ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರ್ನಲ್ಲಿ “ವಾಗೀಶ್ವರಿ ಪೂಜೆ ಮತ್ತು ಲೇಖನ ಸಂಕಲ್ಪ” ನಡೆಯಿತು. ಈ ಸಂದರ್ಭದಲ್ಲಿ ಸಹಸ್ರಾರು ಜನರಿಂದ ಸಂಕಲ್ಪ ಪೂಜೆ ನಡೆಯಿತು. ರಾಜಧಾನಿಯಲ್ಲಿ ನೆಲೆಸಿರುವ ದ.ಕ. ಮತ್ತು ಉಡುಪಿ ಭಾಗದ ಹಲವು ಭಕ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ ಹಾಗೂ ಮಹಾಮಂಗಳಾರತಿ ಜರಗಿತು. ಈ ಸಂದರ್ಭ ಎಂಆರ್ಜಿ ಗ್ರೂಪ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮಾತನಾಡಿ, ಮಾರಿಯಮ್ಮನ ಜೀರ್ಣೋದ್ಧಾರ ಆರಂಭವಾಗಿ 5 ವರ್ಷವಾಯಿತು. 2025ರ ಫೆಬ್ರವರಿಯಲ್ಲಿ ಕಾಪುವಿನಲ್ಲಿ 9 ದಿನಗಳ ಅಭೂತಪೂರ್ವ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು. ಯುನಿರ್ವಸಲ್ ಸ್ಕೂಲ್ ಆಫ್ ಆಡ್ಮಿನಿಸ್ಟ್ರೇಶನ್ನ ಅಧ್ಯಕ್ಷ ಉಪೇಂದ್ರ ಶೆಟ್ಟಿ ಮಾತನಾಡಿ, ಲೇಖನ ಸಂಕಲ್ಪಕ್ಕೆ ಬೆಂಗಳೂರಿನಿಂದ 9999 ಹಸ್ತ ಪ್ರತಿಗಳ ಆವಶ್ಯಕತೆಯಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ನಗರದ ವಿವಿಧೆಡೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು ಎಂದು ಮನವಿ ಮಾಡಿದರು.
ಜೀರ್ಣೋದ್ಧಾರ ಕಾರ್ಯಕ್ರಮಗಳನ್ನು ನಾವು ಮಾಡಿದ್ದೇವೆ ಎನ್ನುವುದಲ್ಲ, ಬದಲಾಗಿ ಕಾಪುವಿನ ತಾಯಿ ನಮ್ಮ ಕೈಯಿಂದ ಮಾಡಿಸಿದ್ದು. ಈ ಕಾರ್ಯವು ಸಂಪೂರ್ಣ ದೇವಿ ಸಂಕಲ್ಪ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು. ನವದುರ್ಗಾ ಲೇಖನ ಯಜ್ಞ ಸಮಿತಿಯ ಕೆ.ರಘುಪತಿ ಭಟ್, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷ ಜಪ್ತಿ ಸಂತೋಷ್ ಶೆಟ್ಟಿ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ, ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ, ಉಪಸ್ಥಿತರಿದ್ದರು. ಕಾಪುವಿನ ದೇವಸ್ಥಾನವನ್ನು 80 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಇದರಲ್ಲಿ 22 ಕೆ.ಜಿ.ಯ ಭವ್ಯ ಸುವರ್ಣ ಗದ್ದುಗೆ ಇರಲಿದೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಈಗಾಗಲೇ 33 ಕೋಟಿ ರೂ.ಅನುದಾನ ಹರಿದು ಬಂದಿದೆ. ಹಳೆಯ ಬೆಳ್ಳಿ ಮತ್ತು ಚಿನ್ನವನ್ನು ಕೂಡಾ ತೆಗೆದುಕೊಳ್ಳಲಾಗುತ್ತಿದೆ.