ಐದು ದಶಕಗಳ ದಾಂಪತ್ಯ ಪೂರೈಸಿದ ಹಿರಿಯ ಮಹಿಳೆಯೋರ್ವರು ಇತ್ತೀಚೆಗೆ ವಿವಾಹ ಸಮಾರಂಭ ಒಂದರಲ್ಲಿ ಸಿಕ್ಕರು. ಹೇಗಿದ್ದೀರಿ ಎಂದೆ? ಹಾ ನಮ್ಮದೇನಪ್ಪಾ ಅಡ್ಜಸ್ಟ್ಮೆಂಟ್ ಬದುಕು. ಈ ವಯಸ್ಸಲ್ಲಿ ಅವರು ನನ್ನನ್ನು, ನಾನು ಅವರನ್ನು ಬಿಟ್ಟು ಎಲ್ಲಿ ಹೋಗಲು ಸಾಧ್ಯ? ಹಾಗೋ ಹೀಗೋ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬದುಕುತ್ತಿದ್ದೇವೆ. ಎಂದರು ತಮಾಷೆಯಾಗಿ ಜೀವನ ಎಲ್ಲಾ ಕ್ಷೇತ್ರಗಳೂ ಅಡ್ಜಸ್ಟ್ಮೆಂಟಲ್ಲೇ ನಡೆಯುತ್ತಿದೆ ಎಂದೆ.
ಹೌದು ದಾಂಪತ್ಯ ಎಂದರೆ ಖಂಡಿತ ಅಡ್ಜಸ್ಟ್ಮೆಂಟ್ ಬದುಕು, ಅದನ್ನ ಅಡ್ಜಸ್ಟ್ಮೆಂಟ್ ಎನ್ನಿ ಅಥವಾ ಬೇಕಾದರೆ ಕೆಮೆಸ್ಟ್ರಿ ಎನ್ನಿ ಗಂಡ ಹೆಂಡತಿಯ ನಡುವೆ ಅಡ್ಜಸ್ಟ್ಮೆಂಟ್ ಅಥವಾ ಕೆಮಿಸ್ಟ್ರಿ ಎಷ್ಟು ಚೆನ್ನಾಗಿರುತ್ತದೋ ಅಷ್ಟು ಪರಿಪಕ್ವ ಎನಿಸುತ್ತದೆ. ದಾಂಪತ್ಯ ಅವರ ಮಾತಿನಲ್ಲಿನ ಅಡ್ಜಸ್ಟ್ಮೆಂಟ್ ನ್ನ ಸವೇದನೆ ಎಂದು ಹೇಳಿ ಕೊಂಚ ನುಣುಪಾಗಿಸಬಹುದು. ಜೊತೆಗಾರನ /ಳ ಭಾವನೆ ಸಂವೇದನೆ ಭಾವನೆ-ಸಂವೇದನೆಗೆ ಬೆಲೆ ಕೊಟ್ಟು ಸಂಯಮದಿಂದ ನಡೆಯುವುದರಿಂದ ವೈವಾಹಿಕ ಬಾಂಧವ್ಯ ಎಲ್ಲ ಏರುಪೇರುಗಳನ್ನು ಸಹಿಸಿಕೊಂಡು ಗಟ್ಟುಮುಟ್ಟಾಗಿ ನಿಲ್ಲಬಲ್ಲದು.
ಮದುವೆ ಸ್ವರ್ಗದಲ್ಲಿ ನಡೆದಿರುತ್ತವೆ ಎನ್ನಲಾಗುತ್ತದೆ ಸ್ವರ್ಗ ಎನ್ನುವ ಪರಮ ಸುಖದ ಅನುಭೂತಿಯ ತಾಣ ವಾಸ್ತವವಾಗಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದಂತೂ ನಿಜ. ಸತಿ-ಪತಿಯರ ನಡುವೆ ಸಾಮಂಜಸ್ಯ ಇಲ್ಲದಿದ್ದರೆ ಇಹದ ಬದುಕು ನರಕ ಸದೃಶವಾಗುವುದಂತೂ ಖಂಡಿತ. ಇಬ್ಬರು ಜೋಡೆತ್ತುಗಳಂತೆ ಸಂಸಾರದ ನೊಗದ ಭಾರವನ್ನು ಸಮನಾಗಿ ಹೊತ್ತರೆ ಒಳಿತು. ಪರಸ್ವರ ಕಷ್ಟ-ಸುಖ, ನೋವು- ನಲಿವಿನಲ್ಲಿ ಭಾಗಿಯಾಗಿ ಸಾಂತ್ವನಭರಿತ ಮೃದು-ಮಧುರ ಮಾತುಗಳನ್ನಾಡುತ್ತಾ ಕೂಡಿ ಬದುಕಿದರೆ ಅದುವೇ ಆದರ್ಶ ದಾಂಪತ್ಯ. ರಾಜಂಗೂ ರಾಣಿಗೂ ಮುರಿದ್ರೋದ್ರೆ ಮನಸೂ, ಅರಮನೆಯಾಗೇನೈತೆ ಸೊಗಸೂ. ಅನ್ನುವ ಶುಭ ಮಂಗಳ ಸಿನಿಮಾದ ಹಾಡಿನ ಆಶಯದಂತೆ ಸತಿಪತಿಯರು ಒಬ್ಬರನೊಬ್ಬರ ಮನಸ್ಸನ್ನು ಅರಿತು ಬದುಕಿದರೆ ಬಾಳು ಸುಂದರ.
ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು, ಸಹಿಸಿಕೊಳ್ಳುವುದು, ವಿರಸವಿಲ್ಲದೆ ಸರಸದಿಂದ ಹಾಲು ಜೇನಿನಂತೆ ಬೆರೆತು ಬದುಕುವುದರಿಂದ ಸಂಸಾರ ಸುಖಮಯವಾಗಿರುವುದು ಅಂತಹ ಸತಿ ಪತಿಯರಿಗೆ ಬದುಕಿನಲ್ಲಿ ಲವಲೇಶವೂ ಕ್ಲೇಶವಿಲ್ಲದೇ ಇಹವೇ ಸ್ವರ್ಗವಾಗಿ ಕಾಣುವುದು. ಕೂಡಿ ಬಾಳಿದರೆ ಸ್ವರ್ಗ ಸುಖ. ಅಂತಹ ಆದರ್ಶ ಬದುಕಿಗಿಂತ ಮಿಗಿಲಾದ ಸ್ವರ್ಗ ಎನ್ನುವುದೇ ಇಲ್ಲ ಎನ್ನುವುದನ್ನು ಉದಾಹರಣೆಗೆ ಸರ್ವಜ್ಞನು ಬೆಚ್ಚನೆಯ ಮನೆ ಇರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದನು ಎಂದಿದ್ದು.
ದಾಂಪತ್ಯದಲ್ಲಿ ಬಿರುಕು ತರುವ ಕಾರಕಗಳೆಂದರೆ ಅಪನಂಬಿಕೆ, ಸಿಟ್ಟು-ಸೆಡವು, ಅಸಹನೆ, ಅತೃಪ್ತಿ, ಕಿರಿಕಿರಿ-ಪಿರಿಕಿರಿ ಇತ್ಯಾದಿ ಇತ್ಯಾದಿ. ಮನುಷ್ಯನನ್ನು ಕಾಡುವ ಅರಿಷಟ್ವೈರಿಗಳಂತೆ ಇವು ದಂಪತಿಗಳನ್ನು ಬೆಂಬತ್ತಿ ಕಾಡುವುದು. ಸಂಸಾರದ ಸರಿಗಮ ಲಯ ತಪ್ಪಿಸಲು ನಕ್ಷತ್ರಿನಂತೆ ಹೆಜ್ಜೆಹೆಜ್ಜೆಗೂ ಪೀಡಿಸುತ್ತವೆ. ತಾಳಿದವನು ಬಾಳಿಯಾನು ಎನ್ನುವ ಮಾತಿದೆ. ಸಹನೆಯಿಂದ ಇವುಗಳನ್ನು ಎದುರಿಸಬೇಕು. ಕ್ಷಮಯಾ ಧರಿತ್ರಿ, ಅರ್ಥಾತ್ ಭೂಮಿ ತಾಯಿಯ ಸಹನೆ ದಂಪತಿಗಳಲ್ಲಿರಬೇಕು ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡಬೇಕು.
ಹೆಂಡತಿ ಎಲ್ಲಿ ಬಯ್ಯುತ್ತಾಳೋ ಎಂದು ಅವರು ನನಗೆ ಹೆದರುತ್ತಾರೆ. ನಾನು ಗಂಡ ಎಲ್ಲಿ ಬಯ್ಯುತಾರೋ ಎಂದು ಅವರಿಗೆ ಹೆದರುತ್ತೇನೆ.ಎಂದು ಈ ಹಿರಿಯ ಜೀವ ಹೇಳಿದ ಮಾತು ಮದುವೆ ಊಟ ಪೂರೈಸಿ ಹೊರಗೆ ಬಂದ ನಂತರವೂ ಬಹು ಕಾಲ ಕಿವಿಯಲ್ಲಿ ಗುಂಯ್ ಗುಡುತಿತ್ತು. ವಾಹ್ ಆ ಹೆದರಿಕೆ ಎಷ್ಟು ಒಳ್ಳೆಯದಲ್ಲವೇ?
ಬೈಂದೂರು ಚಂದ್ರಶೇಖರ್