ಸಹಕಾರಿ ಸಂಘದಲ್ಲಿ ಎಂದೂ ರಾಜಕೀಯ ಪ್ರವೇಶಿಸಬಾರದು ಎಂದು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು. ನವೆಂಬರ್ 17ರಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಮತ್ತು ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪಡುಬಿದ್ರಿಯಲ್ಲಿ ನಡೆದ ಸಹಕಾರಿ ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಭಾರತ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಉದ್ಘಾಟಿಸಿ, ಮಾನವೀಯತೆಯ ನೆಲೆಯಲ್ಲಿ ಸಹಕಾರಿ ತತ್ವದ ಆಧಾರದಲ್ಲಿ ಈ ರಂಗವು ಸಾಲ ನೀಡುತ್ತಿದೆ. ಜನರಿಂದಾಗಿಯೇ ಸಹಕಾರಿ ಸಂಘವು ಇಂದು ಉನ್ನತಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪಡುಬಿದ್ರಿ ಸೊಸೈಟಿಯ ಮೂಲಕ 180 ರೈತರಿಗೆ ತಲಾ ರೂ.3,000 ರೂಪಾಯಿಗಳ ಕೃಷಿ ಪ್ರೋತ್ಸಾಹಧನವನ್ನು ವಿತರಿಸಿದರು. ಸೂರ್ಯಕಾಂತ್ ಜಯ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಸಹಕಾರ ರತ್ನ ಪುರಸ್ಕೃತ ರಮೇಶ್ ಶೆಟ್ಟಿ ಹಾವಂಜೆ ಅವರನ್ನು ಅಭಿನಂದಿಸಲಾಯಿತು. ಮಂದಾರ್ತಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು. ವೈ ಸುಧೀರ್ ಕುಮಾರ್ ಸ್ವಾಗತಿಸಿ ಪ್ರಸ್ತಾವಿಸಿದರು. ಶ್ರೀಧರ್ ಬಿ ಎಸ್ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಜಿಲ್ಲಾ ಯೂನಿಯನ್ ನ ಸಿ.ಇ.ಒ ಅನುಷಾ ಕೋಟ್ಯಾನ್ ವಂದಿಸಿದರು.









































































































