ಮಕ್ಕಳ ತಜ್ಞ ವೈದ್ಯರು ಕೆಲವು ವಿಚಾರದಲ್ಲಿ ಬಹಳ ಅದೃಷ್ಟವಂತರು. ಹೆಚ್ಚಿನ ಮಕ್ಕಳು ಅವರ ಪಾಡಿಗೆ ಅವರೇ ಚೇತರಿಸಿಕೊಳ್ಳುತ್ತಾರೆ. ಜೀವನ ಪರ್ಯಂತ ಬಳಲಬಹುದಾದ ಬಿಪಿ, ಶುಗರ್, ಮೂತ್ರಪಿಂಡದ ವೈಫಲ್ಯಗಳಿಂದ ಬಳಲುವ ಮಕ್ಕಳ ಸಂಖ್ಯೆ ತೀರಾ ಕಮ್ಮಿ. ಮಕ್ಕಳ ವಾರ್ಡುಗಳಿಗೆ ಮತ್ತೆ ಐಸಿಯುವಿಗೆ ಅನಾರೋಗ್ಯದಿಂದ ನರಳುತ್ತಾ ಬರುವ ಮಕ್ಕಳು ಒಂದೆರಡು ದಿನದಲ್ಲಿ ಹುಷಾರಾಗುತ್ತಾರೆ ಮತ್ತು ಆಟವಾಡುತ್ತಾ ನಲಿದಾಡಲು ಪ್ರಾರಂಭಿಸುತ್ತಾರೆ. ಆದರೆ ಜೀವನದ ಕಹಿಸತ್ಯಗಳನ್ನು ಅರಿಯಲು ನೀವು ಸಾವನ್ನು ಎದುರು ನೋಡುತ್ತಿರುವ ಹಿರಿಯರನ್ನು ಹತ್ತಿರದಿಂದ ನೋಡಬೇಕು!
ಕೆಲವು ದಿನಗಳ ಹಿಂದೆ ಪರಿಚಯವಿರುವ ಹಿರಿಯ ರೋಗಿಯೊಬ್ಬರನ್ನು ನೋಡಲು ಐಸಿಯು ಕಡೆಗೆ ಹೋಗಿದ್ದೆ. ಜೀವನದ ಕೊನೆಯ ದಿನಗಳನ್ನು ಎಣಿಸುತ್ತಾ ಕುಳಿತಿರುವ ಅನೇಕ ಹಿರಿಯರ ಕಣ್ಣುಗಳನ್ನು ನೋಡಿದೆ. ಹೆಚ್ಚಿನವರ ಕಣ್ಣಿನಲ್ಲಿ ತಮ್ಮ ಜೀವನ ಹೇಗೆ ಕಳೆದು ಹೋಯಿತು ಎಂಬ ಪ್ರಶ್ನಾರ್ಥಕ ಚಿಹ್ನೆಯಿತ್ತು. ಕೆಲವರ ಕಣ್ಣುಗಳಲ್ಲಿ ಮೃತ್ಯುವಿನ ಭಯ. ಉಳಿದವರ ಕಣ್ಣುಗಳಲ್ಲಿ ತಮ್ಮ ಜೀವನವನ್ನು ತಮ್ಮ ಇಷ್ಟದ ಅನುಸಾರ ಬದುಕಲಿಲ್ಲವೆಂಬ ನಿರಾಶೆಯಿತ್ತು. ಈ ಎಪ್ಪತ್ತು ಮೀರಿದ ಹಿರಿಯರು ಮೂವತ್ತು ನಲವತ್ತು ವರ್ಷಗಳ ಹಿಂದೆ ಹೇಗಿದ್ದಿರಬಹುದು ಎಂದು ನಾನು ಯೋಚಿಸತೊಡಗಿದೆ. ಸುಮಾರು ನಲವತ್ತು ವರ್ಷಗಳ ಹಿಂದೆ ಅವರ ಜೀವನವನ್ನು fast forward ಮಾಡಿ ಅವರಿಗೆ ಅವರ ಈಗಿರುವ ಚಿತ್ರವನ್ನು ತೋರಿಸಿದ್ದರೆ ಬಹುಶಃ ಅವರು ತಮ್ಮ ಜೀವನದ ಪ್ರತಿಯೊಂದು ದಿನವನ್ನು ಅರ್ಥ ಪೂರ್ಣವಾಗಿ ಕಳೆಯುವ ಪ್ರಯತ್ನ ಮಾಡುತ್ತಿದ್ದರು. They would have spend more time doing what they really love! They would have listened to their hearts.ವೃದ್ಧಾಪ್ಯದ ದಿನಗಳು ಅತೀ ಕಠಿಣ. ಅದಕ್ಕೆ ಕರುಣೆಯೆಂಬುದಿಲ್ಲ. ಕರೆಯದೇ ಬಂದ ಕಾಯಿಲೆಗಳು. ತಮ್ಮ ಅವಶ್ಯಕತೆ ಮುಗಿಯಿತ್ತೆಂದು ದೂರವಾಗುವ ಹತ್ತಿರದವರು. ವೃದ್ಧಾಪ್ಯ ಮನುಷ್ಯನನ್ನು ಎಲ್ಲಾ ರೀತಿಯಲ್ಲಿ ಕಂಗಾಲು ಮಾಡುತ್ತದೆ. ಮಕ್ಕಳ ವಾರ್ಡುಗಳನ್ನು ಬಿಟ್ಟು ಹಿರಿಯರ ಐಸಿಯು, ಡಯಾಲೈಸಿಸ್ ಕೇಂದ್ರಗಳತ್ತ ಹೆಜ್ಜೆ ಹಾಕಿದಾಗ ಜೀವನದ ಸತ್ಯ ಮುಖಕ್ಕೆ ರಾಚುತ್ತದೆ.
