಲಿ 1971ರಲ್ಲಿ ಜನಿಸಿದ ದೀಪಕ್ ಶೆಟ್ಟರು ಇಂಜಿನಿಯರಿಂಗ್ ಪದವಿಧರು. ವಿಜಯಾ ಬ್ಯಾಂಕ್ ನ ಚೀಫ್ ಮ್ಯಾನೇಜರ್ ಸದಾನಂದ ಕೆ ಶೆಟ್ಟಿ ಹಾಗೂ ಸುಶೀಲಾ ಸದಾನಂದ ಶೆಟ್ಟಿ ದಂಪತಿಯರ ಸುಪುತ್ರ. ಸಕಲೇಶಪುರ ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಬಿ.ವಿ ಹೆಗ್ಡೆ ಮತ್ತು ಕೊಳ್ಕೆಬೈಲ್ ಮಾಲತಿ ಹೆಗ್ಡೆ ದಂಪತಿಯ ಪುತ್ರಿ ಅಕ್ಷಯಾ ಶೆಟ್ಟಿ ಅವರನ್ನು ವಿವಾಹವಾಗಿರುವ ಶೆಟ್ಟರಿಗೆ ಸಂಜೀತ್ ಶೆಟ್ಟಿ ಸುಶ್ಮಿತ್ ಶೆಟ್ಟಿ ಎಂಬ ಇಬ್ಬರು ಪುತ್ರರಿದ್ದಾರೆ.
ಬೆಳ್ಮಣ್ ನ ಸೈಂಟ್ ಜೋಸೆಫ್ ಸ್ಕೂಲಲ್ಲಿ ಆರಂಭಿಕ ಶಿಕ್ಷಣ ಮುಗಿಸಿ ವಿಜಯಪುರದ ಪಿ ಜಿ ಬಳಕಟ್ಟಿ ಇಂಜಿನಿಯರಿಂಗ್ ಕಾಲೇಜಿನ ಮುಖಾಂತರ ಉತ್ತಮ ಅಂಕಗಳೊಂದಿಗೆ ಇಂಜಿನಿಯರ್ ಪದವಿ ಸಂಪಾದಿಸಿಕೊಂಡರು. 1993 ರಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ತನ್ನ ಪದವಿಗೊಪ್ಪುವ ಉತ್ತಮ ಅವಕಾಶಗಳ ಹುಡುಕಾಟದಲ್ಲಿ ಕತಾರ್ ಸೇರಿ ಅಲ್ಲಿನ ದೋಹಾದ ಡಿ.ಟಿ.ಸಿ ಜೆರಾಕ್ಸ್ ನಲ್ಲಿ ಮೆನೇಜರ್ ಆಗಿ ಸೇವೆ ಸಲ್ಲಿಸಿದರು. ಅದಕ್ಕೂ ಮೊದಲು 1993 ರಿಂದ1995 ರವರೆಗೆ ದೆಹಲಿಯ ಐಟಿ ಎಂಡ್ ಟಿ.ಎ ಎಂಟರ್ ಪ್ರೈಸಸ್ ನಲ್ಲಿ ಕಸ್ಟಮರ್ ಸರ್ವಿಸ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಅನುಭವವೂ ಅವರಿಗಿತ್ತು. ಪ್ರಸ್ತುತ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ತನ್ನ ಪ್ರಾಮಾಣಿಕತೆ ಪರಿಶ್ರಮದಿಂದ ಆಡಳಿತದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದೀಪಕ್ ಶೆಟ್ಟರು ಸಾಮಾಜಿಕ ರಂಗದಲ್ಲಿ ಸಲ್ಲಿಸುತ್ತಿರುವ ಸೇವಾ ಕಾರ್ಯಗಳು ಶ್ಲಾಘನೀಯ. 2017ರಿಂದ ಭಾರತೀಯ ಸಾಂಸ್ಕೃತಿಕ ಅಧ್ಯಯನ ಕೆಂದ್ರದ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. 