ಜ್ಞಾನ ಎನ್ನುವುದು ಸರ್ವಶ್ರೇಷ್ಠ ಸಂಪತ್ತು. ಅ ಸಂಪತ್ತು ನಮ್ಮದಾಗಬೇಕಾದರೆ ಹೆಚ್ಚು ಹೆಚ್ಚು ಪುಸ್ತಕಗಳ ಓದು ಅಗತ್ಯ. ಎಲ್ಲ ಹವ್ಯಾಸಗಳಿಗಿಂತಲೂ ಉತ್ತಮವಾಗಿರುವಂತದ್ದು ಓದಿನ ಅಭ್ಯಾಸ. ಪುಸ್ತಕಗಳನ್ನು ನಮ್ಮ ಉತ್ತಮ ಸ್ನೇಹಿತನನ್ನಾಗಿಸಿಕೊಂಡರೆ ಬಾಳಿಗೆ ಬೆಳಕ ತೋರಿಸಬಲ್ಲದು; ಮನುಷ್ಯನನ್ನು ಯಶಸ್ಸಿನ ಉತ್ತುಂಗಕ್ಕೇರಿಸಬಲ್ಲದು; ನಮ್ಮಲ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸಬಲ್ಲದು. ಮನುಕುಲದ ಬೆಳವಣಿಗೆಯಲ್ಲಿಯೂ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಓದುವುದು ಮಾನವನ ಜೀವನದ ಚಿರಂತನ ದಾಹ.. ಒಮ್ಮೆ ಅಂಟಿದ ಓದಿನ ನಂಟು ಬಾಳ ಹೊತ್ತಗೆಯಲ್ಲಿ ಸ್ಥಿರವಾಗಿರುತ್ತದೆ. ಓದು ನಮ್ಮ ಜೀವನದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆ ಮನೆಬಾಗಿಲಿಗೆ ಬರುವುದು ತಡವಾದರೆ ಏನೋ ಚಡಪಡಿಕೆ. ನಮಗೆ ಬೇಕಾದ ಪುಸ್ತಕವೊಂದು ಸಿಗದೇ ಇದ್ದಾಗ ಏನೋ ಕಿರಿಕಿರಿ. ಲೈಬ್ರೆರಿಗಳಲ್ಲಿ, ಪುಸ್ತಕದ ಅಂಗಡಿಗಳಲ್ಲಿ ಸಿಗದೇ ಹೋದಾಗ ಅವರಿವರಿಗೆ ಸಂದೇಶ, ದೂರವಾಣಿ ಮಾಡಿಯಾದರೂ ಮಾಡಿ ಆ ಪುಸ್ತಕವನ್ನು ಕಷ್ಟ ಪಟ್ಟು ಸಂಗ್ರಹಿಸಿ ಓದಿದಾಗ ಆಗುವ ಆನಂದವನ್ನು ಬಣ್ಣಿಸಲಾಗದು.ಲ ಒಟ್ಟಿನಲ್ಲಿ ಈ ‘ಓದು’ ಎಂಬ ಎರಡಕ್ಷರದಲ್ಲಿ ಮಾಂತ್ರಿಕ ಶಕ್ತಿ ಇದೆ.

ನಾವು ಏನೋ ಚಿಂತೆಯಲ್ಲಿದ್ದಾಗ ನಿಮ್ಮ ಕೈಗೆಟಕುವ ಅಥವಾ ಕಣ್ಣೆದುರಿಗೆ ಕಾಣುವ ನಿಮ್ಮ ಮೆಚ್ಚಿನ ಪುಸ್ತಕವೊಂದನ್ನು ತೆರೆದು ಓದಿ. ತಕ್ಷಣ ನಿಮ್ಮ ಮನಸಿನಲ್ಲಿ ಮಿಂಚೊಂದು ಸುಳಿದಂತಾಗುತ್ತದೆ. ನಿಮಗರಿವಿಲ್ಲದಂತೆ ಉಲ್ಲಾಸ, ಉತ್ಸಾಹ ಮೂಡುತ್ತದೆ. ಅಂಥಹ ಶಕ್ತಿ ಓದಿನಲ್ಲಿದೆ. ಒಂದು ಒಳ್ಳೆಯ ಸಾಹಿತ್ಯದಲ್ಲಿ ಇದೆ. ಒಂದು ಉತ್ತಮ ಪುಸ್ತಕದಲ್ಲಿದೆ. ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಜಗತ್ತಿನ ಜ್ಞಾನಿ ಎಂದು ಗುರುತಿಸಿಕೊಂಡಿದ್ದಾರೆ. ಅದು ಅವರ ಅಗಾಧವಾದ ಓದಿನಿಂದ ಎಂದರೆ ತಪ್ಪಾಗಲಾರದು. ಮಹಾತ್ಮಾ ಗಾಂಧೀಜಿ ಅವರ ಮೇಲೆ ಚಿಂತಕ ರಸ್ಕಿನ್ ಪುಸ್ತಕಗಳ ಓದು ಪ್ರಭಾವ ಬೀರಿತ್ತು ಎಂದು ನಾವೆಲ್ಲ ಬಲ್ಲೆವು. ಅಂದರೆ ಓದು ನಮ್ಮನ್ನು ಬದಲಾಯಿಸಬಲ್ಲದು. ಪುಸ್ತಕಗಳೆಂದರೆ ಬರಿಯ ಪದಗಳ ರಾಶಿಯಲ್ಲ. ಅದೊಂದು ಜೀವಂತ ಮಾಧ್ಯಮ. ಸಾಮಾನ್ಯರನ್ನೂ ಅಸಾಮಾನ್ಯರನ್ನಾಗಿಸುವ ಶಕ್ತಿ ಓದಿಗಿದೆ ಎನ್ನುವುದಕ್ಕೆ ನಮ್ಮಲ್ಲಿ ಬೇಕಾದಷ್ಟು ಉದಾಹರಣೆಗಳಿವೆ. ಜೀವನವನ್ನು ಧನಾತ್ಮಕವಾಗಿ ಸ್ವೀಕರಿಸಲು, ಸೃಜನಶೀಲತೆಯನ್ನು ಹೆಚ್ಚಿಸಲು ಪುಸ್ತಕ ಸಹಕರಿಸುತ್ತದೆ. ‘ಓದು’, ‘ಬರೆ’ ಈ ಎರಡೂ ಪದಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹುಟ್ಟಿದ ಮಗುವಿಗೆ ಎರಡು ಎರಡೂವರೆ ವರ್ಷ ಆಗುವುದೇ ತಡ ಓದು, ಬರೆ ಎನ್ನುವ ಪದ ಕಿವಿಗೆ ಬೀಳಲಾರಂಬಿಸುತ್ತದೆ. ಪುಟ್ಟ ಮಗು ಸ್ಲೇಟು ಬಳಪ ಹಿಡಿದುಕೊಂಡು ಗೀಚಿದರೆ ಅದೇ ಅದರ ಬರಹ. ಏನೇನೋ ಬಡಬಡಿಸಿದರೆ ಅದೇ ಅದರ ಓದು. ಆ ಮಗು ಬೆಳೆಯುತ್ತಾ ಹೋದಂತೆ ಓದು ಬರೆಹ, ಪುಸ್ತಕದ ಮಹತ್ವ ಅರಿವಾಗುತ್ತಾ ಹೋಗುತ್ತದೆ.
