ಪುಣೆಯ ಪ್ರತಿಷ್ಠಿತ ರೋಯಲ್ ಕಾನೊಟ್ ಬೋಟ್ ಕ್ಲಬ್ “ನ ಅಧ್ಯಕ್ಷ , ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ, ಯಶಸ್ವಿ ಉದ್ಯಮಿ, ಸಮಾಜ ಸೇವಕ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ನಿಧನರಾಗಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ದೊಡ್ಡಬೀಡು ಗಣಪಯ್ಯ ಹೆಗ್ಡೆ ಹಾಗೂ ಮೊಳಹಳ್ಳಿ ಶ್ರೀಮತಿ ಮುತ್ತಕ್ಕ ಹೆಗ್ಡೆ ದಂಪತಿಗಳ ಸುಪುತ್ರನಾಗಿ ಜನಿಸಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದು ನಂತರ ಮಹಾರಾಷ್ಟ್ರದ ಪುಣೆಗೆ ಆಗಮಿಸಿ ಪುಣೆಯ ಐ ಎಲ್ ಎಸ್ ಲಾ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದರು. ಜೀವನದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದ ಇವರ ದೂರದರ್ಶಿತ್ವದ ಗುಣದಿಂದ ಕೆಮಿಕಲ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಕಾರ್ಯಪ್ರವೃತ್ತರಾಗಿ ಸತತ ಪರಿಶ್ರಮ ಹಾಗೂ ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆದು ಬಿ ಕೆ ಬೆಂಝಿಲ್ ಪ್ರೈವೆಟ್ ಲಿಮಿಟೆಡ್ ಹಾಗೂ ಅಕ್ಷಯ್ ಆರ್ಗಾನಿಕ್ ಪ್ರ . ಲಿ ಎನ್ನುವ ಕಂಪೆನಿಗಳ ಮೂಲಕ ಉದ್ಯಮ ಕ್ಷೇತ್ರದಲ್ಲಿ ಯಶಸ್ಸಿನ್ನು ಪಡೆದುಕೊಂಡು ಪ್ರಸಿದ್ಧಿಯನ್ನು ಗಳಿಸಿದ್ದರು.
ಉದ್ಯಮದ ಪ್ರಗತಿಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಯಾವುದೇ ಪ್ರಸಿದ್ಧಿಯನ್ನು ಬಯಸದೆ ನಿಸ್ವಾರ್ಥ ಸಮಾಜಸೇವೆಯನ್ನು ಮಾಡುತ್ತಾ 2001 ರಿಂದ 2003 ರ ವರೆಗೆ ಪುಣೆಯ ಬಂಟ ಸಮಾಜದ ಪ್ರತಿಷ್ಠಿತ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡು ಸಮಾಜಬಾಂಧವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಉತ್ತಮ ನಾಯಕರೆಂಬ ಕೀರ್ತಿಗೆ ಭಾಜನರಾಗಿದ್ದರು. ಸಂಘದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಸಮಾಜದಲ್ಲಿನ ಬಡವ ಬಲ್ಲಿದನೆಂಬ ಭೇದವನ್ನು ತೊಡೆದುಹಾಕಿ ಎಲ್ಲರನ್ನೂ ಸಂಘದಲ್ಲಿ ತೊಡಗಿಕೊಳ್ಳುವಂತೆ ಮಾಡುವಲ್ಲಿ ಸತತವಾಗಿ ಶ್ರಮಿಸಿದ್ದರು. ಅಲ್ಲದೆ ಸಂಘದಲ್ಲಿ ಯುವ ಪೀಳಿಗೆಯನ್ನು ಸದಾ ಪ್ರೋತ್ಸಾಹಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಸಾಗುವಂತೆ ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದರು. ಆದ್ದರಿಂದಲೇ ಇವರು ಬಂಟ ಸಮಾಜದ ಉತ್ಸಾಹಿ ದೂರದೃಷ್ಟಿಯ ಪರೋಪಕಾರಿ ನಾಯಕರಾಗಿ ಗುರುತಿಸಿಕೊಂಡು ಕಿರಿಯರಿಂದ ಹಿಡಿದು ಹಿರಿಯರ ವರೆಗೆ ಪ್ರೀತಿಪಾತ್ರರಾಗಿ ಗುರುತಿಸಿಕೊಂಡಿದ್ದರು. ಪುಣೆ ಬಂಟರ ಸಂಘದ ಸಾಂಸ್ಕೃತಿಕ ಭವನಕ್ಕೂ ತನ್ನ ಕೊಡುಗೆಯನ್ನು ನೀಡಿದ್ದು ಸಂಘದ ಸಲಹಾ ಸಮಿತಿಯಲ್ಲಿ ತೊಡಗಿಸಿಕೊಂಡಿದ್ದರು.
ಊರಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಇವರು ತುಳು ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ಬಗೆಗೂ ಪ್ರೀತಿಯುಳ್ಳವರಾಗಿ ಪುಣೆಯ ತುಳು ಕನ್ನಡಿಗರ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದರು. ಅಲ್ಲದೆ ಇಲ್ಲಿನ ಅನ್ಯ ಭಾಷಿಕರೊಂದಿಗೂ ಅನ್ಯೋನ್ಯ ನಂಟನ್ನು ಹೊಂದಿದ್ದ ಹೆಗ್ಡೆಯವರು ಪುಣೆಯ ಪ್ರತಿಷ್ಠಿತ ರೋಯಲ್ ಕಾನೊಟ್ ಬೋಟ್ ಕ್ಲಬ್ ನಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿದ್ದಲ್ಲದೆ 2017ರಲ್ಲಿ ಬೋಟ್ ಕ್ಲಬ್ ನ ಅಧ್ಯಕ್ಷರಾಗಿ ಆಯ್ಕೆಗೊಂಡು ಕ್ಲಬ್ ಗೆ ಹೊಸತನದ ಸ್ಪರ್ಶ ನೀಡಿ ಅತ್ಯಾಧುನಿಕ ಸೌಕರ್ಯ ನೂತನ ಹಾಲ್ ನಿರ್ಮಿಸಿ ಯಶಸ್ವಿ ಅಧ್ಯಕ್ಷರೆಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲದೆ ಪುಣೆ ನಗರ ಕಾಂಗ್ರೆಸ್ ಸಮಿತಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಇವರ ಉದ್ಯಮ ಕ್ಷೇತ್ರದ ಯಶಸ್ಸನ್ನು ಪರಿಗಣಿಸಿ ಮಹಾರಾಷ್ಟ್ರ ಸರಕಾರದಿಂದ “ಬೆಸ್ಟ್ ಎಕ್ಸ್ಪೋರ್ಟರ್ಸ್ ಅವಾರ್ಡ್ ಪ್ರಶಸ್ತಿಯನ್ನು ಗಳಿಸಿದ್ದರು. ಪುಣೆ ಮರಾಠ ಛೇoಬರ್ ಆಪ್ ಕಾಮರ್ಸ್, ಬೋಸ್ರಿ ಮೆನುಪ್ರಾಕ್ಚರರ್ಸ್ ಅಸೋಸಿಯೇಶನ್,ಕೆಮೆಕ್ಸಿಲ್ ದೆಹಲಿ, ಎಫ್ ಹೆಚ್ ಆರ್ ಎ ಇಂಡಿಯಾ ಇವುಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರ ನಿಧನಕ್ಕೆ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಚಿಕ್ಕಮಂಗಳೂರಿನ ಉದ್ಯಮಿ ಲೈಫ್ ಲೈನ್ ಫೀಡ್ಸ್ ಮೊಳಹಳ್ಳಿ ಕಿಶೋರ್ ಕುಮಾರ್ ಹೆಗ್ಡೆ, ಪುಣೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ನಾರಾಯಣ್ ಶೆಟ್ಟಿ, ಕೆಂಜೂರು ಸಂಕಯ್ಯ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಪಿಂಪ್ರಿ, ಗುರ್ಮೆ ಫೌಂಡೇಶನ್ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರ್ ಭಾಸ್ಕರ್ ಶೆಟ್ಟಿ, ಮೊಳಹಳ್ಳಿ ದಿನೇಶ್ ಹೆಗ್ಡೆ, ಮೊಳಹಳ್ಳಿ ಮಹೇಶ್ ಹೆಗ್ಡೆ, ಬಂಟ್ಸ್ ನೌ ಸಂಸ್ಥೆಯ ಸ್ಥಾಪಕ ರಂಜಿತ್ ಕುಮಾರ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.