ಮುಂಬೈ ವಿಶ್ವವಿದ್ಯಾಲಯದ 65 ವಿಭಾಗಗಳಲ್ಲಿ ಅತೀ ಹೆಚ್ಚು ಕೃತಿಗಳನ್ನು ಪ್ರಕಟಣೆ ಮಾಡಿದ ಹಿರಿಮೆ ಕನ್ನಡ ವಿಭಾಗದ್ದಾಗಿದೆ. ಕನ್ನಡದ ಪ್ರಚಾರ, ಪ್ರಸಾರದ ಕೈಂಕರ್ಯವನ್ನು ವಿಭಾಗ ಸತತವಾಗಿ ಮಾಡುತ್ತಿದೆ. ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದುದು, ಸಮೃದ್ಧವಾದುದು. ವಿದ್ಯಾರ್ಥಿಗಳು ಒಳ್ಳೆಯ ಸಾಹಿತ್ಯವನ್ನು ಬೆಳೆಯುವ, ಕಟಾವು ಮಾಡುವ, ಆನಂದ ಪಡುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರೂ ಆದ ಪ್ರೊ. ಜಿ. ಎನ್. ಉಪಾಧ್ಯ ಅವರು ಕರೆ ಕೊಟ್ಟರು. ಅವರು ಅಕ್ಟೋಬರ್ 19ರ ಶನಿವಾರದಂದು ಕಲೀನಾ ಕ್ಯಾಂಪಸ್ ನ ಜೆ.ಪಿ. ನಾಯಕ್ ಭವನದಲ್ಲಿ ನಡೆದ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತಿದ್ದರು.
ಭರತನ ನಾಟ್ಯ ಶಾಸ್ತ್ರದಲ್ಲಿ ಹೇಳಿರುವಂತೆ ಕಾವ್ಯವನ್ನು ಓದುವುದರಿಂದ ಆಗುವ ಪ್ರಯೋಜನಗಳನ್ನು, ನಮ್ಮ ಚಿತ್ತದಲ್ಲಿ ಆಗುವ ವಿಕಾಸ, ವಿಸ್ತಾರ, ವಿಕ್ಷೋಭ ಮತ್ತು ವಿಕ್ಷೇಪ ಎಂಬ ನಾಲ್ಕು ರೀತಿಯ ಪ್ರಕ್ರಿಯೆಗಳನ್ನು ಅವರು ಈ ಸಂದರ್ಭದಲ್ಲಿ ಸವಿಸ್ತಾರವಾಗಿ ವಿವರಿಸಿದರು. ಅವರು ಅಂದು ಬಿಡುಗಡೆ ಕಂಡ ಕೃತಿಕಾರರ ಸಾಧನೆಗಳನ್ನು ಪರಿಚಯಿಸಿ ಕೃತಿಕಾರರನ್ನು ಅಭಿನಂದಿಸಿದರು.
ಹಿರಿಯ ಲೇಖಕರಾದ ವೆಂಕಟ್ರಾಜ್ ಯು ರಾವ್ ಅವರ ‘ಪಟೇಲರ ಹುಲಿ ಬೇಟೆ’, ಹಿರಿಯ ಯಕ್ಷಗಾನ ಕಲಾವಿದರು, ಲೇಖಕರಾದ ಕೊಲ್ಯಾರು ರಾಜು ಶೆಟ್ಟಿ ಅವರ ‘ಕುಮಾರವ್ಯಾಸ ಭಾರತದಲ್ಲಿ ಕರ್ಣ’ ಮತ್ತು ಖ್ಯಾತ ಕಾದಂಬರಿಕಾರರಾದ ಮಿತ್ರಾ ವೆಂಕಟ್ರಾಜ್ ಅವರ ಅನುವಾದಿತ ಕಾದಂಬರಿ ‘ಒಂದು ಪುರಾತನ ನೆಲದಲ್ಲಿ’ ಕೃತಿಗಳು ಲೋಕಾರ್ಪಣೆಗೊಂಡವು.
