ಬಂಟರ ಸಂಘ ಇದರ ಮುಂಬಯಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಹರಸಿನ ಕುಂಕುಮ ಮತ್ತು ಮಾತಾ ಕೀ ಚೌಕಿ ಕಾರ್ಯಕ್ರಮವು ಸೆಪ್ಟೆಂಬರ್ 25 ರಂದು ಮೀರಾರೋಡ್ ಸಾಯಿ ಬಾಬಾ ನಗರದ ಸೈಂಟ್ ಥೋಮಸ್ ಕೆಥೋಲಿಕ್ ಚರ್ಚ್ ಹಾಲ್ ನಲ್ಲಿ ನಡೆಯಿತು. ಸಭಾ ಕಾರ್ಯಕ್ರಮವನ್ನು ಗಣ್ಯರು ಸೇರಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಸಭೆಯನ್ನು ಉದ್ದೇಶಿಸಿ ಮಾತಾಡಿದ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು, ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಇಂತಹ ಭಕ್ತಿ ಪ್ರಧಾನವಾದ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬಂದಿದೆ. ನಮ್ಮ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿಯವರ ನೇತೃತ್ವದಲ್ಲಿ ಹಾಗೂ ಸದಾ ಹಸನ್ಮುಖಿಯಾಗಿ ಎಲ್ಲರನ್ನೂ ಪ್ರೀತಿಯಿಂದ ಆದರಿಸುವ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿಯವರ ಮುತುವರ್ಜಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಬಂಟರ ಸಂಘದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಒಂದಾದ ಈ ಪ್ರಾದೇಶಿಕ ಸಮಿತಿಯ ಈ ಧಾರ್ಮಿಕ ಚಿಂತನೆಯ ಕಾರ್ಯಕ್ರಮವು ನೆರೆದ ಭಕ್ತರಿಗೆ ಈ ಶುಭ ಅವಸರದಲ್ಲಿ ಒಳಿತನ್ನು ಶ್ರೀ ದೇವರು ಕರುಣಿಸಲಿ, ಪಾವಿತ್ರತೆಯ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಮಾಜ ಬಾಂಧವರನ್ನು ಶ್ರೀದೇವಿಯು ಸದಾ ರಕ್ಷಿಸಲಿ. ಜಗನ್ಮಾತೆಯು ಎಲ್ಲರಿಗೂ ಆಯುರಾರೋಗ್ಯ ಭಾಗ್ಯ-ಸುಖ-ಸಂಪತ್ತನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಇಸ್ಸಾರ್ ಸರ್ವಿಸಸ್ ಫ಼ೈನಾನ್ಸ್ ಪ್ರೈ.ಲಿ. ಇದರ ಸಿಎಂಡಿ ಡಾ| ಆರ್. ಕೆ ಶೆಟ್ಟಿಯವರು ಮಾತನಾಡುತ್ತಾ, ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯವರು, ವಸಂತಿ ಶೆಟ್ಟಿಯವರು ಆಯೋಜಿಸಿರುವಂತಹ ಈ ಧಾರ್ಮಿಕ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿಬಂದಿದೆ. ಕೇವಲ 24 ಗಂಟೆಗಳಲ್ಲಿ ಲೈಫ಼್ ಇನ್ಯ್ಸೂರೆನ್ಸ್ ಪಾಲಿಸಿಯಲ್ಲಿ ವಿಶಿಷ್ಠ ಸಾಧನೆಗೈದು ಗಿನ್ನೆಸ್ ಬುಕ್ ಆಫ಼್ ರೆಕಾರ್ಡ್ ನಲ್ಲಿ ನನ್ನ ಹೆಸರು ನಮೂದನೆಯಾದ ನಂತರ ಇದು ನನ್ನ ಮೊದಲ ಕಾರ್ಯಕ್ರಮ. ಈ ಪ್ರಾದೇಶಿಕ ಸಮಿತಿಯ ಪ್ರೀತ್ಯಾಧರಗಳಿಗೆ ನಾನು ಸದಾ ಚಿರಋಣಿ. ಶ್ರೀ ದೇವರು ಎಲ್ಲರಿಗೂ ಸಂತೃಪ್ತಿಯನ್ನು ಕರುಣಿಸಲಿ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯಾರಾಮ್ ಶೆಟ್ಟಿ ಮಾತನಾಡುತ್ತಾ, ಈ ಪ್ರಾದೇಶಿಕ ಸಮಿತಿಯು ಆಯೋಜಿಸುವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತದೆ. ಅದರಲ್ಲೂ ವಸಂತಿ ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆದ ಮಹತ್ವದ ಹಳದಿ ಕುಂಕುಮ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿದೆ. ಮಕ್ಕಳಲ್ಲಿ ನಮ್ಮ ಆಚಾರ- ವಿಚಾರ- ಸಂಸ್ಕೃತಿಗಳ ವಿಚಾರದಲ್ಲಿ ನಾವೆಲ್ಲಾ ಗಮನ ಹರಿಸಬೇಕಾದುದು ಅತ್ಯವಶ್ಯಕ. ವಿದ್ಯಾಭ್ಯಾಸದ ಜೊತೆಗೆ ಮಕ್ಕಳಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಬೋಧಿಸಬೇಕಾಗಿದೆ. ಪ್ರತೀ ಮನೆಯಲ್ಲೂ ನಮ್ಮ ಧಾರ್ಮಿಕ ಗ್ರಂಥಗಳ ವಿಚಾರವನ್ನು ನಾವು ಮತ್ತು ಮಕ್ಕಳಿಗೆ ಸಕರಾತ್ಮವಾಗಿ ತಿಳಿದು ತಿಳಿಸಬೇಕು ಎಂದು ಕೂಲಂಕುಷವಾಗಿ ತಿಳಿಸಿದರು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಶ್ರೀರಥ್ ಫ಼ೈನಾನ್ಸಿಯಲ್ ಸರ್ವಿಸಸ್ಸ್ ಪೈ. ಲಿ. ನ ಸಿಎಂಡಿ ರತ್ನಾಕರ್ ಶೆಟ್ಟಿ ಮುಂಡ್ಕೂರು ಪ್ರಾದೇಶಿಕ ಸಮಿತಿಯಿಂದ ಆಗುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಕೋರಿದರು. ವಿಶೇಷ ಅತಿಥಿ ಬಂಟರ ಸಂಘ ಮುಂಬಯಿ ಇದರ ಜತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ರವರು ಮಾತನಾಡುತ್ತಾ, ಇದೊಂದು ಭಾವನಾತ್ಮಕ ಧಾರ್ಮಿಕ ಕಾರ್ಯಕ್ರಮ. ಇಲ್ಲಿನ ಮಹಿಳಾ ವಿಭಾಗಕ್ಕೆ ಒಮ್ಮೆ ಕಾರ್ಯಕ್ರಮದ ಬಗ್ಗೆ ಸೂಚನೆ ನೀಡಿದರೆ ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ನಮ್ಮ ಹಿರಿಯರ ಸಂಪ್ರದಾಯದಂತೆ ನಮ್ಮಿಗರ ಸಂಸ್ಕೃತಿಯ ಆಚಾರ- ವಿಚಾರಗಳು ಪ್ರತಿ ಒಬ್ಬರಲ್ಲೂ ಮೂಡಿಬರಬೇಕು. ಜೀವನದಲ್ಲಿ ದೇವರ ದಯೆಯಿಲ್ಲದೆ ಒಂದು ಕ್ಷಣವೂ ಬದುಕಲಾಗದು ಎಂಬ ಮಹತ್ವವನ್ನು ನಾವೆಲ್ಲಾ ನಮ್ಮ ಮಕ್ಕಳಿಗೆ ಕೂಲಂಕುಷವಾಗಿ ತಿಳಿಯಪಡಿಸಬೇಕು. ಬಂಟರ ಸಂಘ ಮುಂಬಯಿ ಇದರ ಪ್ರತಿಯೊಂದು ಕಾರ್ಯಕ್ರಮದ ವಿಚಾರಗಳು ದೇಶ- ವಿದೇಶದಲ್ಲೂ ಮಾದರಿಯಾಗಲಿ ಎಂದು ಶುಭೇಚ್ಛಿಸಿದರು.
ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ತನ್ನ ಅಭಿಪ್ರಾಯದಲ್ಲಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕೆಲಸ ಕಾರ್ಯಗಳನ್ನು ಪ್ರಶಂಸಿಸುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು. ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕಿ ರೂಪಾ ಜಯಂತ್ ಪಕ್ಕಳ, ಶುಭೇಚ್ಛೆಸುತ್ತಾ ಸಂದರ್ಭೊಚಿತಾಗಿ ಮಾತಾಡಿದರೆ, ವೇದಿಕೆಯಲ್ಲಿ
ಬಂಟರ ಸಂಘ ಮುಂಬಯಿ ಇದರ ಜತೆ ಕೋಶಾಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆ , ತನುಜಾ ಶಂಕರ್ ವೀರ್ಕರ್, ಮೀರಾಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ, ಮಹಿಳಾ ಕಾರ್ಯಾಧ್ಯಕ್ಷೆ ವಸಂತಿ ಶಿವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಂಟರ ಸಂಘದ ಹಾಗೂ ಇತರ ಪ್ರಾದೇಶಿಕ ಸಮಿತಿಯ ಗಣ್ಯರು ಪಾಲ್ಗೊಂಡಿದ್ದರು.
