ತುಳುಕೂಟ ಪುಣೆ ಇದರ ವತಿಯಿಂದ ಪ್ರಯಾಗ್ ರಾಜ್, ತ್ರಿವೇಣಿ ಸಂಗಮ, ಕಾಶಿ ಪುಣ್ಯ ಕ್ಷೇತ್ರಗಳ ದರ್ಶನದ ತೀರ್ಥಯಾತ್ರೆ ಜರಗಿತು. ಪುಣೆ ತುಳುಕೂಟದ ಅದ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರುರವರ ನೇತೃತ್ವದಲ್ಲಿ ಸುಮಾರು 43 ಜನ ಯಾತ್ರಾರ್ಥಿಗಳು 5 ದಿನಗಳ ಈ ಯಾತ್ರೆಯಲ್ಲಿ ಪಾಲ್ಗೊಂಡರು. ಪವಿತ್ರ ನದಿಗಳಾದ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಪ್ರಯಾಗ್ ರಾಜ್ ನಲ್ಲಿ ಪವಿತ್ರ ಸ್ಥಾನ ಮಾಡಿ, ನಂತರ ಭಾರತದ ಪವಿತ್ರ ಹನ್ನೆರಡು ಜ್ಯೋತಿರ್ಲಿಂಗಳಲ್ಲಿ ಒಂದಾದ ಗಂಗಾ ನದಿ ತಪ್ಪಲಿನಲ್ಲಿರುವ ಕಾಶಿ ಶ್ರೀ ವಿಶ್ವನಾಥೇಶ್ವರ, ವಿಶಾಲಕ್ಷಿ ದೇವಸ್ಥಾನ ದರ್ಶನ ಮಾಡಿ ನಂತರ ಶ್ರೀ ರಾಮ ಲಲ್ಲಾ ಮಂದಿರ ಅಯೋಧ್ಯೆ ಶ್ರೀ ರಾಮಚಂದ್ರ ದೇವಾಲಯ ಮತ್ತು ಪ್ರದೇಶದ ಹಲವು ದೇವಸ್ಥಾನಗಳ ದರ್ಶನ ಪಡೆದರು.

ಪುಣೆ ತುಳುಕೂಟದ ವತಿಯಿಂದ ಪ್ರಥಮ ಬಾರಿಗೆ ಜರಗಿದ ಈ ತೀರ್ಥಯಾತ್ರೆಯಲ್ಲಿ ಸಂಘದ ಸದಸ್ಯರು, ಪುಣೆಯ ತುಳು ಕನ್ನಡಿಗ ಬಾಂಧವರು, ಹಿರಿಯರು, ಮಹಿಳೆಯರು, ದಂಪತಿಗಳು ಪಾಲ್ಗೊಂಡರು. ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ರಾಜಾರಾಮ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಪ್ರಿಯಾ ದೇವಾಡಿಗ ಮತ್ತು ಪದಾಧಿಕಾರಿಗಳು ಸಹಕರಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ, ಪುಣೆ