


ರಾಜಕೀಯವೆಂದರೆ ಕೇವಲ ಅಧಿಕಾರದ ಅಲಂಕಾರವಲ್ಲ; ಅದು ಜನರ ನೋವುಗಳಿಗೆ ಸ್ಪಂದಿಸುವ ಹೃದಯದ ಧ್ವನಿ. ಕೆಲವರು ಹುದ್ದೆಗಳನ್ನು ಅಲಂಕರಿಸುತ್ತಾರೆ. ಆದರೆ ಕೆಲವರು ತಮ್ಮ ಕಾರ್ಯಗಳಿಂದಲೇ ಹುದ್ದೆಗಳಿಗೆ ಗೌರವ ತರುತ್ತಾರೆ. ಅಂತಹ ಅಪರೂಪದ ಜನನಾಯಕರ ಸಾಲಿನಲ್ಲಿ ಕರಾವಳಿ ಕರ್ನಾಟಕ ಹೆಮ್ಮೆಯಿಂದ ಉಚ್ಚರಿಸುವ ಹೆಸರು ಕೆ. ಜಯಪ್ರಕಾಶ್ ಹೆಗ್ಡೆ. ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ ಮತ್ತು ಜನಪರ ಚಿಂತನೆಯ ಮೂಲಕ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಅವರು ಶಾಸಕನಾಗಿ, ಸಚಿವನಾಗಿ, ಸಂಸದರಾಗಿ ಹಾಗೂ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜನಸೇವೆಯ ಅನೇಕ ಸುವರ್ಣ ಅಧ್ಯಾಯಗಳನ್ನು ಬರೆದಿದ್ದಾರೆ. ಜೆ.ಎಚ್ ಪಟೇಲ್ ಅವರ ಸಚಿವ ಸಂಪುಟದಲ್ಲಿ ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಿದರು. ಸಮುದ್ರವನ್ನು ಜೀವನಾಧಾರವಾಗಿಸಿಕೊಂಡ ಮೀನುಗಾರರ ಸಮಸ್ಯೆಗಳನ್ನು ಹತ್ತಿರದಿಂದ ಅರಿತು, ಮೀನುಗಾರಿಕಾ ಕ್ಷೇತ್ರದ ಆಧುನೀಕರಣ, ಮೀನುಗಾರರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಅವರ ಬದುಕಿನ ಭದ್ರತೆಗೆ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದರು. ಕರಾವಳಿಯ ಬಂದರುಗಳ ಅಭಿವೃದ್ಧಿಗೆ ಒತ್ತು ನೀಡಿ, ಸಮುದ್ರ ಆಧಾರಿತ ಆರ್ಥಿಕತೆಯ ವಿಸ್ತರಣೆಗೆ ದೃಢವಾದ ಅಡಿಪಾಯ ಹಾಕಿದರು. ಕರಾವಳಿಯ ಜನರ ಕನಸುಗಳಿಗೆ ಸರ್ಕಾರದ ಸ್ಪಂದನೆ ದೊರಕುವಂತೆ ಮಾಡಿದ ನಾಯಕತ್ವ ಅವರದು. ಅವರ ರಾಜಕೀಯ ಜೀವನದ ಅತ್ಯಂತ ಐತಿಹಾಸಿಕ ಸಾಧನೆಗಳಲ್ಲಿ ಪ್ರಮುಖವಾದದ್ದು ಉಡುಪಿ ಜಿಲ್ಲೆಯ ರಚನೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಉಡುಪಿ ಪ್ರದೇಶದ ಜನರ ದೀರ್ಘಕಾಲದ ಬೇಡಿಕೆಯನ್ನು ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಮುಂದಿಟ್ಟು, 1997ರಲ್ಲಿ ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬರಲು ಅವರು ವಹಿಸಿದ್ದ ಪಾತ್ರ ಅಮೋಘ. ಉಡುಪಿ ಜಿಲ್ಲೆಯ ರಚನೆಯ ನಂತರ ಸರ್ಕಾರಿ ಕಚೇರಿಗಳು, ಆಡಳಿತಾತ್ಮಕ ವ್ಯವಸ್ಥೆಗಳು ಹಾಗೂ ಅಭಿವೃದ್ಧಿ ಯೋಜನೆಗಳು ಜನರಿಗೆ ಇನ್ನಷ್ಟು ಹತ್ತಿರವಾದವು. ಇಂದು ಉಡುಪಿ ಜಿಲ್ಲೆಯ ರೂಪುಗೊಂಡ ಅಭಿವೃದ್ಧಿಯ ಹಿಂದೆ ಜಯಪ್ರಕಾಶ್ ಹೆಗ್ಡೆ ಅವರ ದೂರದೃಷ್ಟಿಯ ಸೇವೆ ಸ್ಪಷ್ಟವಾಗಿ ಕಾಣುತ್ತದೆ.


ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಅವರು ಅಭಿವೃದ್ಧಿ ಕಾರ್ಯಗಳಿಗೆ ಹೊಸ ಚಲನೆಯನ್ನು ನೀಡಿದರು. ರೈಲ್ವೆ, ರಸ್ತೆ, ಶಿಕ್ಷಣ ಹಾಗೂ ಮೂಲಸೌಕರ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಗಮನ ಸೆಳೆದರು. ಕರಾವಳಿ ಕರ್ನಾಟಕಕ್ಕೆ ಹೆಚ್ಚಿನ ರೈಲು ಸೌಲಭ್ಯಗಳು, ಮಂಗಳೂರು ಮಡಗಾಂವ್ ಸಂಪರ್ಕ, ಚಿಕ್ಕಮಗಳೂರು ಸಕಲೇಶಪುರ ರೈಲು ಮಾರ್ಗ ಹಾಗೂ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣದಂತಹ ಮಹತ್ವದ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಜನರ ಧ್ವನಿಯಾದರು. ಸಂಸದರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನಗಳನ್ನು ತರಲು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನೆರವು ಒದಗಿಸಲು ಹಾಗೂ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲು ಅವರು ಶ್ರಮಿಸಿದರು. ಅಭಿವೃದ್ಧಿಯ ವಿಚಾರದಲ್ಲಿ ಪಕ್ಷಾತೀತ ನಿಲುವು ಹೊಂದಿದ್ದ ಅವರು, ಜನಹಿತವೇ ರಾಜಕೀಯದ ನಿಜವಾದ ಗುರಿ ಎಂಬುದನ್ನು ತಮ್ಮ ಕಾರ್ಯಶೈಲಿಯ ಮೂಲಕ ಸಾಬೀತುಪಡಿಸಿದರು. ನಂತರ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿದ ಅವರು, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಿದರು. ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, ಅವರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅಗತ್ಯವಾದ ಶಿಫಾರಸುಗಳನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದರು. ಸಮಾಜದ ದುರ್ಬಲ ವರ್ಗಗಳಿಗೆ ನ್ಯಾಯ ಮತ್ತು ಅವಕಾಶ ದೊರಕಬೇಕು ಎಂಬ ಬದ್ಧತೆಯನ್ನು ಅವರು ಸದಾ ಮುಂದಿಟ್ಟರು.
ಕೆ. ಜಯಪ್ರಕಾಶ್ ಹೆಗ್ಡೆ ಅವರ ರಾಜಕೀಯ ಪಯಣವು ಹುದ್ದೆಗಳ ಪಟ್ಟಿ ಅಲ್ಲ; ಅದು ಜನರ ವಿಶ್ವಾಸದ ಮಹಾಕಾವ್ಯ. ಅಧಿಕಾರವನ್ನು ಅವರು ವೈಯಕ್ತಿಕ ಪ್ರತಿಷ್ಠೆಗೆ ಬಳಸಲಿಲ್ಲ; ಜನಸೇವೆಯ ಸಾಧನವಾಗಿಸಿದರು. ಸಮುದ್ರದ ಅಲೆಗಳಂತೆ ನಿರಂತರ ಚಲನೆಯಲ್ಲಿದ್ದ ಅವರ ಸೇವಾ ಮನೋಭಾವ ಇಂದು ಕೂಡ ಸಾವಿರಾರು ಜನರಿಗೆ ಪ್ರೇರಣೆಯಾಗಿದೆ.
ಕರಾವಳಿಯಲ್ಲಿ ಗಾಳಿ ಬೀಸಿದಾಗ, ಮೀನುಗಾರರ ದೋಣಿಗಳು ಸಮುದ್ರದತ್ತ ಹೊರಟಾಗ, ಉಡುಪಿ ಜಿಲ್ಲೆಯ ಅಭಿವೃದ್ಧಿಯ ಕಥೆ ಕೇಳಿ ಬಂದಾಗ, ಹಿಂದುಳಿದ ವರ್ಗಗಳ ಹಕ್ಕುಗಳ ಕುರಿತು ಚರ್ಚೆಯಾದಾಗ ಜನಮನಗಳಲ್ಲಿ ಸಹಜವಾಗಿಯೇ ಒಂದು ಹೆಸರು ಮೊಳಗುತ್ತದೆ ಅದೇ ಕೆ. ಜಯಪ್ರಕಾಶ್ ಹೆಗ್ಡೆ. ಸಮುದ್ರದಷ್ಟು ವಿಶಾಲ ಹೃದಯ, ಪ್ರಜಾಪ್ರಭುತ್ವದಷ್ಟು ಗಾಢ ನಂಬಿಕೆ, ಜನಸೇವೆಯಷ್ಟು ಪವಿತ್ರ ಸಂಕಲ್ಪ ಇದೇ ಕೆ ಜಯಪ್ರಕಾಶ್ ಹೆಗ್ಡೆ ಅವರ ವ್ಯಕ್ತಿತ್ವದ ನಿಜವಾದ ಪರಿಚಯ. ಕರಾವಳಿಯ ಹೆಮ್ಮೆಯ ಪುತ್ರ, ಅಭಿವೃದ್ಧಿಯ ಹರಿಕಾರ, ಸಾಮಾಜಿಕ ನ್ಯಾಯದ ಧ್ವನಿ ಹಾಗೂ ಜನಪರ ನಾಯಕತ್ವದ ಪ್ರತೀಕವಾದ ಕೆ ಜಯಪ್ರಕಾಶ್ ಹೆಗ್ಡೆ ಅವರಿಗೆ ಗೌರವಪೂರ್ವಕ ನಮನಗಳು.
ಬರಹ : ವಿಠ್ಠಲ್ ಶೆಟ್ಟಿ





























































































































