ನವರಾತ್ರಿ ಹಬ್ಬವನ್ನು ಕರ್ನಾಟಕದಲ್ಲಿ ನಾಡಹಬ್ಬ ದಸರಾ ಎಂದೂ, ಪಶ್ಚಿಮ ಬಂಗಾಲದಲ್ಲಿ ದುರ್ಗಾಪೂಜಾ ಎಂದೂ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯ ಒಂಬತ್ತು ವಿವಿಧ ರೂಪಗಳನ್ನು ಆರಾಧಿಸಲಾಗುತ್ತದೆ. ವಿಜಯದಶಮಿಯ ದಿನ ಶಮೀ ವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮೀಯನ್ನು ವಿನಿಯೋಗ ಮಾಡಲಾಗುತ್ತದೆ. “ಶಮೀ ಶಮಯತೇ ಪಾಪಂ” ಎಂಬುದಾಗಿ ಶಮೀಯು ಪಾಪನಾಶಕ ಎಂಬ ನಂಬಿಕೆಯೂ ಇದೆ. ದಸರಾವನ್ನು ದಶಹರಾ ಎಂಬುದಾಗಿ ಕರೆಯಲಾಗುತ್ತದೆ. ಮಹಿಷಾಸುರನ ಮಾಯೆಯನ್ನು ಗುರುತಿಸಿ ಆತನ ಆಸುರೀ ಪಾಶದಿಂದ ಮುಕ್ತರಾಗಲು ಶಕ್ತಿಯ ಉಪಾಸನೆ ಅಗತ್ಯ. ಅದಕ್ಕೋಸ್ಕರ ನವರಾತ್ರಿಯ ಒಂಬತ್ತು ದಿನವೂ ಶಕ್ತಿಯ ಉಪಾಸನೆ ಮಾಡಿ ದಶಮಿಯಂದು ವಿಜಯೋತ್ಸವ ಆಚರಿಸಲಾಗುತ್ತದೆ. ಇದನ್ನು ದಶಹರಾ ಅಥವಾ ದಸರಾ ಎನ್ನುತ್ತಾರೆ.
ದಶ ಎಂದರೆ ಹತ್ತು ಮತ್ತು ಹರ ಎಂದರೆ ಸೋತಿವೆ ಎಂದರ್ಥ. ಇಲ್ಲಿ ದುಷ್ಟರ ನಾಶವಾಗಿ ಶಿಷ್ಟರ ಸಂರಕ್ಷಣೆಯಾಗುತ್ತದೆ. ದಸರಾದ ಮೊದಲ ಒಂಬತ್ತು ರಾತ್ರಿಗಳಲ್ಲಿ ಎಲ್ಲಾ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತದೆ. ಅಂದರೆ ದಶದಿಕ್ಪಾಲಕರು, ಗಣರು ಮುಂತಾದವರ ಮೇಲೆ ದೇವಿಯ ನಿಯಂತ್ರಣ ಇರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ. ನವರಾತ್ರಿ, ಒಂಬತ್ತು ರಾತ್ರಿಗಳಲ್ಲಿ ದೇವಿಯ ಒಂದೊಂದು ಅವತಾರವನ್ನು ಪೂಜಿಸುವ ವಿಶಿಷ್ಟವಾದ ಹಬ್ಬ. ಈ ಸಮಯದಲ್ಲಿ ದೇವೀ ತಣ್ತೀವು ಅಧಿಕವಾಗಿರುತ್ತದೆ. ನವರಾತ್ರಿಯ ಸಮಯದಲ್ಲಿ ದೇವೀ ತಣ್ತೀವು ಮಾಮೂಲಿಗಿಂತ ಸುಮಾರು ಒಂದು ಸಾವಿರ ಪಟ್ಟು ಹೆಚ್ಚಿರುತ್ತದೆ. ಆ ದೇವಿತಣ್ತೀದ ಲಾಭವನ್ನು ಪಡೆಯಲು “ಶ್ರೀ ದುರ್ಗಾದೇವ್ಯೈ ನಮಃ” ಎಂದು ನಾಮ ಜಪವನ್ನು ಮಾಡುತ್ತಾರೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ “ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” ಎಂದು ಹೇಳಿದಂತೆಯೇ, ಜಗತ್ತಿನಲ್ಲಿ ತಾಮಸಿಕತೆಯು ಹೆಚ್ಚಿ, ಆಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ವಿಕ ಮತ್ತು ಸಜ್ಜನರನ್ನು ಪೀಡಿಸಲಾರಂಭಿಸಿದಾಗ ಧರ್ಮ ಸಂಸ್ಥಾಪನೆಗಾಗಿ ದೇವಿಯು ಪುನಃ ಪುನಃ ಅವತಾರ ತಾಳುತ್ತಾಳೆ ಮತ್ತು ನವ ರಾತ್ರಿಯು ಆ ದೇವಿಯ ವ್ರತವಾಗಿ ಆಚರಿಸಲ್ಪಡುತ್ತದೆ.
