
ಬಂಟರ ಸಂಘ ಮುಂಬಯಿ ಮತ್ತು ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಣ್ಣ ತಮ್ಮಂದಿರಂತೆ ಮತ್ತು ಮಹಿಳಾ ವಿಭಾಗವು ಅಕ್ಕ ತಂಗಿಯರoತೆ. ಈಗ ಮೊದಲಿನಂತೆ ಏನೂ ಇಲ್ಲ. ಪರಿವರ್ತನೆ ಜಗದ ನಿಯಮ ಎಂಬಂತೆ ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕಾದುದು ನಮ್ಮ ಧರ್ಮ. ಇಂದು ಇಲ್ಲಿ ನಮ್ಮ ಮಹಿಳಾ ವಿಭಾಗದ ಶಾಂತಾ ನಾರಾಯಣ ಶೆಟ್ಟಿಯವರ ಆಯೋಜನೆಯಲ್ಲಿ ಹಳದಿ ಕುಂಕುಮ ಕಾರ್ಯಕ್ರಮವು ಬಹಳ ಸೊಗಸಾಗಿ ಪ್ರಸ್ತುತಗೊಂಡಿದೆ. ಬಂಟರ ಸಂಘ ಮುಂಬಯಿಯಿಂದ ಹೆಚ್ಚಿನ ಮಹಿಳೆಯರು ಇಂದು ಇಲ್ಲಿಗೆ ಬಂದಿದ್ದಾರೆ. ಇದಲ್ಲದೇ ನಮ್ಮ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಅರುಷಾ ಎನ್ ಶೆಟ್ಟಿಯವರಿಗೆ ನೀಡಿದ ಸನ್ಮಾನ ಅರ್ಥಪೂರ್ಣವಾಗಿದೆ. ಸಾಂಸ್ಕೃತಿಕ ವೈಭವದಂಗವಾಗಿ ನಡೆದ ‘ಮದ್ಮೆದ ಕಾಕಜಿ’ ತುಳು ನಾಟಕ, ಯಕ್ಷಗಾನ ತಾಳಮದ್ದಳೆ ಮತ್ತು ನೃತ್ಯ ವೈಭವ ಸೊಗಸಾಗಿತ್ತು. ಅಸೋಸಿಯೇಷನ್ ಗೆ ಎಲ್ಲರ ಸಹಕಾರ ನಿರಂತರವಾಗಿರಲಿ. ದೇವರು ಎಲ್ಲರನ್ನೂ ಒಳ್ಳೆಯದು ಮಾಡಲಿ ಎಂದು ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಅಭಿಪ್ರಾಯಪಟ್ಟರು. ಜನವರಿ 18 ರವಿವಾರದಂದು ನವಿ ಮುಂಬಯಿ ಜುಯಿ ನಗರ ಬಂಟ್ಸ್ ಸೆಂಟರ್ ನಲ್ಲಿ ನಡೆದ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಭಾಗದ ಆಯೋಜನೆಯಲ್ಲಿ ನಡೆದ ಹಳದಿ ಕುಂಕುಮ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದೇ ಸಂದರ್ಭ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಕಾರ್ಯಾಧ್ಯಕ್ಷೆ ಅರುಷಾ ಎನ್ ಶೆಟ್ಟಿಯವರನ್ನು ಗಣ್ಯರು ಸನ್ಮಾನಿಸಿದರು. ಸನ್ಮಾನಕ್ಕೆ ಉತ್ತರವಾಗಿ ಅರುಷಾ ಎನ್ ಶೆಟ್ಟಿ ಅವರು ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಛಲ, ಪ್ರಯತ್ನ, ಸಾಧನೆಯೊಂದಿಗೆ ಮುಂದೆ ಬರಬೇಕು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರಕಾರದ ಕಲೆ ಇರುತ್ತದೆ. ಯಾವುದೇ ಕಾರ್ಯಗಳನ್ನು ಮಾಡುವಾಗ ವಿಘ್ನ ಸಂತೋಷಿಗಳು ನಮ್ಮ ಕಾಲೆಳೆಯುತ್ತಾರೆ. ಅದನ್ನು ಲೆಕ್ಕಿಸದೆ ನಮ್ಮ ಪ್ರಯತ್ನವನ್ನು ನಾವು ಮುಂದುವರಿಸಬೇಕು. ಪ್ರಯತ್ನಿಸಿದರೆ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ. ಸಾಧ್ಯ ಎಂಬುದನ್ನು ನಾವು ಮಾಡಿ ತೋರಿಸಬೇಕು. ಆಗ ಜೀವನಕ್ಕೆ ಒಂದು ಸಾರ್ಥಕತೆ ಬರುತ್ತದೆ. ಇoದು ನಮ್ಮದೇ ಸಂಸ್ಥೆಯಿಂದ ನನಗೆ ನೀಡಿದ ಸನ್ಮಾನ ಬಹಳ ಖುಷಿ ನೀಡಿದೆ. ಸನ್ಮಾನಕ್ಕೆ ಕೃತಜ್ಞತೆಗಳು ಎಂದರು. ಮುಖ್ಯ ಅತಿಥಿ ಕ್ಲಾಸಿಕ್ ಮತ್ತು ತ್ರಿವೇಣಿ ಗ್ರೂಪ್ ನ ನಿರ್ದೇಶಕಿ ಮನೋರಮ ಎನ್ ಬಿ ಶೆಟ್ಟಿ ಅವರು ಮಾತನಾಡಿ, ಎಲ್ಲಿ ಮಹಿಳೆಯರಿಗೆ ಸ್ಥಾನಮಾನ ಸಿಗುವುದೋ ಅಲ್ಲಿ ಬೆಳವಣಿಗೆ ನಡೆಯುತ್ತಾ ಇರುವುದು. ಇದು ಆದಿ ಅನಾದಿಯಿಂದಲೂ ನಡೆದು ಬಂದಂತಹ ವಿಚಾರ. ಪಾಶ್ಚಾತ್ಯ ಸಂಸ್ಕೃತಿಯನ್ನು ನಾವು ಆದಷ್ಟು ಬದಿಗಿರಿಸಿ ನಮ್ಮ ಆಚಾರ ವಿಚಾರ ಸಂಸ್ಕೃತಿ ಸಂಸ್ಕಾರವನ್ನು ನಾವು ಬೆಳೆಸಬೇಕು. ನಮ್ಮ ಸಮಾಜದಲ್ಲಿ ಈಗ ಅಂತರ್ಜಾತಿಯ ವಿವಾಹಗಳು ಹೆಚ್ಚಾಗಿ ನಡೆಯುತ್ತಾ ಇದೆ. ಬಾಳು ಸುಂದರವಾಗಬೇಕಾದರೆ ಇದಕ್ಕಾಗಿ ನಮ್ಮವರು ಆದಷ್ಟು ನಮ್ಮ ಜಾತಿಯವರನ್ನೇ ಮದುವೆಯಾಗುವುದು ಅಗತ್ಯವಾಗಿದೆ. ನಾವು ನಮ್ಮ ಸಮಾಜವನ್ನು ಮೇಲೆ ತರಬೇಕು. ಮಹಿಳಾ ವಿಭಾಗದ ಶಾಂತಕ್ಕನ ಕಾರ್ಯಕ್ರಮಕ್ಕೆ ಬಂದು ಖುಷಿಯಾಗಿದೆ ಎಂದರು.
ವಿಶೇಷ ಅತಿಥಿ ಡಾ. ಸ್ವರೂಪ್ ಹೆಗ್ಡೆ ಅವರು ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯ ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ನಮ್ಮ ಹಿಂದಿನವರ ಆರೋಗ್ಯ ದಿನಚರಿ ಒಳ್ಳೆಯದಾಗಿತ್ತು. ಬೆಳಗ್ಗೆ ಬೇಗನೆ ಎದ್ದು ತಮ್ಮ ಕೆಲಸದೊಂದಿಗೆ ನಿಯಮಿತ ಆಹಾರಗಳೆಲ್ಲವನ್ನು ಸೇವಿಸಿ ಔಷಧಗಳಿಂದ ದೂರವಿದ್ದರು. ಈಗಿನವರ ಆಹಾರ ದಿನಚರಿ ಸರಿಯಾಗಿಲ್ಲದೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪ್ರತಿಯೊಬ್ಬರೂ ದೈಹಿಕವಾಗಿ ಆಧ್ಯಾತ್ಮಿಕವಾಗಿ ಮಾನಸಿಕವಾಗಿ ಸದೃಡಗೊಳ್ಳಬೇಕು ಎಂದರು. ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ ಶಶಿಕಲಾ ಶಂಕರ್ ಪೂಂಜ ಅವರು ಮಾತನಾಡಿ, ಇಲ್ಲಿ ಎಲ್ಲರೂ ನನ್ನ ಪರಿಚಯದವರೇ ಆಗಿದ್ದಾರೆ. ನಾವು ಎಲ್ಲಿದ್ದರೂ ಭೇದಭಾವವಿಲ್ಲದೆ ನಮ್ಮ ಸಮಾಜಕ್ಕಾಗಿ ಬದುಕಬೇಕು. ಶಿಸ್ತಿನ ಸಿಪಾಯಿಯಾದ ನಾನು ನಮ್ಮವರ ಒಳಿತಿಗಾಗಿ ಹೋರಾಡುವ ವ್ಯಕ್ತಿ. ಇಂದು ಇಲ್ಲಿ ಡಾ. ಸ್ವರೂಪ್ ಹೆಗ್ಡೆ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಇಲ್ಲಿನ ಅರಿಶಿನ ಕುಂಕುಮ ಕಾರ್ಯಕ್ರಮದಲ್ಲಿ ಅರ್ಹವಾಗಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಅರುಷಾ ಎನ್ ಶೆಟ್ಟಿ ಅವರನ್ನು ಅರ್ಥಪೂರ್ಣವಾಗಿ ಸನ್ಮಾನಿಸಲಾಗಿದೆ. ಅವರು ನಮಗೆ ಮೊದಲಿನಿಂದಲೂ ಪರಿಚಿತರು. ದೇವರು ಎಲ್ಲರನ್ನೂ ಒಳ್ಳೆಯದಾಗಿಸಲಿ ಎಂದರು. ಬಂಟರ ಸಂಘದ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಂಜುಳಾ ಶೇಖರ್ ಶೆಟ್ಟಿ ಅವರು ಮಾತನಾಡಿ, ಸ್ವಾತಂತ್ರ್ಯಪೂರ್ವ ಬಾಲಗಂಗಾಧರ ತಿಲಕ್ ಅವರು ಮಹಿಳೆಯರು ಒಗ್ಗಟ್ಟಾಗಿ ಇರಬೇಕೆಂದು ಹಳದಿ ಕುಂಕುಮ ಕಾರ್ಯಕ್ರಮವನ್ನು ಆರಂಭಿಸಿದ್ದರು. ನಾವು ಬಂಟರು ಎಂದು ಅಭಿಮಾನಪೂರ್ವಕವಾಗಿ ಹೇಳಲು ಖುಷಿಯಾಗುತ್ತದೆ. ಬಂಟರು ಸ್ವಾಭಿಮಾನಿಗಳು, ಯಾರಿಂದಲಾದರೂ ಸಹಾಯ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಸಮಾಜಸೇವೆ ಬಂಟರ ರಕ್ತದಲ್ಲಿ ಕರಗತವಾಗಿದೆ. ಮಹಿಳಾ ವಿಭಾಗದ ಶಾಂತಕ್ಕ ನನ್ನನ್ನು ಅಭಿಮಾನಪೂರ್ವಕವಾಗಿ ಆಹ್ವಾನಿಸಿರುವುದು ನನಗೆ ಖುಷಿ ನೀಡಿದೆ. ನಮ್ಮವರ ಕಾರ್ಯಕ್ರಮಗಳಲ್ಲಿ ನಾವು ಯುವ ಪೀಳಿಗೆಯನ್ನು ಶಾಮೀಲಾಗಿಸಬೇಕು. ಆಗ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಿದಂತಾಗುತ್ತದೆ ಎಂದರು.
ಆರಂಭದಲ್ಲಿ ದೀಪ ಪ್ರಜ್ವಲನೆಯೊಂದಿಗೆ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ ವೈಭವ, ಯಕ್ಷಗಾನ ತಾಳಮದ್ದಳೆ ಮತ್ತು ತುಳು ನಾಟಕ ಜರಗಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ ಅವರು ಎಲ್ಲರನ್ನೂ ಸ್ವಾಗತಿಸುತ್ತಾ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ವಿಭಾಗದ ಉಪಾಧ್ಯಕ್ಷೆ ಸಹಾನಿ ವಾಮನ ಶೆಟ್ಟಿ, ಕಾರ್ಯದರ್ಶಿ ಉಷಾ ಆರ್ ಶೆಟ್ಟಿ, ಕೋಶಾಧಿಕಾರಿ ನಾಗವೇಣಿ ಶ್ರೀಧರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಮಾಯಾ ಎಸ್ ಆಳ್ವ, ಜೊತೆ ಕೋಶಾಧಿಕಾರಿ ಉಮಾ ಕೆ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಂಬೆ ಅಸೋಸಿಯೇಷನ್ ಪದಾಧಿಕಾರಿಗಳು, ಮಾಜಿ ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮವನ್ನು ನಾಟಕಕಾರ, ಸಂಘಟಕ, ನಾರಾಯಣ ಶೆಟ್ಟಿ ನಂದಳಿಕೆ ಅವರು ನಿರೂಪಿಸಿದರು. ಕಾರ್ಯದರ್ಶಿ ಉಷಾ ಆರ್ ಶೆಟ್ಟಿ ವಂದಿಸಿದರು. ಕೊನೆಯಲ್ಲಿ ಪ್ರೀತಿ ಭೋಜನ ನಡೆಯಿತು.
ಚಿತ್ರ, ವರದಿ : ಗುರುದತ್ ಪೂಂಜಾ ಮುಂಡ್ಕೂರು


















































































































