ದಯವಿಟ್ಟು ನೀವು ಸಂತಾಪ ಸೂಚಕ ಸಭೆಯಲ್ಲಿ ಕೂತ ಹಾಗೆ ಮುಖ ಗಂಟಿಕ್ಕಿ ಕೂರಬೇಡಿ. ಮನಸ್ಸು ದೇಹ ಎರಡನ್ನು ಸಡಿಲಗೊಳಿಸಿ ನಿರಾಳವಾಗಿರಿ, ಮಾತು ಏಕಮುಖವಾಗುವುದು ಬೇಡ. ಇದೊಂದು ಸಮ್ಮುಖ ಸಂವಾದವಾಗಲಿ. ನೀವೂ ಪ್ರಶ್ನೆ ಕೇಳಿ, ನಾನೂ ಕೇಳುವೆ ಎಂದ ತಕ್ಷಣ ಅದೊಂದು ಹುಡುಗಿ ‘ಸಂತಾಪ ಸೂಚಕ’ ಎಂದರೆ ಏನು ಸರ್ ಎಂಬ ಪ್ರಶ್ನೆ ಕೇಳುವುದೇ? ಪದವಿ ಓದುವ ಮಗುವಿಗೆ ಸಂತಾಪ ಸೂಚಕ ಅನ್ನುವ ಸರಳ ಶಬ್ದ ಅರ್ಥವಾಗಿಲ್ಲ ಎಂದರೆ ಕಾಲ ಎಷ್ಟು ಕೆಟ್ಟು ಹೋಯಿತು ಎಂದು ತಬ್ಬಿಬ್ಬಾದೆ. ಸಾಹಿತ್ಯ ಭಾಷೆ ಸಂಸ್ಕೃತಿಯ ವಿಷಯ ಪಕ್ಕಕ್ಕಿರಲಿ. ಇತ್ತೀಚೆಗೆ ನಮ್ಮ ಕಾಲೇಜುಗಳ ಶೈಕ್ಷಣಿಕ ಉಪನ್ಯಾಸ, ವಾರ್ಷಿಕ ಉತ್ಸವ- ಸಭೆಗಳೆಲ್ಲ ಲವಲವಿಕೆ ಜೀವಂತಿಕೆಯೇ ಇಲ್ಲದ ನಿರಾಸಕ್ತಿಯ ಮುಖ ಮುದ್ರೆಯ ಯುವ ಪ್ರೇಕ್ಷಕರನ್ನು ಹೊಂದಿರುತ್ತದೆ ಯಾಕೆ ಎಂಬುವುದು ನನ್ನ ಇಂದಿನ ಪ್ರಶ್ನೆ.

ಕಳೆದ ಐದಾರು ದಶಕದಿಂದ ಇಡೀ ಕರಾವಳಿಗೇ ಮಾದರಿಯನ್ನೆಬಹುದಾದ ಕಾಲೇಜೊಂದರ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದೆ. ಮೂರು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಆ ಸಂಸ್ಥೆಯ ಶೈಕ್ಷಣಿಕ ಸಮಾಪನ ಕಾರ್ಯಕ್ರಮದಲ್ಲಿ ಸಭಾಮಂಟಪದಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 250! ಪ್ರಥಮ ಬಹುಮಾನ ಪಡೆಯುವುದಕ್ಕೂ ವೇದಿಕೆಗೆ ಬಾರದ, ಬಂದವರಲ್ಲೂ ಯಾವುದೇ ಸಂಭ್ರಮ ಉತ್ಸವವಿಲ್ಲದ ನಿರಾಸಕ್ತಿಗಳನ್ನು ಗಮನಿಸಿ ಉದ್ಘೋಷಕರು ಪದೇ ಪದೇ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿ ಎಂದು ಹೇಳುತ್ತಿದ್ದರು. ವೇದಿಕೆಯಲ್ಲಿದ್ದ ಗಣ್ಯರು, ಎದುರು ಸಾಲಿನ ಆ ಸಂಸ್ಥೆಯ ಶಿಕ್ಷಕರಷ್ಟೇ ಇದು ಮರ್ಯಾದೆಯ ಪ್ರಶ್ನೆ ಎಂದು ನವಿರಾಗಿ ಚಪ್ಪಾಳೆ ಹೊಡೆಯುತ್ತಿದ್ದರೇ ಹೊರತು ಮಕ್ಕಳು ಮಾತ್ರ ಆ ಇಡೀ ಕಾರ್ಯಕ್ರಮಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ತಮ್ಮ ತಮ್ಮ ಮೊಬೈಲ್ ನೋಡುವುದರಲ್ಲೇ ಮಗ್ನರಾಗಿದ್ದರು. ಪಕ್ಕದಲ್ಲಿ ಕೂತಿದ್ದ ಸ್ನೇಹಿತರೊಬ್ಬರು ದೇವಸ್ಥಾನದಲ್ಲಿ ಶಂಖ ಜಾಗಟೆ ಕೊಂಬು ಮೊಳಗಿಸುವುದಕ್ಕೆ ಕೃತಕ ಯಂತ್ರವನ್ನು ಕೂರಿಸುವ ಹಾಗೆ ಕಾಲೇಜಿನ ಇಂಥ ವೇದಿಕೆಯ ಅಕ್ಕಪಕ್ಕದಲ್ಲೂ ಒಂದು ಚಪ್ಪಾಳೆ ಯಂತ್ರವನ್ನು ಸ್ಥಾಪಿಸುವ ದಿನ ಹತ್ತಿರದಲ್ಲಿ ಇದೆ ಎಂದು ಗೊಣಗುತ್ತಿದ್ದರು.ಮದುವೆ, ಎಂಗೇಜ್ಮೆಂಟ್, ಮೆಹಂದಿ, ಬೊಜ್ಜ, ಬರ್ತಡೇ ಊಟ, ಡಿನ್ನರ್ ಮುಂತಾದ ಕಾರ್ಯಕ್ರಮಗಳನ್ನುಳಿದು ಇತ್ತೀಚಿಗೆ ನೀವು ಯಾವುದಾದರೂ ಗಂಭೀರವಾದ ಸಾಹಿತ್ಯ ಸಂಸ್ಕೃತಿ ಕಲೆ ಸಂಗೀತ ತಾಳಮದ್ದಳೆ ವಿಚಾರಗೋಷ್ಠಿ ಇತ್ಯಾದಿ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ನೋಡಿ. ಒಂದಷ್ಟು ನೆರೆತ ಕೂದಲ ಬಿಳಿ ಹಿರಿತಲೆಗಳು ಅಲ್ಲಿ ಕಾಣಿಸಿಕೊಳ್ಳುತ್ತವೆಯೇ ಹೊರತು ಒಬ್ಬನೇ ಒಬ್ಬ ಯುವ ಕಾಲೇಜು ವಿದ್ಯಾರ್ಥಿಗಳಲ್ಲಿ ಕಾಣಿಸುವದೇ ಇಲ್ಲ. ಯಾವುದಾದರೂ ಕಾಲೇಜಿನಲ್ಲಿ ಈ ವರ್ಷ ನಮಗೆ ವಾರ್ಷಿಕೋತ್ಸವಕ್ಕೆ ಇಂಥದ್ದೇ ಸಂಪನ್ಮೂಲ ವ್ಯಕ್ತಿ ಬೇಕು, ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಪುಸ್ತಕ ಬಹುಮಾನವನ್ನೇ ಕೊಡಬೇಕು ಎಂದು ಪ್ರಾಂಶುಪಾಲರಿಗೆ ಮನವಿ ಕೊಟ್ಟ ಒಬ್ಬನೇ ಒಬ್ಬ ವಿದ್ಯಾರ್ಥಿಗಳನ್ನು ನೋಡಲು ಈಗಿನ ಕಾಲೇಜುಗಳಲ್ಲಿ ಸಾಧ್ಯವಿಲ್ಲ. ಬದಲಾಗಿ ಕಾಲೇಜು ಡೇಗೆ ಆವರಣದೊಳಗಡೆ ಕಾರ್ ರೇಸ್ ಮಾಡಬೇಕು, ಸಂಜೆ ಒಂದು ಗಂಟೆ ಡಿಜೆಗೆ ಅವಕಾಶ ಕೊಡಬೇಕೆಂದು ಈ ರಾಜ್ಯದ ಸಭಾಪತಿಗೆ, ಶಿಕ್ಷಣ ಮಂತ್ರಿಗೆ ಮನವಿ ಕೊಡುವ ಮಕ್ಕಳನ್ನು ನಾವು ನೋಡುತ್ತಿದ್ದೇವೆ.
