ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹವರ್ತಿ ಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ತನ್ನ ಸದಸ್ಯರಿಗಾಗಿ ಮೊದಲ ಬಾರಿಗೆ “ದಂತ ಆರೋಗ್ಯ ಜಾಗೃತಿ ಶಿಬಿರ” ವನ್ನು ಆಯೋಜಿಸಿತು. ಈ ಕಾರ್ಯಕ್ರಮವನ್ನು 2024 ರ ಸೆಪ್ಟೆಂಬರ್ 27 ರಂದು ದೋಹಾದ ವೈಬ್ರೆಂಟ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ “ಎಲ್ಲರೂ ಮನಸಾರೆ ನಕ್ಕುಬಿಡಿ” ಎಂಬ ಟ್ಯಾಗ್ ಲೈನ್ ಅಡಿಯಲ್ಲಿ ನಡೆಸಲಾಯಿತು. ದಂತ ಜಾಗೃತಿ ಶಿಬಿರವು ಬಾಯಿಯ ನೈರ್ಮಲ್ಯ, ಹಲ್ಲಿನ ಖಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿಯಮಿತ ದಂತ ತಪಾಸಣೆಯ ಪ್ರಾಮುಖ್ಯತೆಯ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿತ್ತು. ದೋಹಾದ ಪ್ರಮುಖ ದಂತ ಆರೋಗ್ಯ ಕೇಂದ್ರಗಳಲ್ಲಿ ಒಂದಾದ “ಕಿಂಗ್ಸ್ ಡೆಂಟಲ್ ಸೆಂಟರ್” ನ ವೈದ್ಯರು ಸ್ವಯಂಪ್ರೇರಿತರಾಗಿ ಶಿಬಿರದಲ್ಲಿ ಭಾಗವಹಿಸಿದರು. ಕರ್ನಾಟಕ ಸಂಘ ಕತಾರ್ ನ ಸುಮಾರು 100 ಸದಸ್ಯರು ನೋಂದಾಯಿಸಿಕೊಂಡರು ಮತ್ತು ಜಾಗೃತಿ ಶಿಬಿರದಿಂದ ಪ್ರಯೋಜನ ಪಡೆದರು.
ಡಾ.ಸಫೀರಾ ಮೊಯಿದ್ದೀನ್ ಕುಟ್ಟಿ, ಡಾ.ರಾಜು ನಾಗರದ ಜಯಣ್ಣ, ಡಾ.ರುಕ್ಶನ್ ಅಂಜುಮ್ ಮುಹಮ್ಮದ್ ಗಾಲಿಬ್, ಡಾ.ಮಿಥುನ್ ರವೀಂದ್ರನ್ ಮಲಯಿಲ್, ಡಾ.ನೌರೀನ್ ಎಸ್.ಎ.ಪಿ., ಡಾ.ನೆಬೀಲ್ ಪಿ.ಪಿ., ಡಾ.ರಶ್ಮಿ ಬಂಗೇರ ಅವರು ನೋಂದಾಯಿತ ಎಲ್ಲರಿಗೂ ವೈಯಕ್ತಿಕ ದಂತ ಸಲಹೆಗಳನ್ನು ನೀಡಿದರು. ಕರ್ನಾಟಕ ಸಂಘ ಕತಾರ್ ನ ಪ್ರಮುಖ ವೈದ್ಯ ಮತ್ತು ಸದಸ್ಯರು ಡಾ.ರಾಜು ಅವರು ಸಂಘದ ಕನ್ನಡ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಬ್ರಷ್ ಮಾಡುವ ತಂತ್ರಗಳು, ಫ್ಲೋಸಿಂಗ್ ಮತ್ತು ಹಲ್ಲಿನ ಆರೋಗ್ಯದ ಮೇಲೆ ಪೌಷ್ಠಿಕಾಂಶದ ಪರಿಣಾಮದಂತಹ ವಿಷಯಗಳ ಬಗ್ಗೆ ಚರ್ಚಿಸಿದರು. ಭಾಗವಹಿಸಿದ ಎಲ್ಲರೂ ಉಚಿತ ದಂತ ತಪಾಸಣೆಯನ್ನು ಪಡೆದರು. ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು, ಸಲಹಾ ಸಮಿತಿ ಅಧ್ಯಕ್ಷ ಮಹೇಶ್ ಗೌಡ, ಸಲಹಾ ಸಮಿತಿ ಸದಸ್ಯರಾದ ಅರುಣ್ ಕುಮಾರ್, ವಿ.