ಶರನ್ನವರಾತ್ರಿ ಪ್ರಯುಕ್ತ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಮೊದಲ್ಗೊಂಡು ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಕ್ಟೋಬರ್ 2 ಗುರುವಾರ ವಿಜಯ ದಶಮಿಯಂದು ಸಾಯಂಕಾಲ ಗಂ. 4:30 ರಿಂದ ‘ದಸರಾ ಕವಿಗೋಷ್ಠಿ – 2025’ ನವರಸ ರಂಜನೆಯ ಬಹುಭಾಷಾ ಕವಿ ಮೇಳವನ್ನು ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್ ಪ್ರದೀಪ ಕುಮಾರ್ ಕಲ್ಕೂರ ಕವಿಗೋಷ್ಠಿಯನ್ನು ಉದ್ಘಾಟಿಸುವರು. ಕವಿ, ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ 10 ಮಂದಿ ಪ್ರಮುಖ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸುವರು.

ಕವಿಗಳಾದ ಡಾ. ಸುರೇಶ್ ನೆಗಳಗುಳಿ (ಕನ್ನಡ ಗಝಲ್), ಮಹಮ್ಮದ್ ಬಡ್ಡೂರು (ಬ್ಯಾರಿ), ಗುಣಾಜೆ ರಾಮಚಂದ್ರ ಭಟ್ (ಕನ್ನಡ), ಡಾ. ಮೀನಾಕ್ಷಿ ರಾಮಚಂದ್ರ (ಮಲೆಯಾಳಂ), ಅಕ್ಷತಾ ರಾಜ್ ಪೆರ್ಲ (ಹವ್ಯಕ), ಡಾ. ಕವಿತಾ ಸುವರ್ಣ (ಹಿಂದಿ), ಅಕ್ಷಯ ಆರ್. ಶೆಟ್ಟಿ, ವಿಜಯಲಕ್ಷ್ಮಿ ಕಟೀಲು, ವಸಂತಿ ನಿಡ್ಲೆ (ತುಳು) ಇವರು ವಿವಿಧ ಭಾಷೆಗಳಲ್ಲಿ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸುವರು. ವಿಜಯ ದಶಮಿ ಪ್ರಯುಕ್ತ ದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ ವಿದ್ಯಾರಂಭ ಮತ್ತು ತುಲಾಭಾರ, ಮಧ್ಯಾಹ್ನ ಹಾಗೂ ಸಂಜೆ ರಥೋತ್ಸವ ನಡೆಯುವುದು. ಮರುದಿನ ಅವಭೃತ ಮಂಗಳ ಸ್ನಾನದೊಂದಿಗೆ ಮಂಗಳಾದೇವಿ ದಸರಾ ಮಹೋತ್ಸವ ಸಂಪನ್ನಗೊಳ್ಳುವುದೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.