ತುಳುನಾಡಿನಲ್ಲಿ 1975ರ ಮೊದಲು ನಾಗಬೆರ್ಮೆರ ಶಾಸ್ತಾರವನ ಮತ್ತು ಗುಳಿಗ ಬನ (ವನ)ಗಳು ಮೂಲ ಸ್ವರೂಪದಲ್ಲೇ ಇದ್ದವು. ಇಲ್ಲಿನ ಎಲ್ಲಾ ಜಾತಿ ಸಮುದಾಯಸ್ಥರ ಕುಟುಂಬದಲ್ಲಿ ಹಿಂದೆರಡು ಬನಗಳು ತಮ್ಮ ಬಯಲಿನ ಬದಿಯಲ್ಲಿ ನೆಲೆಯಾಗಿದ್ದವು. ಕೇವಲ ವರ್ಷದಲ್ಲಿ ಒಂದೆರಡು ಸರ್ತಿ ಹಾಲು ಸೀಯಾಳದ ಅಭಿಷೇಕ ತಂಬಿಲಾದಿಗಳು ಕುಟುಂಬಸ್ಥರಿಂದಲೇ ನಡೆಯುತ್ತಿದ್ದವು. 70 ರ ದಶಕದಿಂದ ಇಲ್ಲಿನ ಜನರು ಕೃಷಿಯೇತರ ವೃತ್ತಿ ಮಾಡಿ ಅನ್ಯದಾರಿಯಲ್ಲಿ ಹಣ ಸಂಪಾದಿಸಿದರು. ಆಗ ಪ್ರಾರಂಭದಲ್ಲಿ ಇಲ್ಲಿನ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳು ನಡೆದವು. ಅದರಂತೆ ಕುಟುಂಬದ ನಾಗದೈವ ಶಕ್ತಿಗಳ ಪುನರುತ್ಥಾನ ಚಿಂತನೆ ನಡೆಯಿತು. ಇಲ್ಲಿ ಮೂಲ ಪದ್ಧತಿ ಸಂಸ್ಕಾರವನ್ನು ತಿಳಿಯದೆ ವನಗಳನ್ನು ಕೆಡವಿ ನಾಗ ಬೆರ್ಮರಿಗೆ, ಗುಳಿಗ ದೈವಗಳಿಗೆ ಬನದ ಬದಲಾಗಿ ಕಟ್ಟೆ ಸಂಪ್ರದಾಯ ಪ್ರಾರಂಭದ ನಂತರದಲ್ಲಿ ಕೆಲವೇ ವರ್ಷಗಳಲ್ಲಿ ನಾಗದೈವಗಳು ಕೋಪಿಸಿಕೊಂಡಿದ್ದಾರೆಂದು ಹೆಚ್ಚಿನ ಕುಟುಂಬಸ್ಥರ ಕೂಗು. ಎಷ್ಟೋ ಪ್ರಶ್ನೆ ಚಿಂತನೆ ಪರಿಹಾರ ಮಾಡಿದರೂ ದಾರಿ ಕಾಣಲಿಲ್ಲ. ಇದಕ್ಕೆ ಕಾರಣ ತೌಳವ ನೆಲದ ಮೂಲ ಆರಾಧನಾ ಪದ್ದತಿಯನ್ನೇ ನಾಶ ಮಾಡಿದ್ದಾಗಿದೆ.

