ವಿದ್ಯಾಗಿರಿ (ಮೂಡಬಿದಿರೆ): ಪ್ರಪಂಚದ ಎಲ್ಲೆಡೆ ಬಳಸಲಾಗುವ ಪ್ಲಾಸ್ಟಿಕ್ ಕೊನೆಗೆ ಸಾಗರವನ್ನು ಸೇರುತ್ತಿದೆ. ಭವಿಷ್ಯದಲ್ಲಿ ಅತ್ಯಂತ ಕಠಿಣ ದಿನಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಮುಂದುವರಿದ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆ (ಎನ್ಐಎಎಸ್)ಯ ಇಸ್ರೋ ಮುಖ್ಯ ಪ್ರಾಧ್ಯಾಪಕ ಡಾ. ಪಿ. ಜಿ. ದಿವಾಕರ್ ಅಭಿಪ್ರಾಯಪಟ್ಟರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಎನ್ಐಎಎಸ್ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿ- ವಿಜ್ಞಾನಿ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು. ಹವಾಮಾನ ಬದಲಾವಣೆಯು ಇತ್ತೀಚಿನ ದಿನಗಳಲ್ಲಿ ತೀವ್ರ ಸಮಸ್ಯೆಯಾಗಿದ್ದು, ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಳವೇ ಇದಕ್ಕೆ ಪ್ರಮುಖ ಕಾರಣ ಎಂದರು. ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನಾಗಿ ಮಾಡಲು ಎನ್ಐಎಎಸ್ ಆಯೋಜಿಸಿರುವ ‘ಕರಾವಳಿ ಭಾಗದ ಹವಾಮಾನ ಬದಲಾವಣೆ’ಯ ಅಧ್ಯಯನ ಯೋಜನೆಯು ಸಹಕರಿಯಾಗಲಿದೆ ಎಂದು ಹೇಳಿದರು.
ಶಿಕ್ಷಣದ ಮೂಲಕ ಯುವಜನಾಂಗದಲ್ಲಿ ವಿಜ್ಞಾನ ಮತ್ತು ಅನ್ವೇಷಣೆಯತ್ತ ಒಲವು ಮೂಡಿಸಬೇಕು ಎಂದರು. ಇಸ್ರೋ ಜಿಯೋ ಎಐಯನ್ನು ಬಿಡುಗಡೆಗೊಳಿಸಳಿದ್ದು ಇದರಲ್ಲಿ ಮುಂದಿನ 10 ವರ್ಷದದಲ್ಲಿ ವಿಶ್ವದ ವಾತಾವರಣ ಹೇಗಿರುತ್ತವೆ ಎಂಬ ದತ್ತಾಂಶ ಲಭ್ಯವಾಗಲಿದೆ ಎಂದರು. ಎನ್ಐಎಎಸ್ ಸಹ ಪ್ರಾಧ್ಯಾಪಕ ವಿ. ವಿ. ಬಿನೋಯ್ ಮಾತನಾಡಿ ವಿಜ್ಞಾನಿಯು ಮಗು. ಎಂದಿಗೂ ಪ್ರೌಢ ವ್ಯವಸ್ಥೆಗೆ ತಲುಪಲಾರ. ಅವನು ಜೀವನದ ಕೊನೆಯ ಹಂತದವರೆಗೂ ಪ್ರಶ್ನಿಸುವ ಮನೋಭಾವವನ್ನು ಬಿಟ್ಟುಕೊಡುವುದಿಲ್ಲ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಇಸ್ರೋ ಮತ್ತು ಎನ್ಐಎಎಸ್ ಸಂಸ್ಥೆಗಳು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವಪೂರ್ಣ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಬೇಕು ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳಿಗೆ ಉನ್ನತ ಭವಿಷ್ಯವನ್ನು ನೀಡುತ್ತದೆ ಎಂದು ಹೇಳಿದರು.ವಿದ್ಯಾರ್ಥಿ ವಿಜ್ಞಾನಿ ಪರಿಕಲ್ಪನೆ: ಕೇರಳ ಮತ್ತು ಕರ್ನಾಟಕದ ಕರಾವಳಿ ತೀರಗಳಲ್ಲಿ ಹವಾಮಾನ ಬದಲಾವಣೆ ಕುರಿತು ಅಧ್ಯಯನ ಮಾಡಲು ವಿದ್ಯಾರ್ಥಿಗಳನ್ನೇ ವಿಜ್ಞಾನಿಗಳಾಗಿ ಮಾಡುವ ಯೋಜನೆ ಇದಾಗಿದೆ. ಶಾಲಾ ವಿದ್ಯಾರ್ಥಿಗಳನ್ನು ತರಬೇತಿ ಗೊಳಿಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 40 ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರವನ್ನು ಎನ್ಐಎಎಸ್ಹ ಮ್ಮಿಕೊಂಡಿತ್ತು. ಈ ಯೋಜನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎಂಜಿನಿಯರ್, ವಿಜ್ಞಾನ ಪದವಿ ಮತ್ತು ಸಮಾಜಕಾರ್ಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಿದ ಶಾಲೆಗಳಿಗೆ ತೆರಳಿ ತರಬೇತಿಯನ್ನು ನೀಡಲಿದ್ದಾರೆ.