ಒಂಬತ್ತು ದಿನಗಳ ಕಾಲ ಆದಿಶಕ್ತಿಯನ್ನು ಒಂಬತ್ತು ವಿಧವಾಗಿ ಪೂಜಿಸಲಾಗುತ್ತದೆ. ಈ ಹಬ್ಬವು ಆಶ್ವಯುಜ ಶುದ್ಧ ಪ್ರತಿಪದೆಯಂದು ಆರಂಭವಾಗುತ್ತದೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ ಎಂದು ಒಂಬತ್ತು ದಿನ ಭಿನ್ನ ಪ್ರವೃತ್ತಿ ಮತ್ತು ಅನುಪಮ ಶಕ್ತಿಯುಳ್ಳ ಒಂಬತ್ತು ದೇವಿಯರ ಉಪಾಸನೆಯನ್ನು ಮಾಡಲಾಗುತ್ತದೆ. ರಾತ್ರಿ ಎಂದರೆ ಆಗುತ್ತಿರುವ ಬದಲಾವಣೆ. ದೇವಿಗೆ ಕಾಲರಾತ್ರಿ ಎಂಬ ಹೆಸರೂ ಇದೆ. ಕಾಲರಾತ್ರಿಯೆಂದರೆ ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು ಎಂದರ್ಥ. ಭೂಮಿಯು ಸದಾ ತಿರುಗುತ್ತಿರುತ್ತದೆ. ಈ ತಿರುಗುವಿಕೆಯಿಂದ ಭೂಮಿಯಲ್ಲಿ ಬದಲಾವಣೆಗಳು ಅಂದರೆ, ಹಗಲು ಮತ್ತು ರಾತ್ರಿ ಆಗುತ್ತಿರುತ್ತದೆ. ಶರೀರಕ್ಕೆ ಈ ರೀತಿಯ ಪ್ರಾಕೃತಿಕ ಬದಲಾವಣೆಗಳನ್ನು ಸಹಿಸುವ ಶಕ್ತಿ ಇರಬೇಕೆಂದು ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ವ್ರತಗಳನ್ನು ಮಾಡುತ್ತಾರೆ. ಮನುಷ್ಯನು ಆರೋಗ್ಯ ಸಿದ್ಧಿಗಾಗಿ ಆಚರಿಸಬೇಕಾದ ಆಚರಣೆಗಳಿಗೆ, ಆಧ್ಯಾತ್ಮಿಕ, ಧಾರ್ಮಿಕ ಹಿನ್ನೆಲೆಯನ್ನು ಕೊಟ್ಟು, ಪವಿತ್ರ ಭಾವನೆಯಿಂದ ಆಚರಿಸಿಕೊಂಡು ಬರುವುದು, ಹಿಂದಿನಿಂದಲೂ ನಮ್ಮ ದೇಶದಲ್ಲಿ, ಹಿಂದೂ ಪರಂಪರೆಯಲ್ಲಿ ನಡೆದುಕೊಂಡು ಬಂದಿದೆ. ಎಲ್ಲ ಹಬ್ಬಗಳೂ ಆಯಾ ಕಾಲದಲ್ಲಿ ಆಯಾ ಋತುಗಳಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಂಸ್ಕೃತಿಕ ಆಚರಣೆಗಳಾಗಿವೆ.