ಅದೊಂದು ಕಾಲೇಜಿನಲ್ಲಿ ಇರುವುದೇ 120 ಮಕ್ಕಳು. ಕಾಲೇಜು ಡೇಯ ವೇದಿಕೆ ಮುಂಭಾಗದಲ್ಲಿ ಅಟ್ಟಿಕಟ್ಟಿ ಕೂತ ಶಬ್ದ ಪೆಟ್ಟಿಗೆಗಳ ರಾಶಿ ನೋಡಿ ನಾನು ದಂಗಾಗಿ ಹೋದೆ. ಕಾಲೇಜು ಆವರಣ ಬಿಡಿ, ಆ ಇಡೀ ಊರನ್ನು ನಡುಗಿಸುವುದಕ್ಕೆ ಆ ಶಬ್ದಪೆಟ್ಟಿಗೆಗಳು ಮಧ್ಯಾಹ್ನಕ್ಕಾಗಿ ಕಾಯುತ್ತಿದ್ದವು. ಎಷ್ಟೋ ಇಂಥ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಪ್ರಾಚಾರ್ಯರು ಆ ದಿನ ಒಮ್ಮೆ ಸಂಜೆ ಆರು ಗಂಟೆ ಆದರೆ ಸಾಕಿತ್ತು ಎಂದು ಎದೆಯ ಮೇಲೆ ಕೈ ಇಟ್ಟುಕೊಂಡು ಬಿಪಿ ಶುಗರ್ಗೆ ಮಾತ್ರೆ ನುಂಗಿ ಕಾಯುತ್ತಿರುತ್ತಾರೆ. ನಿವೃತ್ತಿಯ ನಂತರ ಮಕ್ಕಳೊಂದಿಗೆ ಮಕ್ಕಳಾಗುವ ಉತ್ಸಾಹ ಒಂದು ಸುಂದರ ಉದ್ದೇಶ. ಈಗ ವಿಶ್ರಾಂತಾವಧಿ ಬೇರೆ,ಈ ಕಾರಣಕ್ಕಾಗಿ ಕೆಲವು ಇಂತಹ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವೆ. ಕಾಲೇಜುಗಳಲ್ಲಿಂದು ಯುವಕರಲ್ಲಿ ಕಂಡು ಬರುತ್ತಿರುವ ಇಂಥ ನಿರಾಶೆ, ಜೀವನಾಸಕ್ತಿಯ ಕೊರತೆ, ಮತ್ತು ಸಭೆಗಳಲ್ಲಿ ಉತ್ಸಾಹವಿಲ್ಲದಿರುವ ಸ್ಥಿತಿಗೆ ಹಲವು ಕಾರಣಗಳಿರಬಹುದು ಮತ್ತು ಇದು ಬರೀ ಒಂದು ಊರಿನ ಕಥೆಯಲ್ಲ, ಇಡೀ ರಾಜ್ಯ ದೇಶ ಪ್ರಪಂಚದ ಸಮಸ್ಯೆಯೂ ಇರಬಹುದು. ಬಹುತೇಕ ಎಲ್ಲಾ ಕಡೆ ಮನಸ್ಸು ಮುದಿದ ಮಕ್ಕಳನ್ನೇ ಮನುಷ್ಯರನ್ನೇ ನಾವು ನೋಡುತ್ತಿದ್ದೇನೆ ಮತ್ತು ಅದರಲ್ಲಿ ನಾವು ಕೂಡ ಸೇರಿಕೊಂಡಿದ್ದೇವೆ.