ಮಣ್ಣು, ನೀರು, ಗಾಳಿ, ವಾತಾವರಣ, ಮಾಲಿನ್ಯ, ಪರಿಸರ, ಉಷ್ಣಾಂಶ , ಮಳೆ, ನೀರಿನ ಶುದ್ಧತೆ, ಗಾಳಿಯ ವೇಗ, ಸಾಂಕ್ರಾಮಿಕ ರೋಗಗಳ ಕುರಿತ ಅಧ್ಯಯನವಾಗಿದೆ. ರಾಜ್ಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಯೋಜನೆಯ ನೋಡಲ್ ಕೇಂದ್ರವಾಗಿದ್ದು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ 20 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಅಲ್ಲಿನ ವಿದ್ಯಾರ್ಥಿಗಳಿಗೆ ಆಳ್ವಾಸ್ ನಲ್ಲಿ ತರಬೇತಿಗೊಂಡ ವಿದ್ಯಾರ್ಥಿಗಳು ಸಂಪೂರ್ಣ ಮಾರ್ಗದರ್ಶನ ಹಾಗೂ ಅಧ್ಯಯನ ನಡೆಸಲು ಬೇಕಾದ ಸಲಕರಣೆಗಳ ನಿರ್ಮಾಣದಲ್ಲಿ ಸಹಾಯ ನೀಡಲಿದ್ದಾರೆ. ಆಯಾ ಶಾಲೆಗಳು ಅಧ್ಯಯನಕ್ಕೆ ಪೂರಕವಾಗುವ ದತ್ತಾಂಶಗಳನ್ನು ಒದಗಿಸುವುದರ ಜೊತೆಗೆ ಮಾಹಿತಿಯನ್ನು ಕರ್ನಾಟಕದ ನೋಡಲ್ ಕೇಂದ್ರವಾದ ಆಳ್ವಾಸ್ ಸಂಸ್ಥೆಗೆ ಒದಗಿಸಲಿದೆ. ಪ್ರತಿ 2-3 ತಿಂಗಳಿಗೊಮ್ಮೆ ವಿದ್ಯಾರ್ಥಿಗಳು ಅನ್ವೇಷಿಸಿದ ದತ್ತಾಂಶಗಳ ಪರಿಶೀಲನೆ ನಡೆಯಲಿದೆ. ಈ ಯೋಜನೆಯು ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಒಲವು ಮೂಡಿಸಲು ಸಹಕಾರಿಯಾಗಲಿದೆ. 3 ಜಿಲ್ಲೆಗಳ ಶಾಲೆಗಳನ್ನು ಅಯ್ಕೆ ಮಾಡಲು ಸ್ಥಳೀಯ ಶಾಸಕರು ಸಹಕಾರವನ್ನು ನೀಡಿದ್ದಾರೆ. ಡಿಸೆಂಬರ್ 6ರಂದು ಆಯ್ಕೆಯಾದ ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ತರಬೇತಿ ಆಯೋಜನೆಗೊಳ್ಳಲಿದೆ, ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು ಟಿ ಖಾದರ್ ಫರೀದ್ ಹಾಗೂ ಇನ್ನಿತರ ಶಾಸಕರು ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಎಂಜಿನಿಯರ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆನಾರ್ಂಡಿಸ್, ಎನ್ಐಎಎಸ್ ಯೋಜನಾ ಸಹವರ್ತಿ ಪೌಲ್ ಜೋಶಿ, ಪ್ರಿಯಾಂಕಾ ಮತ್ತಿತರರು ಇದ್ದರು. ಕಾರ್ಯಕ್ರಮದ ಸಂಯೋಜಕ ಡಾ. ವಿನಯ್ ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.