ಒಳ್ಳೆಯತನ ಎಂದರೆ ಮಾನವೀಯ ಗುಣಗಳನ್ನು ಹೊಂದಿರುತ್ತದೆ. ಅಂತಹ ಮಾನವೀಯ ಗುಣಗಳೆಂದರೆ ಸಹಕಾರ, ಸಹಾಯ, ದಯೆ, ಕರುಣೆ, ಸಹಾನುಭೂತಿ, ಸಾಮಾಜಿಕ ಪ್ರಜ್ಞೆ, ಭಾತೃತ್ವ, ಪ್ರೀತಿ, ಸೇವಾ ಮನೋಭಾವನೆ, ಹೃದಯ ವೈಶಾಲ್ಯತೆ. ಇಂತಹ ಎಲ್ಲಾ ಗುಣಗಳನ್ನು ಹೊಂದಿರುವ ನಮ್ಮ ಬಂಟ ಸಮಾಜದ ಮುಂದಿನ ಯುವ ಪೀಳಿಗೆಯ ಅಭಿವೃದ್ದಿ ಹೇಗೆ ಎಂಬದನ್ನು ಅರಿತು ಮುನ್ನಡೆಯಬೇಕಾದ ಸವಾಲು ನಮ್ಮ ಸಮಾಜದ ಮುಂದಿದೆ. ಸನಾತನ ಭಾರತೀಯ ಸಂಸ್ಕ್ರತಿ, ಹಿಂದುತ್ವದ ತತ್ವದ ಮೇಲೆ ನಿಂತಿದೆ. ಧಾರ್ಮಿಕ ಆಚರಣೆಗಳ ಮಹತ್ವ, ಸಂಸ್ಕೃತಿ, ಸಂಸ್ಕಾರಗಳ ಅರಿವು ಮಕ್ಕಳಿಗೆ ಮೂಡಿಸುವ ಕಾರ್ಯ ಕೂಡಾ ಆಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಮಾಜದ ಸಂಘ ಸಂಸ್ಥೆಗಳ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ನಮ್ಮಬಂಟರ ಸಾಂಘಿಕ ಶಕ್ತಿಯಿಂದ ಇದು ಸಾಧ್ಯ ಎಂಬುದನ್ನು ಅರಿತಿದ್ದೇವೆ. ಈ ಬಗ್ಗೆ ನಾವು ಬಂಟರ ಸಂಘ ಮುಂಬಯಿ ಮತ್ತು ನನ್ನ ಸೇವಾ ಸಂಸ್ಥೆ ಸಂಜೀವಿನಿ ಟ್ರಸ್ಟ್ ಮೂಲಕ ಬಹಳಷ್ಟು ಕಾರ್ಯಗಳನ್ನು ಮಾಡುತ್ತಿದ್ದೇವೆ. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ ಕೂಡಾ ಈ ಕಾರ್ಯ ಮಾಡುತ್ತಿದೆ ಎಂದು ತಿಳಿದು ತುಂಬಾ ಸಂತೋಷವಾಗುತ್ತಿದೆ. ಪ್ರೀತಿ ವಾತ್ಸಲ್ಯದಿಂದ ಬದುಕುವ ಮೂಲಕ ಪರೋಪಕಾರ ಮನೋಭಾವ ನಮ್ಮದಾಗಲಿ. ಬರುವಾಗ ಶೂನ್ಯ ಹೋಗುವಾಗ ಶೂನ್ಯ ಇದರ ಮದ್ಯೆ ಸ್ವಸಾಮರ್ಥ್ಯ, ಸಾಧನೆಯಿಂದ ಸಮಾಜದಲ್ಲಿ ಗುರುತಿಸಿಕೊಂಡು ಮಾಡುವ ಸೇವಾ ಕಾರ್ಯದಿಂದ ಗೌರವವನ್ನು ಪಡೆಯಬಹುದು. ಬಂಟರ ಸಂಸ್ಕ್ರತಿಯನ್ನು ಮೆಲೈಸುವ ನಮ್ಮ ತುಳುನಾಡ ಸಂಸ್ಕ್ರತಿಯ ತೆನೆ ಹಬ್ಬ, ದುರ್ಗಾ ಪೂಜೆಯ ಸೊಬಗು ಇಲ್ಲಿ ಅನಾವರಣ ಆಗಿದೆ. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿ ಅರ್ಥಪೂರ್ಣವಾಗಿ ನಡೆದಿದೆ. ತಾನು ಬೆಳೆಯುವ ಜೊತೆಯಲ್ಲಿ ಇತರರನ್ನು ಬೆಳೆಸುವ ಮನೋಭಾವ ನಮ್ಮಲ್ಲಿರಬೇಕು. ಮನುಷ್ಯನ ಪ್ರಯತ್ನಕ್ಕೆ ಭಗವಂತನ ಅನುಗ್ರಹ ಸಿಗುತ್ತದೆ. ಜವಾಬ್ದಾರಿ ವಹಿಸಿಕೊಂಡ ನಂತರ ಸಮಾಜಕ್ಕಾಗಿ ಶ್ರಮಪಡಬೇಕು. ಇದುವೇ ಮಾನವ ಧರ್ಮ ಎಂದು ಎಲ್.ಐ.ಸಿ ಗಿನ್ನೆಸ್ ರೆಕಾರ್ಡ್ ವೀರ ಬಂಟರ ಸಂಘ ಮುಂಬಯಿಯ ಪ್ರಧಾನ ಕಾರ್ಯದರ್ಶಿ, ಇಸ್ಸಾರ್ ಪೈನಾನ್ಸಿಯಲ್ ಪ್ರೈವೇಟ್ ಲಿಮಿಟೆಡ್ ನ ಎಂ.ಡಿ ಡಾ| ಆರ್.ಕೆ ಶೆಟ್ಟಿ ನುಡಿದರು.

ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಹಾಗೂ ದಾಂಡಿಯಾ ರಾಸ್ ಕಾರ್ಯಕ್ರಮವು ಸೆಪ್ಟೆಂಬರ್ 26ರಂದು ರಾವೆತ್ ನಲ್ಲಿರುವ ಹೋಟೆಲ್ ಸ್ಕೈ ಬ್ಲೂನ ಸಭಾಂಗಣದಲ್ಲಿ ಜರಗಿತು. ಈ ಧಾರ್ಮಿಕ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಸುರೇಂದ್ರ ಶೆಟ್ಟಿಯವರು, ಧರ್ಮದ ಪಾಲನೆಯ ಮುಖಾಂತರ ಧಾರ್ಮಿಕ ಆಚರಣೆಗಳನ್ನು ಮಾಡಲು ಯಾವುದೇ ರೀತಿಯ ಹಿಂಜರಿಕೆ ಇರಬಾರದು. ನಮ್ಮ ಹಿರಿಯರಿಂದ ಆಚರಿಸಿಕೊಂಡು ಬಂದಿರುವ ಪದ್ಧತಿಗನುಗುಣವಾಗಿ ಪ್ರಕೃತಿಯ ಮಡಿಲಲ್ಲಿ ಹಬ್ಬ ಹರಿ ದಿನಗಳನ್ನು ಆಚರಿಸುವವರು ನಾವು. ದುರ್ಗಾ ಪೂಜೆ, ತೆನೆ ಹಬ್ಬದಂತಹ ಈ ಧಾರ್ಮಿಕ ಪರ್ವದಲ್ಲಿ ಪಾಲಕರ ಜೊತೆಯಲ್ಲಿ ಮಕ್ಕಳು ಕೂಡಾ ಪಾಲ್ಗೊಂಡು ಆಚರಣೆಯ ಮಹತ್ವವನ್ನು ತಿಳಿದು ಕೊಳ್ಳಬೇಕು ಎಂದರು. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ಜಗದೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ದಸರಾ ಪೂಜೆಯ ಸಭಾ ವೇದಿಕೆಯಲ್ಲಿ ಗೌರವ ಅತಿಥಿ, ಖ್ಯಾತ ಸಾಹಿತಿ ಅಂಕಣಗಾರ್ತಿಯಾದ ಲತಾ ಸಂತೋಷ್ ಶೆಟ್ಟಿ ಮುಂಬಯಿ, ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ, ಉಪಾಧ್ಯಕ್ಷರುಗಳಾದ ಪ್ರಸಾದ್ ಶೆಟ್ಟಿ, ಹರೀಶ್ ಶೆಟ್ಟಿ ಕುರ್ಕಾಲ್, ಕಾರ್ಯಧ್ಯಕ್ಷ ಲೀಲಾಧರ್ ಶೆಟ್ಟಿ, ಕೋಶಾಧಿಕಾರಿ ದಿನೇಶ್ ಶೆಟ್ಟಿ ಉಜಿರೆ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್ ಶೆಟ್ಟಿ ಪೆಲತ್ತೂರು, ಕ್ರೀಡಾ ಕಾರ್ಯಾಧ್ಯಕ್ಷ ಜಯ ಶೆಟ್ಟಿ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾ ಎಸ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶುಭಂ ಶೆಟ್ಟಿ, ಅನ್ವಿತಾ ಶೆಟ್ಟಿಯವರು ಉಪಸ್ಥಿತರಿದ್ದರು.