ಒಂದು ಲೆಕ್ಕ ಗಮನಿಸಿ, ಕಳೆದ ನಾಲ್ಕು ವರ್ಷಗಳಲ್ಲಿ ಕೊರೋನದ ಬಗ್ಗೆ ಬರೀ ಕನ್ನಡ ಚಾನಲ್ ಗಳಲ್ಲಿ ಒಂದು ಲಕ್ಷದ ಎಪ್ಪತ್ತು ಸಾವಿರ ಗಂಟೆ ಚರ್ಚೆಯಾಯಿತಂತೆ. ಮುದ್ರಣ ಮಾಧ್ಯಮದಲ್ಲಿ ಸುಮಾರು ಎಪ್ಪತ್ತು ಸಾವಿರಕ್ಕಿಂತ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಐದಾರು ಲಸಿಕೆಗಳನ್ನು ನಾವು ಜಗತ್ತಿಗೆ ಕೊಟ್ಟಿದ್ದೇವೆ. ವೈಜ್ಞಾನಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಆದರೆ ಯಾರೂ ಗಂಭೀರವಾಗಿ ಅಧ್ಯಯನ ಮಾಡದ ಒಂದು ವಿಸಂಗತಿ ಎಂದರೆ ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯರ ಮನಸ್ಥಿತಿ ತೀವ್ರವಾಗಿ ಬದಲಾದದ್ದು. ಈ ಕಾಯಿಲೆ ಜಗತ್ತಿನಾದ್ಯಂತ ಇರಬಹುದು ಮತ್ತು ಇದಕ್ಕೆ ನೇರವಾಗಿ ಕೊರೋನ ಒಂದೇ ಕಾರಣ ಅಲ್ಲ. ಆ ನೆಪಕ್ಕೆ ಸಮ್ಮುಖ ತರಗತಿಗಳೆಲ್ಲ ಸ್ಥಗಿತವಾಗಿ ಮೊಬೈಲ್ ಯಂತ್ರಧಾರಿಯಲ್ಲಿ ತರಗತಿಗಳು ಆರಂಭವಾಯಿತಲ್ಲ ಅಂದಿನಿಂದ ನಮ್ಮ ಮನಸ್ಥಿತಿ ಸಹಜ ಜೀವಚೇತನವನ್ನು ಕಳೆದುಕೊಂಡು ಯಂತ್ರ ಸ್ಥಿತಿಗೆ ತಲುಪಿದೆ. ತರಗತಿಯ ಒಳಗಡೆ ನೆಟ್ಟಗೆ ಒಂದು ಗಂಟೆ ಕೂತು ಪಾಠ ಕೇಳುವ ಮನಸ್ಥಿತಿ ಕಾಣೆಯಾಗಿದೆ. ಸಹನೆ ಪ್ರೀತಿ ಭಾವಿಸುವ ತನ ನಾಪತ್ತೆಯಾಗಿದೆ.
ಆನ್ಲೈನ್- ಯಂತ್ರ ಕೇಂದ್ರಿತ ಶಿಕ್ಷಣವು ಭಾಗಶಃ ಸ್ಥಗಿತಗೊಂಡು ಸಮ್ಮುಖ ಶಿಕ್ಷಣವೇ ಪ್ರಸ್ತುತ ಮುಂದುವರೆಯುತ್ತಿದ್ದರೂ ಆ ಕಾಲಕ್ಕೆ ಅಂಟಿದ ಮಕ್ಕಳ ಮೊಬೈಲ್ ಪರದೆ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ. ಆ ಎರಡೂವರೆ ವರ್ಷ ಬಹಳ ಕಡಿಮೆ ಅವಧಿಯಲ್ಲ. ಅಷ್ಟಕ್ಕೇ ಮಕ್ಕಳ ಮನಸ್ಸಿನ ಸಂವೇದನೆಯ ಮೇಲೆ ಪರಿಣಾಮ ಅದು ಬೀರಿ ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಹೇಳಲಾಗದಿದ್ದರೂ ಇದರ ಕೆಲವು ಸಂಭಾವ್ಯ ಪರಿಣಾಮಗಳಂತೂ ಇದ್ದೇ ಇದೆ. ಈ ಶಿಕ್ಷಣವು ಗುರು ಶಿಷ್ಯ, ಮನುಷ್ಯ ಮನುಷ್ಯ, ಗೆಳೆಯ ಗೆಳೆಯರ ನಡುವಿನ ಮುಖಾಮುಖಿ ಸಂವಹನವನ್ನು