ಹೊಸ ಬಾಟಲಿಯಲ್ಲಿ ಹಳೆಯ ಮದಿರೆ (Old wine in a new bottle) ಅಂದರೆ ಹಳೆಯ, ಸಾಂಪ್ರದಾಯಿಕ ಅಥವಾ ಬದಲಾಗದ ಏನನ್ನಾದರೂ ತಾಜ, ಹೊಸ ರೀತಿಯಲ್ಲಿ ಪ್ರಸ್ತುತಪಡಿಸುವುದು. ಉದಾಹರಣೆಗೆ, ಪ್ರಸಿದ್ಧ ಐವತ್ತು ವರ್ಷಕ್ಕೂ ಮಿಕ್ಕಿದ ಸ್ನಾನದ ಸಾಬೂನಿನ ಹೊದಿಕೆ (wrapper) ಆಗಾಗ್ಗೆ ಮಾರ್ಕೆಟಿಂಗ್ ಅಥವಾ ಆಕರ್ಷಣೆಗಾಗಿ ಬದಲಿಸುತ್ತಾ ಬಂದಿದ್ದಾರೆ. ಆದರೆ ಮೂಲ ವಸ್ತು ಸಾಬೂನು ಮೊದಲಿನದ್ದೇ ಆಗಿರುತ್ತದೆ. ಈ ಮಾತಿಗೆ ವ್ಯತಿರಿಕ್ತವಾಗಿ, ಚಿತ್ರದಲ್ಲಿ ತೋರಿಸಿರುವುದು, ಹೊಸ ಮದಿರೆ, ಹೊಸ ಬಾಟಲಿಯಲ್ಲಿ. ಅದರೊಂದಿಗೆ ಕಸ್ತಾನ್ಯೆ (Castagne ಅಂದರೆ chestnut). ಹೊಸ ಮದಿರೆಯನ್ನು ನೋವೆಲ್ಲೋ (Novello, New) ಅನ್ನುತ್ತಾರೆ ಇಟಾಲಿಯನ್ ನಲ್ಲಿ. ಶರದ್ ಋತುವಿನ (autumn) ಮಧ್ಯಭಾಗದಲ್ಲಿ ಹೊಸ ಮದಿರೆಗಳು ಮಾರುಕಟ್ಟೆಗೆ ಬರುತ್ತವೆ. ಕೆಲವೇ ಕೆಲವು ಬಾಟಲಿಗಳಷ್ಟೇ, ಯಾಕೆಂದರೆ ಮದಿರೆ ವಿಶೇಷವಾಗಿ ಕೆಂಪು ಮದಿರೆ ಹಳೆಯದಾದಂತೆ ಅದರ ರುಚಿ ಚೆನ್ನಾಗಿರುತ್ತದೆ, ಬೆಲೆಯೂ ಏರುತ್ತದೆ. ಇದೇ ಕಾಲಕ್ಕೆ ಅಂದರೆ ಚಳಿಗಾಲಕ್ಕೆ ಮುನ್ನ ಈ ಕಸ್ತಾನ್ಯೆ ಇಲ್ಲಿನ ಹಾಡಿಗಳಲ್ಲಿ ಹೇರಳವಾಗಿ ಸಿಗುತ್ತವೆ. ಇದನ್ನು ನಾವು ಗೆಣಸು ಯಾ ಹಲಸಿನ ಬೀಜ (ಬೋಲೆ) ಕೆಂಡದಲ್ಲಿ ಸುಟ್ಟು ತಿನ್ನುವಂತೆ ತಿಂದರೆ ತುಂಬಾ ರುಚಿ, ದುಬಾರಿ ಸಹಾ. ಈ ಸುಟ್ಟ ಕಸ್ತಾನ್ಯೆ ಹಾಗೂ ಹೊಸ ಮದಿರೆಯ ಸಂಯೋಗ (combination) ರುಚಿಗೆ ಹೇಳಿ ಮಾಡಿಸಿದ್ದು. ಹೆಣ್ಣು, ಹೊನ್ನು, ಮಣ್ಣು ಇವುಗಳನ್ನು ಪಡೆಯಲು ರಾಮಾಯಣ, ಮಹಾಭಾರತದಲ್ಲಿ ಮಹಾ ಯುದ್ಧಗಳೇ ನಡೆದಿವೆ. ಐರೋಪ್ಯರ ಆಡುನುಡಿಯಲ್ಲಿ ಮಣ್ಣಿನ ಜಾಗ ಮದಿರೆ ಪಡಕೊಂಡಿದೆ. ಭಾರತೀಯ ಲೇಖಕ ಓರ್ವರ ಪ್ರಕಾರ Wealth, women and wine can make anything happen in this world! ಅಂದರೆ ಸಂಪತ್ತು, ಮಹಿಳೆಯರು ಮತ್ತು ವೈನ್ ಈ ಜಗತ್ತಿನಲ್ಲಿ ಏನು ಬೇಕಾದರೂ ಮಾಡಬಹುದು!.

ಮದಿರೆ ಅಂದರೆ ಯಾವುದೇ ಮದ್ಯ ಯಾ ಮದ್ಯಯುಕ್ತ ಪೇಯ ಆದರೂ ಮದಿರೆ ಅಂದರೆ ದ್ರಾಕ್ಷಾರಸ, ವೈನ್ ಅಂತಲೇ ನಾವು ಅರ್ಥೈಸಿಕೊಳ್ಳುವುದು ಹೆಚ್ಚು. ಮದಿರೆ, ಮಾನಿನಿ ಹಾಗೂ ಸಂಪತ್ತು ಮಾನವನಿಗೆ ಅಮಲು ಏರಿಸುತ್ತವೆ. ಕನ್ನಡದ ಕವಿಯೊಬ್ಬರು ಹೇಳಿದಂತೆ, ಹೆಂಡತಿಯೂ ಅಮಲೇರಿಸುತ್ತಾಳೆ, ಯಾಕೆಂದರೆ ಹೆಂಡತಿಯಲ್ಲಿಯೂ “ಹೆಂಡ” ಇದೆ. ಬಾಟಲಿ (750 ml) ಒಂದಕ್ಕೆ ಇನ್ನೂರರಿಂದ ಆರಂಭಗೊಂಡು ಲಕ್ಷ ರೂಪಾಯಿಗೂ ಮೀರಿದ ಬೆಲೆಯ ಮದಿರೆ ಇಟಲಿಯಲ್ಲಿ ಲಭ್ಯವಿದೆ. ಅಮರೋನೆ, ರಿಚೊತ್ತೊ ಮದಿರೆಗಳು, ನಾವಿರುವ ವೆರೊನ ಸರಹದ್ದಿನ ಪ್ರಸಿದ್ಧ ಮದಿರೆ. ಬಲೇ, ಒಂಜಿ ಬೊಟ್ಟ ಪಾಡ್ ಗ.
ಬರಹ : ಕೌಡೂರು ನಾರಾಯಣ ಶೆಟ್ಟಿ ಇಟೆಲಿ.











































































































