ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಲ ಬೆಂಗಳೂರು ಇದರ ನಿರ್ದೇಶಕರಾಗಿ, ಸಹಕಾರ ಭಾರತಿ ಪ್ರಮುಖ್ ರಾದ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಉದಯ ರೈ ಮಾದೋಡಿಯವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಲ ಬೆಂಗಳೂರು ಇದರ 13 ನಿರ್ದೇಶಕರ ಸ್ಥಾನಗಳಿಗೆ ನವೆಂಬರ್ 4 ರಂದು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಲದ ಬೆಂಗಳೂರು ಕಚೇರಿಯಲ್ಲಿ ಚುನಾವಣೆ ನಡೆಯಿತು. ಉದಯ ರೈ ಮಾದೋಡಿಯವರು 2018 – 23ನೇ ಅವಧಿಯಲ್ಲಿ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಲ ಬೆಂಗಳೂರು ಇದರ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಎರಡನೇ ಅವಧಿಗೆ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.
1994 ರಲ್ಲಿ ಬೆಳಂದೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ, 2000 ರಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚ ಅಧ್ಯಕ್ಷರಾಗಿದ್ದರು. ಆ ಬಳಿಕ ಬಿಜೆಪಿ ಜಿಲ್ಲಾ ಸಮಿತಿ, ಮಂಡಲ ಸಮಿತಿ, ಬಿಜೆಪಿ ಪಕ್ಷದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಎರಡು ಬಾರಿ ಅಧ್ಯಕ್ಷರಾಗಿದ್ದರು. ಪ್ರಸ್ತುತ ನಿರ್ದೇಶಕರಾಗಿದ್ದಾರೆ. ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರಿನ ಜನತಾ ಬಜಾರ್ ನಲ್ಲಿ ಒಂದು ಅವಧಿಯಲ್ಲಿ ಅಧ್ಯಕ್ಷರಾಗಿ, ಪ್ರಸ್ತುತ ನಿರ್ದೇಶಕರಾಗಿದ್ದಾರೆ. ಸಹಕಾರ ಭಾರತೀಯ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿದ್ದ ಉದಯ ರೈಯವರು ಪ್ರಸ್ತುತ ಸಹಕಾರ ಭಾರತೀಯ ಗ್ರಾಹಕ ಪ್ರಕೋಷ್ಠದ ಪ್ರಮುಖ್ ರಾಗಿದ್ದಾರೆ.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಆರಂಭದಿಂದಲೂ ನಿರ್ದೇಶಕರಾಗಿ, ಆಡಳಿತ ಸಮಿತಿಯ ಕೋಶಾಧಿಕಾರಿಯಾಗಿದ್ದಾರೆ. ಅಗಳಿ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುವ ಇವರು ದೇವಾಲಯದ ಬ್ರಹ್ಮಕಲಶೋತ್ಸವದಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಕೋಡಿಮರ ಉಳ್ಳಾಕಲು, ವ್ಯಾಘ್ರ ಚಾಮುಂಡಿ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಗತಿಪರ ಕೃಷಿಕರಾಗಿರುವ ಉದಯ ರೈ ಮಾದೋಡಿಯವರು ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.