2015 ರಿಂದ ಕತಾರ್ ಕರ್ನಾಟಕ ಸಂಘದ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. 2013 ರಿಂದ 2015 ರವರೆಗೆ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. 2011ರಿಂದ 2013ರ ವರೆಗೆ ಕತಾರ್ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದರು. 2009ರಿಂದ 2011ರ ವರೆಗೆ ಇದೇ ಸಂಘದ ಕ್ರೀಡಾ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಇವರು ಕತಾರ್ ಬಂಟರ ಸಂಘದ ಸ್ಥಾಪಕ ಸದಸ್ಯರೂ ಹೌದು. 2014ರಿಂದ ಭಾರತೀಯ ಸಂಸ್ಕೃತಿ ಅಧ್ಯಯನ ಕೆಂದ್ರದ ಸದಸ್ಯತನ ಹೊಂದಿದ್ದಾರೆ. ಭಾರತೀಯರ ಸಮಸ್ಯೆಗಳಿಗೆ ಸ್ಫಂದಿಸಲೆಂದು ಜನ್ಮ ತಳೆದ ಅನಿವಾಸಿ ಭಾರತೀಯ ಜನಾಂಗದ ಕ್ಷೇಮಾಭ್ಯುದಯ ಸಂಘದ ಸದಸ್ಯರೂ ಆಗಿ ಸೇವಾನಿರತರಾಗಿದ್ದಾರೆ. ಕಾಲೇಜು ಅಧ್ಯಯನ ಸಂದರ್ಭ ಸೆಕಾಂ ಕ್ಲಬ್ ನ ಕಾರ್ಯದರ್ಶಿಯಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ತನ್ನ ವಿಶೇಷ ನಾಯಕತ್ವ ಸಾಮರ್ಥ್ಯವನ್ನು ತೋರಿಸಿದವರು ದೀಪಕ್ ಶೆಟ್ಟರು. ಕತಾರ್ ನ ಯಾವುದೇ ಸಾಮಾಜಿಕ ಸಾಂಸ್ಕ್ರತಿಕ ಸಂಘಟನೆಗಳು ಹಮ್ಮಿಕೊಳ್ಳುವ ಸಮಾಜಪರ ಕಾರ್ಯಕ್ರಮಗಳಲ್ಲಿ ದೀಪಕ್ ಶೆಟ್ಟಿ ಅವರು ಹಾಜರಿರುತ್ತಾರೆ. ಮುಖ್ಯವಾಗಿ ಪರಿಸರ ರಕ್ಷಣೆ, ಹಸಿರು ಕ್ರಾಂತಿ ಅಭಿಮಾನಿಗಳಲ್ಲಿ ದೀಪಕ್ ಪಾತ್ರ ಉಲ್ಲೇಖನೀಯ.
ತನ್ನ ತಾಯ್ನಾಡು ಮತ್ತು ಮಾತೃ ಭಾಷೆಯನ್ನು ಅತಿಯಾಗಿ ಪ್ರೀತಿಸುವ ದೀಪಕ್ ಶೆಟ್ಟರ ಹುಟ್ಟೂರಿನಲ್ಲಿರುವ ಜನಸಂದಣಿಯಿಂದ ದೂರವಿರುವ ದಟ್ಟ ಕಾಡುಗಳಿಂದ ಸುತ್ತುವರಿದ ಶಾಲೆಗಳಿಗೆ ರಸ್ತೆ ನಿರ್ಮಿಸಿ ಶಾಲೆಗಳ ಅಭಿವೃದ್ಧಿ ಕಾರ್ಯಗಳಲ್ಲಿ ಶ್ರಮಿಸಿದರು. ಕತಾರ್ ಗೆ ಬರುವ ಅನೇಕ ಕನ್ನಡಿಗರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕಲ್ಪಿಸಿಕೊಡುವ ಕೆಲಸದಲ್ಲಿ ಅವಿರತ ಶ್ರಮ ವಹಿಸುತ್ತಾರೆ. ಬಡ ಕುಟುಂಬದ ಹೃದ್ರೋಗಿ ಮಕ್ಕಳ ಚಿಕಿತ್ಸೆ ವೆಚ್ಚ ಭರಿಸುವ ಮಾನವೀಯ ಕಾರ್ಯವನ್ನು 2007 ರಿಂದಲೇ ಮಾಡುತ್ತಾ ಬಂದಿರುವ ಪುಣ್ಯಾತ್ಮರಿವರು. 2014ರಲ್ಲಿ ಪರಿಸರ ರಕ್ಷಣಾ ಅಭಿಯಾನದ ಮುಂಚೂಣಿಯಲ್ಲಿದ್ದ ಸಾಲುಮರ ತಿಮ್ಮಕ್ಕನವರಿಗೆ ಆರ್ಥಿಕ ಸಹಾಯ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕುಂದಾಪುರದ ಕಲಾದರ ಗ್ರಾಮದ ಶಾಲೆಗೆ ಬೇಝರ್ ಯಂತ್ರವನ್ನು ಅನುದಾನ ರೂಪದಲ್ಲಿ ನೀಡಿದ್ದಾರೆ. ಆರ್ಥೀಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸುತ್ತಾ ಪಾಲಕರ ಆಶೀರ್ವಾದ ಕೃಪೆಗೆ ಪಾತ್ರರಾದ ಧನ್ಯತೆ ಇವರಿಗಿದೆ.
ಕುಂದಾಪುರದ ಅದೆಷ್ಟೋ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ಆರ್ಥಿಕ ದೇಣಿಗೆ ನೀಡಿ ದೈವಕೃಪೆಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಆಟಿಸ್ಟಿಕ್ ಕೇಂದ್ರದ ನಿರ್ಗತಿಕ ಅಸಾಹಾಯಕ ಮಕ್ಕಳಿಗೆ ಆರ್ಥಿಕ ನೆರವು ನೀಡಿ ಎಳೆಮಕ್ಕಳ ಕಣ್ಣೀರೊರೆಸುವ ಪುಣ್ಯಕಾರ್ಯದಲ್ಲಿ ಭಾಗಿಯಾಗಿದ್ದಾರೆ. 2017ರಲ್ಲಿ ಸಮಾನ ಮನಸ್ಕ ಮಿತ್ರರೊಡಗೂಡಿ ತಾಯ್ನಾಡಿಂದ ಬರುವ ಪ್ರತಿಭಾವಂತ ಮಕ್ಕಳ ವಿಶೇಷ ಸಾಮರ್ಥ್ಯವನ್ನು ಕತಾರ್ ನಿವಾಸಿಗಳಿಗೆ ಪರಿಚಯಿಸುವ ವಿಶನ್ ಈವೆಂಟ್ ಟೆಕ್ ಎಂಡ್ ಕಂಟ್ರೋಲಿಂಗ್ ಸಂಸ್ಥೆಯನ್ನು ಹುಟ್ಟು ಹಾಕಿ ಅನೇಕ ಪ್ರತಿಭಾವಂತ ಯುವಕರ ಉಜ್ವಲ ಭವಿಷ್ಯ ರೂಪಿಸುವಲ್ಲಿ ಮಹತ್ತರ ಯೋಗದಾನ ನೀಡಿದ್ದಾರೆ. ಇವರ ಅನತಿ ಅವಧಿಯ ಅನನ್ಯ ಸಾಧನೆಯನ್ನು