ತ್ಯಾಗ ಮತ್ತು ಸೇವೆಯ ಆಚರಣೆ ಶಿವಾಯ ಫೌಂಡೇಶನ್ ನಿಂದ ಆಗುತ್ತಿದೆ. ಕೆಲವರು ತೋರಿಕೆಗೆ ಸೇವೆ ಮಾಡುವವರಿದ್ದಾರೆ. ಅರ್ಹ ವ್ಯಕ್ತಿಗಳಿಗೆ ಸೇವೆ ಸಲ್ಲಿಸುವವರು ಬಹಳ ವಿರಳ. ಆದರೆ ಶಿವಾಯ ಫೌಂಡೇಶನ್ ಹಾಗಲ್ಲ. ಅರ್ಹರನ್ನು, ಅಶಕ್ತರನ್ನು ಗುರುತಿಸಿ ಮಾಡುವ ಅವರ ಸೇವೆಯು ಎಲ್ಲರಿಗೂ ಮಾದರಿ. ಬಡವರ ಕಣ್ಣೀರು ಒರೆಸುವ ಸೇವೆಯೇ ಭಗವಂತನ ಸೇವೆ. ಅಂತಹ ಸೇವೆಯ ಮುಖಾಂತರ ಶಿವಾಯ ಫೌಂಡೇಶನ್ ಯುವ ಜನಾಂಗಕ್ಕೆ ಸಂಸ್ಕಾರದ ಪಾಠವನ್ನು ಕಲಿಸುತ್ತಿದೆ. ಸಂಸ್ಕಾರಯುತವಾಗಿ ಬದುಕುವ ತಿಳುವಳಿಕೆ ಮನೋಭಾವನೆ ನಮ್ಮಲ್ಲಿ ಬೆಳೆದಲ್ಲಿ ನಾವು ಇತರರಿಗೆ ಆದರ್ಶ ವ್ಯಕ್ತಿ ಶಕ್ತಿಯಾಗ ಬಲ್ಲೆವು. ಇದನ್ನು ಶಿವಾಯ ಫೌಂಡೇಶನ್ ತಮ್ಮ ಸಮಾಜ ಪರ ಕಾರ್ಯ ವೈಖರಿಯನ್ನು ತೋರಿಸಿಕೊಟ್ಟಿದೆ. ನಮ್ಮ ಸೇವೆಯೇ ಸಾಧನೆಯಾಗಬೇಕು ಎಂದು ಒಡಿಯೂರು ಮಹಾ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಆಗಸ್ಟ್ 02 ಬುಧವಾರದಂದು ಜೂಹಿನಗರ ಬಾಂಬೆ ಬಂಟ್ಸ್ ಅಸೋಸಿಯೇಷನ್, ಬಂಟ್ಸ್ ಸೆಂಟರ್ ನಲ್ಲಿ ಶಿವಾಾಯ ಪೌಂಡೇಶನ್ (ರಿ.) ಮುಂಬೈನ ಆರನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದಲ್ಲಿ ದೀಪವನ್ನು ಪ್ರಜ್ವಲಿಸಿ, ಭಕ್ತರಿಗೆ ಆಶೀರ್ವಚನವನ್ನು ನೀಡಿದರು.
ಶಿವಾಯ ಫೌಂಡೇಶನ್ ನಲ್ಲಿ ಸಾಮಾನ್ಯ ವ್ಯಕ್ತಿಗಳು ಸೇರಿ ಮಾಡುತ್ತಿರುವ ಅಸಾಮಾನ್ಯ ಸೇವಾ ಕಾರ್ಯಗಳು ತುಂಬಾ ಮೆಚ್ಚುವಂತದ್ದು. ತಮ್ಮ ದುಡಿಮೆಯ ಅಲ್ಪಾಂಶವನ್ನು ಸಮಾಜ ಸೇವೆಗೆ ಮೀಸಲಿಡುವ ಫೌಂಡೇಶನ್ ನ ಸದಸ್ಯರ ಹೃದಯ ವಿಕಾಸಗೊಂಡಿದೆ ಎಂದ ಸ್ವಾಮೀಜಿ ಪ್ರಸ್ತುತ ವೃದ್ಧಾಶ್ರಮ, ಅನಾಥಾಶ್ರಮ ವೃದ್ಧಿಯಾಗುತ್ತಿರುವುದು ವಿಷಾದನೀಯ. ಪಾಲಕರನ್ನು ಉತ್ತಮ ರೀತಿಯಲ್ಲಿ ಪೋಷಣೆ ಮಾಡುವ ಜವಾಬ್ದಾರಿ ಮಕ್ಕಳ ಮೇಲಿದೆ. ತಂದೆ ತಾಯಿಯನ್ನು ಕಡೆಗಣಿಸಿ ಯಾವುದೇ ಸೇವೆಯನ್ನು ಮಾಡಿದರೂ ಅದಕ್ಕೆ ಫಲವಿಲ್ಲ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.