ನವರಾತ್ರಿಯು ಒಂದು ವಿಶಿಷ್ಟವಾದ ಹಬ್ಬವಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಎಲ್ಲ ಕಡೆ ಆಚರಿಸಲಾಗುತ್ತದೆ. ಜನರು ತಮ್ಮ ತಮ್ಮ ಸಾಮರ್ಥ್ಯಾನುಸಾರ ದೇವಿಯ ಉಪಾಸನೆಯನ್ನು ಜನರು ಮಾಡುತ್ತಾರೆ. ನವರಾತ್ರಿಯ ಒಂಬತ್ತು ದಿನವೂ ಸತತವಾಗಿ ದೀಪವನ್ನು ಉರಿಸುವುದು, ಸರಸ್ವತಿ ಪೂಜೆ, ಉಪವಾಸ, ಲಲಿತಾ ಪೂಜೆ, ದೇವೀ ಮಹಾತ್ಮೆಯ ಪಠನ, ಸಪ್ತಶತೀ ಪಾಠ, ದೇವೀಭಾಗವತ, ಬ್ರಹ್ಮಾಂಡ ಪುರಾಣದಲ್ಲಿರುವ ಲಲಿತೋಪಾಖ್ಯಾನವನ್ನು ಕೇಳುವುದು, ಉಪವಾಸವೇ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸ್ವಶಕ್ತಿ ಸಾಮರ್ಥ್ಯಕ್ಕನುಗುಣವಾಗಿ ನವರಾತ್ರಿಯನ್ನು ಜನರು ಆಚರಿಸುತ್ತಾರೆ. ಈ ಸಮಯದಲ್ಲಿ ದೇವಿಯ ದೇವಾಲಯಗಳಿಗೆ ಭೇಟಿಕೊಟ್ಟು, ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆಯಿಂದ ಸಾವಿರಾರು ಮಂದಿ ನಾಡಿನ ವಿವಿಧ ದೇವಾಲಯಗಳಿಗೆ ಭೇಟಿ ಕೊಟ್ಟು ಪುನೀತರಾಗುತ್ತಾರೆ. ಕೃಷಿಗೆ ಸಂಬಂಧಿಸಿದಂತೆಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಬಿತ್ತಿದ ಪೈರು ಮನೆಗೆ ಬಂದಾಗ ರೈತರು ಈ ಉತ್ಸವವನ್ನು ಬಹಳ ಹಿಂದಿನ ಕಾಲದಿಂದಲೂ ಆಚರಿಸುತ್ತಿದ್ದರು. ಈಗಲೂ ಗ್ರಾಮೀಣ ಭಾಗದಲ್ಲಿ ಆಚರಣೆಯನ್ನು ಗಮನಿಸಬಹುದು. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಮನೆಯ ಪ್ರವೇಶ ದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ, ಹೊಸ ಅಕ್ಕಿ ಊಟವನ್ನೂ ಮಾಡುತ್ತಾರೆ. ಪುರಾಣಗಳಲ್ಲಿ ಜಗನ್ಮಾತೆಯು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹಾರ ಮಾಡಿ ಲೋಕವನ್ನು ಕಾಪಾಡುತ್ತಾಳೆ ಎಂದು ಹೇಳಲಾಗಿದೆ. ಇತಿಹಾಸದಲ್ಲಿ ಉಲ್ಲೇಖೀಸಿದಂತೆ ವಿಜಯನಗರದ ಅರಸರು ಹಾಗೂ ಮೈಸೂರಿನ ಅರಸರು ಜೈತ್ರ ಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿಂದ ನಡೆಸುವ ವಿಶಿಷ್ಟ ಹಬ್ಬ ನವರಾತ್ರಿ. ವಿಜಯನಗರದ ಅರಸರಿಂದ ಆರಂಭವಾದ ನವರಾತ್ರಿ ದಸರಾ ಆಚರಣೆಯು, ವಿಜಯನಗರ ಸಾಮ್ರಾಜ್ಯದ ಪತನದ ಅನಂತರ, ಮೈಸೂರು ಅರಸರ ಮೂಲಕ ಮುಂದುವರಿಯಿತು ಎಂದು ಹೇಳಲಾಗುತ್ತದೆ. ನವರಾತ್ರಿ ಇಲ್ಲವೇ ದಸರಾ ಕರುನಾಡಿನ ನಾಡ ಹಬ್ಬ. ವಿಶ್ವವಿಖ್ಯಾತ ಮೈಸೂರು ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿಜಯದಶಮಿ ದಿನದಂದು ನಡೆಯುವ ಮೈಸೂರು ದಸರಾ ಮೆರವಣಿಗೆ ಅಥವಾ ಜಂಬೂಸವಾರಿ ಜಗತ್ಪ್ರಸಿದ್ಧ. ರಾಜ್ಯಾದ್ಯಂತದ ವಿವಿಧ ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯ ದರ್ಶನಕ್ಕಾಗಿ, ಜನಸಾಗರವೇ ಹರಿದು ಬರುತ್ತದೆ. ಹೀಗೆ ದಸರಾ ಅಥವಾ ನವರಾತ್ರಿಯು ನಮ್ಮ ದೇಶದ ಒಂದು ವಿಶಿಷ್ಟ ಹಬ್ಬವಾಗಿದ್ದು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ದಸರಾ ಆಚರಣೆ ಕೇವಲ ಸಂಭ್ರಮ, ಸಡಗರಕ್ಕೆ ಮೀಸಲಾಗದೆ, ನಮ್ಮ ಸಂಸ್ಕೃತಿ, ಪರಂಪರೆಯನ್ನು ಅರಿತುಕೊಂಡು ಹಬ್ಬವನ್ನು ಭಕ್ತಿಭಾವದೊಂದಿಗೆ ಆಚರಿಸಿ ಆಧ್ಯಾತ್ಮಿಕ ಉನ್ನತಿಯನ್ನು ಹೊಂದೋಣ.
– ಡಾ| ಈಶ್ವರ ಪ್ರಸಾದ್ ಆಲಂಗಾರು