‘ನಮ್ಮ ಸಂಸ್ಕೃತಿ ಮತ್ತು ಜನಜೀವನದೊಂದಿಗೆ ಹಾಸು ಹೊಕ್ಕಾಗಿರುವುದು ಭಾರತೀಯ ಲಲಿತ ಕಲೆಗಳು. ಪ್ರಾಚೀನ ಕಾಲದಿಂದಲೂ ಅವುಗಳಿಗೆ ಆಸರೆಯಾಗಿರುವುದು ಇಲ್ಲಿನ ದೇಗುಲಗಳು. ವಿಶೇಷ ಪರ್ವಕಾಲಗಳಲ್ಲಿ ಸಂಗೀತ, ನೃತ್ಯ, ಯಕ್ಷಗಾನಗಳು ನಡೆಯದಿರುವ ದೈವ ಸಾನಿಧ್ಯಗಳೇ ನಮ್ಮಲ್ಲಿಲ್ಲ. ಅದರಲ್ಲೂ ಯಕ್ಷಗಾನ ತಾಳಮದ್ದಳೆ, ಪುರಾಣ ಪ್ರವಚನ ಮತ್ತು ಬಯಲಾಟಗಳು ಆರಂಭಗೊಂಡಿರುವುದು ಈ ದೇವಸ್ಥಾನಗಳಿಂದಲೇ’ ಎಂದು ಖ್ಯಾತ ಯಕ್ಷಗಾನ ಅರ್ಥಧಾರಿ ಮತ್ತು ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.


ಹರೇಕಳ ಗ್ರಾಮದ ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಯಕ್ಷಗಾನ ತಾಳಮದ್ದಳೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಶುಭಾಶಂಸನೆಗೈದರು. ಮುಂಬೈ ಉದ್ಯಮಿ ಜಗದೀಶ ಪೂಜಾರಿ ಇರಾ ಆಚೆಬೈಲು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ದಾಸ್ ರೈ ದೆಬ್ಬೇಲಿ ಗುತ್ತು ಅವರ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿ, ಪ್ರಮುಖರಾದ ಕಡೆಂಜ ಜಗಜೀವನ್ ದಾಸ್ ಶೆಟ್ಟಿ, ಶಾಂತಾರಾಮ ರೈ ಎಲಿಯಾರ್, ಪದ್ಮನಾಭ ಶೆಟ್ಟಿ ದೋಟ, ಭಾಸ್ಕರ ರೈ ಸಂಪಿಗೆದಡಿ ಉಪಸ್ಥಿತರಿದ್ದರು.
ತಾಳಮದ್ದಳೆಯ ಸಂಘಟಕ ಪ್ರವೀಣ್ ರೈ ಎಲಿಯಾರ್ ಸ್ವಾಗತಿಸಿದರು. ಕೆ. ಲಕ್ಷ್ಮೀ ನಾರಾಯಣ ರೈ ಹರೇಕಳ ವಂದಿಸಿದರು. ಹರೀಶ್ ಆಚಾರ್ಯ ಮತ್ತು ವಾಮನ್ ರಾಜ್ ಪಾವೂರು ಸಹಕರಿಸಿದರು. ಸದಾಶಿವ ಆಚಾರ್ಯ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

ಉತ್ಸವದ ಅಂಗವಾಗಿ ಪ್ರಸಿದ್ಧ ಕಲಾವಿದರಿಂದ ‘ಯಾಗ ಸಂಕಲ್ಪ – ಮಾಗಧ ವಧೆ’ ಯಕ್ಷಗಾನ ತಾಳಮದ್ದಳೆ ಜರಗಿತು. ಶಂಭು ಶರ್ಮ ವಿಟ್ಲ, ಭಾಸ್ಕರ ರೈ ಕುಕ್ಕುವಳ್ಳಿ, ಪ್ರಭಾಕರ ಶೆಟ್ಟಿ ಕುತ್ತಾರು ಗುತ್ತು, ಗಣೇಶ ಕಾವ ಅಂಡಾಲ ಬೀಡು, ವಿಶ್ವನಾಥ ಆಳ್ವ ನಾಡಾಜೆ, ಪ್ರವೀಣ ರೈ ಎಲಿಯಾರ್ ಅರ್ಥಧಾರಿಗಳಾಗಿದ್ದರು. ರಾಜಾರಾಮ ಹೊಳ್ಳ ಕೈರಂಗಳ ಮತ್ತು ಶಿಶಿರ್ ಕೃಷ್ಣ ಬಲ್ಲಾಳ್ ಚಿಪ್ಪಾರು ಅವರ ಭಾಗವತಿಗೆ ಕೃಷ್ಣಪ್ಪ ಕಿನ್ಯಾ, ರಾಜಾರಾಮ್ ಬಳ್ಳಾಲ್ ಚಿಪ್ಪಾರು,ರಾಜೇಶ್ ಆಚಾರ್ಯ ಕಂಡಿಲ ಮತ್ತು ಪ್ರಕಾಶ್ ಕಿನ್ಯಾ ಹಿಮ್ಮೇಳದಲ್ಲಿ ಸಹಕರಿಸಿದರು.





































































