ಅದು ಏನೇ ಇರಲಿ, ಆ ಬಗ್ಗೆ ಮತ್ತೊಂದು ಪ್ರಶ್ನಾ ಚಿಂತನೆಗೆ ಬದಲಾಗಿ ಗುಣಾತ್ಮಕ ಚಿಂತನೆ ಅಗತ್ಯ. ಆಧುನೀಕರಣಗೊಳಿಸಿದ ಬನಗಳ ಕಟ್ಟೆಯ ಆವರಣದ ಹೊರಬದಿಯಲ್ಲಿ ಸುತ್ತಲೂ ಒಂದು ಮೀಟರು ಅಗಲದಲ್ಲಿ ಹೊಸ ಮಣ್ಣು ತುಂಬಿಸಿ ಹೆಚ್ಚು ಎಲೆ ಬಿಡುವ ಉತ್ತಮ ತರದ ಗಿಡಮರಗಳನ್ನು ನೆಟ್ಟು ಬೆಳೆಸಿದರೆ ಎರಡನೇ ವರ್ಷದಲ್ಲಿ ಆವರಣದ ಒಳಗೆ ನೆರಳು ಆವರಿಸಿ ತಂಪಾಗಲು ಆರಂಭವಾಗುತ್ತದೆ. ಹಾಕಿದ ಮಣ್ಣು ಕರಗಿ ಹೋಗದಂತೆ ಬಂಡೆ ಕಲ್ಲು ಹಾಕುವುದು. ಮರಗಳ ಬೇರು ಹೋಗಿ ಆವರಣ ಒಡೆದರೆ ಎಂಬ ಚಿಂತೆ ಸಹಜ. ಹಿಂದೆ ಆವರಣವೇ ಇರಲಿಲ್ಲವಲ್ಲ. ಆವರಣವನ್ನು ಬೇರು ಬಳ್ಳಿ ಆವರಿಸಲಿ. ಅದುವೇ ಚೆಂದ. ಆ ಪುಣ್ಯ ತಾಣ ತಂಪಾದರೆ ತಮ್ಮ ತನು ಮನವೂ ತಂಪಾಗಿ (ನೆಮ್ಮದಿ) ಶಾಂತಿ ನೆಲೆಯಾಗುವುದರಲ್ಲಿ ಸಂಶಯವಿಲ್ಲ. ಇನ್ನು ಕಾರಣಾಂತರದಿಂದ ಜೀರ್ಣೋದ್ದಾರ ಕಾರಣ ಮೂಲ ಸ್ಥಿತಿಯಲ್ಲಿದ್ದ ಬನಗಳನ್ನು ಯಾವ ಕಾರಣಕ್ಕೂ ಒಂದೇ ಒಂದು ಗಿಡವನ್ನು ಕಡಿಯದೆ ಕೇವಲ ಬನದ ಮಧ್ಯಭಾಗದಲ್ಲಿರುವ ಚೈತನ್ಯ ಕಲ್ಲುಗಳು ಭಗ್ನಾವಸ್ಥೆಯಲ್ಲಿದ್ದರೆ ಮಾತ್ರ ಬದಲಾವಣೆ ಮಾಡಿ ಪುನಃ ಸ್ಥಾಪಿಸಿದರೆ ಆಯಿತು. ಹೊಸ ಚೈತನ್ಯ ಕಲ್ಲುಗಳನ್ನು ಹಾಕುವಾಗ ಹಳೆಯ ಕಲ್ಲನ್ನು ಅದರ ಅಡಿಭಾಗದಲ್ಲೇ ಹಾಕುವುದು ಪೂರ್ವ ಸಂಪ್ರದಾಯ. ಕಾರಣ ಯಾವ ಕಾಲದಲ್ಲಿ ಕುಟುಂಬದ ಹಿರಿಜೀವಗಳು ಶ್ರದ್ಧಾ ಭಕ್ತಿಯಿಂದ ಹಾಕಿದ್ದರಿಂದ ಈಗಿನ ವೈದಿಕರಿಗೆ ಹೇಗೆ ತಿಳಿಯಲು ಸಾಧ್ಯ? ಆ ಕಾಲದಲ್ಲಿ ಮಂತ್ರ ತಂತ್ರಕ್ಕಿಂತ ವಿಶೇಷವಾಗಿ ಭಕ್ತಿಯ ಕಣ್ಣೀರೇ ಅಭಿಷೇಕವಾಗಿತ್ತು. ಅದಕ್ಕೆ ಶಕ್ತಿಗಳು ಇಂಬು ಕೊಡುತ್ತಿದ್ದವು. ನಮ್ಮ ಗ್ರಾಮ ದೇವಸ್ಥಾನ ಜೀರ್ಣೋದ್ಧಾರಗೊಳ್ಳುವ ಸಮಯದಲ್ಲಿ ದೊಡ್ಡದಾದ ಎರಡು ಬನಗಳಾದ ವನಶಾಸ್ತಾರ ಮತ್ತು ರಕ್ತೇಶ್ವರಿ ಗುಳಿಗನನ್ನು ಕಡಿದು ಕಟ್ಟೆ ಮಾಡಲು ಹೇಳಿದ್ದರು. ಅದನ್ನು ಯಾವ ಕಾರಣಕ್ಕೂ ಒಂದೇ ಒಂದು ಮರವನ್ನು ಕಡಿಯದೆ ಬನದ ಮಧ್ಯದಲ್ಲಿ ಕಟ್ಟೆ ಮಾಡುವ ಸ್ಥಳದಲ್ಲಿರುವ ಕೆಲವು ಗಿಡಗಳನ್ನು ಮಾತ್ರ ಕಡಿದುದರಿಂದ ಇಂದು ಆ ಎರಡು ವನಗಳು ಪ್ರಕೃತಿ ಸೌಂದರ್ಯದ ತಾಣಗಳಾಗಿವೆ. 15 ವರ್ಷ ಮೊದಲು ನನ್ನ ತರವಾಡು ಅಭಿವೃದ್ಧಿ ಸಮಯದಲ್ಲಿ ಎರಡು ಬನಗಳನ್ನು ಹಾಗೆಯೇ ಉಳಿಸಿದ್ದೇವೆ. ಅಲ್ಲಿಗೆ ದೈವಗಳ ಹಾಗೂ ನಾಗ ಪ್ರತಿಷ್ಠೆಗೆ ಬಂದ ಮಧೂರು ಶ್ರೀ ವಿಷ್ಣು ಉಳಿಯತ್ತಾರರಿಗೆ ಬನವನ್ನು ನೋಡಿ ಸಂತೋಷವಾಯಿತು. ಅವರು ಹೇಳಿದ ಒಂದು ಮಾತನ್ನು ಸ್ವರ್ಣ ಅಕ್ಷರದಲ್ಲಿ ಬರೆಯಬೇಕಾಗಿತ್ತು. ಬನದಲ್ಲಿ ದೈವದ ಕಲ್ಲಿಗೆ ಚೈತನ್ಯ ಕೊಡುವಾಗ ಕುಟುಂಬದ ಬಾಲವೃದ್ಧರೆಲ್ಲರ ಶ್ರದ್ಧಾ ಭಕ್ತಿ ಇಲ್ಲಿರಬೇಕು. ನಾನು ಕಲಶ ಪಾತ್ರೆಗಳಲ್ಲಿ ತುಂಬಿಸಿರುವುದು ಕೇವಲ ನೀರು ಅಂದು. ಅದು ಸಪ್ತಗಂಗೆಗಳ ಪುಣ್ಯ ಜಲವಾಗಬೇಕಾದರೆ ನಿಮ್ಮೆಲ್ಲರ ಪ್ರಾರ್ಥನೆಯಿಂದ ಮಾತ್ರ ಸಾಧ್ಯ. ಕಾರಣ ಈ ಬನದಲ್ಲಿ ಯಾವ ಕಾಲದಲ್ಲಿ ನಿಮ್ಮ ಹಿರಿಯರು ಹೇಗೆ ಕಲ್ಲಿನಲ್ಲಿ ದೈವ ಶಕ್ತಿಯನ್ನು ನೆಲೆಗೊಳಿಸಿದ್ದಾರೋ ಅದನ್ನು ಹೊಸ ಕಲ್ಲಿಗೆ ತುಂಬಲು ನಿಮ್ಮಿಂದ ಮಾತ್ರ ಸಾಧ್ಯ ಎಂದು ಪ್ರಾರ್ಥಿಸಿ ಅಭಿಷೇಕ ಮಾಡಿದರು. ಈಗಿರುವ ನಿಮ್ಮ ಪ್ರಾಯಸ್ಥರಿಗೆ ಧೈರ್ಯ ಇಲ್ಲದಿದ್ದರಿಂದ ನಾನು ಆ ಕೆಲಸವನ್ನು ಮಾಡುತ್ತೇನೆ ಎಂದರು. ಆನಂತರ ಆರತಿ ಬೆಳಗಿ ಹೊರ ಬಂದು ಹಿಂದೆ ನೀವು ಮೊದಲು ಮಾಡಿಕೊಂಡು ಬಂದ ಪ್ರಕಾರ ತಂಬಿಲ ಮಾಡಿ ಎಂದು ಆಜ್ಞಾಪಿಸಿದರು.
