‘ಕೊಳ್ನಾಡು ಗ್ರಾಮದ ಕುಳಾಲು ಕುಟುಂಬದಲ್ಲಿ ಜನಿಸಿದ ವಿದ್ವಾನ್ ಕಾಂತ ರೈ ಮೂಡಬಿದಿರೆಯಲ್ಲಿ ವೃತ್ತಿ ಜೀವನವನ್ನು ನಡೆಸುತ್ತಾ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಹಳೆಯ ತಲೆಮಾರಿನ ಅರ್ಥಧಾರಿಯಾಗಿ, ಬಹುಶ್ರುತ ವಿದ್ವಾಂಸರಾಗಿ ಯಕ್ಷಗಾನ ರಂಗದಲ್ಲಿ ಮೆರೆದ ಅವರು ಪ್ರಗತಿಪರ ಕೃಷಿಕರಾಗಿ, ಕುಟುಂಬದ ಯಜಮಾನರಾಗಿ ಹುಟ್ಟಿದ ಮನೆಗೆ ಕೀರ್ತಿ ತಂದ ಮೇರು ವ್ಯಕ್ತಿ’ ಎಂದು ಯಕ್ಷಗಾನ ಹವ್ಯಾಸಿ ಕಲಾವಿದ ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಕೆ. ಜಯರಾಮ ಸಾಂತ ಹೇಳಿದರು. ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯುತ್ತಿರುವ 12ನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ಅಂಗವಾಗಿ ನ.13 ರಂದು ಜರಗಿದ ವಿದ್ವಾನ್ ಕೆ.ಕಾಂತ ರೈ ಮೂಡಬಿದಿರೆ ಅವರ ಸಂಸ್ಮರಣಾ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು.
ಹರೇಕಳ ವಿದ್ಯಾ ಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ.ರವೀಂದ್ರ ರೈ ಕಲ್ಲಿಮಾರು ತಮ್ಮ ಸಂಸ್ಮರಣ ಭಾಷಣದಲ್ಲಿ ‘ಗತಿಸಿ ಹೋದ ಹಿರಿಯರನ್ನು ಸ್ಮರಿಸಿಕೊಳ್ಳುವುದು ಒಂದು ಸಂಸ್ಕಾರಯುತ ಕಾರ್ಯ. ಕಾಂತ ರೈಯವರು ಆದರ್ಶ ಅಧ್ಯಾಪಕರಾಗಿ, ಪ್ರಶಸ್ತಿ ವಿಜೇತ ಕೃಷಿಕರಾಗಿ, ಯಕ್ಷಗಾನದ ಶ್ರೇಷ್ಠ ಅರ್ಥಧಾರಿಯಾಗಿ, ಪ್ರಸಂಗಕರ್ತರು ಹಾಗೂ ಸಾಹಿತಿಯಾಗಿ ಉನ್ನತ ವ್ಯಕ್ತಿತ್ವವನ್ನು ಪಡೆದವರು. ಯಕ್ಷಾಂಗಣವು ಪ್ರತಿ ವರ್ಷ ಅವರ ಸಂಸ್ಮರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿದೆ’ ಎಂದು ನುಡಿದರು.
ಬೋಳಾರ ಶ್ರೀ ಮಾರಿಯಮ್ಮ ಮಹಿಷ ಮರ್ದಿನಿ ದೇವಾಲಯದ ನಿಕಟಪೂರ್ವ ಆಡಳಿತ ಮೊಕ್ತೇಸರ ತಾರಾನಾಥ ಶೆಟ್ಟಿ ಬೋಳಾರ, ಭಾರತೀಯ ರಿಸರ್ವ್ ಬ್ಯಾಂಕಿನ ನಿವೃತ್ತ ಮಹಾ ಪ್ರಬಂಧಕ ರಾಜಾರಾಮ ಶೆಟ್ಟಿ ಮನವಳಿಕೆ ಗುತ್ತು, ವಿಶ್ರಾಂತ ಏರ್ ಪೋರ್ಟ್ ಅಧಿಕಾರಿ ಆನಂದ ಶೆಟ್ಟಿ ಮಿಜಾರು, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಕಾಂತ ರೈಯವರ ಮೊಮ್ಮಗ ವಿಶಾಲಕೀರ್ತಿ ರೈ ಹೊಸಂಗಡಿ ಮೂಡಬಿದ್ರಿ, ಮಹೇಶ್ ಮೋಟರ್ಸ್ ಮಾಲಕ ಎ.ಕೆ. ಜಯರಾಮ ಶೇಖ, ಹರಿಕಥಾ ಪರಿಷತ್ ಅಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ, ಪ್ರಗತಿಪರ ಕೃಷಿಕ ಸೋಮಶೇಖರ ಚೌಟ ಉಪಸ್ಥಿತರಿದ್ದರು.
ಯಕ್ಷಾಂಗಣ ಮಂಗಳೂರು ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ವಂದಿಸಿದರು. ಸಮಿತಿ ಸಂಚಾಲಕಿ ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿಗಳಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಸುಮಾ ಪ್ರಸಾದ್ ಸಹಕರಿಸಿದರು.
ಯಕ್ಷಗಾನ ತಾಳಮದ್ದಳೆ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮವಾಗಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ ಇವರಿಂದ ‘ಸೈಂಧವ ವಧೆ’ ತಾಳಮದ್ದಳೆ ಜರಗಿತು. ಭಾಗವತರಾಗಿ ಮಹೇಶ್ ಕನ್ಯಾಡಿ ಮತ್ತು ಹಿಮ್ಮೇಳದಲ್ಲಿ ಮುರಳೀಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ ಭಾಗವಹಿಸಿದರು. ದಿವಾಕರ ಆಚಾರ್ಯ ಗೇರುಕಟ್ಟೆ, ಅಂಬಾ ಪ್ರಸಾದ್ ಪಾತಾಳ, ಜಯರಾಮ ಭಟ್ ದೇವಸ್ಯ, ಗುಡ್ಡಪ್ಪ ಬಲ್ಯ, ಹರೀಶ್ ಆಚಾರ್ಯ ಉಪ್ಪಿನಂಗಡಿ, ಶ್ರೀಧರ ಎಸ್.ಪಿ. ಸುರತ್ಕಲ್, ಶ್ರುತಿ ವಿಸ್ಮಿತ್ ಉಪ್ಪಿನಂಗಡಿ ಅರ್ಥಧಾರಿಗಳಾಗಿದ್ದರು.