ಮುಂಬಯಿ: ನಮ್ಮ ಕನ್ನಡ ಸಾಹಿತ್ಯಕ್ಕೆ ಪ್ರಭುದ್ಧವಾದ ಹಿನ್ನೆಲೆಯಿದೆ. ನಮಗೆ ಕಲಿಯುವ ಹುಮ್ಮಸ್ಸು ಇರಬೇಕು. ಜ್ಞಾನಕಾಂಕ್ಷೆ ಬಹಳ ಮುಖ್ಯವಾದುದು.ಮುಂಬಯಿಯಲ್ಲಿ ಸೃಜನಶೀಲತೆಗೆ ಸಾವಿರ ದಾರಿಗಳಿವೆ. ಇಲ್ಲಿ ಪ್ರೋತ್ಸಾಹ ಸಿಗುವಷ್ಟು ಬೇರೆಲ್ಲೂ ಸಿಗುವುದಿಲ್ಲ. ಇಂತಹ ಮುಂಬಯಿ ಕೇಂದ್ರಿತ ಕಾರ್ನಾಡ್ ಅವರ ಕತೆಗಳಲ್ಲಿ ಧನಾತ್ಮಕ ಚಿಂತನೆಗಳಿವೆ ಎಂದು ಜಾನಪದ ವಿದ್ವಾಂಸರಾದ ಡಾ.ಕಾಳೇಗೌಡ ನಾಗವಾರ ಅವರು ನುಡಿದರು. ಅವರು ಸೆಪ್ಟೆಂಬರ್ 26ರ ಶುಕ್ರವಾರದಂದು ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ.ನಾಯಕ್ ಭವನದಲ್ಲಿ ನಡೆದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಅಂದು ಡಾ.ವಿಶ್ವನಾಥ ಕಾರ್ನಾಡರ ‘ಲಿಲ್ಲಿ ಬಂದು ಹೋದಳು’ ಕತಾ ಸಂಕಲನ, ಅಪರಾಧಿ(ಕನ್ನಡದಿಂದ ಮರಾಠಿಗೆ) ಹಾಗೂ ಇಂತಹ ‘ಮಂಗಳಮೂರ್ತಿ ಗಣೇಶ’ (ಮರಾಠಿಯಿಂದ ಕನ್ನಡಕ್ಕೆ) ಸರೋಜಿನಿ ತರೆ ಅವರ ಅನುವಾದಿತ ಕೃತಿಗಳನ್ನು ವೇದಿಕೆಯ ಗಣ್ಯರು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ನಾಡ್ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ.ಜಿ.ಎನ್.ಉಪಾಧ್ಯ ಅವರು ಮಾತನಾಡುತ್ತಾ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯ ಬಲವರ್ಧನೆಗೆ ಡಾ.ವಿಶ್ವನಾಥರ ಕೊಡುಗೆ ದೊಡ್ಡದು. ಕಳೆದ ಅನೇಕ ವರ್ಷಗಳಿಂದ ಕಾರ್ನಾಡ್ ಪ್ರತಿಷ್ಠಾನದ ಮೂಲಕ ಭಿನ್ನ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇಂದು ಅವರ ಎರಡು ಕೃತಿಗಳು ಲೋಕಾರ್ಪಣೆಗೊಳುತ್ತಿದೆ. ಕತೆ ಅವರ ಮುಖ್ಯ ಅಭಿವ್ಯಕ್ತಿ ಮಾಧ್ಯಮ. ನೂರಾರು ಕತೆಗಳನ್ನು ಅವರು ಬರೆದಿದ್ದಾರೆ.

