ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇದರ ಯಕ್ಷಗಾನ ಮೇಳದ ಐದನೇ ವರ್ಷದ ತಿರುಗಾಟವು ಕ್ಷೇತ್ರದಲ್ಲಿ ಕಲಾವಿದರಿಗೆ ಗೆಜ್ಜೆ ಪ್ರಧಾನ ಕಾರ್ಯದೊಂದಿಗೆ ಆರಂಭಗೊಂಡಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಶಶೀಂಧರ ಕುಮಾರ್, ಧರ್ಮದರ್ಶಿ ಡಾ. ಯಾಜಿ ನಿರಂಜನ ಭಟ್ ಅವರು ಗೆಜ್ಜೆ ಪ್ರಧಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದ ಬಳಿಕ ಮೇಳದ ಚೌಕಿಯಲ್ಲಿ ದೇವರಿಗೆ ಮಹಾಪೂಜೆ ನೆರವೇರಿತು. ವರ್ಷದ ಮೊದಲ ಸೇವಾ ರೂಪದ ಬಯಲಾಟ ಪಾಂಡವಾಶ್ವಮೇಧವು ದೇಗುಲದ ಆವರಣದಲ್ಲಿ ಹಾಕಲಾಗಿದ್ದ ರಂಗಸ್ಥಳದಲ್ಲಿ ನಡೆಯಿತು. ಎಂ. ಶಶಿಂದ್ರ ಕುಮಾರ್, ಡಾ. ಯಾಜಿ ಎಚ್. ನಿರಂಜನ ಭಟ್, ಮೇಳದ ಸಂಚಾಲಕ ಹಾಗೂ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪಟ್ಲ ಮಹಾಬಲ ಶೆಟ್ಟಿ, ಮೇಳದ ಪ್ರಬಂಧಕ ಮಾಧವ ಬಂಗೇರ ಕೊಳತ್ತಮಜಲು, ವಿವಿಧ ಕಲಾವಿದರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಜನ ಪ್ರತಿನಿಧಿಗಳು, ಯಕ್ಷಗಾನ ಅಭಿಮಾನಿಗಳು, ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.