ಗುರುತಿಸಿದ ಕರ್ನಾಟಕ ಸರಕಾರ 2017 ರಲ್ಲಿ ಪ್ರತಿಷ್ಠಿತ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ 2015 ರಲ್ಲಿ ಇವರ ಮುಡಿಗೇರಿದೆ. ಕತಾರ್ ಕರ್ನಾಟಕ ಸಂಘದ ಮುಖೇನ ಶೆಟ್ಟರು ಆರಂಭಿಸಿದ ಪರಿಸರ ಸಂರಕ್ಷಣಾ ಅಭಿಯಾನ ಹಾಗೂ ಕತಾರ್ ನ ಅನೇಕ ಪರಿಸರ ಪ್ರೇಮಿ ಸಂಘಟನೆಗಳೊಂದಿಗೆ ಕೈಜೋಡಿಸಿ ಗೈದಿರುವ ಅನುಪಮ ಸೇವೆಯನ್ನು ಗುರುತಿಸಿ ಸಚಿವಾಲಯದ ಪರಿಸರ ಸಂರಕ್ಷಣಾ ವಿಭಾಗದಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಇಷ್ಟೆಲ್ಲಾ ಸಾಧನೆ ಮಾಡಿದ ದೀಪಕ್ ಅವರ ಕೀರ್ತಿ ಕಿರೀಟಕ್ಕೆ ಈ ಸಲದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿಮೆಯ ಗರಿ ಸೇರಿಕೊಂಡಿತು. ಹೀಗೆ ತಾನು ದುಡಿಯುತ್ತಿರುವ ಸಂಸ್ಥೆ ರಾಷ್ಟ್ರಕ್ಕೆ ಅರ್ಪಣಾ ಭಾವದಿಂದ ದುಡಿಯುತ್ತಲೇ ಜೊತೆಗೆ ಸ್ವಜನ ಸ್ವಜಾತಿ ಬಾಂಧವರ ಏಳಿಗೆಯ ಕನಸು ಕಾಣುತ್ತಾ ಹುಟ್ಟಿದೂರಿನ, ರಾಷ್ಟ್ರದ ಅಭಿವೃದ್ಧಿಗೆ ದಿನರಾತ್ರಿ ಶ್ರಮಿಸುವ ದೀಪಕ್ ಶೆಟ್ಟರ ಸಾಧನೆಯ ಪಥ ಸುದೀರ್ಘವಾದುದು. ಇದು ಕೇವಲ ಸಂಕ್ಷಿಪ್ತ ವಿವರಣೆ. ಇವರ ಸಮಾಜ ಸೇವೆ, ಸಂಸ್ಕೃತಿ ಸೇವೆಯ ಹಲವು ಮಗ್ಗುಲುಗಳ ಕುರಿತು ಬರೆದರೆ ಅದು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕಾಗಬಹುದು. ಇಂಥಹ ಸಾಧಕರು ನಮ್ಮ ಸಮಾಜದಲ್ಲಿ ಹುಟ್ಟಿಕೊಂಡಿರುವುದರಿಂದಲೇ ಬಂಟರ ಸಮುದಾಯದ ಜನರಿಗೆ ಸಹಜವಾಗಿಯೇ ಹೆಮ್ಮೆಯ ಕೋಡುಗಳು ಮೂಡುವುದು, ಅಭಿಮಾನದಿಂದ ಬೀಗುವುದು. ಸಮುದಾಯದ ಕೀರ್ತಿ ವಿಶ್ವಡೆಲ್ಲೆಡೆ ಪಸರಿಸಿರುವುದು.
ದೀಪಕ್ ಶೆಟ್ಟಿ ನಿಜವಾದ ಅರ್ಥದಲ್ಲಿ ಬಂಟಕುಲ ಕೀರ್ತಿ ದೀಪಕ ಅವರ ಭವಿಷ್ಯದ ಯೋಜನೆಗಳೆಲ್ಲಾ ಫಲ ನೀಡಲಿ. ಆರೋಗ್ಯ, ಆಯುಷ್ಯ, ಸಂಪತ್ತು, ನೆಮ್ಮದಿ ಸದಾ ವೃದ್ಧಿಸುತ್ತಿರಲಿ ಎಂದು ಸಮಾಜ ಬಾಂಧವರ ಜೊತೆಗೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಶುಭಂ ಶ್ರೇಯಂ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು