ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸಲ್ಪಡುವ ಹದಿಮೂರನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ _ 2025’ ತ್ರಯೋದಶ ಸರಣಿಯು ಇದೇ ನವೆಂಬರ್ 23 ರಿಂದ 29ರವರೆಗೆ ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಲಿದೆ. ‘ಸಂಘಟನಾ ಪರ್ವ’ ಎಂಬ ಹೆಸರಿನಲ್ಲಿ ಜಿಲ್ಲೆಯ ವಿವಿಧ ಯಕ್ಷಗಾನ ಸಂಘಗಳ ಸಹಕಾರದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನವೆಂಬರ್ 23 ರಿಂದ ಕ್ರಮವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ‘ಮಿತ್ತ ಲೋಕೊದ ಪೆತ್ತ’ ತುಳು ತಾಳಮದ್ದಳೆ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಸಂಘ ಸೂಡ, ಕಾರ್ಕಳ (ನಚಿಕೇತ), ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ (ಶಾರದಾ ವಿವಾಹ), ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಘಟಕ (ಸೌಗಂಧಿಕಾ ಹರಣ), ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಟ್ರಸ್ಟ್ ಉಪ್ಪಿನಂಗಡಿ (ಶಲ್ಯ ಪರ್ವ), ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ (ವರುಣಾಧ್ವರ), ಹವ್ಯಾಸಿ ಬಳಗ ಕದ್ರಿ, ಮಂಗಳೂರು (ಪಾಂಚಜನ್ಯೋತ್ಪತ್ತಿ), ಕರ್ನಾಟಕ ಯಕ್ಷಭಾರತಿ ಪುತ್ತೂರು (ಸತೀ ಶಕ್ತಿ) ಹೀಗೆ 7 ತಂಡಗಳು ಕನ್ನಡ ಭಾಷೆಯಲ್ಲಿ ವಿನೂತನ ಪ್ರಸಂಗಗಳನ್ನು ಪ್ರಸ್ತುತಪಡಿಸಲಿವೆ.

ಯಕ್ಷಾಂಗಣದ ಹದಿಮೂರನೇ ವರ್ಷದ ತಾಳಮದ್ದಳೆ ಸಪ್ತಾಹ ಉದ್ಘಾಟನಾ ಸಮಾರಂಭವು ನವೆಂಬರ್ 23 ರಂದು ಸಾಯಂಕಾಲ ಗಂ. 4.30 ಕ್ಕೆ ಜರಗಲಿದ್ದು ಗೌರವಾಧ್ಯಕ್ಷ ಡಾ| ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ ಸಪ್ತಾಹವನ್ನು ಉದ್ಘಾಟಿಸುವರು. ಇದೇ ಸಂದರ್ಭ ಮಂಗಳೂರಿನ ಪ್ರಸಿದ್ಧ ಸ್ವರ್ಣೋದ್ಯಮಿ ಹಾಗೂ ಕಲಾಪೋಷಕ ಎಂ. ರವೀಂದ್ರ ಶೇಟ್ ಅವರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಲಾಗುವುದು. ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಕೆನರಾ ಬ್ಯಾಂಕ್ ವಲಯ ಮುಖ್ಯಸ್ಥ ಮಂಜುನಾಥ ಬಿ. ಸಿಂಗಾಯಿ ಪ್ರಧಾನ ಅಭ್ಯಾಗತರಾಗಿರುವರು. ಎಸ್. ಪ್ರದೀಪ ಕುಮಾರ ಕಲ್ಕೂರ, ವಿ. ಕರುಣಾಕರ, ಪ್ರೊ.ಗಣಪತಿ ಗೌಡ ಎಸ್. ಶ್ರೀಧರ ಶೆಟ್ಟಿ ಪುಳಿಂಚ, ಅರುಣ ಪ್ರಭ ಕೆ.ಎಸ್.,ಡಾ.ಧನಂಜಯ ಕುಂಬ್ಳೆ ಮುಖ್ಯ ಅತಿಥಿಗಳಾಗಿರುವರು. ನವೆಂಬರ್ 29 ರಂದು ಜರಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಹಾಲು ತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ವಹಿಸುವರು. ಬ್ಯಾಂಕ್ ಆಫ್ ಬರೋಡಾದ ಪ್ರಧಾನ ವ್ಯವಸ್ಥಾಪಕ ರಾಜೇಶ್ ಖನ್ನಾ ದೀಪ ಪ್ರಜ್ವಲನೆ ಮಾಡುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಅವರು ಹಿರಿಯ ಯಕ್ಷಗಾನ ಕಲಾವಿದ ಬೋಳಾರ ಸುಬ್ಬಯ್ಯ ಶೆಟ್ಟಿಯವರಿಗೆ 2025ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಪ್ರದಾನ ಮಾಡುವರು. ಡಾ| ಹರಿಕೃಷ್ಣ ಪುನರೂರು, ರಾಜು ಮೊಗವೀರ, ಸೌಂದರ್ಯ ರಮೇಶ್, ವೇಣುಗೋಪಾಲ ಶೆಟ್ಟಿ ಥಾಣೆ, ಎ. ಸುರೇಶ್ ರೈ ಅತಿಥಿಗಳಾಗಿರುವರು.