ಕೇರಳದ ಅತಿ ಪುರಾತನ ಪ್ರಸಿದ್ಧದ ಕ್ಷೇತ್ರಗಳಾದ ತ್ರಿಶೂರಿನ ಶ್ರೀ ವಡಕುನ್ನಾಥ, ಚೋಟಾನಿಕ್ಕರ ಭಗವತೀ ಕ್ಷೇತ್ರ ಮತ್ತು ಕೊಡಂಗಲ್ಲೂರು ಶ್ರೀ ಭಗವತಿ ಕ್ಷೇತ್ರಗಳನ್ನು ನೋಡುವಾಗ ಮರಗಳಿಗಾಗಿ ಕ್ಷೇತ್ರವು ಕ್ಷೇತ್ರಕ್ಕಾಗಿ ಮರಗಳೋ ಎಂಬ ಪ್ರಶ್ನೆ ಕಾಣಬಹುದು. ಆ ಗಿಡಮರಗಳ ಮಧ್ಯದಲ್ಲಿರುವ ವಿಶಾಲವೂ ಪರಮ ಪಾವನವೂ ಆಗಿರುವ ಕ್ಷೇತ್ರಗಳನ್ನು ನೋಡಲು ಹೋದ ಭಕ್ತರು ವನಭೋಜನ ಸವಿದಂತೆ ಪಾವನರಾಗುತ್ತಾರೆ. ಅದೇ ರೀತಿ 18 ಮಲೆಗಳ ಒಡೆಯನಾದ ಶ್ರೀ ಅಯ್ಯಪ್ಪ ವಾಸ ಮಾಡುವುದಾದರೂ ಎಲ್ಲಿ ವರ್ಷಂಪ್ರತಿ 48 ದಿನಗಳ ಕಠಿಣ ವ್ರತ ಮಾಡಿ ಕಾಡುಮೇಡು ದಾಟಿ ಬರಿಗಾಲಲ್ಲಿ ದೀನನಾಗಿ ಹೋಗಲು ಪ್ರಧಾನ ಕಾರಣ ಅರಣ್ಯ ಸವಿ ಶಾಂತಿಯ ನೆಮ್ಮದಿಯೇ ಕಾರಣ. ಈ ಭೂಮಿಯಲ್ಲಿ ಮಾನವ ಜನ್ಮ ತಾಳಿ ಎಷ್ಟು ಸಹಸ್ರ ವರ್ಷಗಳು ಕಳೆದಿರಬಹುದು ಎಂಬುದಕ್ಕೆ ಉತ್ತರವಿಲ್ಲದಿದ್ದರೂ ಮಾನವನ ಅತ್ಯಾಧುನಿಕ ಜೀವನ ಕ್ರಮ ಆರಂಭ ಕೇವಲ ಒಂದು ಶತಮಾನದಿಂದ ಎಂದರೂ ತಪ್ಪಾಗದು. ಅದೆಷ್ಟೋ ಸಹಸ್ರ ವರ್ಷಗಳಿಂದ ಭೂಮಿ ತಾಯಿ ಮುಂದಿನ ಪೀಳಿಗೆಗಾಗಿ ತನ್ನ ಒಡಲಲ್ಲಿ ಸಂಗ್ರಹಿಸಿಟ್ಟ ಪಾತಾಳ ಗಂಗೆಯನ್ನು ಭೂಮಿ ಮಾತೆಯ ಉದರ ಕೊರೆದು ಕುಡಿದು ಮುಗಿಸುತ್ತಿದ್ದೇವೆ. ಅದೇ ರೀತಿ ಪೆಟ್ರೋಲಿಯಂ ಮತ್ತು ಗ್ಯಾಸ್ ಇನ್ನು ಕೇವಲ ಒಂದೆರಡು ದಶಕಗಳಲ್ಲಿ ಖಾಲಿಯಾಗುವುದು ಖಾತರಿಯಾಗಿದೆ. ಚುಟುಕಾಗಿ ಹೇಳಬೇಕೆಂದರೆ ನಮ್ಮ ಮುಂದಿನ ಪೀಳಿಗೆ ಜನಿಸಿ ಬಾಳಬೇಕೆಂಬ ಚಿಂತೆಯೇ ಇಲ್ಲದ ಶಾಪಗ್ರಸ್ಥರು ನಾವಾಗಬೇಕಾದೀತು. ನಾಗರಿಕತೆಯ ಸೋಗಿನಲ್ಲಿ ಪ್ರಕೃತಿಯನ್ನೇ ನಾಶ ಮಾಡಿದುದರ ಫಲವಾಗಿ ಸುನಾಮಿ, ಜಲಪ್ರಳಯ ಲೋಕವನ್ನೇ ಮಲಗಿಸಿದ ಕೋವಿಡ್, ಮಹಾ ಕಾಲ್ಗಿಚ್ಚು, ಪಿಶಾಚಿ ಮನಸ್ಥಿತಿಯ ಭೀಕರ ಯುದ್ಧಗಳು, ಮಾನವ ಧರ್ಮವನ್ನೇ ಮರೆತ ಪಿಶಾಚಿ ಮನಸ್ಸು ಇದೆಲ್ಲ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಆಗಲು ಕಾರಣ ತಿಳಿಯಲು ದೇವ ಪ್ರಶ್ನೆ ಬೇಕೇ? ಮನ ಮುರಿದು ಮನೆ ಕಟ್ಟದಿರೋಣ.
ಬರಹ : ಕಡಾರು ವಿಶ್ವನಾಥ ರೈ