ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ದಶಮ ಸಂಭ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ನಗರದ ಪುರಭವನದಲ್ಲಿ ಜರುಗಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಅವರು, “ನಾನು ಯಕ್ಷಧ್ರುವ ಪಟ್ಲ ಫೌಂಡೇಶನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತಿತರ ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಾಡಿದ್ದು ನಡೆಯಲಿರುವ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ ಕಾರ್ಯಕ್ರಮ ದೊಡ್ಡ ಯಶಸ್ಸು ಕಾಣಲಿದೆ. ಯಕ್ಷಗಾನ ಕ್ಷೇತ್ರ ಇಂದು ಪಟ್ಲ ಸತೀಶ್ ಶೆಟ್ಟಿ ಅವರಿಂದ ನಾಡಿನೆಲ್ಲೆಡೆ ಬೆಳಗುತ್ತಿದೆ. ಇದು ಬಹಳ ಸಂತಸದ ವಿಚಾರ. ಒಂದು ಸಂಸ್ಥೆ ನಡೆಸುವುದು ಸುಲಭದ ಮಾತಲ್ಲ. ಇಷ್ಟು ಜನರನ್ನು ಸೇರಿಸಿಕೊಂಡು ಜೊತೆಗೆ ಕೊಂಡೊಯ್ಯುವುದು ಬಹಳ ಕಷ್ಟಕರವಾದುದು. ಯಕ್ಷಗಾನದ ಮೇಲಿನ ಭಕ್ತಿ ಶ್ರದ್ಧೆಯಿಂದ ನಾವೆಲ್ಲರೂ ಜೊತೆಯಾಗಿದ್ದೇವೆ. ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುತ್ತಿರುವ ಇಂತಹ ಸಂಘಟನೆ ಇನ್ನಷ್ಟು ಬೆಳಗಲಿ“ ಎಂದು ಶುಭ ಹಾರೈಸಿದರು.

ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತಾಡಿ, ”ಕಟೀಲು ದುರ್ಗೆಯ ಸನ್ನಿಧಿಯಲ್ಲಿ ಪ್ರಾರಂಭಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಲಕ ನೊಂದ ಕಲಾವಿದರಿಗೆ ನೆರವಾದ ಸಾರ್ಥಕತೆ ನಮ್ಮಲ್ಲಿದೆ. ಇದು ನನ್ನ ಒಬ್ಬನಿಂದ ಸಾಧ್ಯವಾಗಿಲ್ಲ. ನಮ್ಮೆಲ್ಲರ ಶ್ರಮದಿಂದ ಸಾಧ್ಯವಾಗಿದೆ. 10ನೇ ವರ್ಷ ಪೂರೈಸುತ್ತಿರುವ ಟ್ರಸ್ಟ್ ವತಿಯಿಂದ ಈ ಬಾರಿ ಸಮಾಜಕ್ಕೆ ಬೇಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯಕ್ಷಗಾನ ಪ್ರೇಮಿಗಳು, ಟ್ರಸ್ಟ್ ಅಭಿಮಾನಿಗಳು, ಕಲಾವಿದರು ಪಾಲ್ಗೊಳ್ಳುವ ಒಗ್ಗೂಡುವ ಮೂಲಕ ಹೊಸ ಚರಿತ್ರೆಯನ್ನು ಬರೆಯಬೇಕಿದೆ“ ಎಂದರು.ವೇದಿಕೆಯಲ್ಲಿ ಮಹಾಪೋಷಕ ಕೆ.ಕೆ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಟ್ರಸ್ಟ್ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಟಿ.ಜಿ ರಾಜಾರಾಮ್ ಭಟ್, ಯೋಗೀಂದ್ರ ಭಟ್ ಉಳಿ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಜೊತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ರವಿಚಂದ್ರ ಶೆಟ್ಟಿ ಅಶೋಕನಗರ, ಉದಯಕುಮಾರ್ ಶೆಟ್ಟಿ, ಯಕ್ಷಗಾನ ವಿಧ್ವಾಂಸ ಪ್ರಭಾಕರ ಜೋಷಿ, ಭುಜಬಲಿ ಧರ್ಮಸ್ಥಳ, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಗೌರವಾಧ್ಯಕ್ಷೆ ಆರತಿ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಪ್ರಸ್ತಾವನೆಗೈದರು. ಪೂರ್ಣಿಮಾ ಶಾಸ್ತ್ರಿ ದೇವರನ್ನು ಸ್ತುತಿಸಿದರು. ಪುರುಷೋತ್ತಮ್ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿ, ಪ್ರದೀಪ್ ಆಳ್ವ ವಂದಿಸಿದರು. ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಗೆ ಪುರಸ್ಕೃತರಾದ ಕನ್ಯಾನ ಸದಾಶಿವ ಶೆಟ್ಟಿ ಅವರನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಗೌರವಿಸಲಾಯಿತು.