ನಮ್ಮ ದೇಶದ ಸಾರ್ವಜನಿಕ ವಲಯದ ದೈತ್ಯ BSNL ಒಂದು ಕಾಲದಲ್ಲಿ ದೇಶದ ದೂರಸಂಪರ್ಕ ಕ್ಷೇತ್ರದ ಹೆಮ್ಮೆಯಾಗಿತ್ತು. ಆದರೆ ಇಂದು ಖಾಸಗಿ ಕಂಪನಿಗಳ ಜೊತೆಗಿನ ಸ್ಪರ್ಧೆಯಲ್ಲಿ BSNL ಕುಸಿಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಕಥೆಯ ಹಿಂದಿನ ಕೆಲವು ಆಘಾತಕಾರಿ ಸಂಗತಿಗಳು ಜನತೆಯ ಗಮನಕ್ಕೆ ಬರಬೇಕಿದೆ. BSNL ತನ್ನ ಟವರ್ಗಳು ಮತ್ತು ಉಪಕರಣಗಳನ್ನು ಜಿಯೋಗೆ ಬಾಡಿಗೆಗೆ ಕೊಟ್ಟಿತ್ತು. ಆದರೆ ಆಶ್ಚರ್ಯಕರವಾಗಿ 10 ವರ್ಷಗಳ ಕಾಲ ಆ ಬಾಡಿಗೆಯ ಹಣವನ್ನೇ ವಸೂಲಿ ಮಾಡಲಿಲ್ಲ. ಒಂದು ಖಾಸಗಿ ಕಂಪನಿಯಾದರೆ ಒಂದು ತಿಂಗಳ ಬಾಡಿಗೆ ತಡವಾದರೂ ಕಾನೂನು ಕ್ರಮ ಕೈಗೊಳ್ಳುತ್ತಿತ್ತು. ಆದರೆ ಜನರ ಆಸ್ತಿಯಾದ BSNL ಈ ವಿಷಯದಲ್ಲಿ ಯಾಕೆ ಮೌನವಾಗಿತ್ತು? ಇದು ಕೇವಲ ಉದಾಸೀನವೋ ಅಥವಾ ಉದ್ದೇಶಪೂರ್ವಕವಾಗಿ ಜಿಯೋಗೆ ಒಲವು ತೋರಿಸಿದ್ದೋ?2013ರಲ್ಲಿ BSNL 3G ಸೇವೆಯನ್ನು ಯಶಸ್ವಿಯಾಗಿ ಆರಂಭಿಸಿತ್ತು. ಆದರೆ 4G ಸೇವೆಗೆ ಸರ್ಕಾರದಿಂದ ಅನುಮತಿ ವಿಳಂಬವಾಯಿತು. 2020ಕ್ಕೆ ತಳ್ಳಲ್ಪಟ್ಟ ಈ ಸೇವೆ ಇಂದಿಗೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ಇದರ ಜೊತೆಗೆ, 2025 ಬಂದರೂ BSNL 5G ಇಲ್ಲದಿದ್ದರೆ, ಜಿಯೋ ಮತ್ತು ಏರ್ಟೆಲ್ನಂತಹ ಖಾಸಗಿ ಕಂಪನಿಗಳು 5G ಸೇವೆಯನ್ನು ದೇಶಾದ್ಯಂತ ವಿಸ್ತರಿಸಿವೆ. ಇದರ ಹಿಂದಿನ ನೀತಿಗಳು ಯಾರಿಗೆ ಒಲವು ತೋರಿವೆ ಎಂಬುದು ಸ್ಪಷ್ಟವಾಗಿದೆ. BSNL ನ ಸಂಪತ್ತು, ಟವರ್ಗಳು, ಉಪಕರಣಗಳು ಮತ್ತು ಸರ್ಕಾರದ ನೀತಿಗಳು ಜಿಯೋದ ಬೆಳವಣಿಗೆಗೆ ದಾರಿಮಾಡಿಕೊಟ್ಟಿವೆ. ಒಂದು ಖಾಸಗಿ ಕಂಪನಿಯು ಕೇವಲ 8 ವರ್ಷಗಳಲ್ಲಿ ದೇಶದ ನಂಬರ್ 1 ಜಾಲವಾಗಿ ಬೆಳೆದರೆ, 11 ವರ್ಷಗಳಲ್ಲಿ BSNL ನ್ನು ಉಳಿಸಲು ಮತ್ತು ಬಲಪಡಿಸಲು ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ?

ನಿಜವಾದ ರಾಷ್ಟ್ರ ಸೇವೆ ಎಂದರೆ ಜನರ ಕಂಪನಿಯಾದ BSNL ನ್ನು ಬಲಪಡಿಸಿ, ಸ್ವದೇಶಿ ಮತ್ತು ಕೈಗೆಟುಕುವ ಸೇವೆಯನ್ನು ಜನರಿಗೆ ಒದಗಿಸುವುದು. ಆದರೆ ಇಲ್ಲಿ ಖಾಸಗಿ ಕಂಪನಿಗಳಿಗೆ ಹಸಿರು ದೀಪ ತೋರಿಸಿ, BSNL ನ್ನು ಕತ್ತಲೆಗೆ ತಳ್ಳಲಾಗಿದೆ. ಇದು ಜನತೆಗೆ ಒಂದು ದೊಡ್ಡ ಪ್ರಶ್ನೆಯನ್ನು ಎದುರಿಡುತ್ತದೆ. ನಮ್ಮ ಸರ್ಕಾರ ದೇಶದ ಜನರಿಗೋಸ್ಕರವೇ, ಇಲ್ಲವೆ ಕೆಲವೇ ಕೆಲವು ಖಾಸಗಿ ಸಂಸ್ಥೆಗಳಿಗೋಸ್ಕರವೇ?