ನಾವು ಸಣ್ಣವರು ಇರುವಾಗ ತುಂಬಾ ಬಡತನದ ಕಾಲ. ಅಂದರೆ ಆ ಕಾಲದಲ್ಲಿ ಎಲ್ಲರೂ ಇದ್ದದ್ದು ಹಾಗೆಯೇ. ಹೆಚ್ಚಿನವರು ಸಾಗುವಳಿ ಮಾಡಿದ ಅಕ್ಕಿ ಮಳೆಗಾಲದಲ್ಲಿ ಲೆಕ್ಕದ್ದು. ಅದನ್ನೇ ಮುಂದೆ ಮುಂದೆ ದೂಡಬೇಕು. ಮತ್ತೂ ಕಡಿಮೆಯಾದರೆ ಮತ್ತೆ ಸಾಲ ಮಾಡಬೇಕು. ರೇಷನ್ ಅಕ್ಕಿ ಇಷ್ಟೇ ಎಂದು ಕೊಡುತ್ತಿದ್ದರು. ಅದರಲ್ಲಿ ಕಲ್ಲು ಕಸ ತುಂಬಾ ಇರುತ್ತಿತ್ತು, ಅರ್ಧಕ್ಕರ್ಧ. ಅದಕ್ಕಾಗಿ ಮೊದಲೇ ಜಾಗರೂಕತೆ ವಹಿಸುತ್ತಿದ್ದರು. ರಾಗಿ ಹಾಕಿದ ಗಂಜಿ ಮಾಡುತ್ತಿದ್ದರು, ಹಲಸಿನ ಹಣ್ಣಿನ ಸಮಯದಲ್ಲಿ ಹಲಸಿನ ಪದಾರ್ಥ, ಹಲಸಿನ ಬೀಜ ಬೇಯಿಸುವುದು, ಗೆಣಸಿನ ಸಮಯದಲ್ಲಿ ಗೆಣಸು ಬೇಯಿಸುವುದು. ಗೆಣಸಿನ ಸಮಯದಲ್ಲಿ ಗೆಣಸು ಬೇಯಿಸಿ, ಸಣ್ಣ ಸಣ್ಣ ಹೋಳು ಮಾಡಿ, ಬಿಸಿಲಿನಲ್ಲಿ ಒಣಗಿಸಿ ಇಡುವುದು. ಅದನ್ನು ಮಳೆಗಾಲದಲ್ಲಿ ಹಲಸಿನ ಬೀಜದೊಟ್ಟಿಗೆ ಬೇಯಿಸುವುದು, ಹೀಗೆಲ್ಲಾ ಕಾಲ ಕಳೆಯುವುದು ರೂಢಿಯಾಗಿತ್ತು. ನಾವೇ ಎಂದಲ್ಲ, ಹೆಚ್ಚಿನವರು ಹೀಗೆಯೇ ಇದ್ದದ್ದು ಮತ್ತು ದೀಪದ ವಿಷಯ ಎಂದರೆ, ಚಿಮುಣಿ ಎಣ್ಣೆ ತಿಂಗಳಿಗೆ ಒಂದು ಬಾಟ್ಲಿ ರೇಷನ್ ನಲ್ಲಿ ಸಿಗುವುದು, ಬೇರೆ ಎಲ್ಲೂ ಸಿಗುವುದಿಲ್ಲ. ಅದಕ್ಕಾಗಿ ನನ್ನ ತಾಯಿ ಮತ್ತು ಅಜ್ಜಿ ಎಲ್ಲಾ ರೀತಿಯ ಎಣ್ಣೆ ತೆಗೆಯುತ್ತಿದ್ದರು. ಅಂದರೆ ಬಾರ್ ಲೊಟ್ಟೆ ಎಣ್ಣೆ, ನಾಪದ ಎಣ್ಣೆ, ನೈಕ್ಲ್ ಎಣ್ಣೆ, ತಂದೊಲ್ಗೆ ಎಣ್ಣೆ ತೆಗೆದು ದೀಪಕ್ಕೆ ಉಪಯೋಗಿಸಿಸುತ್ತಿದ್ದರು. ಮತ್ತೆ ದೋಸೆ ಮಾಡಲು ಬಡ್ಡ್ ಪುಳಿ ಎಣ್ಣೆ, ಹೆಬ್ಬಲಸಿನ ಬೀಜದ ಎಣ್ಣೆ. ಇಲ್ಲದಿದ್ದರೆ ಎಳ್ಳೆಣ್ಣೆ, ಹೀಗೆ ದಿನ ಸಾಗುತ್ತಿತ್ತು.

