ಸುಮಾರು ಐನೂರು ವರ್ಷಗಳ ಇತಿಹಾಸವುಳ್ಳ ಸೌಡ ಅಗ್ರಹಾರ ಮಟ್ಕಲ್ ಮಹಾಗಣಪತಿ ದೇವಸ್ಥಾನ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವೆಂದು ಪ್ರಸಿದ್ಧಿಯಲ್ಲಿರುವ ಈ ಕ್ಷೇತ್ರ ಶಿಥಿಲಾವಸ್ಥೆ ತಲುಪಿದ್ದು ವೇದಜ್ಞ ವಿದ್ವಜ್ಜನರ ಸಲಹೆಯಂತೆ ಶೀಘ್ರಾತಿ ಶೀಘ್ರ ಜೀರ್ಣೋದ್ಧಾರ ಕಾರ್ಯ ಸಂಪನ್ನಗೊಳಿಸಬೇಕೆಂಬ ನಿರ್ಧಾರದೊಂದಿಗೆ ಕಾರ್ಯಪ್ರವರ್ತವಾಗಿತ್ತು. 2022 ರ ಸಮಯಕ್ಕೆ ಭಕ್ತರ ಸರ್ವ ವಿಧದ ಸಹಕಾರದೊಂದಿಗೆ ಪುನರಾಭಿವೃದ್ಧಿ ಕಾರ್ಯ ಸಂಪನ್ನಗೊಂಡಿದ್ದು, ಜೀರ್ಣೋದ್ಧಾರ ಸಮಿತಿ ಹಾಗೂ ಸಾರ್ವಜನಿಕರ ಸತತ ಶ್ರಮದ ಫಲಶ್ರುತಿಯಾಗಿ ಸುಸಜ್ಜಿತ ಶಿಲಾಮಯ ದೇಗುಲ ನಿರ್ಮಾಣ ಅಂತಿಮ ಹಂತ ಕಾಣುವುದರೊಂದಿಗೆ 2022 ಫೆಬ್ರವರಿಯಲ್ಲಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಪ್ರತಿಷ್ಠಾನ ಕಾರ್ಯ, ಬ್ರಹ್ಮಕಲಶಾದಿ ಧಾರ್ಮಿಕ ವಿಧಿಗಳು ಸುಸೂತ್ರವಾಗಿ ಸಂಪನ್ನಗೊಂಡಿತು.
ಇದೀಗ ದೇವಸ್ಥಾನದ ಆಕರ್ಷಣೆ ಹಾಗೂ ದೈವಿಕ ಸೊಬಗನ್ನು ವೃದ್ಧಿಗೊಳಿಸುವ ಸಲುವಾಗಿ ದೇವಳದ ಹೊರ ಪೌಳಿಯ ಬಾವಿ ಮೆಟ್ಟಿಲುಗಳ ಜೀರ್ಣೋದ್ಧಾರ ಪ್ರಕ್ರಿಯೆಗೆ ತೊಡಗಿದ್ದು ಭಕ್ತ ಬಾಂಧವರಿಂದ ಉದಾರ ಹೃದಯದ ಸಹಕಾರ ದಾನ ದೇಣಿಗೆಗಳನ್ನು ನಿರೀಕ್ಷಿಸಲಾಗಿದ್ದು ದಾನಿಗಳನ್ನು ಸಾರ್ವಜನಿಕ ಧಾರ್ಮಿಕ ಸಮಾರಂಭದಲ್ಲಿ ಸಂಮಾನಿಸಿ ಭಕ್ತ ಜನರ ಸಕಲ ವಿಘ್ನಗಳನ್ನು ನಿವಾರಿಸುವ ಕಾರಣಿಕದ ಗಣಪತಿಯನ್ನು ಭಕ್ತಿಪೂರ್ವಕವಾಗಿ ಪ್ರಾರ್ಥಿಸಲಾಗುವುದೆಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ (9448328995) ಪದಾಧಿಕಾರಿಗಳು, ಸಮಿತಿ ಸದಸ್ಯರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.