ಮುಖವಾಡ ಸರಿದಂತೆ ಸತ್ಯಮುಖ ತೋರುವುದು ಭಿತ್ತಿಯಲಿ ಪ್ರತ್ಯಕ್ಷ ನಿಜರೂಪ ಆಗ ತೋರಿಕೆಯ ಮುಖವೊಂದು ಬಾಳ ನಿಜಮುಖವೊಂದು ಮೊಗನೋಡಿ ಅಳೆಯದಿರು. ಮುದ್ದುರಾಮ.
ಬರಹ ಮತ್ತು ಬರಹಗಾರ ಒಂದು ತಕ್ಕಡಿ ಸಮ ನಿಲ್ಲುವ ಎರಡು ತೂಕಗಳಾಗಬೇಕು. ಬರಹಗಾರನ ವ್ಯಕ್ತಿತ್ವ ಬರಹಕ್ಕೆ ಸರಿದೂಗುವುದಿಲ್ಲ ಅಂದರೆ ಆತನ ಬರಹಕ್ಕೆ ಸ್ಪಂದಿಸುವುದು ಸಮಂಜಸವಲ್ಲ. ಬರಹಗಾರ ಅನಿಸಿದವನು ಸಾಮಾಜಿಕ ಧೋರಣೆಗಳನ್ನು ಗಾಳಿಗೆ ತೂರಿ ಬದುಕುತ್ತಾ,ಕೇವಲ ಬರಹದಲ್ಲಿ ವಿಚಾರವಂತನಂತೆ ಅಕ್ಷರಗಳೊಂದಿಗೆ ಆಟ ಆಡಿದನೆಂದ ಮಾತ್ರಕ್ಕೆ ಅವನು ವಿಚಾರವಾದಿಯಾಗಲಾರ. ಬರಹದಂತೆ ತಾನು ಬದುಕಬಹುದಾ? ಅದು ಆತನಿಗೆ ಸಾಧ್ಯವಿಲ್ಲ ಎಂದಾದಲ್ಲಿ ಸಮಾಜಕ್ಕೆ ಬುದ್ದಿ ಹೇಳುವ ಬರಹ ಅನ್ನುವುದು ಕೇವಲ ಆತನ ದೊಂಬರಾಟಕ್ಕೆ ಸೀಮಿತ ಆಗುತ್ತದೆ. ಲೋಕದ ಜನರ ಕಳೆ ಹೆಕ್ಕುವ ಮೊದಲು ತನ್ನಲ್ಲಿರುವ ಕೊಳೆ ತೊಳೆದು ಕೊಳ್ಳಬೇಕಾದುದು ಬರಹಗಾರ ಎಂದೆಣಿಸಿಕೊಂಡವನ ಪ್ರಮುಖ ಕರ್ತವ್ಯ. ಸಾಹಿತ್ಯ ಅಂದರೆ ಹೇಳುವುದು ನ್ಯಾಯ ಇಕ್ಕುವುದು ಗಾಳ ಆಗಬಾರದು. ಸಮಾಜ ಕಂಟಕ ಶಕ್ತಿಗಳು ಯಾವತ್ತೂ ಕತ್ತಲೆಯಲ್ಲಿ ಅಡಗಿಕೊಂಡು ತನ್ನ ವಿಕೃತ ಆಲೋಚನೆಗಳಿಗೆ ಸಾಣೆ ಹಾಕುತ್ತವೆ. ಹಾಗೆಯೇ ಕೆಲವು ಬರಹಗಾರರು ಪ್ರಚಾರಕ್ಕೆ ಬರಲ್ಲ ಎಂಬ ನೆಪಮಾತ್ರಕ್ಕೆ ತಮ್ಮಲ್ಲಿರುವ ಅಕ್ಷರಗಳ ರಾವಣ ಬಾಣದಿಂದ ಇನ್ನೊಬ್ಬರನ್ನು ನಿಂದಿಸಿ ಸಮಾಜವನ್ನು ಒಡೆದು, ವಿಕೃತ ಮನಸ್ಥಿತಿ ಯನ್ನು ಹೊರಗೆಡಹುವುದು ಎಂದರೆ ವರ್ತಮಾನದ ಸಂತುಲಿತ ಸಮೃದ್ದ ಸಮಾಜಕ್ಕೆ ಬರಹ ಮತ್ತು ಬರಹಗಾರ ದುಷ್ಟನಾಗಬಲ್ಲ. ಅಂತಹ ಬರಹಗಾರನಿಂದ ನಾವುಗಳು ಮೈಲುದ್ದ ದೂರ ನಿಂತರೆ ನಮ್ಮನ್ನು ನಾವು ರಕ್ಷಿಸಿಕೊಂಡಂತೆ. ಅಕ್ಷರಗಳ ಜೋಡಿಸುವವ ಉಪದೇಶಕ್ಕೆ ಮಾತ್ರ ಸೀಮಿತ ಆಗದೆ ಉದಾಹರಣೆ ಆಗಬೇಕು. ತನ್ನ ನಡೆಯಂತೆ ನುಡಿಬರಬೇಕು. ಆ ನಡೆ ಒಂದಷ್ಟು ವ್ಯಕ್ತಿತ್ವದ ವಿಕಸನಕ್ಕೆ ದೀವಿಗೆಯಾಗಬೇಕು. ಮುಷ್ಟಿಯಷ್ಟು ಸಾಧನೆ ಮಾಡದೆ ಬೆಟ್ಟದಷ್ಟು ಸಾಧಿಸಲು ಸಲಹೆ ಕೊಡುವ ಮುಂಚೆ ಒಂದರೆಗಳಿಗೆ ಈ ಪರಿಯ ಮಾತನಾಡಲು , ಬರೆಯಲು ತಾನೆಷ್ಟು ಯೋಗ್ಯ ಅನ್ನುವುದನ್ನು, ತನ್ನನ್ನು ತಾನು ವಿಮರ್ಶಿಸಿ , ತದನಂತರ ಯೋಚನಾ ಲಹರಿಗೆ ಇಳಿಯುವುದು ಅತ್ಯಗತ್ಯ.
ಶಬ್ದಗಳನ್ನು ಸೃಷ್ಟಿಸುವವ ಸಂತೆಯಲ್ಲಿ ಸಾಲ ಪಡೆದ ಅಂತೆ ಕಂತೆಗಳ ಸರಕುಗಳನ್ನು ಸರಬರಾಜು ಮಾಡುವ ದಲ್ಲಾಳಿಯಾಗದೆ, ಸಾರಸ್ವತ ಲೋಕದಲ್ಲಿ ಚಿರಸ್ಥಾಯಿ ಆಗುವಂತಾಗಬೇಕು.
ಅಂದದ ಅಕ್ಷರಗಳನ್ನು ಪೋಣಿಸಿದ ಮಾತ್ರಕ್ಕೆ ಸಿಗುವ ಶಹಬ್ಬಾಸ್ ಗಿರಿಗೆ ಉಬ್ಬಬೇಕಿಲ್ಲ. ಆ ಕ್ಷಣಕ್ಕೆ ಆತ ಸಾಹುಕಾರನಂತೆ ವರ್ತಿಸಬೇಕಿಲ್ಲ.
ಒಬ್ಬನ ಬದುಕಿನಲ್ಲಿ ಒಂದಷ್ಟು ದಿವ್ಯತೆಯ ನಗು ಮೂಡಿಸುವ ಬರಹ ನಮ್ಮದಾಗಬೇಕು. ದಾರಿ ತಪ್ಪುವವನಿಗೆ ದಾರಿ ತೋರುವ ಬರಹ ನಮ್ಮದಾಗಲಿ. ಅದನ್ನು ಓದಿ ಒಂದರೆಕ್ಷಣ ಆಹಾ ಅನ್ನಿಸುವಂತಿದ್ದರೆ, ಓಹೋ…ಹೌದಲ್ವೇ !?! ಎಂದು ಯೋಚಿಸುವ ಹಾಗಾದರೆ ಬರೆದದ್ದು ಸಾರ್ಥಕ ಅಲ್ವಾ? ಭಾವನೆಗಳಿಗೆ ಬೆಲೆ ಕೊಡುತ್ತಾ ಬರಹಗಳನ್ನು ಅಕ್ಷರಗಳಲ್ಲಿ ಪೋಣಿಸುತ್ತಾ ಓದುಗನ ಹೃದಯದೊಳಗೆ ಬರಹಗಾರ ಮನೆಮಾಡುವಂತಿರಬೇಕು.
