ಬ್ರಹ್ಮಾವರ ನ. 14: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನ ಚಿಣ್ಣರ ಹಬ್ಬಕ್ಕೆ ಕೆ ಎಮ್ ಸಿ ಮಣಿಪಾಲದ ಶಿಶು ವೈದ್ಯಕೀಯ ವಿಭಾಗದ ಪೆÇ್ರಫೆಸರ್ ಡಾ. ಸುನೀಲ್ ಸಿ ಮುಂಡ್ಕೂರ್ರವರು ಆಗಮಿಸಿದ್ದರು. ಅವರು ಮಕ್ಕಳಿಗೆ ಶುಭಹಾರೈಸಿ ಮಾತನಾಡಿ ಜೀವನದಲ್ಲಿ ಸಂತೋಷವಾಗಿರಬೇಕಾದರೆ ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮಾದಕ ವಸ್ತು, ಜಂಕ್ ಫುಡ್ನಿಂದ ದೂರವಿದ್ದು ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಏಕಾಂಗಿಯಾಗಿದ್ದರೂ ಸಾಧಿಸುವ ಛಲ ಹೊಂದಿರಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಇಂದಿನ ದಿನಗಳಲ್ಲಿ ಹಿರಿಯರನ್ನು ವೃದ್ದಾಶ್ರಮಕ್ಕೆ ಕಳುಹಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದೊಂದು ದುರಂತ. ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ.

ಮಕ್ಕಳು ಮೌಲ್ಯ ನೀತಿ ಪಾಠವಿರುವ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ನಮಗೆ ಪ್ರತಿದಿನವೂ ವಿಶೇಷವಾಗಿದ್ದು ನಮ್ಮ ಗುರಿಯತ್ತ ನಿತ್ಯವೂ ಗಮನವನ್ನು ಕೇಂದ್ರೀಕರಿಸಬೇಕು. ಸುಖ ದುಖಃಗಳು ಎದುರಾದಾಗ ಭಾವನೆಗಳ ಅಭಿವ್ಯಕ್ತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕೆಂದರು. ಸಂಸ್ಥೆಯ ಶಿಕ್ಷಕ ವೃಂದದವರು ನೃತ್ಯ ಗಾಯನ, ಪ್ರಹಸನ, ಗೊಂಬೆ ಕುಣಿತದ ಮೂಲಕ ಮಕ್ಕಳನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಶ್ರೀಮಾ ಪ್ರಣವ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಡಾ. ಅನುಷಾ ಸುಬ್ರಹ್ಮಣ್ಯಂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
		




































































































