ಬೆಂಗಳೂರಿನ ರಾಜಾಜಿ ನಗರ ರಾಮಮಂದಿರ ಮೈದಾನದಲ್ಲಿ ಅಕ್ಟೋಬರ್ 20 ರಂದು ಬೆಳಿಗ್ಗೆ 7.30 ರಿಂದ ಮೊದಲ್ಗೊಂಡು ಗಣಪತಿ ಪ್ರಾರ್ಥನೆಯೊಂದಿಗೆ ಶುಭಾರಂಭಗೊಳ್ಳಲಿರುವ ಸೇವಾ ಸಂಕಲ್ಪ ಕಾರ್ಯಕ್ರಮದಲ್ಲಿ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಮನರಂಜನ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದು ಸಾರ್ವಜನಿಕರನ್ನು ಅಭಯ ಸೇವಾ ಫೌಂಡೇಶನ್ ನ ಮುಖ್ಯಸ್ಥರಾದ ಉಮೇಶ್ ಶೆಟ್ಟಿ ಮಂದಾರ್ತಿಯವರು ಹೃತ್ಪೂರ್ವಕ ಸ್ವಾಗತಿಸುತ್ತಿದ್ದಾರೆ. ನೆತ್ತರ ನೆರವು, ಸೇವಾ ಸಂಕಲ್ಪ, ಸಂಕಲ್ಪ ಜಾಥಾ, ಸಂಗೀತ ರಸಮಂಜರಿ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನಗಳೂ ಕಾರ್ಯಕ್ರಮ ವೈವಿಧ್ಯದಲ್ಲಿ ಸೇರಿಕೊಂಡಿದೆ. ಹುಲಿ ವೇಷ, ಯಕ್ಷ ನೃತ್ಯರೂಪಕಗಳೂ ವಿಶೇಷ ಆಕರ್ಷಣೆಯಾಗಿ ಜನಮನ ಸೆಳೆಯಲಿದೆ.
ತನ್ಮಧ್ಯೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು ಭಾಗವಹಿಸಿ ಮಾರ್ಗದರ್ಶನ ನೀಡಲಿರುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ| ದೀಪಕ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಉಪ್ಪಳ, ರವಿ ಕಟಪಾಡಿಯವರನ್ನು ಸನ್ಮಾನಿಸುವುದರ ಜೊತೆಗೆ ಮಹಿಳೆಯರಿಂದ ದುರ್ಗಾ ದೀಪ ನಮಸ್ಕಾರ, ಅದನ್ನನುಸರಿಸಿ ಮೆಕ್ಕೆಕಟ್ಟು ಮೇಳದವರಿಂದ ಯಕ್ಷಗಾನ ಪ್ರದರ್ಶನವೂ ನಡೆಯಲಿವೆ. ಸಾರ್ವಜನಿಕರ ಸಂಪೂರ್ಣ ವೈದ್ಯಕೀಯ ಪರೀಕ್ಷೆ, ರೋಗ ತಪಾಸಣೆ, ವೈದ್ಯಕೀಯ ಸಲಹೆ ಜೊತೆಗೆ ಇತರ ಸಮಸ್ಯೆಗಳಿಗೆ ಮಾನವೀಯ ಸ್ಪಂದನೆಗಳಿದ್ದು, ಬೆಳಗ್ಗೆಯಿಂದ ಸಂಜೆವರೆಗೂ ಅನ್ನ ದಾಸೋಹ ನಡೆಯಲಿವೆ. ಪ್ರತೀ ಮಹತ್ವದ ಕಾರ್ಯಕ್ರಮದ ಜೊತೆಗೆ ಮನರಂಜನಾ ಕಾರ್ಯಕ್ರಮಗಳನ್ನೂ ದಿನ ಪೂರ್ತಿ ಆಯೋಜಿಸಲಾಗಿದೆ.
ಇಂದು ಜನರನ್ನು ಕಾಡುವ ವಿವಿಧ ರೋಗಗಳ ತಪಾಸಣೆ ನಡೆಸಿ ಅರ್ಹ ವೈದ್ಯರಿಂದ ಸಲಹೆ ಮಾರ್ಗದರ್ಶನ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಹೆಸರು ನೊಂದಾಯಿಸಿಕೊಳ್ಳುವಂತೆ ವಿನಂತಿಸಲಾಗಿದೆ. ಈ ಸೇವಾ ಸಂಕಲ್ಪದಲ್ಲಿ ಪ್ರತಿಜ್ಞಾ ಬದ್ಧರಾಗಿ ಸೇವೆ ಎಂಬ ಯಜ್ಞದಲ್ಲಿ ಸಮಿದೆಗಳಾಗುವ ಯೋಗವನ್ನು ಹೊಂದೋಣ ಎಂದು ಕಾರ್ಯಕ್ರಮ ಆಯೋಜಕರು, ವಿವಿಧ ವಿಭಾಗಗಳ ಪದಾಧಿಕಾರಿಗಳು, ಮುಖ್ಯ ಸಂಚಾಲಕ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.