ಬಹುಶಃ ನಡು ವಯಸ್ಸು ತಲುಪಿರುವ ನನ್ನ ಪ್ರಾಯದವರಿಗೆ on an average 12000 ದಿನಗಳು ಉಳಿದಿರಬಹುದು. ಈಗಿರುವ ಉತ್ಸಾಹ, ಉಲ್ಲಾಸ ಮತ್ತು ಆರೋಗ್ಯ ಬಹುಶಃ ಮುಂದೆ ಇರಲಾರದು. ಈಗ ಮಾಡುವ ದೈಹಿಕ ಕಸರತ್ತು ಮುಂದೊಂದು ದಿನ ಮಾಡಲಾಗದು. ಈಗಿರುವ ಮಾನಸಿಕ ಸ್ಥೈರ್ಯ ಮತ್ತು ಸಾಮರ್ಥ್ಯ ಮುಂದೊಂದು ದಿನ ಇರುವುದಿಲ್ಲ. ಜೀವನದಲ್ಲಿ ಇನ್ನು ಬರುವ ಪ್ರತಿಯೊಂದು ದಿನ ಕೂಡ ಹುಟ್ಟಿದ ಹಬ್ಬದಷ್ಟೇ ಅಮೂಲ್ಯ. ಪ್ರತಿಯೊಂದು ದಿನವನ್ನು ಹೆಚ್ಚು ಅರ್ಥಪೂರ್ಣವಾಗಿ ಕಳೆಯಬೇಕು. ನಾಲ್ಕು ಜನ ನಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬ ಭಯದಲ್ಲಿ ಹೆಚ್ಚಿನವರು ತಮ್ಮ ಜೀವನದಲ್ಲಿ ನಾಲ್ಕು ದಿನಗಳನ್ನು ಕೂಡ ಅರ್ಥಪೂರ್ಣವಾಗಿ ಕಳೆಯುವ ಪ್ರಯತ್ನ ಮಾಡುವುದಿಲ್ಲ. ನಿಮ್ಮ ಚಿತೆಯ ಮುಂದೆ “ಅದೇ ನಾಲ್ಕು ಜನರು” ಒಮ್ಮೆ ಶವ ಸಂಸ್ಕಾರ ಮಾಡಿ ಮನೆ ತಲುಪಿದರೆ ಸಾಕು ಎಂಬ ದಾವಂತದಲ್ಲಿರುತ್ತಾರೆ. ನಮ್ಮ ಬಗ್ಗೆ ಏನೋ ಅಂದುಕೊಳ್ಳಬಹುದಾದ “ಆ ನಾಲ್ಕು ಜನರ” ಬಗ್ಗೆ ಚಿಂತಿಸಿ ಜೀವನದ ಅಮೂಲ್ಯ ಕ್ಷಣಗಳನ್ನು ವ್ಯರ್ಥ ಮಾಡುವವರು ಮುಟ್ಟಾಳರು!
ನಿಮ್ಮ ಚಿಂತನೆಗಳ ಜೊತೆಗೆ vibe ಆಗದವರಿಗೆ ಗುಡ್ ಬೈ ಹೇಳುವ ಧೈರ್ಯದ ಜೊತೆಗೆ ನಿಮ್ಮ ಸುತ್ತ ಪಾಸಿಟಿವ್ ವಲಯವನ್ನು ಕಟ್ಟಿಕೊಳ್ಳುವ ಜವಾಬ್ದಾರಿ ನಿಮ್ಮದೆ. ನಿಮ್ಮ ಮನಸಿಗೆ ಉಲ್ಲಾಸವನ್ನು ನೀಡುವ ಚಟುವಟಿಕೆಗಳಿಗೆ ಸಮಯ ಹೊಂದಿಸಿಕೊಳ್ಳುವ ಕೆಲಸವು ನಿಮ್ಮದೆ. ಜೀವನದಲ್ಲಿ ಸಮಯಕ್ಕಿಂತ ಅತ್ಯಮೂಲ್ಯವಾಗಿರುವುದು ಬೇರೆ ಯಾವುದೂ ಇಲ್ಲ. ಮೊನ್ನೆ ನೋಡಿದ ಹಿರಿಯರಂತೆ ನಾನೂ ಒಂದು ದಿನ ಐಸಿಯುವಿನಲ್ಲಿ ಇರುತ್ತೇನೆ. ಆದರೆ ಆ ಸಮಯದಲ್ಲಿ ನನ್ನ ಕಣ್ಣುಗಳಲ್ಲಿ ಜೀವನವನ್ನು ಬಿಂದಾಸಾಗಿ ಜೀವಿಸಿಲ್ಲವೆಂಬ ಯಾವುದೆ ನಿರಾಶೆಯ ಝಲಕ್ ಇರಬಾರದು..!!
ಕುಶವಂತ್ ಕೊಲಿಬೈಲ್