ಈ ಸಂದರ್ಭದಲ್ಲಿ ಶಿವಾಯ ಪೌಂಡೇಶನ್ ವತಿಯಿಂದ ಬಾಂಬೇ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ನವಿ ಮುಂಬೈ ಮಾಜಿ ನಗರಸೇವಕ, ರಂಗೋಲಿ ಸುರೇಶ್ ಜಿ. ಶೆಟ್ಟಿ, ಸಮಾಜ ಸೇವಕ ಜಯ ಕರ್ನಾಟಕ ಜನಪರ ವೇದಿಕೆ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ನಿಡಗೋಡು ಅವರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ, ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿ ಬಂಟರ ಸಂಘ ಮುಂಬೈಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ ಮಾತನಾಡಿ, ದೊಡ್ಡ ದೊಡ್ಡ ಸಂಘ ಸಂಸ್ಥೆಗಳು ಮಾಡದ ಕೆಲಸವನ್ನು ಶಿವಾಯ ಫೌಂಡೇಶನ್ ಮಾಡುತ್ತಿದೆ. ಸಮಾಜ ಪರ ಕೆಲಸ ಮಾಡುವವರನ್ನು ಯಾವತ್ತೂ ಜನ ಬೆನ್ನು ತಟ್ಟುತ್ತಾರೆ. ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದು ಮುಖ್ಯವಲ್ಲ ಹೇಗೆ ಬದುಕಿದ ಎಷ್ಟು ಜನರಿಗೆ ಉಪಕಾರಿಯಾಗಿದ್ದ ಎನ್ನುವುದು ಮುಖ್ಯ. ಅಂತಹ ಪರೋಪಕಾರದ ಆದರ್ಶ ಬದುಕನ್ನು ಶಿವಾಯ ಫೌಂಡೇಶನ್ ಸದಸ್ಯರು ಕಟ್ಟಿಕೊಂಡಿದ್ದಾರೆ. ಎಲ್ಲರ ಸಹಕಾರದೊಂದಿಗೆ ಈ ಫೌಂಡೇಶನ್ ಉತ್ತರೋತ್ತಾರ ಅಭಿವೃದ್ಧಿ ಹೊಂದಲಿ ಎಂದರು. ಬಂಟರ ಸಂಘ ಮುಂಬೈಯ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ಧಕಟ್ಟೆ ಮಾತನಾಡಿ, ಬಡವರಿಗಾಗಿ ನಿಸ್ವಾರ್ಥ ಸೇವೆಗೈಯುತ್ತಿರುವ ಶಿವಾಯ ಫೌಂಡೇಶನ್ ಗೆ ಎಲ್ಲರೂ ಪ್ರೋತ್ಸಾಹ, ಸಹಕಾರವನ್ನು ನೀಡಬೇಕು. ಅವರು ಮಾಡುತ್ತಿರುವ ಸಮಾಜಪರ ಚಟುವಟಿಕೆಗಳಲ್ಲಿ ನಾವೆಲ್ಲ ಕೈಜೋಡಿಸೋಣ ಎಂದರು.
