ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ಸೌಲಭ್ಯ ಕಲ್ಪಿಸುವುದರಿಂದ ಆರ್ಥಿಕ, ಸಾಮಾಜಿಕ ಬದಲಾವಣೆ ಜೊತೆಗೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಡಾ| ಎಚ್.ಎಸ್. ಶೆಟ್ಟಿ ಹೇಳಿದರು. ಅವರು ಮಂದಾರ್ತಿ ಶೇಡಿಕೋಡ್ಲಿನಲ್ಲಿ ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ತೆರೆದ ಸಭಾಂಗಣ ‘ದುರ್ಗಾ ಗಾರ್ಡನ್’ ಉದ್ಘಾಟಿಸಿ ಮಾತನಾಡಿದರು. ಯುವ ಜನತೆಗೆ ಹುಟ್ಟೂರಿನಲ್ಲೇ ಉದ್ಯೋಗ ಸಿಗಬೇಕಿದೆ. ಸ್ವ ಉದ್ಯೋಗದತ್ತ ಒಲವು ತೋರುವ ನಿಟ್ಟಿನಲ್ಲಿ ಶ್ರಮ, ಸಂಸ್ಕೃತಿಯನ್ನು ಕಲಿಸಬೇಕಾಗಿದೆ ಎಂದರು.
ಅತಿಥಿಯಾಗಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮೂಲ ಸೌಕರ್ಯಗಳಿಂದ ಊರಿನ ಹೆಸರು ಮೆರುಗು ಹೆಚ್ಚುವುದರ ಜತೆಗೆ ಅಭಿವೃದ್ಧಿಯಾಗುತ್ತದೆ ಹಾಗೂ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ, ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ ಅಧ್ಯಕ್ಷ ಆನಂದ ಕುಂದರ್, ಮಂಗಳೂರಿನ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಬ್ರಹ್ಮಾವರ ಘಟಕ ಅಧ್ಯಕ್ಷ ಕೆ. ಬಾಲಕೃಷ್ಣ ಹೆಗ್ಡೆ, ತೋಟಗಾರಿಕೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್. ಜಯಶೀಲ ಶೆಟ್ಟಿ, ಹೆಗ್ಗುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ, ಹಿರಿಯರಾದ ಎಚ್. ಕೃಷ್ಣ ಶೆಟ್ಟಿ ಶೇಡಿಕೊಡ್ಲು ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಎಚ್. ವಿಠಲ ಶೆಟ್ಟಿ ಶೇಡಿಕೊಡ್ಲು ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ ಎಂ. ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ ಪ್ರಸ್ತಾಪಿಸಿದರು. ಶಶಿಧರ ಶೆಟ್ಟಿ ನಂಚಾರು ಕಾರ್ಯಕ್ರಮ ನಿರೂಪಿಸಿ, ಸುದರ್ಶನ ಶೆಟ್ಟಿ ಮಂದಾರ್ತಿ ವಂದಿಸಿದರು .