ಎರವಲು ಬರಹವನ್ನು ಅದೆಷ್ಟು ದಿನ ಸಿಂಗರಿಸಬಹುದು !?! ದಿನಕಳೆದಂತೆ ಬರಹ ಬಣ್ಣ ಕಳಚುತ್ತಾ ಮಾಸಲಾಗಲಾರದಾ!?! ನಮ್ಮ ಬರಹ ಅನ್ನುವ ಪ್ರೀತಿಯನ್ನು ಮೊದಲು ಮೈಗೂಡಿಸಿಕೊಂಡು ಯಾವುದೋ ಮನಸ್ಸಿನ ನೋವಿಗೆ ನಮ್ಮ ಅಕ್ಷರಗಳು ಸಾಂತ್ವನದ ಹೂವಾಗಬೇಕು. ಆಗಲೇ ಆ ಬರಹಕ್ಕೊಂದು ಸಾರ್ಥಕತೆ. ಒಳ್ಳೆಯ ಬರಹಗಳು ಒಂದು ಆರೋಗ್ಯವಂತ ಮನಸ್ಸಿನ ಕನ್ನಡಿಯಾಗಬೇಕು. ಆ ದೆಸೆಯಲ್ಲಿ ನಮ್ಮ ಅಕ್ಷರಗಳು ಪೂರಕವಾಗಿರಬೇಕು. ಎಡವುದು ಸಹಜ, ತಿದ್ದಿಕೊಳ್ಳಬೇಕಾದುದು ಒಬ್ಬ ಪ್ರಜ್ಞಾವಂತ ಬರಹಗಾರನ ಕರ್ತವ್ಯವಾಗಬೇಕು. ಒಬ್ಬ ಜಾಣ ಬರಹಗಾರ ಓದುಗ ಬಂಧುಗಳನ್ನು ಗೌರವಿಸುತ್ತಾ ಅಕ್ಷರಗಳನ್ನು ಸಮಯೋಚಿತವಾಗಿ ಜೋಡಿಸುತ್ತಾ ಒಬ್ಬ ಒಳ್ಳೆಯ ಬರಹಗಾರ ಅನ್ನಿಸುವುದು ಪ್ರಬುದ್ಧ ಬರಹಗಾರನ ಲಕ್ಷಣಗಳು.
ಪ್ರಸ್ತುತ ಸಂಕಟದ ಸಮಯ. ಅಕ್ಷರಗಳನ್ನು ಸ್ವಹಿತಕ್ಕಾಗಿ ಬಳಸದೆ ನೊಂದಿರುವ ಮೊಗದಲ್ಲಿ ನಗುವಿನ ಅಲೆ ಉಕ್ಕಿಸುವಂತಿರಲಿ. ಬರಹ ಸಮಸ್ಯೆಯ ಬಾಧಕವಾಗದೆ ಸಂತೃಪ್ತಿಯ ಸಾಧನವಾಗಲಿ. ಅಕ್ಷರಗಳು ಮೋಡದೊಳಗಿಂದ ಮುಸುಕಿನೆಡೆಗೆ ಸರಿದು ಇಳಿದು ಹೋಗುವ ಮುಸ್ಸಂಜೆಯ ಸೂರ್ಯನಿಗಿಂತ,
ಮುಂಜಾನೆ ಊರ ದೂರದ ಬೆಟ್ಟದಡಿಯಿಂದ ಮೆಲ್ಲನೆದ್ದು ಬರುವ ರವಿಯಂತೆ ಜಗದ ಬೆಳಕಾಗಲಿ.
ಉಂಡೆದ್ದು ಮೇಲೇಳುವಾಗ ಅನ್ನದಾತ ಸುಖೀಭವ ಅಂದ ಹಾಗೆಯೇ.
ಓದಿದ ಮೇಲೆ ಓದುಗ ದೇವರು ಬರಹಗಾರನನ್ನು ಹರಸುವಂತಾಗಬೇಕು.
ಮೊದಲು ವಿಚಾರಗಳೊಂದಿಗೆ ಪಳಗಿದರೆ ಮಾತ್ರ ಅಕ್ಷರಗಳನ್ನು ಬೆಳಗಬಹುದು. ವಿಚಾರ ಹೀನನಾಗಿ ಅಕ್ಷರ ಶೂರನಾದರೆ ಅರ್ಥವಿಲ್ಲ. ತನ್ನ ಬರಹ ಅನ್ನುವುದು ಸಂಕಟದ ಹೊತ್ತಲ್ಲಿ ವೆಂಕಟರಮಣನಾಗಬೇಕೇ ಹೊರತು, ಓದುಗನನ್ನು ಮಂಕೆರಚುವುದಲ್ಲ. ಬರೆಯ ಬಲ್ಲವ ಬರೆದುಕೊಡುವುದು ಬಿಟ್ಟು, ಹೊಸ ಬರಹಗಾರನನ್ನು ಸೃಷ್ಟಿಸುವ, ಆತನಿಗೆ ಬರಹದ ಮೌಲ್ಯವನ್ನು ತಿಳಿಹೇಳುವ ಪ್ರಯತ್ನ ಮಾಡಬೇಕು. ಈಗೀಗ ಬರೆಯುವವ ಒಬ್ಬನಾದರೆ, ಮತ್ಯಾರೋ ಅದು ತನ್ನದೆಂದು ಪ್ರಚಾರ ಪಡೆಯುವುದು ನಿರಂತರವಾಗಿ ನಾವುಗಳು ಕಾಣುತ್ತಿದ್ದೇವೆ.