ಸಪ್ತಾಹದ ಎಲ್ಲಾ ದಿನಗಳಲ್ಲಿ ಯಕ್ಷಗಾನಕ್ಕಾಗಿ ದುಡಿದ ಹಿರಿಯ ಚೇತನಗಳು ಕೀರ್ತಿಶೇಷ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ವಿದ್ವಾನ್ ಕೆ. ಕಾಂತ ರೈ ಮೂಡಬಿದಿರೆ, ಎ.ಕೆ. ನಾರಾಯಣ ಶೆಟ್ಟಿ, ಎ.ಕೆ. ಮಹಾಬಲ ಶೆಟ್ಟಿ ಫರಂಗಿಪೇಟೆ, ಎಸ್. ಜಲಂಧರ ರೈ, ಪಾತಾಳ ವೆಂಕಟ್ರಮಣ ಭಟ್, ಶಂಭು ಶರ್ಮ ವಿಟ್ಲ, ಗಣೇಶ್ ಕೊಲೆಕಾಡಿ ಇವರ ಸಂಸ್ಮರಣೆ ನಡೆಯಲಿದೆ. ಅಲ್ಲದೆ ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಯಕ್ಷಗಾನ ದಶಾವತಾರಿ ಕೆ.ಗೋವಿಂದ ಭಟ್ ಅವರಿಗೆ ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರಶಸ್ತಿ ನೀಡಲಾಗುವುದು. ಈ ಬಾರಿ ಸುವರ್ಣ ಸಂಭ್ರಮದ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಎಕೆ ಜಯರಾಮ ಶೇಖ, ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮತ್ತು ಕರುಣಾಕರ ಶೆಟ್ಟಿ ಪಣಿಯೂರು ಅವರನ್ನು ಅಭಿನಂದಿಸಲಾಗುವುದು. ಸಪ್ತಾಹದ ಆರಂಭದಲ್ಲಿ ದಿನಾಂಕ 17 ರಂದು ಆದಿತ್ಯವಾರ ಅಪರಾಹ್ನ ಗಂ.2.00 ರಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ‘ಅಮ್ಮಣ್ಣಾಯೆರ್ನ ನೆಂಪು ಬೊಕ್ಕ ತುಳು ತಾಳಮದ್ದೊಲಿ, ಭಾಗವತ ದಿ| ದಿನೇಶ ಅಮ್ಮಣ್ಣಾಯರ ಸಂಸ್ಮರಣಾ ಗೋಷ್ಠಿ ಮತ್ತು ತುಳು ತಾಳಮದ್ದಳೆಯನ್ನು ಏರ್ಪಡಿಸಲಾಗಿದೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು. ಭಾಗವತ ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡಾ ಸಂಸ್ಮರಣಾ ಭಾಷಣ ಮಾಡುವರು. ಮಂಗಳೂರು ತಾಲೂಕು ಮಹಿಳಾ ಮಂಡಲದ ಗೌರವಾಧ್ಯಕ್ಷೆ ವಿಜಯಲಕ್ಷ್ಮಿ ಬಿ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ಪ್ರೊ ಭಾಸ್ಕರ ರೈ ಕುಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದರು.









































































































