ಮೂಲ್ಕಿ ಬಂಟರ ಸಂಘದ ಕಟ್ಟಡ ನವೀಕರಣದ ಕಾಮಗಾರಿಯು ನವೆಂಬರ್ 8 ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಧರ್ಮದರ್ಶಿಗಳೂ, ಹಿರಿಯರೂ ಆದ ಮನೋಹರ ಶೆಟ್ಟಿ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಮೂಲ್ಕಿ ಬಂಟರ ಸಂಘದ ಗೌರವಾಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಇವರ ಘನ ಉಪಸ್ಥಿತಿಯಲ್ಲಿ ಅವರ ದಿವ್ಯ ಹಸ್ತದಿಂದ ಕಟ್ಟಡಕ್ಕೆ ಚಾಲನೆ ನೀಡಲಾಯಿತು.
ಮುಂಬರುವ ವರ್ಷ ಬಂಟರ ಸಂಘಕ್ಕೆ ಶತಮಾನದ ವರ್ಷ. ನಮ್ಮ ಹಿರಿಯರು ಹಾಕಿ ಕೊಟ್ಟ ಈ ಸಂಘಟನೆಯನ್ನು ಕಿರಿಯರಾದ ನಾವು ಉತ್ತಮವಾದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಬೇಕು. ಹಿರಿಯರ ಮಾರ್ಗದರ್ಶನಕ್ಕೆ ಅನುಸಾರವಾಗಿ ಮುಂದುವರಿಯಬೇಕು. ಇದಕ್ಕೆ ದೇವರ ಅನುಗ್ರಹವೂ ಇರುತ್ತದೆ. ನಾವೆಲ್ಲಾ ಒಂದಾಗಿ ಸಂಘಟನೆಯನ್ನು ಬಲಪಡಿಸೋಣ. ಕಟ್ಟಡದ ಕಾಮಗಾರಿ ಶೀಘ್ರವಾಗಿ ಪ್ರಗತಿಪಥದಲ್ಲಿ ಸಾಗಿ ಲೋಕಾರ್ಪಣೆಯಾಗಲಿ ಎಂದು ಐಕಳ ಹರೀಶ್ ಶೆಟ್ಟಿ ಶುಭವನ್ನು ಹಾರೈಸಿದರು.
ಮುಂದಿನ ದಿನಗಳಲ್ಲಿ ಬಪ್ಪನಾಡು ದುರ್ಗಾಪರಮೇಶ್ವರಿಯ ಅನುಗ್ರಹದಿಂದ ಶೀಘ್ರವೇ ಕಟ್ಟಡ ಲೋಕಾರ್ಪಣೆಯಾಗಿ ಸಮಾಜಕ್ಕೆ ಸ್ಪಂದಿಸಲಿ ಎಂದು ಮನೋಹರ ಶೆಟ್ಟಿ ಅವರು ಶುಭ ಹಾರೈಸಿದರು.
ಬಂಟರ ಸಂಘ ಮೂಲ್ಕಿ ಇದರ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಕಟ್ಟಡ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಹೆಗ್ಡೆ, ಮಾಜಿ ಅಧ್ಯಕ್ಷರಾದ ಮುರಳೀಧರ ಭಂಡಾರಿ ಕುಬೆವೂರು, ಪುರುಷೋತ್ತಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಂಘದ ಕಾರ್ಯದರ್ಶಿ ಸಾಯಿನಾಥ ಶೆಟ್ಟಿ ನೀಡಿದರು.