ಶ್ರೀ ಮಹಾವಿಷ್ಣುವಿಗೆ ಆಷಾಡ ಶುದ್ಧ ಶಯನ ಏಕಾದಶೀಯಂದು ‘ಯೋಗನಿದ್ರೆ’ ಕಾರ್ತಿಕ ಶುದ್ಧ ದ್ವಾದಶೀಯಂದು ಏಳುತ್ತಾನೆ. ಉತ್ಥಾನ ಎಂದರೆ ಏಳುವುದು ಎಂಬ ಅರ್ಥ. ಹಾಗಾಗಿ ಕಾರ್ತಿಕ ಮಾಸದ ಉತ್ಥಾನ ದ್ವಾದಶಿ ತುಳಸಿ ಪೂಜೆಗೆ ಎಲ್ಲಿಲ್ಲದ ಪ್ರಾಶಸ್ತ್ಯ. ನವೆಂಬರ್ 13 ರಂದು ತುಳಸಿ ಪೂಜೆಯ ಸಂಭ್ರಮ ನಡೆಯಲಿದ್ದು ಕಾತುರತೆ ಸೃಷ್ಟಿಸಿದೆ. ಕಾರ್ತಿಕ ಮಾಸದ 12ನೇಯ ದಿನ ಉತ್ಥಾನ ದ್ವಾದಶಿ ಬರುತ್ತದೆ. ಕಾರ್ತಿಕ ಮಾಸವಿಡಿ ಶ್ರೀ ಮಹಾವಿಷ್ಣು ‘ದಾಮೋದರ’ನಾಗಿ ತುಳಸಿ ಕಟ್ಟೆಯಲ್ಲಿ ಇರುವುದು ವಿಶೇಷ. ಕ್ಷೀರ ಸಮುದ್ರದಲ್ಲಿ ಜನಿಸಿದ ಕಾರಣ ತುಳಸೀಗೆ ಹಾಲಿನ ಅಭಿಷೇಕ ಮಾಡಿ ಪೂಜಿಸುವುದು ಬಹಳ ಶ್ರೇಷ್ಠ.
ಈ ದಿನ ನೆಲ್ಲಿಗಿಡದ ಎಕ್ಕಲುಗಳನ್ನಿಟ್ಟು ಪೂಜಿಸುತ್ತಾರೆ. ನೆಲ್ಲಿಗಿಡ ಸಾಕ್ಷಾತ್ ಲಕ್ಷ್ಮೀ ಎಂಬ ನೆಲೆಯಲ್ಲಿ ಪೂಜೆ. ಪ್ರಾತಃ ಕಾಲದಲ್ಲಿ ಹಾಲಿನ ಅಭಿಷೇಕ, ಪಾರಾಯಣ, ಪೂಜೆ, ಉದ್ದಿನ ದೋಸೆ, ನೆಲ್ಲಿಕಾಯಿ ಚಟ್ನಿ ನೈವೇದ್ಯ ಮಾಡಿ, ವಿಶೇಷವಾಗಿ ಶ್ರೀ ವಿಷ್ಣು ಸಹಸ್ರನಾಮ ಪಠಿಸಿ, ಆರತಿ ಮಾಡಿ ಪ್ರಾರ್ಥಿಸುವುದು ನಡೆಯುತ್ತದೆ. ಸಂಜೆ ಸೂರ್ಯಾಸ್ತ ನಂತರ ತುಳಸಿಗೆ ದೀಪ ಬೆಳಗಿಸಿ ವಿಶೇಷ ಭಜನೆ ಹರಿಕೀರ್ತನೆ ಮಾಡಿ, ಪೂಜಿಸುವುದು. ತುಳಸಿ ನೈವೇದ್ಯಕ್ಕೆ ಕ್ಷೀರ, ಅವಲಕ್ಕಿ, ಹಣ್ಣು ಕಾಯಿ ನೈವೇದ್ಯ ಮಾಡಿ ಮಹಾ ಮಂಗಳಾರತಿ ಮಾಡಿ ತುಳಸಿ ಜತೆ ಮಹಾವಿಷ್ಣುವಿಗೆ ವಿವಾಹ ಮಾಡಿಸುವ ಪದ್ಧತಿ ಇದೆ. ಇದನ್ನು ‘ತುಳಸಿ ಕಲ್ಯಾಣ’ ಎಂದು ಭಕ್ತಿ ಶ್ರದ್ಧೆಯಿಂದ ಮಾಡುತ್ತಾರೆ. ಇಂತಹ ಉತ್ಥಾನ ದ್ವಾದಶಿ ತುಳಸಿ ಪೂಜೆಯಿಂದ ಮಾನವನ ಏಳೇಳು ಜನುಮದ ಪಾಪಗಳು ನಾಶವಾಗಿ, ಅತಿಶಯವಾದ ಪುಣ್ಯ ಲಭಿಸದೆ. ಮಹಿಳೆಯರಿಗೆ ಧೀರ್ಘ ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಸಸ್ಯಕ್ಕೆ ವಿಷಯ ಪ್ರಾಶಸ್ತ್ಯ ನೀಡಲಾಗಿದೆ. ಇದು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ ಕೂಡ ಹೌದು. ತುಳಸಿ ಜನನ ಕೂಡ ಬಹಳ ವಿಶಿಷ್ಟವಾಗಿದೆ. ಸಮುದ್ರ ಮಥನ ಕಾಲದಲ್ಲಿ ದೇವತೆಗಳು ಮತ್ತು ದಾನವರು ಕ್ಷೀರ ಸಮುದ್ರ ಮಥಿಸುವಾಗ ಕಾಮಧೇನು, ಕಲ್ಪವೃಕ್ಷದಂತಹ ‘ಹದಿನಾಲ್ಕು ರತ್ನಗಳು’ ಹೊರಬಂದ ನಂತರ ‘ಅಮೃತ ಕಲಶ’ ಬರುತ್ತದೆ. ಶ್ರೀ ಮಹಾವಿಷ್ಣು ಈ ಅಮೃತ ಕಲಶವನ್ನು ತನ್ನ ಕೆಗೆತ್ತಿಕೊಂಡಾಗ ಆತನ ಕಣ್ಣುಗಳಿಂದ ‘ಆನಂದಭಾಷ್ಪ’ ಚಿಮ್ಮಿ ಅದರ ಹನಿ ಅಮೃತ ಕಲಶದೊಳಗೆ ಬಿತ್ತು. ಕ್ಷಣ ಮಾತ್ರದಲ್ಲಿ ಒಂದು ಚಿಕ್ಕ ಸಸ್ಯ ಹುಟ್ಟಿತು. ಈ ಸಸ್ಯಕ್ಕೆ ಹೋಲಿಕೆ ಅಥವಾ ತುಲನೆ ಮಾಡಲು ಸಾಧ್ಯವಾದ್ದರಿಂದ ಶ್ರೀ ಮಹಾವಿಷ್ಣು ಈ ಗಿಡಕ್ಕೆ ‘ತುಳಸಿ’ ಎಂದು ಹೆಸರನ್ನಿಟ್ಟು ಕೃಪೆ ತೋರಿದ. ಮುಂದೆ ಈ ತುಳಸಿಯನ್ನು ಮಹಾವಿಷ್ಣು ಲಕ್ಷ್ಮೀ ಜತೆ ವಿವಾಹವಾದ ಎಂಬ ಉಲ್ಲೇಖ ಸ್ಕಂದ ಪುರಾಣ ಹಾಗೂ ವಿಷ್ಣುಪುರಾಣದಲ್ಲಿದೆ. ಭೂಲೋಕದಲ್ಲಿ ಮನೆ ಮನೆಯಲ್ಲೂ ನೀನಿದ್ದು ನನ್ನ ಭಕ್ತರನ್ನು ಉದ್ಧರಿಸು ಎಂದು ಅನುಗ್ರಹಿಸುತ್ತಾನೆ. ಅಂದಿನಿಂದ ಭೂಲೋಕದಲ್ಲಿ ಪ್ರತಿ ಮನೆಯಂಗಳದಲ್ಲಿ ಕಟ್ಟೆಯಲ್ಲಿ ತುಳಸಿ ಸನ್ನಿಹಿತಳಾದಳು. ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲೂ ತುಳಸಿಕಟ್ಟೆ ಇರುತ್ತದೆ.