ತುಳುನಾಡಿನ ಸಮೃದ್ಧ ಸಂಸ್ಕೃತಿ, ಆರಾಧನಾ ಪರಂಪರೆ ಮತ್ತು ಭಾಷಾ ವೈಭವವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯೊಂದಿಗೆ, ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ‘ರಾಷ್ಟ್ರೀಯ ತುಳು ವಿಚಾರ ಸಂಕಿರಣ’ಕ್ಕೆ ಶುಕ್ರವಾರದಂದು ಪ್ರಮೋದ್ ಸಪ್ರೇ ಇವರ ನಾಡಗೀತೆ ಹಾಡಿನೊಂದಿಗೆ ಅದ್ಧೂರಿ ಚಾಲನೆ ದೊರೆಯಿತು. ತುಳುವರ್ಲ್ಡ್ ಫೌಂಡೇಶನ್ (ಕಟೀಲು- ಮಂಗಳೂರು) ಮತ್ತು ತುಳುವ ಮಹಾಸಭೆ (ಬೆಂಗಳೂರು), ಅಲಯನ್ಸ್ ಯೂನಿವರ್ಸಿಟಿಯ ‘ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್’ ಹಾಗೂ ‘ಸ್ಕೂಲ್ ಆಫ್ ಪರ್ಫಾರ್ಮಿಂಗ್ ವಿಶುವಲ್ ಅಂಡ್ ಕ್ರಿಯೇಟಿವ್ ಆರ್ಟ್ಸ್’ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿವೆ. ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದ ಸಿ.ಒ.ಇ.ಐ.ಕೆ.ಎಸ್ ಡೈರೆಕ್ಟರ್ ಡಾ. ಎ.ಎಂ. ಶ್ರೀಧರನ್, “ನಮ್ಮ ಭಾಷೆಯನ್ನು ನಾವು ಪ್ರೀತಿಸಿದಾಗ ಮಾತ್ರ ದೇಶ ಸಮೃದ್ಧವಾಗಿ ಬೆಳೆಯಲು ಸಾಧ್ಯ. ತುಳು ಭಾಷೆಯು ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತವಾದುದು. ತುಳುವ ಸಮಾಜದ ಆರಾಧನಾ ಪದ್ಧತಿ ಮತ್ತು ಜನಪದ ಪರಂಪರೆಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ಅವಶ್ಯಕತೆ ಇದೆ,” ಎಂದು ಆಶಯ ವ್ಯಕ್ತಪಡಿಸಿದರು. ಅಲಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜನರಲ್ ಶ್ರೀಮತಿ ಸುರೇಖಾ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ನಮ್ಮ ವಿಶ್ವವಿದ್ಯಾಲಯವು ಸದಾ ಬೆಂಬಲ ನೀಡಲಿದೆ. ಈ ವಿಚಾರ ಸಂಕಿರಣವು ತುಳು ಭಾಷೆಯ ಬೆಳವಣಿಗೆಗೆ ಮೈಲಿಗಲ್ಲಾಗಲಿ,” ಎಂದು ಶುಭ ಹಾರೈಸಿದರು.

ಬೆಮ್ಮರ್ ಬೊಕ್ಕ ಲೆಕ್ಕೆಸಿರಿ ಕುರಿತು ದಿಕ್ಸೂಚಿ ಭಾಷಣ ಮಾಡಿದ ಪ್ರಖ್ಯಾತ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು ತುಳು ಸಂಸ್ಕೃತಿಯ ಆಳ-ಅಗಲಗಳನ್ನು ತೆರೆದಿಟ್ಟರು. ತುಳುವರ ಪಾಲಿಗೆ ಬೆಮ್ಮರ್ ಎಂಬುದು ಕೇವಲ ದೈವವಲ್ಲ, ಅದೊಂದು ಅದಮ್ಯ ಶಕ್ತಿ. ಬಾಸೆಲ್ ಮಿಷನ್ ಕಾಲದಿಂದಲೂ ಇದರ ಸಂಶೋಧನೆ ನಡೆಯುತ್ತಾ ಬಂದಿದೆ. ಇದು ತುಳುವರ ಜನಪದ ಕಲ್ಪನೆಯ ಅವಿಭಾಜ್ಯ ಅಂಗ.