ಕಡಿಮೆ ಮಾಡಿರುವುದಷ್ಟೇ ಅಲ್ಲ ಇವುಗಳಿಂದ ವ್ಯಕ್ತಿ ಸಂಬಂಧಿತ ಸಹಾನುಭೂತಿ, ಸಹಕಾರ ಮತ್ತು ಭಾವನಾತ್ಮಕ ಬುದ್ಧಿಮತ್ತೆಯ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬಿದ್ದಿರಬಹುದು. ದೀರ್ಘಕಾಲ ಡಿಜಿಟಲ್ ಪರದೆಗೆ ಮೇಲೆ ಕಣ್ಣು ಕಿವಿ ಮನಸನ್ನು ಒಡ್ಡಿಕೊಳ್ಳುವಿಕೆಯಿಂದ ನಮ್ಮ ಬೇರೆ ಗಮನ- ಏಕಾಗ್ರತೆಯಲ್ಲಿ ಕೊರತೆ ಅಡರಿ ಅದು ನಮ್ಮನ್ನು ಭಾವಶೂನ್ಯತೆಗೆ ತಳ್ಳಬಹುದು. ಅತಿಯಾದ ಒತ್ತಡ ನಿಷ್ಕ್ರಿಯತೆ ದೈಹಿಕ ಸೋಲಿಗೂ ಎಡೆಕೊಡಬಹುದು. ನಿರಂತರ ಯಂತ್ರ ಧರಿಸುವಿಕೆಯ ಕಲಿಕೆ, ವಿಧಾನವು ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಮಿತಿಗೊಳಿಸಬಹುದು, ಇದು ಭಾವನಾತ್ಮಕ ಸಂವೇದನೆಯನ್ನು ಪರೋಕ್ಷವಾಗಿ ಕಡಿಮೆ ಮಾಡಬಹುದು.
ಇನ್ನೊಂದು ವಿಷಯ. ಇಂದಿನ ವಿದ್ಯಾರ್ಥಿಗಳು ತೀವ್ರ ಒತ್ತಡದ ಶಿಕ್ಷಣ ವ್ಯವಸ್ಥೆಯಲ್ಲಿ ಸಿಲುಕಿದ್ದಾರೆ. ಉದ್ಯೋಗ, ಸ್ಪರ್ಧೆ ಮತ್ತು ಸಾಮಾಜಿಕ ಜಾಲತಾಣಗಳಿಂದ ಪ್ರಾಪ್ತವಾಗುವ ತಾನು ಎಲ್ಲರಿಗಿಂತ ಮುಂದಿರಬೇಕೆಂಬ ಒತ್ತಡವು ಅವರ ಉತ್ಸಾಹವನ್ನು ದಿನೇ ದಿನೇ ಕುಂದಿಸಬಹುದು. ಅದರಿಂದ ಮನುಷ್ಯ ಆಧರಿತ ಸಮ್ಮುಖ ಸೃಜನಶೀಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ತುಡಿತ ಕಡಿಮೆಯಾಗಿರಬಹುದು. ಸಾಮಾಜಿಕ ಜಾಲತಾಣಗಳು, ಒಟಿಟಿ ವೇದಿಕೆಗಳು ಮತ್ತು ಆನ್ಲೈನ್ ಆಟಗಳು ಅವರ ಗಮನವನ್ನು ಸೂಜಿ ಕಲ್ಲಿನಂತೆ ಸೆಳೆಯುತ್ತವೆ. ಇದರಿಂದ ನೇರ ಸಂವಾದ, ಸಾಂಸ್ಕೃತಿಕ, ಸಾಹಿತ್ಯ ಸಂಗೀತ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸಬೇಕು ಆ ಮೂಲಕ ತಮ್ಮ ಮನಸ್ಸು ಸಂವೇದನೆ ಉಲ್ಲಸಿತ ಸೂಕ್ಷ್ಮವಾಗಬೇಕೆನ್ನುವ ಉದ್ದೇಶವೇ ಅವರಲ್ಲಿ ಇಲ್ಲದೇ ಹೋಗಿರಬಹುದು. ಪಠ್ಯಕ್ರಮವೂ ಸೇರಿ ಇಡೀ ಶೈಕ್ಷಣಿಕ ಪಾಠ ಪಟ್ಟಿ, ಅಧ್ಯಾಪನ ವಿನ್ಯಾಸ ಒಟ್ಟಾರೆ ಕಾಲೇಜು ಕಾರ್ಯಕ್ರಮಗಳೇ ಯುವಕರ ಆಸಕ್ತಿಗೆ ತಕ್ಕಂತೆ ರೂಪಿತವಾಗಿಲ್ಲದಿರಬಹುದು.
