
ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದು, ಯಾರ ಸಹಾಯವೂ ಇಲ್ಲದೇ ತನ್ನ ಆತ್ಮಬಲವನ್ನೇ ಆಯುಧವನ್ನಾಗಿಸಿಕೊಂಡು ಬಿಗ್ ಬಾಸ್ ರನ್ನರ್ ಅಪ್ ಆದದ್ದು ಸಾಮಾನ್ಯ ವಿಷಯವೇ ಅಲ್ಲ. ಈ ಬಾರಿಯ ಬಿಗ್ ಬಾಸ್ ಸೀಸನ್ ನೋಡಿದಾಗ ರಕ್ಷಿತಾ ಹೊರತುಪಡಿಸಿ ಉಳಿದೆಲ್ಲಾ ಸ್ಪರ್ಧಿಗಳಿಗೆ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಹಿನ್ನೆಲೆ ಇತ್ತು. ಒಂದಷ್ಟು ಜನಪ್ರಿಯತೆ ಹಾಗೂ ಅಭಿಮಾನಿಗಳು ಶೋಗೆ ಬರುವ ಮೊದಲೇ ಇದ್ದರು. ಕೆಲವರಿಗೆ ‘ಗಾಡ್ ಫಾದರ್’ ಅಂತ ಹೇಳುವ ವ್ಯಕ್ತಿಗಳೂ ಇದ್ದರು. ಆದರೆ, ಇದಕ್ಕೆ ತದ್ವಿರುದ್ಧವಾಗಿದ್ದವರು ರಕ್ಷಿತಾ ಶೆಟ್ಟಿ ಮಾತ್ರ! ತುಳು ಮಾತೃಭಾಷೆ, ಓದಿದ್ದು ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ. ಕನ್ನಡ ಅಲ್ಪಸ್ವಲ್ಪ ಗೊತ್ತಿದ್ದ ಹುಡುಗಿ ಹಠಕ್ಕೆ ಬಿದ್ದು ಕನ್ನಡ ಕಲಿತರೂ, ಆಕೆಯ ಯೂಟ್ಯೂಬ್ ವಿಡಿಯೋಗಳಲ್ಲಿ ಮಾತನಾಡುತ್ತಿದ್ದ ಕನ್ನಡವನ್ನು ಕೇಳಿ ಹೊಗಳಿದವರಿಗಿಂತ ಬೈದವರೇ ಹೆಚ್ಚು. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಯಾವುದೇ ಫಿಲ್ಟರ್ ಇಲ್ಲದೆ, ಕನಿಷ್ಠ ಎಡಿಟಿಂಗ್ ಕೂಡಾ ಮಾಡದೆ, ಇದ್ದದ್ದನ್ನು ಇದ್ದ ಹಾಗೆ ತನ್ನ ವಿಡಿಯೋಗಳಲ್ಲಿ ತೋರಿಸುವ ಆಕೆಯ ಧೈರ್ಯ ಅಸಾಮಾನ್ಯವಾದುದು.

ಬಿಗ್ ಬಾಸ್ ಒಳಗೆ ಆಕೆ ಬಂದಾಗ ಪ್ರೀತಿಸಿದವರಿಗಿಂತ ದ್ವೇಷಿಸಿದವರೇ ಹೆಚ್ಚು. ಸೋಶಿಯಲ್ ಮೀಡಿಯಾಗಳಲ್ಲಿ ಬೈದವರು ಬಹಳಷ್ಟಿದ್ದಾರೆ. ಆದರೆ ದಿನಗಳು ಕಳೆದ ಹಾಗೆ ಮನೆಯೊಳಗಿದ್ದ ಘಟಾನುಘಟಿಗಳನ್ನೆಲ್ಲಾ ಆಕೆ ಎದುರಿಸಿದ ರೀತಿ, ಯಾರಿಗೂ ಬಗ್ಗದೆ ಜಗ್ಗದೆ ತನಗನಿಸಿದ್ದನ್ನು ನೇರವಾಗಿ ಹೇಳುವ ರೀತಿ, ನಿಧಾನವಾಗಿ ಜನಮಾನಸದಲ್ಲಿ ಅಭಿಮಾನದ ಬೀಜ ಮೊಳಕೆಯೊಡೆಯುವ ಹಾಗೆ ಮಾಡಿದ್ದು ಸುಳ್ಳಲ್ಲ. ತನ್ನ ಉಡುಗೆ ತೊಡುಗೆ, ಆಸ್ತಿ ಅಂತಸ್ತು ಇದ್ಯಾವುದರ ಬಗ್ಗೆಯೂ ಬಿಲ್ಡಪ್ ಕೊಡದೆ, ಶೋ ಆಫ್ ಇಲ್ಲದೆ, ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ “ತಾನು ಹೊರಗೆ ಹೇಗಿದ್ದೆನೋ ಒಳಗೂ ಹಾಗೆಯೇ” ಅನ್ನೋದನ್ನ ತನ್ನ ಆಟದ ಮೂಲಕ ತೋರಿಸಿಕೊಟ್ಟ ಛಲಗಾತಿ ಇವಳು. ಶೋ ಮುಗಿದ ಮೇಲೆ ಬೇರೆ ಬೇರೆ ನ್ಯೂಸ್ ಚಾನೆಲ್ಗಳಲ್ಲಿ ಆಕೆ ಮಾತನಾಡಿದ ರೀತಿ ಹಾಗೂ ಆಕೆಯ ಅಚಲವಾದ ಆತ್ಮವಿಶ್ವಾಸ ಎಂತವರನ್ನೂ ಬೆರಗಾಗಿಸುವುದು ಸತ್ಯ. ನಮ್ಮ ಬದುಕಿನ ಬಹುತೇಕ ಸಮಯ ನಾವು ಬೇರೆಯವರ ಬಗ್ಗೆ ಯೋಚಿಸಿಯೇ ನಮ್ಮ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. “ನಮ್ಮ ಬಗ್ಗೆ ಯಾರು ಏನು ಅಂದುಕೊಳ್ಳುತ್ತಾರೋ?”, “ನಾವು ಹೀಗಿದ್ದರೆ ಯಾರು ಆಡಿಕೊಳ್ಳುತ್ತಾರೋ?” ಎಂಬ ಭಯ ಅಥವಾ ಇನ್ನೊಬ್ಬರ ಗೆಲುವು ಸೋಲು ನಮ್ಮ ಅಸಮಾಧಾನಕ್ಕೆ ಕಾರಣವಾಗುತ್ತದೆ. ಆದರೆ ವಾಸ್ತವದಲ್ಲಿ ಎಲ್ಲರೂ ಅವರವರ ಜೀವನದಲ್ಲಿ ಬ್ಯುಸಿಯಾಗಿರುತ್ತಾರೆ. ನಮ್ಮ ಬಗ್ಗೆ ಅತಿಯಾಗಿ ಯೋಚಿಸುವ ಕುತೂಹಲ ಯಾರಿಗೂ ಇರುವುದಿಲ್ಲ. ನಮ್ಮ ಸೋಲು ಗೆಲುವಿಗೆ ನಾವೇ ಜವಾಬ್ದಾರರು ಎನ್ನುವ ಸತ್ಯವನ್ನು ನಾವು ಮರೆತುಬಿಡುತ್ತೇವೆ.
ಆದರೆ ರಕ್ಷಿತಾ ಅವರನ್ನು ಕಂಡಾಗ ಅನಿಸಿದ್ದು ಇಷ್ಟೇ: “ನಾವು ಹೇಗಿದ್ದೇವೋ ಹಾಗೆಯೇ ಇರಬೇಕು. ಇನ್ನೊಬ್ಬರು ಏನೆಂದುಕೊಳ್ಳುತ್ತಾರೋ ಅನ್ನುವ ಭಾವನೆಯಲ್ಲಿ ಮುಖವಾಡ ಹಾಕಿ ಬದುಕಿ ಏನು ಪ್ರಯೋಜನ, ಅಲ್ವಾ?” ಆಕೆಗೆ ಎಷ್ಟು ವೋಟ್ ಬಂತು, ಎಷ್ಟು ದುಡ್ಡು ಸಿಕ್ಕಿತು ಎನ್ನುವುದಕ್ಕಿಂತ, ಬಿಗ್ ಬಾಸ್ ಮನೆಯೊಳಗೆ ಆಕೆ ಕಳೆದ ದಿನಗಳು ಆಕೆಯ ನೇರ ದಿಟ್ಟ ವ್ಯಕ್ತಿತ್ವಕ್ಕೆ ಕನ್ನಡಿಯಾಗಿವೆ.


















































































