ಅಧ್ಯಕ್ಷರು ಮತ್ತು ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ದಸರಾ ಪೂಜೆ, ತೆನೆ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೀಪಿಕಾ ಶೆಟ್ಟಿ ಮತ್ತು ಸಾನ್ವಿ ಶೆಟ್ಟಿ ಪ್ರಾರ್ಥನೆಗೈದರು. ನಿಕಟಪೂರ್ವ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆಯವರು ಸ್ವಾಗತಿಸಿದರು. ಮುಖ್ಯಅತಿಥಿ ಗಣ್ಯರಾದ ಡಾ| ಆರ್ ಕೆ ಶೆಟ್ಟಿ ಮತ್ತು ಗೌರವ ಅತಿಥಿ ಲತಾ ಸಂತೋಷ್ ಶೆಟ್ಟಿಯವರನ್ನು ಜಗದೀಶ್ ಶೆಟ್ಟಿ, ಪ್ರಭಾ ಶೆಟ್ಟಿ ಮತ್ತು ಪದಾಧಿಕಾರಿಗಳು ಶಾಲು ಪುಷ್ಪಗುಚ್ಛ, ಸ್ಮರಣಿಕೆ ನೀಡಿ, ಗೌರವಿಸಿದರು. ಅತಿಥಿ ಗಣ್ಯರ ಪರಿಚಯವನ್ನು ಕ್ರಮವಾಗಿ ಅವಿನಾಶ್ ಶೆಟ್ಟಿ ಮತ್ತು ಕ್ಷಮಾ ಶೆಟ್ಟಿಯವರು ಓದಿದರು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಗಣ್ಯರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಅಲಂಕೃತ ಶ್ರೀ ದೇವಿ ಮಂಟಪಕ್ಕೆ ಸುಮಂಗಲೆಯರು ಮಹಾ ಮಂಗಳಾರತಿಗೈದರು. ಅಧ್ಯಕ್ಷರಾದ ಜಗದೀಶ್ ಶೆಟ್ಟಿಯವರು ತೆನೆ ಹೊತ್ತು ತುಳಸಿ ಕಟ್ಟೆಯಲ್ಲಿ ಇಟ್ಟು ತೆನೆ ಪೂಜೆಗೈದರು. ಅತಿಥಿ ಗಣ್ಯರು ಮತ್ತು ಸಮಿತಿ ಪದಾಧಿಕಾರಿಗಳು ತೆನೆಗೆ ಹಾಲೆರೆದರು. ನಂತರ ತೆನೆ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ದಾಂಡಿಯಾ ನೃತ್ಯವನ್ನು ಮಹಿಳಾ ವಿಭಾಗದ ಸದಸ್ಯರು ದೇವಿಯನ್ನು ಅರಾದಿಸುವ ಸ್ತುತಿಯೊಂದಿಗೆ ನೃತ್ಯಗೈದರು. ಮಹಿಷಾಸುರ ಮರ್ದಿನಿ ನೃತ್ಯ ರೂಪಕ ಹಾಗೂ ಬಂಟರ ಸಂಘದ ವಿವಿಧ ವಿಭಾಗದ ತಂಡಗಳಿಂದ ದಾಂಡಿಯಾ ನೃತ್ಯ ಕಾರ್ಯಕ್ರಮ ನಡೆಯಿತು. ಮಕ್ಕಳು ಮಹಿಳೆಯರು ಪುರುಷರು ಸೇರಿದಂತೆ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು. ದಾಂಡಿಯಾದ ವಸ್ತ್ರ ಅಲಂಕಾರದಲ್ಲಿ ಮತ್ತು ದಾಂಡಿಯಾ ನೃತ್ಯದಲ್ಲಿ ಸ್ಪರ್ಧೆಯಲ್ಲಿ ಉತ್ತಮ ನೃತ್ಯಪಟುಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಡಿ ಶೆಟ್ಟಿ, ವಿಶ್ವನಾಥ್ ಎಲ್ ಶೆಟ್ಟಿ, ಸೀತಾರಾಮ ಎಲ್.