ಆಗ ಯಾವ ವಸ್ತು ತಿಂದರೂ, ಈಗಿನ ಹಾಗೆ ವಾಯು ಅಥವಾ ಬೇರೆ ಏನೂ ಆಗುತ್ತಿರಲಿಲ್ಲ. ಸಿಕ್ಕ ಸಿಕ್ಕ ಹಣ್ಣುಗಳನ್ನು ತಿನ್ನುತ್ತಿದ್ದೆವು. ಅಂದರೆ ಕಾಡಿನ ಹಣ್ಣುಗಳು, ನೇರಳೆ, ಕುಂಟಾಳೆ, ಕೇಪುಳ, ಚೂರಿ ಮುಳ್ಳಿನ ಹಣ್ಣು, ಕೊಟ್ಟೆ ಮುಳ್ಳಿನ ಹಣ್ಣು, ತಂಪೆ ಹಣ್ಣು, ಮುಳ್ಳ ಹಣ್ಣು, ತಾಳೆ ಹಣ್ಣು ಇತ್ಯಾದಿ ಇತ್ಯಾದಿಗಳೆಲ್ಲಾ. ಅದನ್ನೆಲ್ಲಾ ಈಗ ನೆನೆಯುವುದು ಕಷ್ಟ. ಹಣ್ಣುಗಳೆಂದು ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಿದ್ದೆವು. ಹಲಸು, ಮಾವು, ಹೆಬ್ಬಲಸು, ಅನನಾಸು, ಪಪ್ಪಾಯಿ, ಬಾಳೆಹಣ್ಣು, ನೇರಳೆ ಹಣ್ಣು, ಕುಂಟಲ ಹಣ್ಣು, ತೇಡೆ ಮುಳ್ಳಿನ ಹಣ್ಣು, ಚೂರಿ ಮುಳ್ಳಿನ ಹಣ್ಣು, ಬೆಲ್ಲ ಮುಳ್ಳಿನ ಹಣ್ಣು, ಕೊಟ್ಟೆ ಮುಳ್ಳಿನ ಹಣ್ಣು, ತಾರೋಳಿ ಹಣ್ಣು, ಕೇಪುಲ ಹಣ್ಣು ಹೀಗೆಲ್ಲಾ ಅನೇಕ ತರದ ಹಣ್ಣುಗಳಿದ್ದವು. ಹೆಬ್ಬಲಸಿನ ಬೀಜದ ಎಣ್ಣೆ ದೋಸೆ ಮಾಡುವುದಕ್ಕೆ ತುಂಬಾ ಒಳ್ಳೆಯದಾಗುತ್ತಿತ್ತು. ಅದರ ಬೀಜ ತಿನ್ನಲು ತುಂಬಾ ರುಚಿಕರವಿತ್ತು. ಅದರ ಸಿಪ್ಪೆ ತೆಗೆದು, ಮಣ್ಣಿನ ಪಾತ್ರೆಯಲ್ಲಿ ಬಾಯಿ ಮುಚ್ಚಿಸಿ, ಅಂದರೆ ಸೆಗಣಿ ಇಲ್ಲವೇ ಮಣ್ಣು ಮೆತ್ತಿ ಇಡುವುದು. ಮತ್ತೆ ತೆಗೆದು, ಉಪ್ಪು ಸೇರಿಸಿ, ಹುರಿದು ತಿನ್ನುವುದು. ಹಾಗೆಯೇ ಹಲಸಿನ ಬೀಜ ಕೂಡಾ ಬೇಯಿಸಿ, ಒಣಗಿಸಿ ಇಡುವುದು. ಮಳೆಗಾಲದ ಮಕ್ಕಳ, ದೊಡ್ಡವರ ತಿನಿಸುಗಳು. ಆದರೆ ಈಗ ಅವುಗಳ ಹೆಸರೇ ಇಲ್ಲ.
ಬರಹ : ಉಮಾವತಿ ಟಿ. ಶೆಟ್ಟಿ, ಉಮಾಸದನ, ಕೌಡೂರು.