ಲೆಕ್ಕೆಸಿರಿ: ಕೃಷಿ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿರುವ ಮೂಲನಿವಾಸಿಗಳ ಶಕ್ತಿ ಲೆಕ್ಕೆಸಿರಿ. ನೀರಿಗೂ ತುಳುನಾಡಿಗೂ ಇರುವ ಅವಿನಾಭಾವ ಸಂಬಂಧವನ್ನೇ ‘ಸಿರಿ’ ಅಥವಾ ‘ಲೆಕ್ಕೆಸಿರಿ’ ಸಂಕೇತಿಸುತ್ತದೆ ಎಂದರು.
ಡಾ. ಬಿ. ಎಸ್. ಶಿವಕುಮಾರ್ (ದ್ರಾವಿಡ ವಿ.ವಿ) ಮಾತನಾಡಿ, “ನಮ್ಮ ಭವಿಷ್ಯದ ದಾರಿಯನ್ನು ಕಂಡುಕೊಳ್ಳಲು ಇತಿಹಾಸದ ಅರಿವು ಮುಖ್ಯ. ತುಳು ಭಾಷೆಯು ಒಂದು ಪ್ರದೇಶಕ್ಕೆ ಸೀಮಿತವಾಗದೆ ಜಗತ್ತಿನಾದ್ಯಂತ ಪಸರಿಸಬೇಕು” ಎಂದರು. ಧರ್ಮಪಾಲ್ ಯು. ದೇವಾಡಿಗ ಮಾತನಾಡಿ, ಮುಂಬೈನಲ್ಲಿ ಕಳೆದ 9 ವರ್ಷಗಳಿಂದ ತುಳು ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ಕೆಲಸ ನಡೆದಿದೆ. ಈ ಕಾರ್ಯ ರಾಜ್ಯವ್ಯಾಪಿ ವಿಸ್ತರಣೆಯಾಗಬೇಕು ಎಂದರು. ರಾಜೇಶ ಆಳ್ವ (ತುಳು ವರ್ಲ್ಡ್ ಮುಖ್ಯಸ್ಥರು) ಮಾತನಾಡಿ, ತುಳು ಭಾಷಾ ಕಲಿಕೆಯನ್ನು ಉತ್ತೇಜಿಸಲು ಅಲಯನ್ಸ್ ಯುನಿವರ್ಸಿಟಿ ಸಹಯೋಗದೊಂದಿಗೆ ಡಿಪ್ಲೋಮೋ ಕೋರ್ಸ್ ಗಳನ್ನು ಆರಂಭಿಸುವ ಮಹತ್ವದ ಯೋಜನೆಯನ್ನು ಪ್ರಕಟಿಸಿದರು.
ಅಬುಧಾಬಿ ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ತುಳುವನ್ನು ಕಟ್ಟಿ ಬೆಳೆಸುವಲ್ಲಿ ನಾವೆಲ್ಲರೂ ಮಾಡಬೇಕಾದ ಕಾರ್ಯ ಯೋಜನೆಗಳ ಬಗ್ಗೆ ಸ್ಪಷ್ಟ ನೀಲ ನಕ್ಷೆಯನ್ನು ನೀಡಿದರು. ತುಳು ಸಂಸ್ಕೃತಿಗಾಗಿ ದುಡಿಯುತ್ತಿರುವ ಸಂಸ್ಥೆಗಳ ಶ್ರಮವನ್ನು ಶ್ಲಾಘಿಸಿದರು. ತುಳು ವಿದ್ವಾಂಸ ಡಾ. ವೈ ಎನ್ ಶೆಟ್ಟಿ, ಬೆಂಗಳೂರು ತುಳುಕೂಟದ ಅಧ್ಯಕ್ಷ ದಿನೇಶ್ ಹೆಗ್ಡೆ, ಕಕ್ವ ಗುತ್ತು ಭಾನುಮತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಅಭಿರಾಮಿ ಆರ್ ಮತ್ತು ನವೀನ್ ಎಡ್ಮೆಮಾರು ನೇರವೇರಿಸಿದರು.

















































































