ಇದು ಕಲಿಕೆಯ ಕಾಲದ ಮಕ್ಕಳ ಕಥೆಯಾದರೆ ಹಳ್ಳಿಗಳ ಯುವಕರನ್ನ ಸ್ವಲ್ಪ ಗಮನಿಸಿ. ರಾತ್ರಿ ಹೊತ್ತು ಹಣ ಇಟ್ಟು ಆಡುವ ಮೊಬೈಲ್ ಆಧರಿತ ಜೂಜಿನಲ್ಲಿ ಭಾಗವಹಿಸಿ ಹಣವೂ ಕಳೆದುಕೊಂಡು ಈ ಕಡೆ ನಿದ್ದೆಯೂ ಇಲ್ಲದೆ ನಿಸ್ತೇಜಗೊಂಡ ಮುಖಗಳೆಲ್ಲ ಗೂಢವಾಗಿ ಪರಿತಪಿಸುವುದನ್ನು ನಾವು ಕಾಣುತ್ತೇವೆ. ಮೊಬೈಲ್ ಆಟಗಳು ಇವತ್ತು ಕೇವಲ ನಗರಕ್ಕೆ ಮಾತ್ರ ಅಂಟಿಕೊಂಡಿಲ್ಲ. ನೆಟ್ವರ್ಕ್ ಇರುವ ಗ್ರಾಮಗಳನ್ನು ಕೂಡ ಕಬಡಿಸುತ್ತಿವೆ. ಸಮಯ ಕೊಲ್ಲುವುದಷ್ಟೇ ಅಲ್ಲ ಕಿಸೆ ಖಾಲಿ ಮಾಡುವ, ಮನಸ್ಸನ್ನು ಸಾಯಿಸುವ ಈ ಪೀಡೆಗಳೆಲ್ಲ ಹಳ್ಳಿಯ ಜೀವಶಕ್ತಿಯನ್ನು ಕೂಡ ನಾಶಪಡಿಸುತ್ತಿದೆ. ಕೊರೊನಾ ಸಾಂಕ್ರಾಮಿಕದ ನಂತರ, ಯುವಕರಲ್ಲಿ ಒಂಟಿತನ, ಖಿನ್ನತೆ ಮತ್ತು ಸಾಮಾಜಿಕ ಸಂಪರ್ಕದ ಕೊರತೆ ಹೆಚ್ಚಾಗಿದೆ. ಇದು ಅವರ ಜೀವನಾಶಕ್ತಿಯ ಮೇಲೆ ನೇರ ಪರಿಣಾಮ ಬೀರಿರಬಹುದು. ಈಗ ಲೋಕದಲ್ಲೆಡೆ ಮೌಲ್ಯಗಳ ಬದಲಾವಣೆ ಸಾರ್ವತ್ರಿಕವಾಗಿದೆ. ಇಂದಿನ ಯುವಕರು ವೈಯಕ್ತಿಕ ಸಾಧನೆ ಮತ್ತು ಸ್ವಾತಂತ್ರ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಸಮುದಾಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಿಂತ, ತಮ್ಮ ವೈಯಕ್ತಿಕ ಗುರಿಗಳಿಗೆ ಆದ್ಯತೆ ನೀಡುವ ಗುರಿ ನಿಶ್ಚಲವಾಗಿದೆ.