ಹಟದಿಂದ ಬರೆಯುವುದನ್ನು ಬಿಟ್ಟು ಬರಹ ಕೇವಲ ಚಟದಂತಿದ್ದರೆ ಆ ಬರಹ ಘಮಘಮಿಸುತ್ತೆ. ಓದು ಊಟವಾದರೆ ಬರಹ ಒಗ್ಗರಣೆಯಾಗಬೇಕು. ಇದು ಅಂತರ್ಜಾಲದ ಕಾಲ. ಅದ್ಭುತವಾದ ಬರಹಗಳು ನಿತ್ಯ ಓದಲು ಸಿಗುತ್ತವೆ. ಒಂದಷ್ಟು ಉದ್ದದ ಲೇಖನಗಳು ಬಂದರೆ ಓದದೆ ಹಾಸ್ಯ, ರಾಜಕೀಯ, ಮತೀಯ ಬರಹಗಳನ್ನೂ ಓದುತ್ತಾ ಮುತ್ತಿನಂತ ಹೊತ್ತನ್ನು ವ್ಯರ್ಥಗೊಳಿಸುವುದರಲ್ಲಿ ಅರ್ಥವಿಲ್ಲ. ಬರಹ ಸಾಮಾಜಿಕ ಜಾಲ ತಾಣದಲ್ಲಿನ ಲೈಕ್ ಮತ್ತು ಕಾಮೆಂಟ್ ಗಾಗಿ ಮಾತ್ರ ಸೀಮಿತವಲ್ಲ. ಬರಹ ಮಮತೆಯ ತವರಾಗಬೇಕು. ಅದು ಮತ್ಸರದ ಗೂಡಾಗಬಾರದು. ಅಕ್ಷರಗಳು ಅಕ್ಷಯ ಪಾತ್ರೆಯಾಗಿದ್ದರೆ ಚೆಂದ, ಅವುಗಳನ್ನು ಯಾರದೋ ಅವಹೇಳನಕ್ಕೆ ಬಳಸಿದರೆ ಅಮೂಲ್ಯವಾದ ಅಕ್ಷರಗಳಿಗೆ ದ್ರೋಹ ಮಾಡಿದಂತೆ. ಅಂದ ಹಾಗೆ ನಮ್ಮ ಅಕ್ಷರಗಳು ನಮ್ಮ ನಡೆಯನ್ನು ಗುರುತಿಸುವಂತಿದ್ದು ಆ ನಮ್ಮ ನಡೆ ಸಮಾಜಮುಖಿ ಯಾಗಿ ಸರ್ವಶ್ರೇಷ್ಠ ಸಮಾಜ ಕಟ್ಟುವ ಕಾಯಕದಂತಿರಲಿ.
ಒಳ್ಳೆಯ ಓದು ಮಾತ್ರ ಒಬ್ಬ ಒಳ್ಳೆಯ ಬರಹಗಾರನನ್ನು ಸೃಷ್ಟಿಸುತ್ತೆ. ನಾಡಿನ ಹಿರಿಯ ಕವಿ ಪದ್ಮಶ್ರೀ ದೊಡ್ಡ ರಂಗೇಗೌಡರ ಮುತ್ತುದುರಿದ ಮಾತು ನಿಮ್ಮೊಂದಿಗೆ ಹಂಚಿಕೊಂಡಿರುವೆ.
ಅಧ್ಯಯನವೆಂದೆಂದೂ
ಅಂತರಂಗದ ಹಸಿವು
ಹೃದಯ ತುಡಿದರೆ ಮಾತ್ರ
ಅನ್ವೇಷಣೆಯ ಹೊಸ ಹೂವು
ಸದಭಿರುಚಿ ಇದ್ದಲ್ಲಿ ನಿಜ ಜ್ಞಾನಾರ್ಜನೆಗೆ ಠಾವು ಅನುದಿನದ ಓದಿಂದ ಮನ ವಿಕಾಸವೋ-
ಮಣ್ಣಿನ ಮಗ
ಆಡುವುದು ಒಳ್ಳೇ ಮಾತು ಅರೆಯೋದು ಮಾತ್ರ ಮೆಣಸಿನ ಕಾಯಿಯಾ ಎಂಬಂತಾಗದಿರಲಿ ನಮ್ಮ ಬರಹ.
ಬರಹ :- ವಿಶ್ವನಾಥ್ ಶೆಟ್ಟಿ ಪೇತ್ರಿ