ಕನ್ನಡ ಸಂಘ ವಿಕ್ರೋಲಿಯ ಅಧ್ಯಕ್ಷ ಉದಯ ಶೆಟ್ಟಿ ಪೇಜಾವರ ಮಾತನಾಡಿ, ಒಗ್ಗಟ್ಟು ಹೊಂದಾಣಿಕೆಯೊಂದಿಗೆ ಶಿವಾಯ ಫೌಂಡೇಶನ್ ಸದಸ್ಯರು ಜನಪರ ಸೇವೆ ಮಾಡುತ್ತಿದ್ದಾರೆ. ವಿಕ್ರೋಲಿ ಪರಿಸರದಲ್ಲಿ ಪ್ರಗತಿ ವಿದ್ಯಾಲಯಕ್ಕೆ ಕೊಠಡಿ ನಿರ್ಮಾಣ ಹಾಗೂ ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ವೈದ್ಯಕೀಯ ಸಹಾಯವನ್ನು ನೀಡಿದ್ದಾರೆ. ಇವರ ಸೇವಾ ಕಾರ್ಯಗಳು ನಿರಂತರ ಮುಂದುವರೆಯಲಿ. ನಾವೆಲ್ಲಾ ಈ ಸಂಸ್ಥೆಯ ಜೊತೆಗಿರೋಣ ಎಂದರು. ಬಂಟರ ಸಂಘ ಮುಂಬೈಯ ಸದಸ್ಯತ್ವ ಅಭಿಯಾನ ಕಾರ್ಯಾಧ್ಯಕ್ಷ ಅನಿಲ್ ಶೆಟ್ಟಿ ಪಾಂಗಾಳ ಮಾತನಾಡಿ, ಶಿವಾಯ ಫೌಂಡೇಶನ್ ನ ವಿವಿಧ ರೀತಿಯ ಸಾಮಾಜಿಕ ಸೇವೆಯೊಂದಿಗೆ ಶಿಕ್ಷಣಕ್ಕೂ ಹೆಚ್ಚು ಮಹತ್ವ ನೀಡುತ್ತಿರುವುದನ್ನು ತಿಳಿದು ತುಂಬಾ ಸಂತೋಷವಾಗಿದೆ. ನಾನೋರ್ವ ಶಿಕ್ಷಣದ ಅಭಿಮಾನಿ. ಆರ್ಥಿಕವಾಗಿ ಹಿಂದುಳಿದವರ ಶಿಕ್ಷಣಕ್ಕೆ ಸದಾ ಸಹಾಯ ನೀಡುತ್ತಾ ಬಂದಿದ್ದೇನೆ. ನಿಮ್ಮ ಸೇವಾ ಕಾರ್ಯದ ಜೊತೆಗಿದ್ದು ಸಹಕರಿಸುವೆನು ಎಂದರು. ಅಯ್ಯಪ್ಪ ಸೇವಾ ಸಮಿತಿ ಐರೋಲಿ ಅಧ್ಯಕ್ಷ ಗಂಗಾಧರ ಬಂಗೇರ ಮಾತನಾಡಿ, ಶಿವಾಯ ಫೌಂಡೇಶನ್ ಮಾಡುತ್ತಿರುವ ಸಮಾಜ ಪರ ಸೇವಾ ಕಾರ್ಯಗಳು ಸುಲಭವಾದುದಲ್ಲ. ಸಮಾಜಕ್ಕೆ ಫೌಂಡೇಶನ್ ಮಾಡುತ್ತಿರುವ ಅತ್ಯಮೂಲ್ಯ ಸೇವೆಗೆ ನಾವೆಲ್ಲ ತಲೆ ಬಾಗಬೇಕು. ಈ ಸಂಸ್ಥೆಯಲ್ಲಿ ದುಡಿಯುವವರಿಗೆ ಯಾವುದೇ ಅಧಿಕಾರ, ಹುದ್ದೆಯ ದಾಹವಿಲ್ಲ. ಸಮಾಜ ಸೇವೆಯೇ ಇವರ ಮುಖ್ಯ ಧ್ಯೇಯವಾಗಿದೆ. ಆರು ವರ್ಷದೊಳಗೆ ದೊಡ್ಡ ಮಟ್ಟದ ಸೇವೆಯೊಂದಿಗೆ ಬೆಳೆದ ಈ ಸಂಸ್ಥೆಯ ಜೊತೆ ನಾನೂ ಕೂಡ ಅಳಿಲು ಸೇವೆಯನ್ನು ಸಲ್ಲಿಸಲು ಇಚ್ಛೆ ಪಡುತ್ತೇನೆ ಎಂದರು. ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಕಾಮೋಟೆಯ ಅಧ್ಯಕ್ಷ ಸುಜಿತ್ ಪೂಜಾರಿ ಮಾತನಾಡಿ, ನಮ್ಮ ಹಿರಿಯರು ನಮಗೆ ಒಳ್ಳೆಯ ಸಂಸ್ಕೃತಿ ಸಂಸ್ಕಾರವನ್ನು ನೀಡಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ನಮ್ಮ ಮಕ್ಕಳಿಗೂ ಆ ಸಂಸ್ಕೃತಿ, ಸಂಸ್ಕಾರವನ್ನು ನೀಡಿ ಬೆಳೆಸುವ ಅಗತ್ಯವಿದೆ. ಆಧುನಿಕತೆಯ ಭರಾಟೆಯಲ್ಲಿ ನಾವು ಮಕ್ಕಳನ್ನು ಉತ್ತಮ ಶಿಕ್ಷಣವನ್ನು ನೀಡಲು ಶ್ರಮ ಪಡುತ್ತೇವೆ. ಆದರೆ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ನೀಡಲು ಹಿಂದೆ ಬೀಳುತ್ತಿದ್ದೇವೆ. ಈ ಸಂಸ್ಕೃತಿ ಸಂಸ್ಕಾರದ ಕೊರತೆಯಿಂದಾಗಿ ಮಕ್ಕಳು ಪಾಲಕರನ್ನು ವೃದ್ಧಾಶ್ರಮಕ್ಕೆ ತಲ್ಲುವಂತಹ ಸ್ಥಿತಿ ಕಂಡು ಬರುತ್ತಿದೆ. ಪಾಲಕರ ಕೊನೆಗಾಲದಲ್ಲಿ ಅವರ ಜೊತೆ ನಿಲ್ಲುವುದು ಮಕ್ಕಳ ಕರ್ತವ್ಯ. ಶಿವಾಯ ಫೌಂಡೇಶನ್ ನಿಂದ ನಾವು ಮಾನವೀಯ ಮೌಲ್ಯದ ಪಾಠ ಕಲಿಯುವಂತಿದೆ ಎಂದರು.
ಸಮಾಜ ಸೇವಕ ಕಿಶೋರ್ ಶೆಟ್ಟಿ ಮಾತನಾಡಿ, ಆರು ವರ್ಷಗಳಲ್ಲಿ ಶಿವಾಯ ಫೌಂಡೇಶನ್ ಸಮಾಜಕ್ಕೆ ನೀಡಿದ ಸೇವೆಯನ್ನು ನೋಡಿ ಮನ ತುಂಬಿ ಬಂದಿದೆ. ಮಾನವೀಯತೆಯ ಸೇವೆಗಳು ಮುಂದೆಯೂ ನಿಮ್ಮಿಂದ ನಡೆಯಲಿ. ನಿಮ್ಮ ಸೇವಾ ಕಾರ್ಯಗಳಿಗೆ ನಾವೆಲ್ಲ ಸದಾ ಕೈ ಜೋಡಿಸುತ್ತೇವೆ ಎಂದರು. ಥಾಣೆ ಬಂಟ್ಸ್ ಎಸೋಸಿಯೇಷನ್ ನಿಕಟಪೂರ್ವ ಕಾರ್ಯಾಧ್ಯಕ್ಷೆ ತಾರಾ ಪಿ. ಶೆಟ್ಟಿ ಮಾತನಾಡಿ, ಮನುಷ್ಯರಾಗಿ ಬುದ್ಧಿ ಜೀವಿಗಳಾಗಿ ಹುಟ್ಟಿದ ನಾವು ಕೇವಲ ನಮಗಾಗಿ ಬದುಕಬಾರದು. ಇತರರ ಕಷ್ಟಗಳಿಗೂ ಸ್ಪಂದಿಸುವ ಬದುಕು ನಮ್ಮದಾಗಬೇಕು. ಶಿವಾಯ ಫೌಂಡೇಶನ್ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಸೇವೆಯ ಮೂಲಕ ಮಾನವೀಯ ಧರ್ಮಕ್ಕೆ ಬೆಲೆ ನೀಡುವ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು.