ನಮ್ಮಲ್ಲಿಂದು ಎರಡು ನಮೂನೆಯ ಶಿಕ್ಷಣ ಸಂಸ್ಥೆಗಳಿವೆ. ಒಂದು ಆಕಾರ ಕೇಂದ್ರಿತ ಶಿಕ್ಷಣ ಸಂಸ್ಥೆಗಳು. ಕ್ಯಾಂಪಸ್ ಎಷ್ಟು ದೊಡ್ಡದಿದೆ? ಕ್ಲಾಸ್ ರೂಮು ಹೇಗಿದೆ? ಆಟದ ಮೈದಾನ, ಕಾಲೇಜಿನ ಸುತ್ತಲಿನ ಗೋಡೆ, ಮಕ್ಕಳು ಧರಿಸುವ ಸಮವಸ್ತ್ರ ಬಿಗಿಯಾದ ಶೂ ಟೈ, ಗೇಟಲ್ಲಿ ನಿಂತ ವಾಚ್ ಮ್ಯಾನ್ ಅವಧರಿಸಿದ ಯುನಿಫಾರ್ಮ್, ತರಗತಿ ಒಳಗಡೆ ಇರುವ ಸಿಸಿ ಕ್ಯಾಮೆರಾಗಳು, ಬಯೋಮೆಟ್ರಿಕ್ಸ್. ಇವೆಲ್ಲವುಗಳ ಆಧಾರದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಇಂತಹ ಸಂಸ್ಥೆಗಳಲ್ಲಿ ಸೇರಿಸಲು ಉತ್ಸುಕರಾಗುತ್ತಿದ್ದಾರೆ. ಇನ್ನೊಂದು ಆಕಾರವೇ ಇಲ್ಲದ ಭಾಗಶಃ ಸುಸಜ್ಜಿತ ಕಟ್ಟಡಗಳು, ಆಟದ ಮೈದಾನ ಮುಂತಾದವುಗಳಿಲ್ಲದ ಭಾಗಶ: ಬಡವರ ಸರಕಾರಿ ಕಾಲೇಜುಗಳು. ಇಂತಹ ಕಾಲೇಜಿಗೆ ಬರುವ ಮಕ್ಕಳಲ್ಲಿ ಬಡತನ,ಆರ್ಥಿಕ ಸಮಸ್ಯೆ, ಹಳ್ಳಿ ಮುಗ್ದತೆ, ಸಾಮರಸ್ಯ ಒಟ್ಟಾರೆ ಭಾರತದ ಬಹುತ್ವ ಸಮೃದ್ಧವಾಗಿರುತ್ತದೆ. ಬಡತನವಿದ್ದರೂ ದಾರಿದ್ರ್ಯವಿಲ್ಲದ ಈ ಮಕ್ಕಳಲ್ಲಿ ಸ್ವಲ್ಪ ಸಂವೇದನೆ ಸಂಬಂಧ ಇನ್ನೂ ಜೀವಂತವಾಗಿದೆ .
ಸಾಮಾನ್ಯವಾಗಿ ನಾನು ಒಂದು ಕಾಲೇಜನ್ನು ಮೌಲ್ಯಮಾಪನ ಮಾಡುವುದು ಅದರ ಸ್ಥಾವರರೂಪದ ಅಂಗಾಂಗಗಳಿಂದ ಅಲ್ಲವೇ ಅಲ್ಲ. ಬದಲಾಗಿ ಆ ಸಂಸ್ಥೆ ಎಷ್ಟು ಸಂವೇದನೆಗಳನ್ನು ಮತ್ತು ಸಂಬಂಧಗಳನ್ನು ಸೃಷ್ಟಿಸುತ್ತದೆ ಎಂಬುದರ ಆಧಾರದಲ್ಲಿ. ಬುದ್ಧಿ ಮನಸ್ಸು ಕೇಂದ್ರಿತ ಅಂತ ಕಾಲೇಜುಗಳಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಒಳಗೊಳ್ಳುವಿಕೆ ಬಲವಾಗಿದ್ದಾಗ ಆ ಸಂಸ್ಥೆ ವಿವಿಧತೆಯನ್ನು ಗೌರವಿಸಿ, ಎಲ್ಲರಿಗೂ ಸೇರಿದ ಭಾವನೆಯನ್ನು ಮೂಡಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಖಂಡಿತವಾಗಿ ಅದು ಗಾಢವಾದ ಸಂವೇದನೆಗಳನ್ನು ಸೃಷ್ಟಿಸುತ್ತದೆ.
ಬರಹ : ನರೇಂದ್ರ ರೈ ದೇರ್ಲ