
ವಿಶ್ವದ ವಿವಿಧ ರಾಷ್ಟ್ರಗಳಾದ ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ಬೆಲ್ಜಿಯಂ, ಕೆನಡಾ, ಡೆನ್ಮಾರ್ಕ್, ಜರ್ಮನಿ, ನೆದರ್ಲ್ಯಾಂಡ್ಸ್, ನಾರ್ವೇ, ಪೋಲ್ಯಾಂಡ್, ರೊಮೇನಿಯಾ ಹಾಗೂ ಸ್ವೀಡನ್ ದೇಶಗಳಿಂದ ಆಗಮಿಸಿದ ಸುಮಾರು 25 ಮಂದಿ ವಿದೇಶಿ ರೋಟರಿ ಸದಸ್ಯ ಪ್ರವಾಸಿಗರಿಗೆ ರೋಟರಿ ಕ್ಲಬ್ ಪುತ್ತೂರು ಯುವದ ವತಿಯಿಂದ ಭಾನುವಾರ ಅದ್ದೂರಿಯ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡದ ಶಾಲು ಹೊದಿಸಿ ವಿದೇಶಿ ಅತಿಥಿಗಳನ್ನು ಗೌರವಿಸಲಾಯಿತು. ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಕನ್ನಡ ಭಾಷೆ, ಅದರ ವೈಶಿಷ್ಟ್ಯತೆ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಅತಿಥಿಗಳಿಗೆ ಪರಿಚಯಿಸಿದರು. ಕನ್ನಡ ಭಾಷೆಗೆ ವಿದೇಶಿ ಅತಿಥಿಗಳು ತೋರಿದ ಆತ್ಮೀಯ ಸ್ಪಂದನೆ ವಿಶೇಷ ಗಮನ ಸೆಳೆಯಿತು. ಎಲ್ಲಾ ವಿದೇಶಿ ಸದಸ್ಯರು ಕನ್ನಡದಲ್ಲಿ “ಎಲ್ಲರಿಗೂ ನಮಸ್ಕಾರ” ಎಂದು ಹೇಳಿದ ಕ್ಷಣ ಸಭಿಕರಿಗೆ ಅಪಾರ ಸಂತಸ ತಂದಿತು. ನಂತರ ಪುತ್ತೂರು ಮುರದಲ್ಲಿರುವ ಮಹೇಶ್ ಪ್ರಸಾದ್ ಹೋಟೆಲ್ ನಲ್ಲಿ ಕರಾವಳಿಯ ಖ್ಯಾತ ರುಚಿಕರ ಖಾದ್ಯಗಳಾದ ಬನ್ಸ್, ನೀರುಳ್ಳಿ ಬಜೆ, ನೀರ್ದೋಸೆ, ಕೊಟ್ಟಿಗೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಹಾರಗಳನ್ನು ಸವಿದರು.

ರೋಟರಿ ಡಿಸ್ಟ್ರಿಕ್ಟ್ 3181 ರ ಆಶ್ರಯದಲ್ಲಿ ನಡೆಯುತ್ತಿರುವ “ರೈಡ್ ಫಾರ್ ರೋಟರಿ” ಎಂಬ ಘೋಷ ವಾಕ್ಯದಡಿ ನಡೆಯುವ ಹತ್ತನೇ ವರ್ಷದ ಅಂತರರಾಷ್ಟ್ರೀಯ ಮೋಟಾರ್ ರೈಡ್ ಕಾರ್ಯಕ್ರಮ ಜಾಗತಿಕ ಸ್ನೇಹ, ಸಮಾಜಸೇವೆ ಹಾಗೂ ಸಂಸ್ಕೃತಿ ವಿನಿಮಯದ ಉದ್ದೇಶ ಹೊಂದಿದೆ. ಈ ಮಹಾಯಾತ್ರೆ ಜನವರಿ 5 ರಂದು ವಿಶಾಖಪಟ್ಟಣಂನಿಂದ ಪ್ರಾರಂಭಗೊಂಡು, ಜನವರಿ 26ರಂದು ಮೈಸೂರುನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟು 2200 ಕಿಲೋಮೀಟರ್ ದೂರವನ್ನು ಸಂಚರಿಸುವ ಈ ತಂಡವು ಭಾರತದ ವಿವಿಧ ರಾಜ್ಯಗಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳನ್ನು ವೀಕ್ಷಿಸುತ್ತಿದೆ. ಈ ಯೋಜನೆಯ ಚೇರ್ಮನ್ ಆಗಿ ಮಂಗಳೂರಿನ ರೋ. ವಿನಾಯಕ್ ಪ್ರಭು, ಕಾರ್ಯದರ್ಶಿಗಳಾಗಿ ರೋ. ಸೂರಜ್ ಹೆಬ್ಬಾರ್ ಹಾಗೂ ರೋ. ಕಾಂತ್ ರಾಜ್ (ಮೈಸೂರು), ಕನ್ವೀನರ್ ಆಗಿ ರೋ. ಮುರಳಿ ಶಾಮ್ ಸೇವೆ ಸಲ್ಲಿಸುತ್ತಿದ್ದು, ಕಾರ್ಯಕ್ರಮದ ಎಲ್ಲಾ ವ್ಯವಸ್ಥೆಗಳ ಉಸ್ತುವಾರಿಯನ್ನು ಅನಿಲ್ ಮುಂಡೋಡಿ ಅವರು ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರೋ. ವಿಶ್ವಾಸ್ ಶೆಣೈ ಅವರು ಎಲ್ಲರನ್ನೂ ಸ್ವಾಗತಿಸಿದರು. ಅಮೇರಿಕದ ರೋಟರಿ ಸದಸ್ಯರಾದ ವಿನಾಯಕ ಕುಡ್ವ, ರೋ. ಕೃಷ್ಣನಾರಾಯಣ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಡಾ| ಹರ್ಷಕುಮಾರ್ ರೈ, ರತ್ನಾಕರ ರೈ, ಅಭಿಷ್ ಕೆ., ಪಶುಪತಿ ಶರ್ಮ, ಗೌರವ್ ಮುಂತಾದವರು ಉಪಸ್ಥಿತರಿದ್ದರು.


















































































