ವೇದಿಕೆಯಲ್ಲಿ ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ, ನವೀನ್ ಚಂದ್ರ ಜೆ ಶೆಟ್ಟಿ, ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಂಘ ಸಿಬಿಡಿ ಅಧ್ಯಕ್ಷ ಸಿಬಿಡಿ ಭಾಸ್ಕರ್ ಶೆಟ್ಟಿ, ವಾಸ್ತು ಮಾರ್ತಾಂಡ ಪಂಡಿತ್ ನವೀನ್ ಚಂದ್ರ ಸನಿಲ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿವಾಯ ಫೌಂಡೇಶನ್ ವತಿಯಿಂದ ಅರ್ಹರಿಗೆ ಶೈಕ್ಷಣಿಕ ಸಹಾಯವನ್ನು ವಿತರಿಸಲಾಯಿತು. ಗಾಯಕ ವಿಜಯ್ ಕುಮಾರ್ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆಗೈದರು. ಶಿವಾಯ ಫೌಂಡೇಶನ್ ವೈದಕೀಯ ಸಲಹೆಗಾರ್ತಿ ಡಾ. ಸ್ವರ್ಣಲತಾ ಶೆಟ್ಟಿ, ರಂಗ ನಟ ಸಚಿನ್ ಪೂಜಾರಿ ಭಿವಂಡಿ, ರಂಗಭೂಮಿ ಫೈನ್ ಆರ್ಟ್ಸ್ ನ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಧಾರ್ಮಿಕ ಸಭೆಯ ಬಳಿಕ ಜಾನಪದ ನೃತ್ಯದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ತದ ನಂತರ ಕೊಡ್ಯಡ್ಕ ಕ್ರಿಯೇಶನ್ಸ್ ಅವರಿಂದ ‘ಆಲ್ ಎನ್ನಾಲ್’ ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಂಡಿತು. ಶಿವಾಯ ಫೌಂಡೇಶನ್ ಸಮೀತಿಯ ಉಪಾಧ್ಯಕ್ಷ ಮಧುಸೂದನ್ ಶೆಟ್ಟಿ ಹಿರಿಯಡ್ಕ, ಗೌರವ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಪಂಜ, ಜೊತೆ ಕಾರ್ಯದರ್ಶಿ ಜ್ಯೋತಿ ಶೆಟ್ಟಿ, ಕೋಶಾಧಿಕಾರಿ ವಿನೋದ್ ದೇವಾಡಿಗ, ಜೊತೆ ಕೋಶಾಧಿಕಾರಿ ಶಿಲ್ಪಾ ಗೌಡ ಮಂಡ್ವಕರ್, ಉಪ ಸಂಚಾಲಕಿ ಸ್ವೀಟಿ ಲುಲ್ಲಾ, ಉಪ ಸಂಚಾಲಕರುಗಳಾದ ಸಂದೀಪ್ ಶೆಟ್ಟಿ, ತಾರಾನಾಥ ರೈ, ಹರೀಶ್ ಕೋಟ್ಯಾನ್ ಪಡು ಇನ್ನ, ನವೀನ್ ಪಡು ಇನ್ನ ಮತ್ತು ಶ್ವೇತಾ ಶೆಟ್ಟಿ ಗೌರವ ಸಲಹೆಗಾರರಾದ ಪ್ರಭಾಕರ್ ಶೆಟ್ಟಿ, ಕಿರಣ್ ಜೈನ್, ರವಿ ಶೆಟ್ಟಿ ಪಾದೆಬೆಟ್ಟು, ಮಂಜುಳಾ ಶೆಣೈ, ರಕ್ಷಾ ಶೆಟ್ಟಿ, ಮಲ್ಲಿಕಾ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.