ನಿವೃತ್ತಿಯಾದ ಮೇಲೂ ಸಾಹಿತ್ಯ ಕೈಂಕರ್ಯದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಐವತ್ತು ವರ್ಷಗಳ ಕಾಲ ಪಾಠ ಪ್ರವಚನ ಮಾಡಿದ ಅಪರೂಪದ ಪ್ರಾಧ್ಯಾಪಕರು. ಅವರ ಜೀವನಪ್ರೀತಿ ಎಲ್ಲರಿಗೂ ಮಾದರಿಯಾಗಿದೆ ಮೈಸೂರಿನಿಂದ ಈ ಕಾರ್ಯಕ್ರಮಕ್ಕಾಗಿ ಆಗಮಿಸಿರುವ ನಾಡಿನ ನಾಮಾಂಕಿತ ಸಾಂಸ್ಕೃತಿಕ ನೇತಾರ, ಪ್ರಾಧ್ಯಾಪಕ, ಸಂಘಟಕ ಡಾ.ಕಾಳೇಗೌಡ ನಾಗವಾರ ಅವರು ಆಗಮಿಸಿರುವುದು ಸಂತೋಷವನ್ನು ನೀಡಿದೆ. ಜಾನಪದ ಬಂಟ್ಸ್ ಅಸೋಸಿಯೇಷನ್ನಿನ ಅಧ್ಯಕ್ಷರಾದ ಡಿ.ಕೆ ಶೆಟ್ಟಿ ಅವರು ಮೊದಲ ಬಾರಿಗೆ ನಮ್ಮ ವಿಭಾಗಕ್ಕೆ ಅತಿಥಿಗಳಾಗಿ ಆಗಮಿಸಿದ್ದಾರೆ. ನಮ್ಮ ವಿಭಾಗದ ವಿದ್ಯಾರ್ಥಿಗಳ ಪ್ರತಿಭೆ ಭಿನ್ನ ಕ್ಷೇತ್ರಗಳಲ್ಲಿ ಹಬ್ಬಿದೆ. ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾದ ಸೂರಪ್ಪ ಕುಂದರ್ ಅವರು ನಮ್ಮ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಿದವರು. ಇಂದು ಅವರು ಜಾದೂ ಕಲೆಯಲ್ಲಿ ಪಳಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಳಗಿದ್ದಾರೆ. ಹತ್ತು ವರ್ಷಗಳ ಕೆಳಗೆ ಒಂದು ಅಕ್ಷರವೂ ಕನ್ನಡ ಬಾರದ ಸರೋಜಿನಿ ತರೆ ಅವರು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದಲ್ಲಿ ಕನ್ನಡ ಕಲಿತು ಇಂದು ಕನ್ನಡ- ಮರಾಠಿ ಅನುವಾದಕರಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿಮಾನದ ಸಂಗತಿ. ಕನ್ನಡವನ್ನು ಕಟ್ಟುವ ಕೆಲಸವನ್ನು ಪ್ರತಿಷ್ಠಾನದ ಮೂಲಕ ಮಾಡುವ ಪ್ರಯತ್ನ ನಮ್ಮದಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ನುಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬಾಂಬೆ ಬಂಟ್ಸ್ ಅಸೋಸಿಯೇಷನ್ನಿನ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿ ಅವರು ಮಾತನಾಡುತ್ತಾ ಸುಮಾರು ಆರು ದಶಕಗಳ ಹಿಂದೆ ಕಾರ್ನಾಡರು ನನ್ನ ಗುರುಗಳಾಗಿದ್ದರು. ಐದು ದಶಕಗಳ ನಂತರ ಇಂದು ಅವರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ತುಂಬಾ ಖುಷಿಯನ್ನು ನೀಡಿದೆ. ನನ್ನ ಬದುಕಿನ ಅವಿಸ್ಮರಣೀಯ ಕ್ಷಣ. ಡಾ.