ಸೂರಿಂಜೆ ಮೂಲದ ಉದ್ಯಮಿ ಡಿ.ಕೆ ಶೆಟ್ಟಿ ಮಾಲಕತ್ವದ ಇನ್ನಾ ಹಾಸ್ಪಿಟಾಲಿಟಿ ಸಂಸ್ಥೆ ಮುಂಬೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದ್ದು, ದೇಶದ ವಿವಿಧ ಭಾಗಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸುತ್ತಿರುವ ಪ್ರಮುಖ ಹಾಸ್ಪಿಟಾಲಿಟಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ಸಂಸ್ಥೆಯಲ್ಲಿ 500ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಗುಣಮಟ್ಟದ ಸೇವೆ ಮತ್ತು ವೃತ್ತಿಪರ ನಿರ್ವಹಣೆಯ ಮೂಲಕ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ವ್ಯವಹಾರ ವಿಸ್ತರಣೆಯ ಉದ್ದೇಶದಿಂದ ಹಾಗೂ ವೇಗವಾಗಿ ಬೆಳೆಯುತ್ತಿರುವ ವ್ಯಾಪಾರ ಕೇಂದ್ರವಾಗಿರುವ ಸುರತ್ಕಲ್ ನಗರದಲ್ಲಿ ಇನ್ನಾ ಹಾಸ್ಪಿಟಾಲಿಟಿ ಸಂಸ್ಥೆಯ ನೂತನ ಶಾಖೆಯನ್ನು ಆರಂಭಿಸಲಾಗಿದೆ. ಇದರ ಅಂಗವಾಗಿ ಜನವರಿ 1, 2026 ಗುರುವಾರ ಸಂಜೆ 4 ಗಂಟೆಗೆ ಸುರತ್ಕಲ್ನ ಅಭಿಷ್ ಬ್ಯುಸಿನೆಸ್ ಸೆಂಟರ್ ಕಟ್ಟಡದಲ್ಲಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ನೂತನ ಶಾಖೆಯನ್ನು ವಿಶ್ವಕಪ್ ಮಹಿಳಾ ಕಬಡ್ಡಿ ವಿಜೇತ ತಂಡದ ಸದಸ್ಯೆ ಕುಮಾರಿ ಧನಲಕ್ಷ್ಮಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಯುವ ಪ್ರತಿಭೆಯ ಕೈಯಿಂದ ಶಾಖೆ ಉದ್ಘಾಟನೆಯಾಗಿದ್ದು, ಸಮಾರಂಭಕ್ಕೆ ವಿಶೇಷ ಘನತೆ ನೀಡಿತು.

ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರಿಯ ಮಂಡಳಿ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ಅಭಿಷ್ ಬಿಲ್ಡರ್ಸ್ ಅಧ್ಯಕ್ಷ ಪುಷ್ಪರಾಜ್ ಜೈನ್, ಮಹಾಬಲ ಪೂಜಾರಿ ಕಡಂಬೋಡಿ, ಕೇಸರಿ ಸುಧಾಕರ್ ಪೂಂಜಾ, ಮಹಾನಗರ ಪಾಲಿಕೆ ಸದಸ್ಯೆ ನಯನ, ರೋಹಿತ್ ಶೆಟ್ಟಿ, ಎಸ್ ಜಿ ಸೂರಿಂಜೆ, ನಾರಾಯಣ ಪೂಜಾರಿ, ಮನೋಹರ್ ಶೆಟ್ಟಿ ಸೂರಿಂಜೆ, ಸೇನಾನಿ ಶಶಿಧರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಸಂಸ್ಥೆಯ ಬೆಳವಣಿಗೆಗೆ ಶುಭ ಹಾರೈಸಿದರು. ಸಭೆಯ ಸಂದರ್ಭದಲ್ಲಿ ಕೃಷ್ಣಾಪುರದ ನಾರಾಯಣ ಗುರು ಶಾಲೆಯ ಮಕ್ಕಳ ಸಮ್ಮುಖದಲ್ಲಿ, ಮಹಿಳಾ ವಿಶ್ವಕಪ್ ವಿಜೇತ ತಂಡದ ಸದಸ್ಯೆಯಾಗಿರುವ ಕುಮಾರಿ ಧನಲಕ್ಷ್ಮಿ ಅವರನ್ನು ಅವರ ಅಪ್ರತಿಮ ಕ್ರೀಡಾ ಸಾಧನೆಗಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು ಹಾಗೂ ಶಾಲಾ ಮಕ್ಕಳಿಗೆ ಭಾರತ ದೇಶದ ವಿವಿಧ ರಾಜ್ಯಗಳನ್ನು ಜೋಡಿಸುವ ಚಿತ್ರದ ಸೀಟುಗಳನ್ನು ನೀಡಿ ಮಕ್ಕಳಲ್ಲಿ ರಾಷ್ಟ್ರ ಪ್ರೇಮದ ಜಾಗೃತಿ ಹುಟ್ಟಿಸಲಾಯಿತು. ಈ ವೇಳೆ ಇನ್ನಾ ಹಾಸ್ಪಿಟಾಲಿಟಿ ಸಂಸ್ಥೆಯ ಮಾಲೀಕರಾದ ಡಿ. ಕೆ ಶೆಟ್ಟಿ ಅವರು, ಅಭಿಷ್ ಬ್ಯುಸಿನೆಸ್ ಸೆಂಟರ್ ಮಾಲಕರ ಸಂಘದ ಸಹಕಾರದೊಂದಿಗೆ, ಧನಲಕ್ಷ್ಮಿ ಅವರಿಗೆ ರೂ. 50,000 ಗೌರವ ಧನವನ್ನು ನೀಡಿ ಪ್ರೋತ್ಸಾಹಿಸಿದರು. ಈ ಸಂದರ್ಭ ಧನಲಕ್ಷ್ಮಿ ಅವರ ಪೋಷಕರಾದ ನಾರಾಯಣ ಪೂಜಾರಿ ಮತ್ತು ಶಶಿಕಲಾ ಸಹ ಉಪಸ್ಥಿತರಿದ್ದರು.

















































































