ಎಸ್ ಮನ್ನಂಗಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ ಶ್ರೀಮತಿ ಮಿಲನ್ ಅರುಣ್, ಕರ್ನಾಟಕ ಸಂಘ ಕತಾರ್ ನ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಹಾಲಿ ಸದಸ್ಯರು ಉಪಸ್ಥಿತರಿದ್ದರು. ಪ್ರತಿಷ್ಠಿತ ಸಂಸ್ಥೆ ಮೆಗಾ ಮಾರ್ಟ್ ವತಿಯಿಂದ ಎಲ್ಲಾ ನೋಂದಾಯಿತ ಸದಸ್ಯರಿಗೆ ದಂತ ಆರೈಕೆ ಕಿಟ್ ಗಳನ್ನು ವಿತರಿಸಲಾಯಿತು.
ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಶ್ರೀಮತಿ ಭುವನಾ ಸೂರಜ್ ಅವರು ಮುತುವರ್ಜಿ ವಹಿಸಿ ಎಲ್ಲಾ ನಿರ್ವಹಣಾ ಸಮಿತಿಯ ಸದಸ್ಯರ ಬೆಂಬಲದೊಂದಿಗೆ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾರ್ಯಕ್ರಮದ ಕೊನೆಯಲ್ಲಿ, ಜಂಟಿ ಕಾರ್ಯದರ್ಶಿ ಎಲ್ ಜಿ ಪಾಟೀಲ್ ಅವರು ವೈದ್ಯರಿಗೆ ಸಂಕ್ಷಿಪ್ತ ಧನ್ಯವಾದ ಕಾರ್ಯಕ್ರಮವನ್ನು ನಡೆಸಿದರು.
ಕರ್ನಾಟಕ ಸಂಘ ಕತಾರ್ ನ ಅಧ್ಯಕ್ಷ ರವಿ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ವೈದ್ಯರ ಮಹತ್ವವನ್ನು ತಿಳಿಸುವ ಮತ್ತು ವೈದ್ಯರನ್ನು ಜೀವ ಉಳಿಸುವವರಿಗೆ ಹೋಲಿಸುವ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿ, ನಿರ್ವಹಣಾ ಸಮಿತಿ, ಸ್ವಯಂಸೇವಕರಿಗೆ ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ಹಾಜರಿದ್ದ ಎಲ್ಲಾ ವೈದ್ಯರಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಿದರು. ಡಾ.ರಾಜು ಜಯಣ್ಣ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಿಂಗ್ಸ್ ಡೆಂಟಲ್ ಸೆಂಟರ್ ನ ನಾಯಕತ್ವವು ಕತಾರ್ ನಿವಾಸಿಗಳಿಗೆ ಚಿಕಿತ್ಸೆಯನ್ನು ಹೇಗೆ ಕೈಗೆಟುಕುವಂತೆ ಮಾಡುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು ಮತ್ತು ಸಮುದಾಯದಲ್ಲಿ ದಂತ ಆರೋಗ್ಯ ತಪಾಸಣೆಗೆ ವೇದಿಕೆಯನ್ನು ಒದಗಿಸಿದ್ದಕ್ಕಾಗಿ ಕರ್ನಾಟಕ ಸಂಘಕ್ಕೆ ಧನ್ಯವಾದ ಅರ್ಪಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರು ಶ್ರೀಧರ ಚಂದ್ರ ಸಭೆಗೆ ವಂದಿಸುವ ಮೂಲಕ ಶಿಬಿರವನ್ನು ಮುಕ್ತಾಯಗೊಳಿಸಿದರು.