ಕಾರ್ನಾಡರು ಮತ್ತಷ್ಟು ಕೃತಿಗಳನ್ನು ರಚಿಸುವಂತಾಗಲಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮೂಲಕ ಉತ್ತಮ ಕೆಲಸಗಳು ನಡೆಯಲಿ.ಬಹಳ ವರ್ಷಗಳ ನಂತರ ಕನ್ನಡದ ವಾತಾವರಣದಲ್ಲಿ ಇರುವುದು ಧನ್ಯತಾ ಭಾವವನ್ನು ಮೂಡಿಸಿದೆ ಎಂದು ನುಡಿದರು ಕೃತಿಕಾರರಾದ ಸರೋಜಿನಿ ತರೆ ಅವರು ಮಾತನಾಡುತ್ತಾ ಮುಂಬಯಿ ವಿಶ್ವವಿದ್ಯಾಲಯ,ಕನ್ನಡ ವಿಭಾಗದಲ್ಲಿ ನಾನು ಕನ್ನಡ ಕಲಿತು ಇಂದು ಮರಾಠಿಯಿಂದ ಕನ್ನಡಕ್ಕೆ, ಕನ್ನಡದಿಂದ ಮರಾಠಿಗೆ ಅನುವಾದಿಸುವ ಮಟ್ಟಕ್ಕೆ ಬೆಳೆದಿದ್ದೇನೆ ಎಂದರೆ ಅದರ ಶ್ರೇಯ ಕನ್ನಡ ವಿಭಾಗ ಹಾಗೂ ಇಲ್ಲಿನ ನನ್ನ ಗುರುಗಳಿಗೆ ಸಲ್ಲಬೇಕು. ಇಂದು ಎರಡು ಕೃತಿಗಳನ್ನು ಬಿಡುಗಡೆಗೊಳಿಸಲು ಸಂಪೂರ್ಣ ಸಹಕಾರ ನೀಡಿದ ಡಾ.ವಿಶ್ವನಾಥ ಕಾರ್ನಾಡ್ ಹಾಗೂ ಕಾರ್ನಾಡ ಪ್ರತಿಷ್ಠಾನಕ್ಕೆ ಕೃತಜ್ಞತೆಗಳು ಎಂದರು. ಕೃತಿಯ ಕುರಿತು ಮಾತನಾಡಿದ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಉಮಾ ರಾಮರಾವ್ ಅವರು ಕಾರ್ನಾಡ್ ಅವರು ಮುಂಬಯಿಗೆ ಜೀವನವನ್ನು ಅರಸಿಕೊಂಡು ಬಂದು ಬಹುಕಾಲ ಈ ನೆಲದಲ್ಲಿ ನೆಲೆನಿಂತವರು. ಅವರ ಕತೆಗಳು ಮುಂಬಯಿಯ ಸುತ್ತು ತಿರುಗುತ್ತವೆ. ಇಲ್ಲಿನ ಕತೆಗಳು ನಮ್ಮ ಬದುಕಿನ ಕತೆಗಳೇ ಆಗಿವೆ ಎಂದು ನುಡಿದರು. ನಂತರ ಸೂರಪ್ಪ ಕುಂದರ್ ಅವರು ಜಾದೂ ಪ್ರದರ್ಶನದಿಂದ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಸಂಘಟಕರಾದ ಎಲ್.ವಿ ಅಮೀನ್, ಎಸ್.ಕೆ ಸುಂದರ್, ಕಲಾವಿದರಾದ ಮೋಹನ ಮಾರ್ನಾಡ್, ಅಕ್ಷಯ ಮಾಸಿಕದ ಸಂಪಾದಕರಾದ ಡಾ.ಈಶ್ವರ ಅಲೆವೂರು, ನ್ಯಾಯವಾದಿ ಶೇಖರ್ ಶೆಟ್ಟಿ, ನ್ಯಾಯವಾದಿ ಸಂತೋಷ್ ಕುಮಾರ್ ಹೆಗ್ಡೆ, ಯಕ್ಷಗಾನ ಕಲಾವಿದರಾದ ಎಂ.ಟಿ ಪೂಜಾರಿ, ರಾಜು ಶೆಟ್ಟಿ, ಕೊಲ್ಯಾರು, ಡಾ.ಪಲ್ಲವಿ, ಸುಚಿತ್ರಾ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಶರತ್ ಕಾರ್ನಾಡ್ ಧನ್ಯವಾದ ಸಮರ್ಪಿಸಿದರು. ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.