ಸಂಜ್ಞಾದೇವಿ ಸೂರ್ಯನ ಪತ್ನಿ ಸೂರ್ಯನ ದೇಹ ತಾಪವನ್ನು ತಾಳಲಾರದೆ ಈಕೆ ತನ್ನ ಶರೀರದಿಂದ ತನ್ನಂತೆ ಇರುವ ಒಬ್ಬ ತರುಣಿಯನ್ನು ಸೃಜಿಸಿ, ಆಕೆಗೆ ಛಾಯೆಯೆಂದು ಹೆಸರಿಟ್ಟು ತನ್ನ ಪತಿಯೊಂದಿಗೆ ಸಂಸಾರ ಮಾಡಿಕೊಂಡಿರುವಂತೆಯೂ, ತನ್ನ ಮಕ್ಕಳನ್ನು ಮಾತೃ ವಾತ್ಸಲ್ಯದಿಂದ ಕಾಣುವಂತೆಯೂ ಗುಟ್ಟನ್ನು ರಟ್ಟು ಮಾಡದಂತೆಯೂ ಹೇಳಿ ತಪಸ್ಸಿಗೆ ಹೋದಳು. ಇತ್ತ ಸೂರ್ಯನೂ ಛಾಯೆಯನ್ನು ಸಂಜ್ಞೆಯಂದೇ ತಿಳಿದ. ಛಾಯೆ ಸೂರ್ಯನಿಂದ ಮನುವಿನಂತೆಯೇ ಇರುವ ಸಾವರ್ಣಿ ಮನುವನ್ನೂ ಶನಿ ಮತ್ತು ತಪತಿಯರನ್ನೂ ಹೆತ್ತಳು. ಕ್ರಮೇಣ ಛಾಯೆ, ಸಂಜ್ಞೆಯ ಮಕ್ಕಳನ್ನು ಅಸಡ್ಡೆ ಮಾಡತೊಡಗಿದಳು. ಇದನ್ನು ಸಹಿಸದ ಯಮ ತನ್ನ ಬಲಗಾಲನ್ನು ಎತ್ತಿ ತೋರಿಸಿ ಛಾಯೆಯನ್ನು ಹೆದರಿಸಿದ. ಆಗ ಛಾಯೆ ನಿನ್ನ ಕಾಲಲ್ಲಿ ಹುಳು ಬಿದ್ದು ವಾಸನೆ ಹಿಡಿಯಲಿ ಎಂದು ಶಾಪವಿತ್ತಳು. ಅನಂತರ ಯಮ ಸೂರ್ಯನಿಗೆ ಈ ವಿಚಾರ ತಿಳಿಸಿ ಛಾಯೆ ತನ್ನ ತಾಯಿ ಅಲ್ಲ ಎಂದು ಹೇಳಿದ. ಸೂರ್ಯ ಹುಳು ಬಿದ್ದ ಯಮನ ಕಾಲಿಗೆ ಪರಿಹಾರ ಹೇಳಿ, ಸಂಜ್ಞೆಯ ತಂದೆ ತ್ವಷ್ಟೃವನ್ನು ಕಂಡು ನಡೆದ ವೃತ್ತಾಂತವನ್ನು ತಿಳುಹಿದ. ತ್ವಷ್ಟೃ ವಾಸ್ತವಾಂಶವನ್ನು ಸೂರ್ಯನಿಗೆ ಹೇಳಿ ಸಂಜ್ಞೆ ಬೇಕಿದ್ದರೆ ತನ್ನ ಪ್ರಖರತೆಯನ್ನು ಕಡಿಮೆ ಮಾಡಿಕೊಳ್ಳಲು ಸೂಚಿಸಿದ. ಆಗ ಸೂರ್ಯ ತನ್ನ ಪ್ರಖರತೆಯನ್ನು ಕಡಿಮೆ ಮಾಡಿಕೊಳ್ಳಲು ಒಪ್ಪಿದ. ಈ ವೃತ್ತಾಂತ ಮತ್ಸ್ಯಪುರಾಣದಲ್ಲಿ ಬಂದಿದೆ.
ಛಾಯಾ ಹಾಗೂ ಸೂರ್ಯದೇವರ ಮಗನಾದ ಶನಿಯು ಪುರುಷ ದೇವತೆಯಾಗಿದ್ದು, ದಂಡವನ್ನು ಹೊತ್ತಿರುವ ಮತ್ತು ಕಾಗೆಯ ಮೇಲೆ ಕುಳಿತಿರುವ ಕಪ್ಪು ಮೈಬಣ್ಣವನ್ನು ಹೊಂದಿರುವ ದೇವರು. ಅವನು ಕರ್ಮ ಮತ್ತು ನ್ಯಾಯಗಳ ದೇವರು. ಪ್ರತಿಯೊಬ್ಬರ ಆಲೋಚನೆಗಳು, ಮಾತು ಮತ್ತು ಕಾರ್ಯಗಳನ್ನು ಅವಲಂಬಿಸಿ ಫಲಿತಾಂಶಗಳನ್ನು ನೀಡುತ್ತಾನೆ. ಶನಿಯನ್ನು ಶನೀಶ್ವರ, ಛಾಯಾಸುತ, ಪಿಂಗಲ, ಕಾಕಧ್ವಜ, ಕೋನಸ್ಥ, ಬಭ್ರು, ರೌದ್ರಾಂತಕ, ಶನೇಶ್ಚರಂ, ಸೌರಿ, ಮಂದ, ಕೃಷ್ಣ, ಪಿಪ್ಪಲೇಶ್ರಯ, ರವಿಪುತ್ರ ಶನಿಮಹಾತ್ಮ ಎಂಬಿತ್ಯಾದಿ ಹೆಸರುಗಳಿಂದ ಕರೆಯುವ ಪರಿಪಾಠವಿದೆ. ಶನಿಯ ಚಲನೆಯು ಗ್ರಹಗಳಲ್ಲಿ ಅತ್ಯಂತ ನಿಧಾನವಾದದ್ದು ಎಂದು ಪರಿಗಣಿಸಲಾಗಿದೆ. ಶನಿಯು ಪ್ರತಿ ರಾಶಿಯಲ್ಲೂ ಎರಡೂವರೆ ವರ್ಷಗಳ ಕಾಲ ಇರುತ್ತಾನೆ. ಹೀಗೆ ಸೂರ್ಯನಿಗೆ ಒಂದು ಸುತ್ತು ಬರಲು ತೆಗೆದುಕೊಳ್ಳುವ ಸಮಯ 30 ವರ್ಷ.
ಶನಿಯ ಸಾಡೇಸಾತಿಯನ್ನು ಸರಳ ಭಾಷೆಯಲ್ಲಿ ಹೀಗೆ ಅರ್ಥಮಾಡಿಕೊಳ್ಳಿ. ಶನಿಯು ಒಂದು ರಾಶಿಯನ್ನು ಪ್ರವೇಶಿಸಿದಾಗ, ಅದು ಆ ರಾಶಿಯಿಂದ ಮುಂದಿನ ಹಾಗೂ ಹಿಂದಿನ ಹೀಗೆ ಮೂರು ರಾಶಿಗಳ ಮೇಲೆ ಪರಿಣಾಮವನ್ನು ಬೀಳುತ್ತಾನೆ. ಉದಾ: ಶನಿಯು ಮೀನ ರಾಶಿಯನ್ನು ಪ್ರವೇಶಿಸಿದಾಗ ಮುಂದಿನ ರಾಶಿಯಾದ ಮೇಷ ರಾಶಿಯವರ ಮೇಲೆ ಪರಿಣಾಮ ಆಗುತ್ತದೆ. ಹೀಗೆ ಮೇಷವನ್ನು ದಾಟಿ ವೃಷಭದಲ್ಲಿ ಇರುವವರೆಗೂ ಒಳ್ಳೆಯ ಅಥವಾ ಕೆಟ್ಟ ಫಲವನ್ನು ಕೊಡುತ್ತಿರುತ್ತಾನೆ. ಹೀಗೆ ಮೇಷ ರಾಶಿಯವರಿಗೆ ಮೀನ, ಮೇಷ, ವೃಷಭ ಈ ಮೂರು ರಾಶಿಯ ಒಟ್ಟು ಕಾಲ ಏಳೂವರೆ ವರ್ಷಗಳು. ಜ್ಯೋತಿಷ್ಯದಲ್ಲಿ ಇದನ್ನು ಸಾಡೇಸಾತಿ ಎಂದು ಕರೆಯಲಾಗುತ್ತದೆ.
ಶನಿ ದೇವನನ್ನು ಮೆಚ್ಚಿಸಲು ಕಪ್ಪು ಎಳ್ಳು, ಉದ್ದಿನ ಬೇಳೆ, ಕಬ್ಬಿಣದ ವಸ್ತು ಮತ್ತು ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಈ ದಿನದಂದು ಕಪ್ಪು ನಾಯಿಗೆ ಆಹಾರ ನೀಡಬಹುದು. (ಯಾವುದೇ ಬೀದಿ ನಾಯಿಗೆ ಆಹಾರ ನೀಡುವುದು ಪುಣ್ಯದ ಕೆಲಸ) ಎಳ್ಳಿನ ಎಣ್ಣೆಯಿಂದ ಶನಿ ದೇವರಿಗೆ ದೀಪ ಹಚ್ಚಬೇಕು. ಶನಿ ದೇವರು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ.
ದಾಮೋದರ ಶೆಟ್ಟಿ ಇರುವೈಲು