ಕೆಲವರಿಗೆ ಓದುವುದು ಅಂದರೆ ತುಂಬಾ ಪ್ರೀತಿಯಾದರೆ ಇನ್ನು ಕೆಲವು ಮಕ್ಕಳಿಗೆ ಅದು ಶಿಕ್ಷೆ. ಕಾಟಾಚಾರಕ್ಕೆ ಪುಸ್ತಕ ಹಿಡಿದು ಕುಳಿತುಕೊಳ್ಳುವ ಮಕ್ಕಳೇ ಹೆಚ್ಚು. ಹಾಗಾಗದಂತೆ ಎಳವೆಯಲ್ಲಿಯೇ ಪುಸ್ತಕದ ಮೌಲ್ಯ, ಓದಿನ ಮಹತ್ವದ ಅರಿವನ್ನು ಮೂಡಿಸಬೇಕು. ‘ಇರುಳ ಬಾಳನ್ನು ತಿದ್ದುವುದರಿಂದ ಅಲ್ಲದೆ ಸಾಹಿತ್ಯ ಬರಿದೊಂದು ಮೇಲ್ಪಂಕ್ತಿಯನ್ನು ಹಾಕಿ ಬಾಳ ಮಟ್ಟವನ್ನು ವಿಸ್ತರಿಸಬಹುದು’ ಎಂದು ಮಾಸ್ತಿ ಅವರು ಒಂದು ಕಡೆ ಹೇಳಿದ್ದಾರೆ. ಒಬ್ಬ ಓದುಗನಿಗೆ ಇಂತಹ ಅನಿರ್ವಚನೀಯ ಆನಂದವನ್ನು ನೀಡಬಲ್ಲ, ಅವನ ಬುದ್ದಿಗೆ ಗ್ರಾಸವನ್ನು ನೀಡಬಲ್ಲ ಕೃತಿಯನ್ನು ರಚಿಸುವ ಜವಾಬ್ದಾರಿ ಲೇಖಕನ ಮೇಲಿದೆ. ಜೀವನವನ್ನು ತಿದ್ದಬಲ್ಲ ಸಾಹಿತ್ಯದ ರಚನೆ ಲೇಖಕನ ಜವಾಬ್ದಾರಿ ಎನ್ನುವುದನ್ನು ಅವರು ಸೂಚಿಸುತ್ತಾರೆ. ಯಾಕೆಂದರೆ ಅಂತಹ ಮೌಲಿಕವಾದ ಪುಸ್ತಕ ಮಾತ್ರ ಓದುಗನ ಮನಸನ್ನು ಅರಳಿಸಬಲ್ಲದು. ಆದ್ದರಿಂದ ಓದುಗನನ್ನು ಚಿಂತನ, ಮಂಥನಕ್ಕೆ ಹಚ್ಚುವ ಸಾಹಿತ್ಯದ ರಚನೆಯೂ ಅಷ್ಟೇ ಮುಖ್ಯ. ಲೇಖಕ ಘನೀಕರಿಸಿದ ಭಾವನೆ, ಅನುಭವ, ಮಾಹಿತಿಗಳು ಓದುಗ ತನ್ನೊಳಗೂ ಆವೀರ್ಭವಿಸಿಕೊಳ್ಳುತ್ತಾನೆ. ಎನ್ನುವುದೂ ಗಮನೀಯ. ಒಂದು ಒಳ್ಳೆಯ ಪುಸ್ತಕವನ್ನು ಓದಿದಾಗ ನಮ್ಮ ಜ್ಞಾನ ಕ್ಷಿತಿಜ ವಿಸ್ತಾರವಾಗುತ್ತದೆ. ಒಳ್ಳೆಯ ವಿಚಾರಗಳು ಮನಸ್ಸಿನಲ್ಲಿ ಮೂಡಲು ಪುಸ್ತಕ ಸಹಕಾರಿಯಾಗುತ್ತದೆ. ಅದು ಓದುಗನನ್ನು ವಿಚಾರವಂತನನ್ನಾಗಿ ಮಾಡಬಲ್ಲದು. ಪುಸ್ತಕವನ್ನು ಓದಿದಾಗ ನಮ್ಮಲ್ಲಿನ ಮೌಢ್ಯಗಳು ದೂರವಾಗುತ್ತದೆ. ಒಂದು ಒಳ್ಳೆಯ ಪುಸ್ತಕ ನಮ್ಮನ್ನು, ನಮ್ಮ ಆಲೋಚನಾಲಹರಿಯನ್ನು ಬದಲಾಯಿಸಿ ನಮಗೆ ಸನ್ಮಾರ್ಗವನ್ನು ತೋರಿಸಬಹುದು. ನಮ್ಮ ಬದುಕಿನ ಅಂಧಕಾರ ಕಳೆದು ನಿರಾಶೆಯ ಕೂಪದಿಂದ ಮೇಲೆತ್ತಬಲ್ಲ ಶಕ್ತಿ ಒಂದು ಪುಸ್ತಕಕ್ಕಿದೆ. ಓದಿದವರೆಲ್ಲ ಅಥವಾ ಪುಸ್ತಕ ಓದುವವರೆಲ್ಲ ಮೇಧಾವಿಗಳೇ ಆಗಬೇಕೆಂದಿಲ್ಲ. ನಾವು ಓದುವ ಪುಸ್ತಕ ಬ್ರಹದ್ಗ್ರಂಥಗಳೇ ಆಗಬೇಕೆಂದಿಲ್ಲವಲ್ಲ. ಮನಸಿಗೆ ಖುಷಿ ಕೊಡುವ ಸಣ್ಣ ಪುಸ್ತಕಗಳೇ ಸಾಕು. ಅಷ್ಟೇ ಏಕೆ ಕೆಲವೇ ಸಾಲುಗಳು ಸಾಕು ಮನತಟ್ಟಬಲ್ಲದು. ಮುದನೀಡಬಲ್ಲದು. ಉತ್ತಮ ಸಾಹಿತ್ಯ ಏಕಕಾಲಕ್ಕೆ ಚಿಂತನಶೀಲವೂ, ಸೃಜನಶೀಲವೂ ಆಗಿರುತ್ತದೆ. ಬದುಕು ವಿಸ್ತಾರವಾಗಲು ಓದು ಸಹಕಾರಿಯಾಗುತ್ತದೆ. ನಮ್ಮಲ್ಲಿ ಹಲವು ವಿಧದ ಓದುಗರಿದ್ದಾರೆ. ಕೆಲವರು ಪುಸ್ತಕದ ಹಾಳೆಗಳನ್ನು ಮಗುಚಿಹಾಕುತ್ತಾ ಹೋದರೆ, ಕೆಲವರಿಗೆ ಕೈಗೆ ಪುಸ್ತಕ ಸಿಕ್ಕ ತಕ್ಷಣ ಓದಿ ಮುಗಿಸುವ ಉತ್ಸಾಹ. ಅದೆಷ್ಟು ಅರ್ಥವಾಯಿತೋ ಬಿಟ್ಟಿತೋ ಅವರಿಗೇ ಗೊತ್ತು.
ಇನ್ನು ಕೆಲವರು ನಿಧಾನವಾಗಿ ಆದರೆ ಪ್ರತಿಯೊಂದು ಅಕ್ಷರವನ್ನು, ಪದವನ್ನು, ವಾಕ್ಯವನ್ನು ಅರ್ಥೈಸಿಕೊಂಡು ಆಸ್ವಾದಿಸಿ ಓದುವವರು. ಅದು ಕತೆಯಾಗಿರಬಹುದು, ಕವಿತೆಯಾಗಿರಬಹುದು, ಕಾದಂಬರಿಯಾಗಿರುಅಬಹುದು ಅಥವಾ ಅವರಿಗೆ ಇಷ್ಟವಾಗುವ ಯಾವುದೇ ಪ್ರಕಾರದ ಪುಸ್ತಕಗಳಾಗಿರಬಹುದು. ಆಯ್ಕೆ ಅವರವರಿಗೆ ಬಿಟ್ಟದ್ದು. ಓದು ಬುದ್ಧಿ-ಭಾವಗಳ ಸಮನ್ವಯವನ್ನು ಉಂಟುಮಾಡುತ್ತದೆ. ಹುಟ್ಟಿದ ಮನುಷ್ಯನನ್ನು ಉತ್ತಮ ನಾಗರಿಕನ್ನಾಗಿ ಮಾಡುವುದು ಅಥವಾ ಅವನಿಗೆ ಪರಿಪೂರ್ಣತೆಯನ್ನು ನೀಡುವುದು ವಿದ್ಯೆ. ಇಂದು ವಿದ್ಯಾಭ್ಯಾಸ ಎಂದರೆ ಕೇವಲ ಪದವಿ, ಸರ್ಟಿಫಿಕೇಟ್, ಉನ್ನತ ಹುದ್ದೆಗಳಿಗೆ ಮೀಸಲಾಗಿಡುತ್ತಿರುವುದು ದುರದೃಷ್ಟಕರ. ಒಂದು ಕಾಲದಲ್ಲಿ ಪುಸ್ತಕ ಸರ್ವಸ್ವವಾಗಿದ್ದು ಕೈಯಲ್ಲಿ ಪುಸ್ತಕ ಶೋಭೆ ನೀಡುತ್ತಿದ್ದರೆ ಇಂದಿನ ನವಪೀಳಿಗೆಯಲ್ಲಿ ಪುಸ್ತಕ ಓದುವ ಪರಿಪಾಠ ಕಡಿಮೆಯಾಗಿದೆ. ಕೈಯಲ್ಲಿ ಪುಸ್ತಕ ಪರೀಕ್ಷೆಯ ಸಮಯದಲ್ಲಷ್ಟೇ ಕಾಣುತ್ತಿದ್ದು ನಂತರದಲ್ಲಿ ಮೊಬೈಲ್ಗಳೇ ಅವರ ಅತ್ಯಂತ ಪ್ರೀತಿಯ ಸಂಗಾತಿಯಾಗಿರುವುದು ವಾಸ್ತವ ಸತ್ಯ. ಹಾಗಂತ ಮೊಬೈಲ್ ನಲ್ಲಿಯೂ ಉತ್ತಮ ಓದಿಗೆ ಅವಕಾಶ ಇದೆ ಎನ್ನುವುದನ್ನೂ ನಾವು ಅಲ್ಲಗಳೆಯುವಂತಿಲ್ಲ. ಒಳ್ಳೆಯದು ಯಾವುದು ಎನ್ನುವ ಆಯ್ಕೆಯೂ ಇಲ್ಲಿ ಮುಖ್ಯವಾಗುತ್ತದೆ. ಒಳ್ಳೆಯ ವಿಚಾರಗಳು ಓದುಗನನ್ನು ತಲುಪಬೇಕಾದರೆ ಆತ ಓದಬೇಕು. ಪುಸ್ತಕ ಕೊಂಡುಕೊಳ್ಳಬೇಕು. ಪುಸ್ತಕದ ಬಗ್ಗೆ ಪ್ರೀತಿಯಿರಬೇಕು. ಕೆಲಸದ ಒತ್ತಡ ಎಷ್ಟೇ ಇರಲಿ, ಸಮಯದ ಅಭಾವ ಎನ್ನುವ ಕುಂಟು ನೆಪವನ್ನು ಬದಿಗಿಟ್ಟು ಒಂದಿಷ್ಟು ಒಳ್ಳೆಯ ಪುಸ್ತಕ ಓದಿದಾಗ ‘ಏನೇನೋ ಓದಿನ ಪರಿ ಲೇಸು’ ಎನ್ನುವ ಪ್ರಾಚೀನ ಕವಿಯ ಮಾತಿನ ಸೊಬಗು ಅರ್ಥವಾದೀತು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದಷ್ಟೂ ನಮ್ಮ ಭೌದ್ಧಿಕ ವಿಕಾಸವಾಗುತ್ತದೆ. ಸಾಮಾಜಿಕ ಅರಿವನ್ನು ಮೂಡಿಸುವುದರ ಜೊತೆಯಲ್ಲಿ ಓದು ಮನಸ್ಸನ್ನು ಅರಳಿಸುತ್ತದೆ, ಪ್ರಪುಲ್ಲತೆಯನ್ನು ನೀಡುತ್ತದೆ, ಬುದ್ದಿ ಚುರುಕುಗೊಳಿಸುತ್ತದೆ ಎಂದು ಸರಳವಾಗಿ ಹೇಳಬಹುದು. ಇಂದಿನ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದು ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಮಾತ್ರವಲ್ಲ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಅದು ಶೈಕ್ಷಣಿಕ ಪ್ರಗತಿಯಲ್ಲಿಯೂ ಸಹಕಾರಿಯಾಗಬಲ್ಲದು. ಆದ್ದರಿಂದ ಅಂತರ್ಜಾಲ, ಸಾಮಾಜಿಕ ಜಾಲತಾಣದ ಕಪಿಮುಷ್ಠಿಯಿಂದ ಸ್ವಲ್ಪ ಹೊರಬಂದು, ಒಂದಷ್ಟು ಪುಸ್ತಕಗಳೊಂದಿಗೆ ಸ್ನೇಹ ಬೆಳೆಸಿನೋಡಿ. ಬದುಕು ಬದಲಾಗಬಲ್ಲದು. ವಿಶ್ವಪುಸ್ತಕ ದಿನಾಚರಣೆಯ ಈ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು.