ಅದೊಂದು ಭಿನ್ನ ನಾಟಕ. ಶನಿಯ ಕಥೆಯಲ್ಲಿ ಎಷ್ಟೋ ನಾಟಕ, ಯಕ್ಷಗಾನಗಳು ಬಂದಿರಬಹುದು. ಆದರೆ ಲ|ಕಿಶೋರ್ ಡಿ. ಶೆಟ್ಟಿ ನೇತೃತ್ವದ ಶ್ರೀಲಲಿತೆ ತಂಡದವರು ಕದ್ರಿ ನವನೀತ ಶೆಟ್ಟಿ ರಚನೆಯಲ್ಲಿ ಜೀವನ್ ಉಳ್ಳಾಲ್ ನಿರ್ದೇಶನದಲ್ಲಿ ನ.10ರಂದು ಸುರತ್ಕಲ್ನಲ್ಲಿ ಚೊಚ್ಚಲ ಪ್ರದರ್ಶನ ನೀಡಿರುವ ಶನಿ ಮಹಾತ್ಮೆ ತುಳು ನಾಟಕವು ಈ ಹಿಂದಿನ ಶನಿ ಕಥೆಯಾಧಾರಿತ ಎಲ್ಲಾ ನಾಟಕ, ಯಕ್ಷಗಾನಗಳಿಗಿಂತಲೂ ಭಿನ್ನವಾಗಿದೆ. ರಂಗಚಾವಡಿ ವಾರ್ಷಿಕ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತುಂಬಿ ತುಳುಕುತ್ತಿದ್ದ ಸುರತ್ಕಲ್ನ ಬಂಟರ ಭವನದಲ್ಲಿ ನ. 10ರಂದು ಪ್ರದರ್ಶನಗೊಂಡ ಈ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲಿರುವ ಹರಿಶ್ಚಂದ್ರ ಚಂದ್ರಮತಿಯ ದೃಶ್ಯವಂತೂ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಅಂಥಹ ಅಭಿನಯ ನೀಡಿರುವ ಚಂದ್ರಮತಿ ಮತ್ತು ಹರಿಶ್ಚಂದ್ರ ಪಾತ್ರಧಾರಿಗಳಿಗೆ ದೊಡ್ಡ ಶಹಬ್ಬಾಸ್ ಹೇಳಲೇಬೇಕಾಗಿದೆ. ಈ ನಾಟಕದಲ್ಲಿ ಶನಿ ಕಾಟದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಹಲವಾರು ಪುರಾಣ ಪುರುಷರ ಕಥೆಗಳನ್ನು ಒಪ್ಪ ಓರಣವಾಗಿ ಪ್ರೇಕ್ಷಕರ ಮುಂದೆ ಕಟ್ಟಿ ಕೊಡಲಾಗಿದೆ.
ಕದ್ರಿ ನವನೀತ್ ಶೆಟ್ಟಿ ರಚನೆಯ ಈ ನಾಟಕದಲ್ಲಿ ಸೂರ್ಯದೇವ, ದೇವಗುರು ಬೃಹಸ್ಪತಿ, ಪರಮೇಶ್ವರ, ನಳ ಮಹಾರಾಜ, ವಿಕ್ರಮಾದಿತ್ಯ, ಹರಿಶ್ಚಂದ್ರ ಮುಂತಾದವರು ಶನಿ ಪ್ರಭಾವದಿಂದ ಪಡುವ ಕಷ್ಟವನ್ನು ಮನಸ್ಪರ್ಶಿಯಾಗಿ ಕಟ್ಟಿ ಕೊಡಲಾಗಿದೆ. ಬೇರೆ ಬೇರೆ ಯುಗದ ಕಥೆಗಳನ್ನು ಹೆಕ್ಕಿ ಒಂದೇ ನಾಟಕದಲ್ಲಿ ತೋರಿಸಿರುವುದು ಈ ನಾಟಕದ ಒಂದು ವಿಶೇಷತೆಯಾಗಿದೆ. ಶನಿಯ ಪಾತ್ರವಂತೂ ಅದ್ಭುತವಾಗಿತ್ತು. ಅಜಾನುಬಾಹು ದೇಹದ ಶನಿಯ ಅಟ್ಟಹಾಸ ಪ್ರೇಕ್ಷಕರಲ್ಲಿ ಒಂದು ರೀತಿಯ ಭಯಭಕ್ತಿ ಮೂಡುವಂತೆ ಮಾಡಿತ್ತು. ಈ ನಾಟಕದ ಇನ್ನೊಂದು ಪ್ರಮುಖ ಅಂಶವೆಂದರೆ ಅತ್ಯಾಕರ್ಷಕ ರಂಗಾಲಂಕಾರ. ಕಾಗೆಯನ್ನೇರಿ ಶನಿ ಸಂಚರಿಸುವುದು, ರಥದಲ್ಲಿ ಸೂರ್ಯನ ಸಂಚಾರ, ಗೋಡೆಯಲ್ಲಿ ತೂಗಿ ಹಾಕಲಾಗಿದ್ದ ಹಂಸದ ಚಿತ್ರಪಟ ಮುತ್ತಿನ ಹಾರವನ್ನು ನುಂಗುವುದು ಮುಂತಾದ ಕೆಲವು ದೃಶ್ಯಗಳು ಅತ್ಯುದ್ಭುತವಾಗಿದ್ದವು. ನಂದಿಶ್ರೇಷ್ಠಿಯ ಪುತ್ರಿಯ ನೃತ್ಯವೂ ಆಕರ್ಷಕವಾಗಿತ್ತು. ವಿಕ್ರಮಾದಿತ್ಯ, ಹನುಮಂತನ ಪಾತ್ರವೂ ಮನಸ್ಪರ್ಶಿಯಾಗಿತ್ತು.
ನಾಟಕದಲ್ಲಿ ಕೆಲವು ಹಾಡುಗಳಿದ್ದು, ಅವು ಕಿವಿಗೆ ಇಂಪು ನೀಡುವಲ್ಲಿ ಸಫಲವಾಗಿವೆ. ಜತೆಗೆ ಬಹುತೇಕ ದೃಶ್ಯಗಳಲ್ಲಿ ಆಕರ್ಷಕ ಸಂಗೀತವೂ ಇದ್ದುದರಿಂದ ಇದೊಂದು ಸಂಗೀತಮಯ ನಾಟಕದ ರೂಪದಲ್ಲೂ ಇತ್ತು. ಅದು ಕೂಡಾ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಸಂಭಾಷಣೆಯನ್ನು ಧ್ವನಿ ಮುದ್ರಿಸಿಕೊಳ್ಳಲಾಗಿದ್ದರೂ ಎಲ್ಲೂ ಹಾಗೆ ಅನಿಸಲೇ ಇಲ್ಲ. ಎಲ್ಲವೂ ಪಾತ್ರಧಾರಿಗಳು ಮಾತನಾಡುವಂತೆಯೇ ನೈಜವಾಗಿತ್ತು. ಕಿವಿಗೆ ಬಡಿಯುವಂತೆ ಅಟ್ಟಹಾಸ, ಅತಿಯಾದ ಏರು ಸ್ವರದ ಕಿರಿಕಿರಿ ಇಲ್ಲದಿರುವುದು ಕೂಡಾ ಒಂದು ಪ್ಲಸ್ ಪಾಯಿಂಟ್. ರಂಗಾಲಂಕಾರದ ಜತೆಗೆ ಬೆಳಕಿನ ವ್ಯವಸ್ಥೆಯೂ ಅತ್ಯುತ್ತಮವಾಗಿತ್ತು.
ನಾಟಕಕ್ಕೆ ಜೀವನ್ ಉಳ್ಳಾಲ್ ಅವರು ನಿರ್ದೇಶನ ನೀಡಿದ್ದು, ವಸ್ತ್ರಲಂಕಾರ ಲಲಿತ ಅವರದ್ದಾಗಿದೆ. ಪಟ್ಲ ಸತೀಶ್ ಶೆಟ್ರ “ರುದ್ರ ರೂಪದ ಭದ್ರ ಕಾಯೊದ ಛಾಯಾಪುತ್ರೆ ಶನಿರಾಜೆ” ಹಾಡು ನಾಟಕದ ಹೈಲೈಟ್ಸ್ ಆಗಿದೆ. ನಾಟಕದ ಬಹುತೇಕ ಎಲ್ಲಾ ಪಾತ್ರಗಳಿಗೂ ಕಲಾವಿದರು ಅತ್ಯಂತ ಸೂಕ್ತ ರೀತಿಯಲ್ಲಿ ನ್ಯಾಯ ನೀಡಿದ್ದು, ಯಾರದ್ದೂ ಕಳಪೆ ಎನ್ನುವಂಥ ಪ್ರದರ್ಶನ ಇರಲೇ ಇಲ್ಲ. ಚೊಚ್ಚಲ ಪ್ರದರ್ಶನವಾಗಿದ್ದರೂ ಎಲ್ಲೂ ಮೊದಲ ಪ್ರದರ್ಶನ ಎಂದು ಅನಿಸಲೇ ಇಲ್ಲ. ಇದು ಇನ್ನಷ್ಟು ಪ್ರದರ್ಶನ ನೀಡಿದ ಬಳಿಕ ಮತ್ತಷ್ಟು ಉತ್ತಮವಾಗಿ ಒಂದು ಅತ್ಯಂತ ಶ್ರೇಷ್ಠ ಮಟ್ಟದ ನಾಟಕವಾಗಿ ತುಳು ರಂಗಭೂಮಿಗೆ ಒಂದು ದೊಡ್ಡ ಕೊಡುಗೆ ನೀಡುವುದರಲ್ಲಿ ಸಂದೇಹವೇ ಇಲ್ಲ.