ಶೆಟ್ಟಿ, ಮಹೇಶ್ ಎಸ್ ಹೆಗ್ಡೆ, ವಿಜಯ ಎಸ್ ಶೆಟ್ಟಿ, ರಾಕೇಶ್ ಶೆಟ್ಟಿ ಬೆಳ್ಳಾರೆ, ಸಲಹೆಗಾರರಾದ ವಿಶ್ವನಾಥ್ ಕೆ ಶೆಟ್ಟಿ, ಮಾಜಿ ನಗರ ಸೇವಕ ಉಲ್ಲಾಸ್ ಶೆಟ್ಟಿ, ಸಂಘದ ಕಾರ್ಯಾಧ್ಯಕ್ಷ ಲೀಲಾಧರ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಭಾರತಿ ಎಸ್ ಶೆಟ್ಟಿ, ಪ್ರೇಮಾ ವಿ ಶೆಟ್ಟಿ, ಕ್ಷಮಾ ಎಲ್ ಶೆಟ್ಟಿ, ಜಯಲಕ್ಷ್ಮೀ ಪಿ. ಶೆಟ್ಟಿ, ತನುಜಾ ಎ ಶೆಟ್ಟಿ, ಸುಪ್ರಿಯಾ ಜೆ. ಶೆಟ್ಟಿ, ಜ್ಯೋತಿ ವಿ.ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.
ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು, ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಮಾಜಿ ಕಾರ್ಪೋರೇಟರ್ ಉಲ್ಲಾಸ್ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ತುಳು ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್, ಪುಣೆ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿಪಿ. ಶೆಟ್ಟಿ, ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಆರ್ ಶೆಟ್ಟಿ ಮತ್ತು ಸಭೆಯಲ್ಲಿ ಗೌರವ ಉಪಸ್ಥಿತರಿದ್ದ ಮಹನೀಯರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದುರ್ಗಾ ಪೂಜೆಯ ಪ್ರಸಾದ ಸ್ವೀಕರಿಸಿ, ದಾಂಡಿಯಾ ಕಾರ್ಯಕ್ರಮದಲ್ಲಿ ಪಾಲು ಪಡೆದು ಸಂಭ್ರಮ ಪಟ್ಟರು. ಅವಿನಾಶ್ ಶೆಟ್ಟಿ ಮತ್ತು ಸೌಮ್ಯಾ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದಾಂಡಿಯಾ ಕಾರ್ಯಕ್ರಮವನ್ನು ಸುಧಾಕರ್ ಶೆಟ್ಟಿ ಪೆಲತ್ತೂರು ನಡೆಸಿಕೊಟ್ಟರು. ರಾಜೇಶ್ ಶೆಟ್ಟಿ ಧನ್ಯವಾದಗೈದರು. ಕಾರ್ಯಕ್ರಮ ನಂತರ ಪ್ರೀತಿ ಭೋಜನ ನಡೆಯಿತು.
ಚಿತ್ರ, ವರದಿ : ಹರೀಶ್ ಮೂಡಬಿದಿರೆ