ಕ್ರಿಸ್ಮಸ್ ಎನ್ನುವ ಪದದ ಅರ್ಥವೇ ಹಂಚಿಕೊಳ್ಳುವಿಕೆ ಎಂದು. ಮನುಷ್ಯರ ನಡುವೆ ಪ್ರೀತಿಯನ್ನು ಹಂಚಿ ಎಲ್ಲರೂ ಸಮಾನರು ಎನ್ನುವ ಸಂದೇಶವನ್ನು ಸಾರಿ ದೈವತ್ವವನ್ನು ನೀಡಲು ಏಸುವು ಭೂಮಿಯಲ್ಲಿ ಜನ್ಮ ತಾಳಿದನು. ಪ್ರತಿಯೊಂದು ಮಗುವಿನ ಬೆಳವಣಿಗೆಗೆ ಪ್ರೀತಿ ಬಹು ಮುಖ್ಯವಾದುದು. ಮಕ್ಕಳ ವ್ಯಕ್ತಿತ್ವವು ಯಾವಾಗಲೂ ಶ್ವೇತ ವರ್ಣದಂತೆ ಶುಭ್ರವಾಗಿರಬೇಕು. ನಮ್ಮ ಪ್ರತಿಯೊಂದು ಹಬ್ಬಗಳು ಎಲ್ಲರನ್ನು ಪ್ರೀತಿಯಿಂದ ಒಗ್ಗೂಡಿಸಬೇಕು ಮತ್ತು ಎಲ್ಲರ ಮನಸ್ಸಿನಲ್ಲಿ ನಿರ್ಮಲತೆಯನ್ನು ಉಂಟುಮಾಡಬೇಕು. ಜಗತ್ತಿನಲ್ಲಿ ತಪ್ಪನ್ನು ತಿದ್ದಿ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟಾಗ ಒಳ್ಳೆಯ ಸಮಾಜ ಕಟ್ಟಲು ಸಾಧ್ಯವಾಗುತ್ತದೆ” ಎಂದು ಸೇಂಟ್ ಫಿಯೂಸ್ ಚರ್ಚ್ ಹಂಗಳೂರಿನ ರೆವೆರೆಂಡ್ ಫಾದರ್ ಅಲ್ಬರ್ಟ್ ಕ್ರಾಸ್ತಾ ಹೇಳಿದರು.
ಅವರು ಕೋಟೇಶ್ವರ ಯಡಾಡಿ- ಮತ್ಯಾಡಿ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮೆಂಬರ್ ಆಗಿರುವ ರೊಟೇರಿಯನ್ ಜುಡಿತ್ ಮೆಂಡೋನ್ಸಾ ಮಾತನಾಡುತ್ತ “ಈ ನಾಡಿನಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಬುದ್ಧ, ಬಸವ ಶರಣರ ಜನನವಾಯಿತು. ಅಂತೆಯೇ ಸಮಾಜದಲ್ಲಿನ ಮೂಢನಂಬಿಕೆಯನ್ನು ತೊಡೆದು ಹಾಕಿ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಏಸು ಕ್ರಿಸ್ತ ಜನಿಸಿದ. ಜಾತಿರಹಿತ, ಧರ್ಮರಹಿತ, ದ್ವೇಷ ರಹಿತ ಸರ್ವ ಜನಾಂಗದ ತೋಟದ ಪ್ರೀತಿಯಿಂದ ಬಾಳುವ ಸಮಾಜವನ್ನು ನಿರ್ಮಿಸಲು ಎಲ್ಲರೂ ಪ್ರಯತ್ನಿಸಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ ಮಾತನಾಡಿ “ನಾವು ನಮ್ಮ ಸಂಸ್ಥೆಯಲ್ಲಿ ರಾಷ್ಟ್ರೀಯ ಮತ್ತು ಇತರ ಹಬ್ಬಗಳನ್ನು ಆಚರಿಸುವುದರ ಮೂಲಕ ಪ್ರೀತಿ ಮತ್ತು ಸೌಹಾರ್ದಯುತ ಜೀವನ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಪ್ರತಿಯೊಂದು ಹಬ್ಬಗಳ ಮೌಲ್ಯಗಳನ್ನು ತಿಳಿಸುವುದು ಮತ್ತು ಪ್ರತಿಯೊಂದು ಮಗುವನ್ನು ವಿಶ್ವ ಮಾನವರನ್ನಾಗಿಸುವ ಗುರಿಯೊಂದಿಗೆ ಸಾಗುತ್ತಿದ್ದೇವೆ” ಎಂದರು.
ಕ್ಯಾಂಡಲ್ ಬೆಳಗಿ ಕ್ರಿಸ್ಮಸ್ ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆಯ ಮಕ್ಕಳಿಂದ ಪ್ರಸ್ತುತಗೊಂಡ ಕ್ರಿಸ್ಮಸ್ ಕುರಿತಾದ ಸಂಗೀತ ಮತ್ತು ನೃತ್ಯಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಸಂತ ಕ್ಲಾಸ್ ವೇಷಭೂಷಣ ಎಲ್ಲರ ಗಮನ ಸೆಳೆಯಿತು ಮತ್ತು ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಸುಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಉಪಸ್ಥಿತರಿದ್ದರು. ಕ್ರಿಸ್ಮಸ್ ಸಂದೇಶವನ್ನು ಶಿಕ್ಷಕಿ ರೋಸಮ್ಮಾ ವಾಚಿಸಿದರು. ಕ್ರಿಸ್ಮಸ್ ಆಚರಣೆಯ ಕುರಿತು ಆಯೋಜಿಸಿದ್ದ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿಯನ್ನು ಶಿಕ್ಷಕಿ ಸಹನಾ ವಾಚಿಸಿದರು.ವಿದ್ಯಾರ್ಥಿನಿ ಪ್ರಾವ್ಯ ಸ್ವಾಗತಿಸಿ, ವಿದ್ಯಾರ್ಥಿ ಅನಿಷ್ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿನಿ ನಸೀಫಾ ನಿರೂಪಿಸಿದರು.