ಸಂಜೆ 3 ಗಂಟೆಗೆ ಆರಂಭಗೊಂಡ ಕಾರ್ಯಕ್ರಮದ ಮೊದಲ ಭಾಗವಾದ ಅರಸಿನ ಕುಂಕುಮ ಹಾಗೂ ಭಜನಾ ಕಾರ್ಯಕ್ರಮವನ್ನು ವಿಶೇಷ ಅತಿಥಿ ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಪದ್ಮನಾಭ ಪಯ್ಯಡೆ ಹಾಗೂ ಉಪಸ್ಥಿತರಿದ್ದ ಗಣ್ಯರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಭಜನಾ ಸಮಿತಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ತದನಂತರ ವಿನಯ್ ಶರ್ಮಾರವರಿಂದ ವಿಜೃಂಭಣೆಯಿಂದ ನಡೆದ ಮಾತಾಕೀ ಚೌಕಿ ಧಾರ್ಮಿಕ ಸಡಗರವು ನೆರೆದ ಶ್ರದ್ಧಾಳುಗಳನ್ನು ಪುಳಕಿತಗೊಳಿಸಿತು. ವಿಶೇಷವಾಗಿ ನಡೆದ ಕೃಷ್ಣ-ರಾಧೆ ನೃತ್ಯವು ರಮಣೀಯವಾಗಿ ಮೂಡಿಬಂತು. ಸಭಾ ಕಾರ್ಯಕ್ರಮದ ಪ್ರಾರ್ಥನೆಯನ್ನು ಭಜನಾ ಕಾರ್ಯಕ್ರಮದ ಕಾರ್ಯಾಧ್ಯಕ್ಷೆ ಜಯಶ್ರೀ ಬಿ. ಶೆಟ್ಟಿ ಮತ್ತು ವಸಂತಿ ಶೆಟ್ಟಿಯವರು ಗೈದರೆ, ಗಣ್ಯರನ್ನು ಹಾಗೂ ಸಭಾ ಸಭಿಕರನ್ನು ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿಯವರು ಸ್ವಾಗತಿಸಿದರೆ, ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿಯವರು ಪ್ರಸ್ತಾವಿಕವಾಗಿ ಮಾತಾಡಿದರು.
ಕಾರ್ಯಕ್ರಮದ ಯಶಸ್ವಿಯಲ್ಲಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಸಂಚಾಲಕ ಮಾಣಿಗುತ್ತು ಶಿವಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಖಜಾಂಚಿ ಶಂಕರ್ ಕೆ. ಶೆಟ್ಟಿ, ಜತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಎಂ ಸಿದ್ದಕಟ್ಟೆ, ಜತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವೃಷಭ್ ಶೆಟ್ಟಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜಾತ ಶೆಟ್ಟಿ, ಕಾರ್ಯದರ್ಶಿ ಸುಮಂಗಲಾ ಕಣಂಜಾರ್, ಕೋಶಾಧಿಕಾರಿ ವಂದನಾ ಶೆಟ್ಟಿ, ಜತೆ ಕಾರ್ಯದರ್ಶಿ ಶಿಲ್ಪಾ ಶೆಟ್ಟಿ, ಜತೆ ಕೋಶಾಧಿಕಾರಿ ಅಶ್ವಿನಿ ಶೆಟ್ಟಿ ಹಾಗೂ ಸರ್ವ ಆಡಳಿತ ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು ಸಹಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಅಶ್ವಿನಿ ಶೆಟ್ಟಿಯವರು ನಿರ್ವಹಿಸಿದರು. ಕಾರ್ಯಕ್ರಮದ ಕೊನೆಗೆ ಅನ್ನ ಪ್ರಸಾದದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಚಿತ್ರ, ವರದಿ : ವೈ ಟಿ ಶೆಟ್ಟಿ ಹೆಜಮಾಡಿ





































































