‘ಪಟೇಲರ ಹುಲಿ ಬೇಟೆ’ ಕೃತಿಯ ಕರ್ತೃ, ಚಿತ್ರ ಕಲಾವಿದರು, ಅನುವಾದಕರೂ ಆದ ವೆಂಕಟ್ರಾಜ್ ಯು ರಾವ್ ಅವರು ತಮ್ಮ ಚೊಚ್ಚಲ ಕನ್ನಡ ಕೃತಿಯ ಕುರಿತು ಮಾತನಾಡುತ್ತಾ, ‘ಕೆಲಸದ ಒತ್ತಡದ ನಡುವೆ ಸಿಕ್ಕ ಸಮಯದಲ್ಲಿ ಬರೆಯುವಾಗ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ಕಥಾಸಂಕಲನದ ಹೆಚ್ಚಿನ ಕತೆಗಳು ನನ್ನ ಅನುಭವದಿಂದಲೇ ಹುಟ್ಟಿದವು. ಅನುಭವದೊಂದಿಗೆ ಹಲವಾರು ಭಾವಗಳು ಹುಟ್ಟಬಹುದು; ಯಾವುದಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂಬುದು ಅನುಭವಿಸುವವರ ಮೇಲಿದೆ ‘ ಎಂದರು. (ಅವರು ಕತೆಗಳನ್ನು ಬರೆಯಲು ಪ್ರೋತ್ಸಾಹಿಸಿದವರನ್ನು ಮತ್ತು ಕೃತಿ ಪ್ರಕಟಣೆ ಮತ್ತು ಬಿಡುಗಡೆಯಲ್ಲಿ ಕಾಳಜಿ ವಹಿಸಿದ ಪ್ರೊ. ಉಪಾಧ್ಯ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ‘ಕುಮಾರವ್ಯಾಸ ಭಾರತದಲ್ಲಿ ಕರ್ಣ’ ಕೃತಿಯ ಲೇಖಕರಾದ ಕೊಲ್ಯಾರು ರಾಜು ಶೆಟ್ಟಿ ಅವರು ಕನ್ನಡ ಸಾಹಿತ್ಯಕ್ಕೆ ಪ್ರಾಚೀನ ಕವಿಗಳ ಕೊಡುಗೆಗಳನ್ನು ಸ್ಮರಿಸುತ್ತಾ, ‘ಇಂದಿನ ಕವಿಗಳು ಅವರನ್ನು ಅಭ್ಯಸಿಸಬೇಕು, ಅವರ ಕಾವ್ಯಗಳನ್ನು ಆನಂದಿಸಬೇಕು’ ಎಂಬ ಆಶಯವನ್ನು, ವಿಶ್ವವಿದ್ಯಾಲಯದಲ್ಲಿ ಕೃತಿ ಬಿಡುಗಡೆಯಾಗಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು. ನಾಮಾಂಕಿತ ಕಥನಕಾರರಾದ ಮಿತ್ರಾ ವೆಂಕಟ್ರಾಜ್ ಅವರು ತಮ್ಮ ಅನುವಾದಿತ ಕೃತಿಯ ಬಗೆಗೆ ಮಾತನಾಡುತ್ತಾ, ‘ಮುಂಬೈಯಂತಹ ಬಹುಭಾಷಿಕ ನಗರದಲ್ಲಿ ನಾವು ಒಂದಲ್ಲ ಒಂದು ರೀತಿಯಲ್ಲಿ ಅನುವಾದ ಮಾಡುತ್ತಲೇ ಇರುತ್ತೇವೆ; ನಮ್ಮ ಅರಿವಿಲ್ಲದೆಯೇ ಅನುವಾದವೆನ್ನುವುದು ನಿತ್ಯ ಜೀವನದಲ್ಲಿ ಆಗುತ್ತದೆ. ಕಾದಂಬರಿಯ ಅನುವಾದದಲ್ಲಿ ಭಾಷೆಯಷ್ಟೇ ಅಲ್ಲದೆ ಇಡೀ ಸಂಸ್ಕೃತಿಯನ್ನೇ ಅನುವಾದಿಸುವ ಕಾರ್ಯ ನಡೆಯುತ್ತದೆ. ಅನುವಾದದ ಈ ಪಯಣವನ್ನು ನಾನು ಆನಂದಿಸಿದ್ದೇನೆ’ ಎಂದರು.
