ನಾವು ದಿನನಿತ್ಯ ನಮ್ಮ ಪುರಾಣ ಗ್ರಂಥಗಳನ್ನು ಪಠಿಸುವುದರಿಂದ ಎಲ್ಲಾ ಒಳ್ಳೆಯ ಗುಣಗಳೂ ಮನುಷ್ಯನಿಗೆ ಸುಲಭವಾಗಿ ಬರುವುದಿಲ್ಲ. ಅದಕ್ಕೆ ಒಂದು ಸಂಸ್ಕಾರ ಬೇಕು. ಒಬ್ಬ ಬಹಳ ಸಿಟ್ಟಿನ ಮನುಷ್ಯ ಇದ್ದ. ಸಿಟ್ಟಿನಿಂದ ಏನೇನೋ ಮಾತಾಡಿ ಬಿಡುತ್ತಿದ್ದ. ಅವನನ್ನು ಅನೇಕರು ದೂಷಿಸುತ್ತಿದ್ದರು. ಒಮ್ಮೆ ಅವನು ಕಾಶಿಗೆ ಹೊರಟ. ಕಾಶಿಗೆ ಹೋದಾಗ ಏನಾದರೂ ಬಿಟ್ಟು ಬರಬೇಕಲ್ಲ. ಈ ಸಿಟ್ಟಿನ ಮನುಷ್ಯ ಜಿಪುಣ. ನಾನು ಅಲ್ಲಿ ಹೋಗಿ ಏನನ್ನಾದರೂ ಬಿಟ್ಟು ಬರೋದು. ನಂತರ ನನ್ನ ಜೀವನದಲ್ಲಿ ಅಂಥಾ ವಸ್ತು ಬಂದಾಗ ಕೈ ಕೈ ಹಿಸುಕಿಕೊಳ್ಳಬೇಕಾಗುತ್ತದೆ ಅಂದುಕೊಂಡು ನನಗೆ ಹೇಗೂ ತುಂಬಾ ಸಿಟ್ಟು ಬರುತ್ತದಲ್ಲ. ಅದನ್ನೇ ಬಿಟ್ಟು ಬರೋಣ ಅಂದುಕೊಂಡು ಕಾಶಿಗೆ ಹೋಗಿ ಹಿಂದಿರುಗಿದ. ಅವನನ್ನು ಕಾಶಿಗೆ ಹೋದ್ರಲ್ಲ ಏನು ಬಿಟ್ಟು ಬಂದ್ರಿ ಅಂತ ಕೇಳಿದ್ದಕ್ಕೆ ಸಿಟ್ಟು ಬಿಟ್ಟು ಬಂದೆ ಅಂದ. ಆನೇಕಾನೇಕ ಜನರು ಇದೇ ಪ್ರಶ್ನೆಯನ್ನು ಕೇಳಿದಾಗ ಅವನು ಸಿಟ್ಟಿನಿಂದ ರೀ ಎಷ್ಟು ಸಾರಿ ಹೇಳಬೇಕ್ರೀ ನಾನು ಸಿಟ್ಟು ಬಿಟ್ಟು ಬಂದಿದೀನಿ ಅಂತ ರೇಗಿದ.ನೋಡಿದಿರಾ ಮನಸ್ಸಿಗೆ ಅಂಟಿದ ಗುಣವನ್ನು ಹಾಗೆ ಸುಲಭವಾಗಿ ಬಿಡಲಾಗುವುದಿಲ್ಲ. ಅದಕ್ಕೆ ನಾವು ಸರಿಯಾದ ಸಂಸ್ಕಾರ ಬೆಳೆಸಿಕೊಳ್ಳಬೇಕು. ನಾವು ಒಬ್ಬರನ್ನು ಬೈದರೆ ಅವರು ಕೂಡಾ ನಮಗೆ ಹಿಂದಿರುಗಿ ಬೈಯುತ್ತಾರೆ. ಅದು ಗರಗಸದ ಹಾಗೆ. ನಾವು ಬೈದಾಗಲೂ ಕುಯ್ಯುತ್ತದೆ. ಅವರು ಬೈದಾಗಲೂ ಕುಯ್ಯುತ್ತದೆ. ದೇಹದ ಮೇಲಿನ ಗಾಯ ಬೇಗ ವಾಸಿಯಾಗುತ್ತದೆ. ಮನಸ್ಸಿನ ಗಾಯ ಬೇಗ ವಾಸಿಯಾಗುವುದಿಲ್ಲ ಎನ್ನುತ್ತಾರೆ. ಮನಸ್ಸಿಗೆ ಗಾಯ ಆಗೋದು ಮಾತಿನಿಂದಲೇ ಮಾತಾಡುವುದರಿಂದ ಇತತರಿಗೆ ನೋವುಂಟಾಗುತ್ತದೆ ಎಂದರೆ ಅಲ್ಲಿ ಮಾತಿಗಿಂತ ಮೌನವೇ ಲೇಸು. ಅದಕ್ಕೇ ನಮ್ಮ ಹಿರಿಯರು ಹೇಳಿದ್ದು ಮಾತು ಬೆಳ್ಳಿ ಮೌನ ಬಂಗಾರ ಅಂತ. ಇಂಗ್ಲಿಷಿನ ಒಂದು ಗಾದೆ ಮಾತು, ನಿನ್ನ ಮಾತು ಅಲ್ಲಿ ನೆಲೆಸಿರುವ ಮೌನಕ್ಕಿಂತ ಹೆಚ್ಚು ಪ್ರಭಾವಯುತವಾಗಿದ್ದರೆ ಮಾತ್ರ ಮಾತನಾಡು ಎನ್ನುತ್ತದೆ. ಇನ್ನೊಂದು ಮಾತು, ನಿನ್ನ ಮಾತು ನಿನ್ನ ಮೌನಕ್ಕಿಂತ ಹೆಚ್ಚು ಬೆಲೆಯುಳ್ಳದ್ದು ಎನಿಸಿದರೆ ಮಾತ್ರ ಮಾತನಾಡು ಎನ್ನುತ್ತದೆ. ಇದೇ ನಮ್ಮ ಮಾತಿನ ಮಹತ್ವ.
