ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಮನೋವಿಜ್ಞಾನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮಣಿಪಾಲದ ಅಂಗರಚನಾಶಾಸ್ತ್ರ ಪ್ರಯೋಗಾಲಯ ಹಾಗೂ ಕನ್ನಡ ದಿನಪತ್ರಿಕೆ ಉದಯವಾಣಿಯ ಕೇಂದ್ರ ಕಚೇರಿಗೆ ಭೇಟಿ ನೀಡಿದರು.

ಮೊದಲಿಗೆ ಮಣಿಪಾಲ ಮ್ಯೂಸಿಯಂಗೆ ಭೇಟಿ ನೀಡಿದ ವಿದ್ಯಾರ್ಥಿಗಳು, ಪ್ರಾಣಿಗಳು ಮತ್ತು ಮಾನವರ ವಿವಿಧ ಅಂಗರಚನಾ ರಚನೆಗಳನ್ನು ಮತ್ತು ವಿಶೇಷವಾಗಿ ಮಾನವರ ವಿವಿಧ ರೋಗಶಾಸ್ತ್ರಕ್ಕೆ ಸಂಬಂಧಿಸಿದ ಮಾದರಿಗಳನ್ನು ವೀಕ್ಷಿಸಿದರು. ಭೇಟಿಯು ಉತ್ಕೃಷ್ಟ ಪ್ರೇರಕ ಅನುಭವವಾಗಿ ಹೊರಹೊಮ್ಮಿತು. ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ಒದಗಿಸಿತು.
ನಂತರ ಉದಯವಾಣಿ ದಿನಪತ್ರಿಕೆ ಕಚೇರಿಗೆ ಭೇಟಿ ನೀಡಿ ಸ್ಥಾನೀಯ ಸಂಪಾದಕ ಕೃಷ್ಣ ಭಟ್ರೊಂದಿಗೆ ಸಂವಾದ ನಡೆಸಿದರು. ಆ ಬಳಿಕ ಕಚೇರಿಯ ಸಿಬ್ಬಂದಿ ವರ್ಗದವರು ಪತ್ರಿಕೆಯ ವಿವಿಧ ಅಂಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಉದಯವಾಣಿ ಡಿಜಿಟಲ್ನ ಸಿಬ್ಬಂದಿ ಡಿಜಿಟಲ್ ವಿಭಾಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮುದ್ರಣ ವಿಭಾಗದ ಸಿಬ್ಬಂದಿ ಮುದ್ರಣ ತಂತ್ರಜ್ಞಾನ ಹಾಗೂ ಪ್ರಕ್ರಿಯೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರಕ್ಷಿತಾ ತೋಡಾರು, ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಜೋಶ್ವಿತಾ ಡೆಸಾ, ಉಪನ್ಯಾಸಕರಾದ ವಿವೇಕ್ ಜತೆಗಿದ್ದರು





































































