ಕೃತಿಗಳ ಕುರಿತು ಕ್ರಮವಾಗಿ ಸವಿತಾ ಅರುಣ್ ಶೆಟ್ಟಿ, ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಮತ್ತು ವಿದ್ಯಾ ರಾಮಕೃಷ್ಣ ಅವರು ಮಾತನಾಡಿದರು. ಕಲಾ ಭಾಗ್ವತ್ ಅವರು ತಾವು ಪರಿಚಯಿಸಿದ ಕೃತಿಯ ಕೆಲ ಪದ್ಯಗಳನ್ನು ಶ್ರುತಪಡಿಸಿದರು. ಕೃತಿಕಾರರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿಭಾಗದ ಸಂಶೋಧನ ವಿದ್ಯಾರ್ಥಿ ಪ್ರತಿಭಾ ರಾವ್ ಅವರು ಕನ್ನಡದ ಖ್ಯಾತ ಲೇಖಕಿ, ಸಾಧಕಿ ಸುಧಾ ಮೂರ್ತಿ ಜೀವನ ಸಾಧನೆ ಕುರಿತು ಬರೆದ ತಮ್ಮ ಎಂ.ಎ ಸಂಪ್ರಬಂಧದ ಮುದ್ರಿತ ಪ್ರತಿಗಳನ್ನು ವಿಭಾಗಕ್ಕೆ ಸಮರ್ಪಿಸಿದರು. ಕನ್ನಡ ವಿಭಾಗದ ಎಂ.ಎ ವಿದ್ಯಾರ್ಥಿಗಳು ತಮ್ಮ ಸಂಪ್ರಬಂಧಗಳನ್ನು ಸಾದರಪಡಿಸಿದರು. ಸರ್ಟಿಫಿಕೇಟ್ ಕೋರ್ಸ್ ನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ, ಐಲೇಸಾ ದ ವಾಯ್ಸ್ ಆಫ್ ಓಷಿಯನ್ ಮತ್ತು ಟೀಂ ರೆಂಜಾಳ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 3 ರಂದು ನಡೆಯಲಿರುವ ‘ಕುಸುಮೋತ್ಸವ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಎಲ್ಲಾ ಕಾರ್ಯಕ್ರಮಗಳು ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅವರ ಸಂಯೋಜನೆಯಲ್ಲಿ ನಡೆಯಿತು. ಕನ್ನಡ ಸರ್ಟಿಫಿಕೇಟ್ ಕೋರ್ಸ್ ನ ಶಿಕ್ಷಕಿ ಕುಮುದಾ ಆಳ್ವ ಅವರು ವಂದನಾರ್ಪಣೆ ಸಲ್ಲಿಸಿದರು. ಹಿರಿಯ ಲೇಖಕಿ, ಅನುವಾದಕಿ ಡಾ. ಶ್ಯಾಮಲಾ ಮಾಧವ, ಕಲಾವಿದರಾದ, ಮೋಹನ್ ಶೆಟ್ಟಿ ಮಾರ್ನಾಡ್, ಅಹಲ್ಯಾ ಬಲ್ಲಾಳ, ವಾಸುದೇವ ಶೆಟ್ಟಿ ಮಾರ್ನಾಡ್, ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್, ಎಸ್. ಕೆ. ಸುಂದರ್ ಮತ್ತಿತರ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.