ವಿದ್ಯಾಗಿರಿ: ಕಡಲ ಕಿನಾರೆಯಲ್ಲಿ ಬಂದು ಬೀಳುವ ಯಾವುದೇ ಕಸ ಅದು ಇಲ್ಲಿನ ಜನರು ಹಾಕುವ ಕಸವಲ್ಲ ಬದಲಾಗಿ ನಾವೇ ನೀರಿನ ಮೂಲಗಳಿಗೆ ಎಸೆಯುವ ಕಸ ಬಂದು ಸಾಗರ ಸೇರುತ್ತದೆ. ಈ ರೀತಿಯ ನಿರಂತರ ಸ್ವಚ್ಛತಾ ಅಭಿಯಾನ ಮಾಡುವ ಉದ್ದೇಶ ಅದು ಹೊರಗೆ ಕಾಣುವ ಸ್ವಚ್ಚತೆಗಿಂತ ನಮ್ಮ ಒಳಗಿನ ಮನಸ್ಸು ಸ್ವಚ್ಛವಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಸ್ವಚ್ಛತೆಯಲ್ಲಿ ಭಾಗಿಯಾಗಿ ಯುವಕರಂತೆ ಸಕ್ರಿಯವಾಗಿ ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳು ಎಲ್ಲಾ ದೊಡ್ಡವರಿಗೆ ತೋರಿದ ಒಂದು ಉತ್ತಮ ನಿದರ್ಶನ ಎಂದು ನುಡಿದರು. ಸಸಿಹಿತ್ಲು ಕಡಲ ಕಿನಾರೆಯಲ್ಲಿ 14ನೇ ದ್ವೈವಾರ್ಷಿಕ ಕೆರೆ ಸಮ್ಮೇಳನದ-2024ರ ಕೊನೆಯ ದಿನ ಬೀಚ್ ಕ್ಲೀನಿಂಗ್ಅ ಭಿಯಾನವನ್ನು ಕೆರೆ ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯ, ರಾಷ್ಟ್ರ, ವಿದೇಶದಿಂದ ಆಗಮಿಸಿದ್ದ ವಿವಿಧ ಶಿಕ್ಷಣ ಸಂಸ್ಥೆಗಳ 120ಕ್ಕೂ ಹೆಚ್ಚು ಪ್ರತಿನಿಧಿಗಳು, ವಿದ್ಯಾರ್ಥಿಗಳು, ಆಳ್ವಾಸ್ನ ,ಎನ್.ಎಸ್.ಎಸ್.ನ ವಿದ್ಯಾರ್ಥಿಗಳು ಪಾಲ್ಗೊಂಡು ಸುಮಾರು 100 ಚೀಲದಷ್ಟು ಕಸವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ನೇಪಾಳದಿಂದ ಕೆರೆ ಸಮ್ಮೇಳನಕ್ಕೆ ಆಗಮಸಿದ್ದ ಕಟ್ಮಂಡು ವಿಶ್ವವಿದ್ಯಾಲಯದ ಪ್ರತಿನಿಧಿಗಳು, ಐ.ಸಿ.ಸಿ. ಸರ್ಫಿಂಗ್ ಸ್ವಾಮಿ ಪ್ರತಿಷ್ಠಾನದ ನಿರ್ದೇಶಕ ಗೌರವ್ ಹೆಗ್ಡೆ ಹಾಗೂ ಸರ್ಫಿಂಗ್ ಸ್ವಾಮಿ ಪ್ರತಿಷ್ಠಾನದ ಅನೇಕ ನಿರ್ದೇಶಕರು, ಸದಸ್ಯರು ಮತ್ತು ಯಂಗ್ ಇಂಡಿಯನ್ಸ್ನ ಮಧುಕರ್ ಮತ್ತು ಶರಣ್ ಶೆಟ್ಟಿ, ಆಳ್ವಾಸ್ನ ಸಿಬ್ಬಂದಿ ಭಾಗಿಯಾಗಿದ್ದರು. ಬಳಿಕ ಮೂಡಬಿದ್ರೆಯ ಸಾವಿರ ಕಂಬ ಬಸದಿಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ, ಸಂಶೋಧನಾ ವಿದ್ವಾಂಸ, ಅಧ್ಯಪಕರಿಗೆ ಮೂಡಬಿದ್ರೆ ಶ್ರೀಜೈನಮಠದ ಡಾ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.





































































































