ಮಕ್ಕಳಿಗೆ ಯೋಗ್ಯ ಕಾಲದಲ್ಲಿ ಸೂಕ್ತ ಶಿಕ್ಷಣ ದೊರೆಯಬೇಕಾದರೆ ಅವರಿಗೆ ಅನುಕೂಲವಾಗುವ ಸಮೀಪ ಸೌಲಭ್ಯ ಇರುವ ಶಿಕ್ಷಣ ಸಂಸ್ಥೆಗಳ ಅಗತ್ಯವಿರುತ್ತದೆ. ಇಂಥಹ ಕೊರತೆಗಳನ್ನು ಮನಗಂಡ ಜಯಸೂರ್ಯ ರೈ ಅವರು ಇಂದಿನ ದಿನಮಾನಕ್ಕೆ ಅಗತ್ಯವಾದ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಕೊಡಿಸುವಲ್ಲಿ ಬಹು ಪ್ರಶಂಸನೀಯ ಕಾರ್ಯವೆಸಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಾದೋಡಿ ಕರಿಯಪ್ಪ ರೈ ಮತ್ತು ಲಕ್ಷ್ಮಿ ಕೆ. ರೈ ದಂಪತಿಗೆ ಪುತ್ರರಾಗಿ ಜನಿಸಿದ ಜಯಸೂರ್ಯ ರೈ ಅವರು ಕಾಣಿಯೂರು ಬೆಳಂದೂರು ಹಾಗೂ ಬಾಳಿಲ ವಿದ್ಯಾಬೋಧಿನಿ ಶಿಕ್ಷಣ ಸಂಸ್ಥೆಯ ಮೂಲಕ ಪೂರೈಸಿ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಮುಗಿಸಿದರು. ಕೃಷಿ ಹಾಗೂ ಬೇಸಾಯ ಕಾರ್ಯದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಪರಿಸರದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ವಿದ್ಯುತ್ ಪೂರೈಕೆ ವ್ಯವಸ್ಥೆ, ರೈಲ್ವೆ ನಿಲ್ದಾಣ, ಬಸ್ಸು ತಂಗುದಾಣ, ರಸ್ತೆ ನಿರ್ಮಾಣ ಇತ್ಯಾದಿ ಸಾಮಾಜಿಕ ಕಾರ್ಯಗಳಲ್ಲಿ ಒಲವು ತೋರಿಸಿ ಓರ್ವ ಪ್ರಾಮಾಣಿಕ ಸಮಾಜಮುಖಿ ಕಾರ್ಯಕರ್ತ ಎಂಬಂತೆ ಗುರುತಿಸಿಕೊಂಡಿದ್ದಾರೆ.
ಕಾಣಿಯೂರಿನ ಹತ್ತನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದ ಶ್ರೀಯುತರು ಸಾಹಿತ್ಯ ಸಂಸ್ಕೃತಿ ಕುರಿತಂತೆ ಒಲವನ್ನು ಹೊಂದಿದವರು. ನಂತರದ ದಿನಗಳಲ್ಲಿ ಶಿಕ್ಷಣ ಸಂಸ್ಥೆಯೊಂದರ ಅವಶ್ಯಕತೆಯನ್ನು ಮನಗಂಡ ಅವರು ಪ್ರಗತಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ವರ್ಷದಿಂದ ವರ್ಷಕ್ಕೆ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಿ ಜನಪ್ರಿಯತೆ ಪಡೆಯುವಂತೆ ಅಹರ್ನಿಶಿ ಶ್ರಮಿಸಿದ್ದಾರೆ. 2010 ರಲ್ಲಿ ರಾಜೀವ್ ಗಾಂಧಿ ಎಕ್ಸೆಲೆನ್ಸ್ ಅವಾರ್ಡ್ ಭಾಜನರಾದ ರೈ ಅವರು ಸುತ್ತಮುತ್ತಲಿನ ದೇವಾಲಯಗಳ ಜೀರ್ಣೋದ್ಧಾರ ಬ್ರಹ್ಮಕಲಶಾದಿ ಕಾರ್ಯಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿ ತನ್ನ ಧಾರ್ಮಿಕ ಮನೋಭಾವವನ್ನೂ ಮೆರೆದಿದ್ದಾರೆ.
ಶ್ರೀಯುತರು ಕಟ್ಟಿ ಬೆಳೆಸಿದ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ತೇರ್ಗಡೆ ಪಡೆದ ಫಲಿತಾಂಶವನ್ನು ಕಂಡ ಧನ್ಯತೆ ಶ್ರೀಯುತರಿಗಿದೆ. ತನ್ನ ಮಹತ್ತರ ಸಾಧನೆಯನ್ನು ಗುರುತಿಸಿ ಎವಿಜಿ ಶಿಕ್ಷಣ ಸಂಸ್ಥೆಗಳ ಸಾಧನಾಶ್ರೀ ಪ್ರಶಸ್ತಿ ನೀಡಿ ಜಯಸೂರ್ಯ ರೈ ಅವರನ್ನು ಗೌರವಿಸಿದ್ದಾರೆ. ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಮನೀಯ ಸಾಧಕರಾದ ರೈ ಅವರನ್ನು ಅನೇಕ ಸಂಘ ಸಂಸ್ಥೆಗಳು ಸಾರ್ವಜನಿಕ ಹಾಗೂ ಸೇವಾ ಸಂಸ್ಥೆಗಳು ಆತ್ಮೀಯವಾಗಿ ಸಂಮಾನಿಸಿವೆ. ಪತ್ನಿ ಶ್ರೀಮತಿ ವೃಂದಾ ಜೆ. ರೈ ಪುತ್ರರಾದ ದೇವಿಕಿರಣ್ ರೈ, ಹರಿಚರಣ್ ರೈ, ಪುತ್ರಿ ಪ್ರೇರಣಾ ರೈ, ಸೊಸೆ ಅಕ್ಷತಾ, ಮೊಮ್ಮಗಳು ಆರ್ಯಾಯಿ ಜೊತೆ ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಹೊಂದಿದ್ದು ಸದಾ ಸಾಮಾಜಿಕ ಚಿಂತನೆಯಲ್ಲಿದ್ದು ಪ್ರಾಮಾಣಿಕ ಸೇವಾ ತತ್ಪರರಾಗಿರುವ ಜಯಸೂರ್ಯ ರೈ ಹಾಗೂ ಕುಟುಂಬದ ಸರ್ವ ಸದಸ್ಯರಿಗೆ ಭಗವತಿ ದುರ್ಗೆ ಆಯುರಾರೋಗ್ಯ ಸಮೃದ್ಧಿ ನೆಮ್ಮದಿಯನ್ನು ಕರುಣಿಸಲೆಂದು ನಮ್ಮೆಲ್ಲರ ಪ್ರಾರ್ಥನೆ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು