ದುಷ್ಟ ಸಂಹಾರಕ್ಕಾಗಿಯೇ ಅವತರಿಸಿದ ದುರ್ಗಾ ಮಾತೆಯ ಪೂಜನೀಯ ಪುಣ್ಯ ಪರ್ವವಿದು. ನವರಾತ್ರಿ ಉತ್ಸವದಲ್ಲಿ ಭಕ್ತರು ಒಂಬತ್ತು ರೂಪಗಳಲ್ಲಿ ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ಲೋಕ ಕಲ್ಯಾಣಾರ್ಥವಾಗಿ ಕೂಡಾ ಇದು ಮಹತ್ವದ್ದು. ವಿಶೇಷವಾಗಿ ನವರಾತ್ರಿ ಈ ಸುಸಂದರ್ಭದಲ್ಲಿ ಪುಣೆ ಬಂಟರ ಸಂಘದ ದುರ್ಗಾ ಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ವಿಶೇಷ ರೀತಿಯ ಸಂಪ್ರದಾಯದ ಪ್ರಕಾರ ಇಲ್ಲಿ ದುರ್ಗಾ ಪೂಜೆ, ಮತ್ತು ತಮ್ಮ ಪ್ರಕೃತಿಯೊಂದಿಗಿನ ಬಾಂಧವ್ಯದ ಆಚರಣೆಯನ್ನು ನೋಡುವ ಭಾಗ್ಯ ಸಿಕ್ಕಿದೆ. ಅದೇ ರೀತಿ ನನ್ನ ಸಾಮಾಜಿಕ ಸೇವೆಯನ್ನು ಪರಿಗಣಿಸಿ ನೀಡಿದ ನವದುರ್ಗಾ ಪ್ರಶಸ್ತಿಗೆ ಋಣಿಯಾಗಿದ್ದೇನೆ. ಈ ಪ್ರಶಸ್ತಿಯನ್ನು ನನ್ನ ಸೇವಾ ಸಂಸ್ಥೆಯ ಅನಾಥ ಮಕ್ಕಳಿಗೆ ಅರ್ಪಣೆ ಮಾಡುತಿದ್ದೇನೆ. ಅನಾಥ ಮತ್ತು ಅಂಗವಿಕಲ ಮಕ್ಕಳನ್ನು ಮಾನಸಿಕ ಸಮತೋಲನಕ್ಕೆ ತಂದು, ಸಾಮಾಜಿಕ ಚಿಂತನೆಯನ್ನು ತಿಳಿ ಹೇಳುವ ಮೂಲಕ ಅಜ್ಞಾನದಿಂದ ಜ್ಞಾನದೆಡೆಗೆ ಪರಿವರ್ತಿಸಿ, ಸ್ವಪರಿಶ್ರಮದಿಂದ ಸಬಲೀಕರಣಗೊಳಿಸಿ ಸ್ವಾವಲಂಭಿಗಳಾಗಿ ಮಾಡುವುದರಲ್ಲಿ ನಮಗೆ ಆತ್ಮ ತೃಪ್ತಿ ಇದೆ. ಇದು ನಮಗೆ ಸವಾಲಿನ ಪ್ರಶ್ನೆಯಾದರೂ ಹಲವಾರು ವರ್ಷಗಳಿಂದ ಈ ಅನಿಕೇತ್ ಸೇವಾಭಾವಿ ಸಂಸ್ಥೆ ಮೂಲಕ ಅದೆಷ್ಟೋ ಮಕ್ಕಳ ಭವಿಷ್ಯಕ್ಕೆ ಈ ಸಂಸ್ಥೆ ಕಾರಣವಾಗಿದೆ. ಇದು ನಮ್ಮ ಸಾಮಾಜಿಕ ಮಾನವೀಯ ಸೇವೆಯ ಒಂದು ಅಂಶ ಎಂಬುದನ್ನು ಅರಿತು ಮಾಡುತ್ತಿದ್ದೇವೆ. ಈ ಸರ್ಕಾರೇತರ ಸಂಸ್ಥೆಯ ಜೊತೆಯಲ್ಲಿ ಪುಣೆಯ ಘನ ಸಂಸ್ಥೆಯಾದ ಬಂಟರ ಸಂಘದ ಸಾಮಾಜಿಕ ಸೇವೆ ನೆಲೆಯಲ್ಲಿ ಸಹಕಾರವಿರಲಿ ಎಂದು ಅನಾಥ ಮಕ್ಕಳು ಮತ್ತು ಅಂಗ ವಿಕಲ ಮಕ್ಕಳ ಪುನರ್ವಸತಿ ಸೇವಾ ಸಂಸ್ಥೆ ಅನಿಕೇತ್ ಸೇವಾ ಭಾವಿ ಸಂಸ್ಥೆಯ ಟ್ರಸ್ಟಿ ಶ್ರೀಮತಿ ರಾಜಶ್ರಿ ಸುಹಾಸ್ ಜಂಗ್ಲೆ ನುಡಿದರು. ಪುಣೆ ಬಂಟರ ಸಂಘದ ನವರಾತ್ರಿ ಉತ್ಸವವು ಬಂಟರ ಭವನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೆಪ್ಟೆಂಬರ್ 25ರಂದು ಬಹಳ ವಿಜೃಂಭಣೆಯಿಂದ ಜರಗಿತು. ಈ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಮಾತನಾಡಿದ ರಾಜಶ್ರೀ ಜಂಗ್ಲೆಯವರು ಸಮಾಜದ ಶಕ್ತಿಯನ್ನು ಒಟ್ಟುಗೂಡಿಸಿಕೊಂಡು ಯುಕ್ತಿಯಿಂದ ಮತ್ತು ನಾಯಕತ್ವ ಗುಣದಿಂದ ಮಹಾನ್ ಕಾರ್ಯ ಮಾಡಬಹುದು ಎಂಬುದನ್ನು ಪುಣೆ ಬಂಟರ ಸಂಘ ತೋರಿಸಿಕೊಡುತ್ತಿದೆ. ಸಂಘದ ಮಹಿಳಾ ಪ್ರತಿನಿಧಿ ಪುಷ್ಪ ಕೆ. ಹೆಗ್ಡೆಯವರ ಮೂಲಕ ಇಲ್ಲಿ ಬರುವಂತಾಯಿತು ಎಂದರು.

ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಗೌರವಾಧ್ಯಕ್ಷತೆಯಲ್ಲಿ, ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವ ಅತಿಥಿಗಳಾದ ಮುಂಬಯಿ ಬಂಟರ ಸಂಘದ ಬಂಟರವಾಣಿ ಕಾರ್ಯಾಧ್ಯಕ್ಷ, ಖ್ಯಾತ ನಿರೂಪಕ ಮೋಹನ್ ರೈ ಕರ್ನೂರು, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಕಾರ್ಯದರ್ಶಿ ನೀನಾ ಬಿ. ಶೆಟ್ಟಿ, ಕೋಶಾಧಿಕಾರಿ ವೀಣಾ ಪಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿ, ದಕ್ಷಿಣ, ಉತ್ತರ, ಪೂರ್ವ ಪಶ್ಚಿಮ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಶೆಟ್ಟಿ, ನಾರಾಯಣ ಹೆಗ್ಡೆ, ಸಂದೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆಯರುಗಳಾದ ವಿನೋದಾ ಶೆಟ್ಟಿ, ಪ್ರೇಮಾ ಆರ್. ಶೆಟ್ಟಿ, ಶಾಲಿನಿ ಎಂ.ಶೆಟ್ಟಿ, ನಯನಾ ಸಿ ಶೆಟ್ಟಿಯವರು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮವನ್ನು ಮುಖ್ಯ ಅತಿಥಿ ಗಣ್ಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ದಿವ್ಯಾ ಎಸ್ ಶೆಟ್ಟಿ, ಸಾರಿಕಾ ಸಿ ಶೆಟ್ಟಿ ಪ್ರಾರ್ಥನೆಗೈದರು. ಅಧ್ಯಕ್ಷರಾದ ಅಜಿತ್ ಹೆಗ್ಡೆಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘ ನವರಾತ್ರಿ ಪರ್ವಕಾಲದಲ್ಲಿ ಕೊಡಮಾಡುವ ನವದುರ್ಗಾ ಪ್ರಶಸ್ತಿಯನ್ನು ಅನಾಥ ಮತ್ತು ಅಂಗವಿಕಲ ಮಕ್ಕಳ ಪುನರ್ವಸತಿ ಸಂಸ್ಥೆ ಅನಿಕೇತ್ ಸೇವಾ ಭಾವಿ ಸಂಸ್ಥೆಯ ಟ್ರಸ್ಟಿ ಶ್ರೀಮತಿ ರಾಜಶ್ರಿ ಸುಹಾಸ್ ಜಂಗ್ಲೆಯವರಿಗೆ ಶಾಲು ಪಲಪುಷ್ಪ, ಸನ್ಮಾನ ಪತ್ರ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಇವರ ಪರಿಚಯವನ್ನು ನಯನಾ ಜೆ. ಶೆಟ್ಟಿ ಓದಿದರು. ಗೌರವ ಅತಿಥಿ ಕರ್ನೂರು ಮೋಹನ್ ರೈಯವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಪದಾದಿಕಾರಿಗಳನ್ನು ಗೌರವಿಸಲಾಯಿತು. ಅತಿಥಿ ಗಣ್ಯರು ನವರಾತ್ರಿ ಉತ್ಸವದ ಶುಭ ಸಂದೇಶ ನೀಡಿ ಸಾಂದರ್ಭಿಕವಾಗಿ ಮಾತನಾಡಿದರು. ಅಕ್ಷತಾ ಸುಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು ಧನ್ಯವಾದಗೈದರು. ನವರಾತ್ರಿ ಉತ್ಸವ ದುರ್ಗಾ ಪೂಜೆಯ ಅಂಗವಾಗಿ ಮೊದಲಿಗೆ ಸಂಘದ ಸದಸ್ಯ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀದೇವಿ ಕಲ್ಪೋಕ್ತ ಪೂಜೆ, ಮತ್ತು ತೆನೆಹಬ್ಬ ಜರಗಿತು. ನಂತರ ಈ ಬಾರಿಯ ನವರಾತ್ರಿ ಹಬ್ಬದ ವಿಶೇಷತೆಯಾಗಿ ದೇವಿಯ ಆಶೀರ್ವಾದ ಪಡೆಯುವಂತೆ ಪ್ರಥಮ ಬಾರಿಗೆ ದೇವಿ ಸಮಾನರಾದ ಒಂಬತ್ತು ಕನ್ಯೆಯರಿಗೆ ಕನ್ಯಾಪೂಜೆ, ಪಾದ ಪೂಜೆ ನೆರವೇರಿಸಿ, ಅರಸಿನ ಕುಂಕುಮ ಹಚ್ಚಿ, ಆರತಿ ಬೆಳಗಿ, ಅಲಂಕರಿಸಿ, ಆಹಾರ, ಉಡುಗೊರೆ ನೀಡಿ ಪಾದಗಳಿಗೆ ವಂದಿಸಿ ದೇವಿ ಸ್ತುತಿಯೊಂದಿಗೆ ನಡೆಯಿತು. ಈ ಕನ್ಯಾಪೂಜೆಯ ಕಾರ್ಯವನ್ನು ಬಂಟರ ಸಂಘದ ಮಹಿಳಾ ವಿಭಾಗದ ಪದಾಧಿಕಾರಿಗಳು, ಮಾಜಿ ಕಾರ್ಯಾಧ್ಯಕ್ಷೆಯರುಗಳು, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಯ ಮಹಿಳಾ ಪದಾಧಿಕಾರಿಗಳು ನಡೆಸಿದರು. ಶ್ರೀಮತಿ ಅಕ್ಷತಾ ಸುಜಿತ್ ಶೆಟ್ಟಿಯವರು ಈ ಕನ್ಯಾಪೂಜೆಯ ವಿಶೇಷತೆಯ ಬಗ್ಗೆ ಮತ್ತು ಆಚರಣೆಯ ಬಗ್ಗೆ ವಿವರಿಸಿದರು. ನಂತರ ಬಂಟರ ಸಂಘದ ಮಹಿಳಾ ವಿಭಾಗ, ಪ್ರಾದೇಶಿಕ ಸಮಿತಿಗಳಿಂದ ಯುವ ವಿಭಾಗದವರಿಂದ ಸಾಮೂಹಿಕ ದಾಂಡಿಯಾ ರಾಸ್ ನೃತ್ಯ ಕಾರ್ಯಕ್ರಮ ಜರಗಿತು. ಹೆಚ್ಚಿನ ಸಂಖ್ಯೆಯ ಪುರುಷರು, ಮಹಿಳೆಯರು, ಯುವ ವಿಭಾಗದ ಸದಸ್ಯರು ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡರು. ಸಂಘದ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಯವರು, ಯುವ ವಿಭಾಗದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮದ ನಂತರ ಪ್ರೀತಿ ಭೋಜನ ನಡೆಯಿತು.
ಚಿತ್ರ, ವರದಿ : ಹರೀಶ್ ಮೂಡಬಿದಿರೆ